ಜಿ ಎನ್ ಮೋಹನ್
ಹೀಗೇ ಮನೆಯ ಮಕ್ಕಳೆಲ್ಲರೂ ಒಟ್ಟಿಗೆ ಸೇರಿದ್ದಾಗ ಅಮ್ಮನ ಹುಟ್ಟಿದ ಹಬ್ಬ ಯಾವಾಗ ಎನ್ನುವ ಚರ್ಚೆ ಬಂತು.
ನಮ್ಮ ಮನೆಯಲ್ಲಿ ದಾಖಲೆಗಳು ಪರ್ಫೆಕ್ಟ್
ಹಾಗಾಗಿ ಅಮ್ಮನ ಹುಟ್ಟಿದ ದಿನದ ಬಗ್ಗೆ ಯಾವುದಾದರೂ ದಾಖಲೆ ಇದೆಯಾ ಎಂದು ಹುಡುಕಿದೆವು. ಸಿಗಲಿಲ್ಲ.
ಕೊನೆಗೆ ಅಮ್ಮ ಓದಿದ ಶಾಲೆಯತ್ತ ನಮ್ಮ ಓಟ. ಅಲ್ಲಿಯೂ ದಶಕಗಳ ಹಿಂದಿನ ದಾಖಲೆ ಎಲ್ಲ ತಿರುವಿದ್ದಾಯ್ತು.
ಅಮ್ಮನ ಹುಟ್ಟು ಹಬ್ಬ ಯಾವತ್ತು ಎಂದು ಕಂಡು ಹಿಡಿಯಲಾಗಲಿಲ್ಲ
ಆದರೆ ನಾವಂತೂ ಅಮ್ಮನ ಹುಟ್ಟುಹಬ್ಬ ಮಾಡದೆ ಸುಮ್ಮನಿರುವುದಿಲ್ಲ ಎನ್ನುವ ಸ್ಥಿತಿ ತಲುಪಿದ್ದೆವು.
ಅಮ್ಮನಿಗೂ ನಮ್ಮ ಸಂಭ್ರಮ ನೋಡಿ ಹುಟ್ಟುಹಬ್ಬ ಬೇಕು ಎನ್ನುವಂತಾಗಿ ಹೋಗಿತ್ತು.
ಕೊನೆಗೆ ನಾವು ಏಪ್ರಿಲ್ 14 ಅಂಬೇಡ್ಕರ್ ಹುಟ್ಟಿದ ದಿನವೇ ಅಮ್ಮ ಹುಟ್ಟಿದ ದಿನ ಕೂಡಾ ಎಂದು ನಿರ್ಧರಿಸಿಬಿಟ್ಟೆವು.
ಅಂಬೇಡ್ಕರ್ ದೇಶಕ್ಕೆ ಸಂವಿಧಾನ ರಚಿಸಿಕೊಟ್ಟರು.
ಅಮ್ಮ ತನ್ನದೇ ರೀತಿಯಲ್ಲಿ ನಮ್ಮ ಮನೆಗೆ ಸಂವಿಧಾನ ರಚಿಸಿಕೊಟ್ಟಿದ್ದರು.
ನಮಗೆ ಈಗ ಅಮ್ಮ ಮತ್ತು ಅಂಬೇಡ್ಕರ್ ನಡುವಿನ ಗೆರೆ ಕಲಸಿಹೋಗಿದೆ.
ಅಮ್ಮ ಅಂಬೇಡ್ಕರ್ ರಂತೆಯೂ, ಅಂಬೇಡ್ಕರ್ ಅಮ್ಮನಂತೆಯೂ ಕಾಣುತ್ತಾರೆ
ಆ ಅಂಬೇಡ್ಕರ್ ಗೆ ತಾಯ್ತನದ ಗುಣ ಇದ್ದದ್ದರಿಂದ ದೇಶ ಸಾಕಷ್ಟು ವರ್ಷ ಸರಿಯಾಗಿ ಬಾಳಿ ಬದುಕಲು ಆಯಿತು.
ಅಮ್ಮನಿಗೆ ಅಂಬೇಡ್ಕರ್ ಗುಣವಿದ್ದದ್ದರಿಂದ ಎಂತಹ ನೋವನ್ನೂ ಹಲ್ಲು ಕಚ್ಚಿ ಸಹಿಸಲು ಸಾಧ್ಯವಾಯಿತು.
ಅದರ ವಿರುದ್ಧ ಗೆದ್ದು ನಿಲ್ಲಲು ಆಯಿತು.
ನಮ್ಮ ಮನೆಯ ಎಲ್ಲರ ಡೈರಿಗಳಲ್ಲಿ ಹಬ್ಬ ಹರಿದಿನ ನಮೂದಾಗಿರುವುದಿಲ್ಲ
ಆದರೆ ಏಪ್ರಿಲ್ 14 ತಪ್ಪದೇ ಗುರುತು ಹಾಕಿಕೊಂಡಿರುತ್ತದೆ.
ನಮ್ಮ ಮನೆಯ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಎಲ್ಲರೂ..
ಎಲ್ಲಿದ್ದರೂ, ಯಾವುದೇ ದೇಶದಲ್ಲಿದ್ದರೂ, ಯಾವುದೇ ಘನ ಕಾರ್ಯದಲ್ಲಿದ್ದರೂ ಅದನ್ನೆಲ್ಲಾ ಬಿಟ್ಟು ಅಮ್ಮನ ಮುಂದೆ ಸೇರುತ್ತಾರೆ.
ಈಗ ಅಮ್ಮ ಇಲ್ಲ, 10 ತಿಂಗಳಾಯಿತು
ಅಮ್ಮ ಇಲ್ಲದ ಮೊದಲ ಅಮ್ಮನ ಹುಟ್ಟುಹಬ್ಬ ಇಂದು.
ಅಮ್ಮ ಹಚ್ಚಿದೊಂದು ಹಣತೆ.. ಹಾಡು ಆವರಿಸಿಕೊಂಡಿದೆ.
ಜಿ.ಎನ್. ಮೋಹನ್