ತುರುವೇಕೆರೆ: ಫೆ. 27 ರ ಮಂಗಳವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಸರ್ಕಾರಿ ನೌಕರರು ಭಾಗವಹಿಸಬೇಕೆಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜುಮುನಿಯೂರು ಮನವಿ ಮಾಡಿಕೊಂಡಿದ್ದಾರೆ.
ಕಳೆದ ಏಳು ವರ್ಷಗಳ ನಂತರ ನಡೆಯುತ್ತಿರುವ ಸರ್ಕಾರಿ ನೌಕರರ ಸಮ್ಮೇಳನ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ವಿಶೇಷವಾಗಿ ತಾಲ್ಲೂಕಿನ ಶಾಸಕರಾಗಿರುವ ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದ ಎಂ.ಟಿ.ಕೃಷ್ಣಪ್ಪನವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನೆಮ್ಮದಿಯ ಬದುಕಿಗಾಗಿ ನಮ್ಮ ಬೇಡಿಕೆಗಳು ಎಂಬ ಘೋಷಣೆಯಡಿ ಹಳೆ ಪಿಂಚಣಿ ಯೋಜನೆ ಮರು ಜಾರಿ, 7 ನೇ ವೇತನ ಆಯೋಗದ ವರದಿಯ ಅನುಷ್ಠಾನ ಹಾಗು ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಂತಹ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಹಾಗಾಗಿ ಎಲ್ಲಾ ಸರ್ಕಾರಿ ನೌಕರರು ಈ ಮಹಾ ಸಮ್ಮೇಳನದಲ್ಲಿ ಭಾಗವಹಿಸಬೇಕು.
ಮಂಗಳವಾರ ನಡೆಯುವ ಮಹಾ ಸಮ್ಮೇಳನಕ್ಕೆ ತೆರಳಲು ತಾಲ್ಲೂಕಿನಿಂದ 10 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಗೆ ಎಲ್ಲ ನೌಕರರು ಸಂಘದ ಕಚೇರಿ ಬಳಿ ಆಗಮಿಸಲು ಕೋರಿದ್ದಾರೆ.
ಸಮ್ಮೇಳನಕ್ಕೆ ಆಗಮಿಸುವವರಿಗೆ ಉಪಾಹಾರದ ವ್ಯವಸ್ಥೆ ಸಹ ಇರಲಿದೆ. ದಂಡಿನಶಿವರ ಮತ್ತು ಮಾಯಸಂದ್ರದಿಂದ ಬರುವ ನೌಕರರಿಗೆ ಅಲ್ಲಿಯೇ ಬಸ್ ವ್ಯವಸ್ಥೆ ಮಾಡಲಾಗಿದೆ.
ಸಮ್ಮೇಳನಕ್ಕೆ ಭಾಗವಹಿಸುವ ನೌಕರ ಬಂಧುಗಳಿಗೆ ಓ.ಓ.ಡಿ ಸೌಲಭ್ಯವೂ ಇದೆ. ಹಾಗಾಗಿ ಎಲ್ಲಾ ಸರ್ಕಾರಿ ನೌಕರರು ಮಹಾ ಸಮ್ಮೇಳನಕ್ಕೆ ಆಗಮಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.