Tuesday, July 23, 2024
Google search engine
Homeಸಾಹಿತ್ಯ ಸಂವಾದಅಂತರಾಳಅಣ್ಣಾ ಇರ್ನ ಪಾಡಿ ಕೊರ್ಪರ?

ಅಣ್ಣಾ ಇರ್ನ ಪಾಡಿ ಕೊರ್ಪರ?

ರಾಮಪ್ರಸಾದ್


ಅಣ್ಣಾ ಇರ್ನ ಪಾಡಿ ಕೊರ್ಪರ? (ಅಣ್ಣಾ ನಿಮ್ಮ ಹಾಡಿ ಕೊಡ್ತೀರಾ? )ಹಲವು ವರುಷಗಳಿಂದ ನಮ್ಮ ಹಾಡಿಯ ಮರಗಳನ್ನು ಕಡಿದು ಮಾರುವ ಸಲುವಾಗಿ ಜನರು ಈ ಪ್ರಶ್ನೆ ಕೇಳ್ತಾ ಇದ್ರು.ಹಾಡಿ ಅಂದಾಗ ನೆನಪಾಗುವುದು ನಮ್ಮ ಬಾಲ್ಯದ ಜೀವನ.


ಕರಾವಳಿಯ , ಮಲೆನಾಡಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ರಾಮಪ್ರಸಾದ್ ವಿವರಿಸಿದ್ದಾರೆ. ರಾಮಪ್ರಸಾದ್ ಅವರು ಆಗುಂಬೆಯ ಹೆಬ್ರಿಯವರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಕೊನೆಯಲ್ಲಿ ಹೇಳಿರುವ ಅಣ್ಣಾ ಬಿಜಾಕ್ರೆ ಕೊರ್ಪರ? ಮಾತುಗಳು ನಾವುಗಳೇ ಸೇರಿ ಹಾಳುಗೆಡವಿರುವ ಕರಾವಳಿ ಕಂಡು ಕರಳು‌‌ ಚುರುಕ್ ಎನ್ನಿಸುತ್ತದೆ.


ಬೇಸಗೆ ರಜೆ ಸಿಕ್ಕಿದ ತತ್ ಕ್ಷಣ ಒಂದು ನಿಮಿಷವೂ ವ್ಯರ್ಥ ಮಾಡದೆ ಸಿಕ್ಕಿದ ಬಸ್ಸು ಹಿಡಿದು ಕಾರ್ಕಳದಿಂದ ಮುದ್ರಾಡಿಗೆ ಬರ್ತಾ ಇದ್ದದ್ದು , ಮನೆಯವರ ಕಣ್ಣು ತಪ್ಪಿಸಿ ಬೈಲು, ಹಾಡಿ, ಕಾಡು ಸುತ್ತುತ್ತಾ ಇದ್ದದ್ದು, ಕೆಲವೊಮ್ಮೆ ಗಣೇಶಣ್ಣ ನ ಅಂಗಡಿಯಿಂದ ಗಂಟೆಗೆ ಒಂದು ರೂ ನಂತೆ ಬಾಡಿಗೆ ಸೈಕಲ್ನಲ್ಲಿ ಕಾಡಿನ ಕಡೆಗೆ ಹೋಗ್ತಾ ಇದ್ದದ್ದು, ಹಸಿದು ಸುಸ್ತಾದಾಗ ಹೈ ಸ್ಕೂಲ್ ಹತ್ತಿರದ ತಿಮ್ಮಣ್ಣನ ಕ್ಕ್ಯಾಂಟೀನಿನಿಂದ ರವಾ -ವಡೆ ತಿಂದಿದ್ದು.

ಹಾಡಿ ತೋಟಗಳನ್ನು ದಾಟಿ ಸಹೋದರ ಮತ್ತು ಸ್ನೇಹಿತರೊಂದಿಗೆ ಹಲಸು ,ಹೆಬ್ಬಲಸು, ಕಾಡುಮಾವು, ಚಂಪೆ, ನೇರಳೆ, ಹೆನ್ನೇರಳೆ, ಕುಂಟಾಲ್, ಜಂಬೂ ನೇರಳೆ, ಬೆಮ್ಮರಿಲು, ರೆಂಜೆ, ಸಳ್ಳೆ, ಕೇಪಳ, ಗೇರು – ಹಣ್ಣುಗಳನ್ನು ತಿಂದು ತೇಗಿರುವುದು, ಮೇಲ್ಚಾವಣಿಯಿಂದ ಹೈಗಾ (Hopea ponga ) ಮರದ ಎರಡು ರೆಕ್ಕೆಯುಳ್ಳ ಬೀಜಗಳನ್ನು ಎಸೆದು ಅದು ಸುರುಳಿ ಸುತ್ತುತ್ತಾ ನೆಲದ ಮೇಲೆ ಬೀಳುವುದನ್ನು ನೋಡಿ ಆನಂದಿಸಿದ್ದು.


ನಿಮ್ಮೂರಿನ ಸುದ್ದಿ ಲೇಖನಗಳನ್ನು ನೀವೂ ಬರೆಯಿರಿ: ವಾಟ್ಸಾಪ್: 9844817737


ಅಪರೂಪಕ್ಕೊಮ್ಮೆ ಸಹೋದರಿಯರೊಂದಿಗೆ ಪಕ್ಷಿ ವೀಕ್ಷಣೆ ಮಾಡ್ತಾ ಟಿಟ್ಟಿಭ (Vanellus indicus ) ಹಕ್ಕಿಗಳ ಮೊಟ್ಟೆ ಮರಿಗಳನ್ನು ಹುಡುಕುವುದು, ನಮ್ಮ ತೆಂಗಿನ ತೋಟಕ್ಕೆ ಬರುತ್ತಿದ್ದ ಹಾರೋತಿಯ (Draco dussunieri) ದರ್ಶನ, ಕಾಡು ಹೂಗಳ ಮತ್ತು ನವಿಲು ಗರಿಗಳ ಸಂಗ್ರಹಣೆ- ಹೀಗೆ ಅಸಂಖ್ಯ ಸವಿನೆನಪುಗಳು.ರೈತನ ಜೀವನದ ಒಂದು ಅಮೂಲ್ಯ ಭಾಗ ಅವನ ಹೊಲ/ಗದ್ದೆ ಯ ಹತ್ತಿರ ಇರುವ ಹಾಡಿ. ಬೆಳಗ್ಗೆ ಬೇಗನೆ ಎದ್ದು ಹೊರಟವನೆ ಮರದ ಹರೆ (ಮುಂಡಿಲು ಮರದ ಗೆಲ್ಲು)ಯನ್ನೇ ಪೊರಕೆಯಾಗಿಸಿ ಬಳ್ಳಿಯನ್ನೇ ದಾರವಾಗಿಸಿ ತರಗಲೆ (ದರುಗು, ದರಗು, ಬಿಜಾಕ್ರೆ ) ಗುಡಿಸುತ್ತ ಅಲ್ಲಲ್ಲಿ ರಾಶಿ ಹಾಕುತ್ತಿದ್ದ. ರೈತರ ಜೊತೆಗೆ ಬರುವ ಮಕ್ಕಳು ರೆಂಜೆ ಹೂವನ್ನು ಆಯ್ದು ಅಜ್ಜಿಯ ಸಹಕಾರದೊಂದಿಗೆ ದಾರದಲ್ಲಿ ಪೋಣಿಸಿ ದೇವರಿಗೆ ಮಾಲೆಯಾಗಿಸುತ್ತಿದ್ದರು.ತರಗಲೆ ರಾಶಿಯನ್ನು ಕೆಲವೊಮ್ಮೆ ಆಶ್ರಯವಾಗಿಸಿರುವ ಆಮೆ ಮತ್ತು ತವುಡು ಕನ್ನಡಿ(Hypnale hypnale) ಹಾವುಗಳ ದರ್ಶನ ಕೂಡ ಆಗ್ತಾ ಇದ್ದವು.ಅಟ್ಟೆ ಬೋರು (ಒಂದು ಬಗೆಯ ಬಳ್ಳಿ ) ಉಪಯೋಗಿಸಿ ತಕ್ಕದಾದ ಬುಟ್ಟಿ ಗಳನ್ನು ಹೆಣೆದು ವಿಶಿಷ್ಟ ರೀತಿಯಲ್ಲಿ ತರಗಲೆಯನ್ನು ತುಂಬಿಸಿ ತಾನೂ ಅಥವಾ ಕುಟುಂಬಸ್ಥರ ಸಹಾಯದಿಂದಲೂ ತನ್ನ ಮನೆಯ ಅಂಗಳಕ್ಕೆ ತರುತ್ತಿದ್ದ. ತರಗಲೆಯನ್ನು ಗುಡ್ಡೆ ಹಾಕುವ ಪರಿ ಹೇಗಿತ್ತು ಅಂದರೆ ಮಳೆಗಾಲದಲ್ಲಿ ನೀರಿನ ಹನಿ ಕೂಡ ಗುಡ್ಡೆಯ ಒಳಗೆ ಹೋಗ್ತಾ ಇರಲಿಲ್ಲ.

ಹೀಗೆ ಹಲವಾರು ತಲೆಮಾರಿನ ಅನುಭವ ರೈತನ ಯಶಸ್ಸಿನ ಗುಟ್ಟಾಗಿತ್ತು. ಹಸುವಿನ ಗೊಬ್ಬರಕ್ಕೆ ಮತ್ತು ಸುಡುಮಣ್ಣುನ್ನು ತಯಾರಿಸಲು ಉಪಯೋಗ ಆಗ್ತಾ ಇತ್ತು ಈ ಸಂಗ್ರಹಣೆ.

ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಜೊತೆಗೆ ಒಡನಾಟ ಇಟ್ಟುಕೊಂಡಿತ್ತು ರೈತನ ಕುಟುಂಬ.ಮಳೆಗಾಲ ಶುರುವಾದಂತೆ ಕಲ್ಲಣಬೆ, ಬೋಗಿ ಅಣಬೆ ಮತ್ತು ಹೆಗ್ಗೆಲಣಬೆಯ ಸಾರು/ಪಲ್ಯ, ಉಪ್ಪಿಗೆ ಹಾಕಿದ ಮಾವಿನಕಾಯಿ, ಅಂಬಡೆ, ಹಲಸಿನ ಕಾಯಿ , ಕ್ಯಾನೆ, ಹೆಬ್ಬಲಸು, ಕಣಲೆ ಚಟ್ನಿ, ವಾಟೆ ಹುಳಿ ಬಳಸಿ ತಯಾರಿಸಿದ ಹಳ್ಳದ ಮೀನು ಸಾರು ಎಲ್ಲಾ ನಮ್ಮಲ್ಲಿ ಸರ್ವೇ ಸಾಮಾನ್ಯ ಆಗಿತ್ತು.

ಗೇರು ಬೀಜ, ಹಲಸಿನ ಬೀಜ ನೀರುಳ್ಳಿ ಗೆಣಸು ಸುಟ್ಟು ತಿನ್ನೋದು, ಹಲಸಿನ ಹಪ್ಪಳ ಕೊಬ್ಬರಿ ತುಂಡಿನ ಜೊತೆಗೆ ತಿನ್ನೊದು -ಹೀಗೆ ಮಳೆಗಾಲದ ಆಹಾರ ಪದ್ದತಿಯೇ ಒಂದು ಸೊಗಸು.

ಸೂರ್ಯ ಮೂಡುವ ಮುನ್ನವೇ ಮುಗುಳಕ್ಕಿಯ ಗಂಜಿಯನ್ನುಉಂಡು ಹೊಲಕ್ಕೆ ಹೊರಟ ರೈತ ಮತ್ತೆ ಮನೆಯತ್ತ ಬರುವುದು ಸಂಜೆಯೇ ಸರಿ. ಗದ್ದೆಯಲ್ಲಿ ನೀರಿನ ಮಟ್ಟ ಸಮತೋಲನದಲ್ಲಿಡುವುದು, ಕಳೆಗಿಡಗಳ ನಿರ್ವಹಣೆ, ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ. ಭತ್ತದ ಸಸಿಗಳಿಗೆ ಬರುವ ಹುಳುಹುಪ್ಪಟೆಗಳನ್ನು ಕಪ್ಪೆ ಮತ್ತು ಹಕ್ಕಿಗಳು ಹತೋಟಿಯಲ್ಲಿಡ್ತಾ ಇದ್ದವು.

ರೈತ ಬೆಳೆದ ಭತ್ತ, ಅಡಕೆ, ತೆಂಗು, ಮಾವು, ಹಲಸು, ತರಕಾರಿ ಬೆಳೆಗಳು ಇವುಗಳ ಪರಾಗಸ್ಪರ್ಶ ಕ್ರಿಯೆಯನ್ನು ಪಕ್ಕದ ಹಾಡಿ /ಕಾಡಿನಲ್ಲಿರುವ ದುಂಬಿಗಳು/ಜೇನು ಹುಳಗಳು ಮಾಡ್ತಾ ಇದ್ದವು.ಇಲಿಗಳ ಸಂಖ್ಯೆ ಅತಿಯಾಗದಂತೆ ಸುತ್ತಮುತ್ತಲಿನ ಹಾವುಗಳು ನೋಡಿಕೊಳ್ಳುತ್ತಿದ್ದವು.

ರೈತ ಹೊಲದ ಹತ್ತಿರ ತಾನೇ ನಿರ್ಮಿಸಿದ ತಾತ್ಕಾಲಿಕ ಮನೆಯಲ್ಲಿ (ಗುಡುo) ರಾತ್ರಿಯಲ್ಲ ಕಳೆದು ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸುತ್ತಿದ್ದ. ಬೆಳೆ ಕಟಾವು ನಂತರ ಪ್ರತೀ ಗದ್ದೆಗೆ ದೀಪವನ್ನು ಇಡುತ್ತಾ ಶಕ್ತಿ ಮತ್ತು ಹುರುಪನ್ನು ಕೊಟ್ಟಂತಹ ಬಲಿದೇವರಿಗೆ, ಕಾಡು /ಹಾಡಿ, ಪೃಕೃತಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸುತ್ತಾ ಸಾಗುವ ರೈತನ ನಿರ್ಮಲ, ನಿರಾತಂಕ ಮನಸ್ಸು ತನಗೂ ಹಾಗೂ ಇತರ ರೈತರಿಗೂ ಉತ್ತೇಜಕವಾಗಿತ್ತು.

ಮುಡಿ ಕಟ್ಟುವ ಸಂಪ್ರದಾಯದ ಮೂಲಕ ಬೆಳೆದ ಭತ್ತವನ್ನು ಅಕ್ಕಿಮಾಡಿ ಸಂರಕ್ಷಿಸುತ್ತಿದ್ದ. ಮಳೆನೀರನ್ನು ನಿಧಾನವಾಗಿ ಹಂತ ಹಂತವಾಗಿ ಇಂಗಿಸುವ ಹಾಡಿ /ಕಾಡುಗಳು ಅಂತರ್ಜಲ ಮಟ್ಟವನ್ನು ಕಾಯ್ದುಕೊಂಡು ವರುಷಕ್ಕೆ ಮೂರು ಭತ್ತದ ಬೆಳೆ ಬೆಳೆಯಲು ಅನುವು ಮಾಡಿ ಕೊಟ್ಟಂತಹ ಕಾಲವದು.

ಅಪಾರ ಜ್ಞಾನಭಂಡಾರವನ್ನೇ ಹೊತ್ತುಕೊಂಡಿದ್ದ ರೈತರು ಸಂಪ್ರಾದಾಯಿಕ ವ್ಯವಸಾಯ ಪದ್ದತಿಯನ್ನು ರಕ್ತಗತವಾಗಿಸಿಕೊಂಡಿದ್ದರು. ಪ್ರಕೃತಿಯ ಜೊತೆಗಿನ ನಂಟು ಮನುಷ್ಯನಲ್ಲಿ ಬೇರೂರಿತ್ತು. ನೆಮ್ಮದಿ ಎಂಬುದು ಎಲ್ಲರ ಮನೆಯಂಗಳದಲ್ಲಿನ ಚೆಲುವಿನ ರಂಗೋಲಿಯಂತಿತ್ತು (ಕೂಡು ಕುಟುಂಬ ).

ಕಾಲಕ್ರಮೇಣ, ಏರುತ್ತಿರುವ ಜನಸಂಖ್ಯೆ, ಬದಲಾದ ದಿನಚರಿ, ಪ್ರೋತ್ಸಾಹ ಇಲ್ಲದಿರುವುದು, ಇನ್ನಿತರ ಅಗೋಚರ ಕಾರಣಗಳಿಂದ ಸಾಂಪ್ರದಾಯಿಕ ವ್ಯವಸಾಯ ಪದ್ದತಿಗೆ ಹಲವರು ತಿಲಾಂಜಲಿ ನೀಡಿದರು.

ಸಕಲ ಜೀವ ಜಗತ್ತಿಗೆ ಪ್ರತ್ಯಕ್ಷವಾಗಿ ಬೆನ್ನೆಲುಬಾಗಿದ್ದ ಹಾಡಿ /ಕಾಡುಗಳು, ಹಿರಿಯರು ಕಷ್ಟಪಟ್ಟು ನೆಟ್ಟು ಬೆಳೆಸಿದ ದೈತ್ಯ ಮರಗಳು ಜನರಿಗೆ ಬೇಡವಾದವು. ಪ್ರಕೃತಿ-ಮನುಷ್ಯನ ನಡುವಿನ ಅನ್ಯೋನ್ಯ ಸಂಬಂಧ ಸಾರುವಿಕೆಯ ನಿದರ್ಶನಗಳಾದ ಹಿರಿಯರು ಸಂರಕ್ಷಿಸಿದ್ದ ನಾಗಬನದ ಸುತ್ತಲಿದ್ದ ಗಿಡ ಮರಗಳೂ ಕಡಿಮೆಯಾದವು.

ಪಟ್ಟಣದಲ್ಲಿನ ತೋರ್ಪಡಿಕೆಯ ಜೀವನವೇ ಒಳಿತು ಎನ್ನುವ ಭಾವನೆ ಜನರಲ್ಲಿ ಬೇರೂರಿತು. ಹಾಡಿಯಲ್ಲಿದ್ದ ಒಂದೊಂದು ಮರಗಳು ಬ್ಯಾಂಕಿನಲ್ಲಿ ಕೂಡಿಟ್ಟ ಒಂದೊಂದು ನೋಟಿನ ಕಂತೆಗಳಾದವು . ಹಾಡಿ ಮಾರಾಟ ಹಾಗೂ ಕೊಳ್ಳುವಿಕೆ ಒಂದು ಉದ್ಯಮವಾಯ್ತು.

ಬಣ್ಣ ಬಣ್ಣದ ಬದುಕನ್ನೇ ಅಪ್ಪಿಕೊಂಡಿದ್ದವರ ಸಾಲ ತೀರಿಸುವ ಅಥವಾ ಸಾಮಾಜಿಕ ಪ್ರತಿಷ್ಠೆ ಯನ್ನು ತೋರ್ಪಡಿಸುವ ಮೂಲವಾದವು ಈ ನೋಟಿನ ಕಂತೆಗಳು.

ರಬ್ಬರ್ ಮತ್ತು ಅನಾನಾಸ್ ತೋಟಗಳು ಅಣಬೆಯಂತೆ ತಲೆಯೆತ್ತಿದವು. ಪ್ರಸ್ತುತ ಕಾಡುಗಳ/ಹಾಡಿಗಳ ಮಾರಣಹೋಮ ಪ್ರಪಂಚದಾದ್ಯಂತ ನಡೆಯುತ್ತಿರುವುದು ಖೇದಕರ ಸಂಗತಿ. ತನ್ನ ಸ್ವಾರ್ಥ ಕಾರ್ಯ ಸಾಧನೆಗಾಗಿ ಮನುಷ್ಯನು ಜಗತ್ತಿನಾದ್ಯಂತ ನೈಸರ್ಗಿಕ ಕಾಡನ್ನೇ ಬೆಂಕಿಗೆ ಆಹುತಿಯಾಗಿಸತೊಡಗಿದ.

ಪ್ರಕೃತಿಗೆ ಗೌರವ ಕೊಡುತ್ತಿದ್ದ ಸಂಧರ್ಭದಲ್ಲಿ ಮನುಷನನ್ನ ತನ್ನ ಮಕ್ಕಳಂತೆ ಸಾಕಿದ್ದು ಈ ಪ್ರಕೃತಿಯೇ. ಕಾಲಕ್ಕೆ ತಕ್ಕಂತೆ ಮಳೆ, ಅದರಿಂದ ಬೆಳೆ, ಪರಿಶುದ್ಧವಾದ ನೀರು, ಸ್ವಚ್ಛವಾದ ಗಾಳಿ ಎಲ್ಲಾ ಯಥೇಚ್ಛವಾಗಿತ್ತು.ಪ್ರಕೃತಿಯ ಜೊತೆಗಿನ ಮಾನವನ ಸಂಬಂಧದ ಸಂಕೋಲೆ ಕಳಚಿಕೊಂಡಾಗ ಶುರುವಾಯಿತು

ಮನುಷ್ಯನಿಗೆ ಸಂಕಟ. “ಕೆರೆಯ ನೀರನು ಕೆರೆಗೆ ಚೆಲ್ಲಿ”, ಎನ್ನುವಂತೆ ಗಂಟೆಗಿಷ್ಟು ಅಂತ ದುಡ್ಡು ಕೊಟ್ಟು ಶುದ್ದ ಆಮ್ಲಜನಕವನ್ನು ಖರೀದಿ ಮಾಡತೊಡಗಿದ (ಇತ್ತೀಚಿಗೆ ನವ ದೆಹಲಿಯಲ್ಲಿ ನಡೆದದ್ದು).

ಜಾಗತಿಕ ತಾಪಮಾನ ಏರಿಕೆಯ ಸೃಷ್ಟಿ ಕರ್ತ ಎಂಬ ಬಿರುದನ್ನು ಪಡೆದುಕೊಂಡ.ಬರಗಾಲ, ಅತಿವೃಷ್ಟಿ, ಸುಂಟರಗಾಳಿ, ಮೇಘಸ್ಪೋಟ, ನೆರೆ, ಸಾಗರದ ನೀರಿನ ಮಟ್ಟದಲ್ಲಿನ ಏರಿಕೆ, ಅಂತ ಪ್ರಕೃತಿಯು ಪದೇ ಪದೇ ಕೊಡುತ್ತಿರುವ ಎಚ್ಚರಿಕೆಗಳನ್ನು ನಿರ್ಲಕ್ಷಿಸತೊಡಗಿದ.

ಹೊಟ್ಟೆಪಾಡಿಗಾಗಿ ಬೇಟೆಯಾಡುತ್ತಿದ್ದವ ಮನಬಂದಂತೆ ಕಾಡು ಪ್ರಾಣಿಗಳ ಬೇಟೆಯಾಡಿ ಅದನ್ನೇ ಉದ್ಯಮವಾಗಿಸಿದ.ಲಂಗು ಲಗಾಮು ಇಲ್ಲದೆ ಸಿಕ್ಕಿದ ಪ್ರಾಣಿಗಳನ್ನು ತಿನ್ನತೊಡಗಿದ.

ತಾನೇ ಪ್ರಪಂಚದೊಡೆಯ ಎಂದು ಜಂಭದ ಕೋಳಿಯಂತೆ ಬೀಗುತ್ತಿದ್ದ ಮನುಷ್ಯನಿಗೆ ಕುದುರೆ ಲಾಳ ತೊಡಿಸಿ, ಮೊಣಕಾಲೂರುವ ಹಾಗೆ ಮಾಡಿ ಪ್ರಕೃತಿಯೇ ಮೇಲು ಎಂದು ತೋರಿಸಿಕೊಟ್ಟದ್ದು ಬರಿಗಣ್ಣಿಗೆ ಕಾಣಿಸದಿದ್ದಂತಹ ಒಂದು ಜಾತಿಯ ಸೂಕ್ಷ್ಮಾಣುಜೀವಿ.ಹಲವು ಬಾರಿ ವಿಜ್ಞಾನಿಗಳು ಎಚ್ಚರಿಸಿದ್ದರೂ ನಮಗೆ ಅವರ ಮಾತು ಕೇಳುವಷ್ಟು ತಾಳ್ಮೆ, ಪುರುಸೊತ್ತು ಇರ್ಲಿಲ್ಲ ಬಿಡಿ.

ಇದೊಂದೇ ಸೂಕ್ಶ್ಮಾಣುಜೀವಿ ಮಾತ್ರ ಅಲ್ಲ, ಇದರ ಹೊರತಾಗಿ ಬೇರೆ ರೋಗ ಕೂಡ ಬರಬಹುದು ಅಂತ ವಿಜ್ಞಾನಿಗಳ ಅಭಿಪ್ರಾಯ.ಅಂದ ಹಾಗೆ ಇತ್ತೀಚೆಗೆ ಒಬ್ಬರು ಕೇಳಿದ್ದು
ಅಣ್ಣಾ ಬಿಜಾಕ್ರೆ ಕೊರ್ಪರ?
(ಅಣ್ಣಾ ತರಗಲೆ ಕೊಡ್ತಿರಾ?)ಅವರವರ ಜಾಗದಲ್ಲಿನ ಪ್ರಕೃತಿಯ ವರವನ್ನು ಜೋಪಾನವಾಗಿ ಕಾಪಾಡಿಕೊಂಡ್ರೆ ಬೇರೆಯವರನ್ನು ಕೇಳುವ ಅವಶ್ಯಕತೆ ಇಲ್ಲ ಎಂದು ನನ್ನ ಅನಿಸಿಕೆ.


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?