Thursday, June 20, 2024
Google search engine
Homeಸಾಹಿತ್ಯ ಸಂವಾದಅಂತರಾಳಇನ್ನಿನಿಸು ದಿನ ಮಹಾತ್ಮ ನೀ ಬದುಕಬೇಕಿತ್ತು…

ಇನ್ನಿನಿಸು ದಿನ ಮಹಾತ್ಮ ನೀ ಬದುಕಬೇಕಿತ್ತು…

ಜಿ.ಎನ್.ಮೋಹನ್


‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು.

ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್ ಟರ್ನರ್ ಬೆಳೆದು ನಿಂತು ಬಿಟ್ಟಿದ್ದರು.

ಮನೆಯ ಮೂಲೆಯಲ್ಲಿ ಕಣ್ಣೀರು ಉಕ್ಕಿಸುವ , ಹ ಹ ಹಾ ಎಂದು ಲಾಫರ್ ಕ್ಲಬ್ ಗಳಂತೆ ನಗಿಸುವ ವಸ್ತುವಾಗಿದ್ದ ದೂರದರ್ಶನ ಈಗ ಅಫೀಮಿನಂತೆ ಆಗಿ ಹೋಗಿತ್ತು.

ಟೆಡ್ ಟರ್ನರ್ ಕೊಲ್ಲಿ ಯುದ್ಧಕ್ಕೆ ಆಂಟೆನಾ ಜೋಡಿಸಿದ್ದೇ ತಡ ಜಗತ್ತು ಟೆಲಿವಿಷನ್ ಎಂಬ ಮಾಯಾ ಜಿಂಕೆಯ ಬೆನ್ನ ಹಿಂದೆ ಬಿತ್ತು.

ಮತ್ತೆ ಬಾಗಿಲು ತೆರೆದು ಟೆಡ್ ಟರ್ನರ್ ನಮ್ಮ ಮುಂದೆ ನಿಂತಾಗ ಅವರ ಕೈಯಲ್ಲಿ ಒಂದು ಪುಟ್ಟ ಪ್ರತಿಮೆ.

ಟೆಡ್ ಜೊತೆ ಲೋಕಾಭಿರಾಮವಾಗಿ ಹರಟೆ ಕೊಚ್ಚುತ್ತಾ ‘ನಿಮಗೆ ತೀರಾ ಇಷ್ಟವಾದವರು ಯಾರು? ಜೇನ್ ಫಾಂಡಾಳನ್ನು ಬಿಟ್ಟರೆ..’ ಅಂತ ಕೇಳಿದ್ದೆ.

ಅದಕ್ಕೆ ಉತ್ತರವಾಗಿ ಟೆಡ್ ಈ ಪ್ರತಿಮೆ ಹಿಡಿದು ನಿಂತಿದ್ದರು.

‘ವಾಹ್, ಗಾಂಧಿ!’ ಅಂತ ಆಶ್ಚರ್ಯದ ಉದ್ಘಾರ ಹೊರಟಿದ್ದು ನನ್ನಿಂದ ಮಾತ್ರವಲ್ಲ ಪಕ್ಕದಲ್ಲಿಯೇ ಚಿಲಿ, ದಕ್ಷಿಣ ಆಫ್ರಿಕಾ, ಸ್ಲೊವೇನಿಯಾ. ಜೆಕ್, ಜರ್ಮನಿ, ಕೀನ್ಯಾ, ಕೊರಿಯಾ, ಜಪಾನ್, ಆಸ್ಟ್ರೇಲಿಯಾ ದೇಶದ ಎಲ್ಲರ ಬಾಯಿಂದಲೂ ಈ ಉದ್ಘಾರ ಹೊರಬಿತ್ತು.

ಇನ್ನೇನು ಸಿ ಎನ್ ಎನ್ ಕಚೇರಿಯಿಂದ ಬೀಳ್ಗೊಳ್ಳಲು ಎರಡೇ ಎರಡು ದಿನ ಬಾಕಿ ಇತ್ತು.

ಅಟ್ಲಾಂಟಾದ ಮೂಲೆ ಮೂಲೆಯನ್ನೆಲ್ಲಾ ಜಾಲಾಡಿಬಿಡೋಣಾ ಎಂದು ದಂಡು ಕಟ್ಟಿ ಹೊರಟಿದ್ದು ಮಾರ್ಟಿನ್ ಲೂಥರ್ ಕಿಂಗ್ ನೆನಪಿನ ಮನೆಗೆ.

ಇನ್ನೂ ಕಾಂಪೌಂಡ್ ಒಳಗೆ ಕಾಲಿಟ್ಟಿರಲಿಲ್ಲ. ಅಲ್ಲಿ ಆಳೆತ್ತರದ ಪ್ರತಿಮೆ– ಅದು ಗಾಂಧಿ.

ನನ್ನ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದ ದಕ್ಷಿಣ ಆಫ್ರಿಕಾದ ನೋಕ್ವಾಸಿ ಶಬಲಾಲ ಓಡಿಹೋಗಿ ಆ ಗಾಂಧಿಯ ಕೆನ್ನೆಗೊಂದು ಮುತ್ತು ತೂರಿದಳು. ನನ್ನ ಕ್ಯಾಮೆರಾ ‘ಕ್ಲಿಕ್’ ಎಂದಿತು.

ಶಾಪ್ ಹಾಪಿಂಗ್ ಮಾಡುತ್ತಾ ಮಾಡುತ್ತಾ ಸಮಯ ರಾತ್ರಿ ಮೂರರ ಗಡಿ ದಾಟಿತ್ತು. ಗೆಳೆಯರ ಜೊತೆ ಇನ್ನೂ ಸುತ್ತುವುದಕ್ಕೆ ನಾನು ಸಿದ್ದನಿರಲಿಲ್ಲ. ಎಲ್ಲರಿಗೂ ಒಳ್ಳೆಯ ಹಗ್ ಕೊಟ್ಟು ‘ಗುಡ್ ಬೈ’ ಹೇಳಿದೆ. ’ಹುಷಾರು, ಇದು ಆಮೇರಿಕಾ, ಒಬ್ಬನೇ ಹೋಗುತ್ತಿದ್ದೀಯಾ’ ಎಂದು ಜೆಕ್ ಗೆಳೆಯ ಮೆರೆಕ್ ಬ್ರಾಡ್ಸ್ಕಿ ಪಿಸುಗಟ್ಟಿದ.

ಭಾರತದಿಂದ ಹೊರಡುವಾಗಲೂ ಎಲ್ಲರದ್ದೂ ಇದೇ ಕಿವಿಮಾತು ಟ್ಯಾಕ್ಸಿ ಏರಿದೆ. ಜೇಬಿನಲ್ಲಿದ್ದ ಪಾಸ್ ಪೋರ್ಟ್, ಡಾಲರ್ ಗಳ ಮೇಲೆ ಎರಡಲ್ಲ, ಹತ್ತು ಕಣ್ಣಿಟ್ಟಿದ್ದೆ.

ರೊಯ್ರಂನೆ ಬೀದಿ ಬೀದಿ ಸುತ್ತಿದ ಟ್ಯಾಕ್ಸಿ ನನ್ನ ಹೋಟಲ್ ಮುಂದೆ ನಿಂತಿತ್ತು. ಟ್ಯಾಕ್ಸಿ ಮೀಟರ್, ಅದಕ್ಕೆ ಹತ್ತು ಪರ್ಸೆಂಟ್ ಟಿಪ್ಸ್ ಸೇರಿಸಿ ಡ್ರೈವರ್ ಕೈಗಿಟ್ಟೆ.

ನಾನು ಟಿಪ್ಸ್ ಎಂದು ಕೊಟ್ಟ ಹತ್ತು ಡಾಲರ್ ನೋಟನ್ನು ಆತ ನನ್ನ ಕೈಗೇ ತುರುಕಿದ.

ಯಾಕೆ ಎಂದು ಕೇಳಿದೆ. ‘ಗಾಂಧಿ?’ ಅಂತ ಕೇಳಿದ .

ನಾನು ‘ಯಸ್, ಇಂಡಿಯಾ’ ಎಂದೆ. ಕೈ ಬೀಸುತ್ತಾ ಹೊರಟೇ ಬಿಟ್ಟ.

ಗೆಳತಿ ನೇಮಿಚಂದ್ರ ಪೆರುವಿನ ಪವಿತ್ರ ಕಣಿವೆಗಳನ್ನು ಹುಡುಕುತ್ತಾ ದಕ್ಷಿಣ ಅಮೆರಿಕಾ ಹೊಕ್ಕಿದ್ದರು.

ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ? ಎಂಬಂತೆ ಸ್ಪಾನಿಷ್ ನೆಲದಲ್ಲಿ ಇಂಗ್ಲಿಷ್ ಗೇನು ಕೆಲಸ?. ಹೇಗಪ್ಪಾ ಇಲ್ಲಿನವರ ಜೊತೆ ಮಾತಾಡುವುದು ಎಂದು ನೇಮಿ ಕಕ್ಕಾಬಿಕ್ಕಿಯಾಗಿದ್ದರು.

ಆದರೆ, ಅದು ಕೆಲವೇ ಕ್ಷಣ ಅಷ್ಟೆ. ಜನ ಅವರನ್ನು ಮುತ್ತಿಕೊಳ್ಳತೊಡಗಿದ್ದರು. ಎಲ್ಲರ ಬಾಯಲ್ಲೂ ‘ಗ್ಯಾಂಡಿ’ ಪದ. ಗೊತ್ತಿಲ್ಲದ ದೇಶದಲ್ಲಿ ಗಾಂಧಿ ಮಾತು ಕೂಡಿಸುವ ಸೇತುವೆಯಾಗಿ ಹೋಗಿದ್ದರು.

ಅದೆಲ್ಲಾ ಬಿಡಿ, ಒಬ್ಬ ಪುಟ್ಟ ಹುಡುಗಿ ಬರಾಕ್ ಒಬಾಮಾಗೆ ಪ್ರಶ್ನೆ ಎಸೆದಳು. ‘ನೀವು ಔತಣ ಕೂಟ ಏರ್ಪಡಿಸಿದರೆ ಅದಕ್ಕೆ ಆಹ್ವಾನಿಸಬೇಕೆಂದು ಬಯಸುವವರ ಪೈಕಿ ಮೊದಲು ಯಾರು ನಿಲ್ಲುತ್ತಾರೆ?’.

ಒಬಾಮ ಒಂದು ಕ್ಷಣವೂ ತಡಮಾಡದೆ ಹೇಳಿದರು- ಗಾಂಧಿ.

ಅಮೇರಿಕಾದಿಂದ ಬೀಳ್ಕೊಡುವಾಗ ನೆನಪಿಗೆಂದು ನಾನು ಇಲ್ಲಿಂದ ಕೊಂಡೊಯ್ದಿದ್ದ ಗಣೇಶನನ್ನು ಕೈಗಿಡುತ್ತಿದ್ದೆ. ತಕ್ಷಣ ಅವರು ಇನ್ನೊಂದು ಕೈಯನ್ನೂ ಚಾಚುತ್ತಿದ್ದರು. ‘One Gandhi please…’ ಎನ್ನುತ್ತಿದ್ದರು.

ನನಗೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ರಾಮಮೂರ್ತಿ ಬರೆದ ಕಾರ್ಟೂನ್ ನೆನಪಿಗೆ ಬಂತು. ಅಪ್ಪ, ಮಗ ಗಾಂಧಿ ಪ್ರತಿಮೆಯ ಮುಂದೆ ಹಾದು ಹೋಗುತ್ತಿದ್ದಾರೆ.

ಪ್ರತಿಮೆ ತೋರಿಸಿ ಮಗ ಅಪ್ಪನಿಗೆ ಕೂಗಿ ಹೇಳ್ತಿದಾನೆ- ‘ಅಪ್ಪಾ ಬೆನ್ ಕಿಂಗ್ಸ್ಲೆ’ ರಿಚರ್ಡ್ ಆಟಿನ್ ಬರೋ ನಿರ್ದೇಶಿಸಿದ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ‘ಗಾಂಧಿ’ ಸಿನಿಮಾದಲ್ಲಿ ಗಾಂಧಿ ಪಾತ್ರ ಮಾಡಿದ ನಟ ಬೆನ್ ಕಿಂಗ್ಸ್ಲೆ. ಇವತ್ತು ಗಾಂಧಿಗೂ ಬೆನ್ ಕಿಂಗ್ಸ್ಲೆಗೂ ಇರುವ ಗೆರೆಯೇ ಅಳಿಸಿಹೋಗುತ್ತಿದೆ.

ಎಚ್ ನಾಗವೇಣಿ ಬರೆದ ‘ಗಾಂಧಿ ಬಂದ’ ನನ್ನನ್ನು ಮತ್ತೆ ಮತ್ತೆ ಸೆಳೆದು ಕೊಳ್ಳುವ ಕೃತಿ. ಅಂದಿನ ‘ಕನ್ನಡ’ ಜಿಲ್ಲೆಗೆ ಗಾಂಧಿ ಬಂದ ಹಿನ್ನೆಲೆಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಥನ ಇದು.

ಗೊತ್ತಿಲ್ಲದ ಒಬ್ಬ ಗಾಂಧಿ ಎಲ್ಲಿಯೋ ಇರುವವರನ್ನು ಬದಲಿಸುತ್ತಾ ಹೋಗುತ್ತಾನೆ. ‘ಗಾಂಧಿ ಬಂದ’ ಎಂಬ ಹೆಸರಿಡುವ ಮುನ್ನ ಕಲಾವಿದ ಸುದೇಶ್ ಮಹಾನ್ ಕಾದಂಬರಿಗೆ ‘ಮಾಯಿದ ಪುರುಷೆ’ ಎನ್ನುವ ಹೆಸರಿಡ ಬೇಕು ಎಂದು ನಾಗವೇಣಿಯ ಜೊತೆ ವಾದ ಮಾಡುತ್ತಾ ಇದ್ದ.

ಮಾಧ್ಯಮ ಲೋಕದ ಬಹುದೊಡ್ಡ ಥಿಯರಿ “medium is the message “ ಎನ್ನುವುದು ನೆನಪಿಗೆ ಬಂದಾಗ . ಹೌದಲ್ಲಾ ಗಾಂಧಿ ಎಂಬ ಗಾಂಧಿ ತಾವೇ ಒಂದು ಸಂದೇಶವಾಗಿ ಬದುಕಿಬಿಟ್ಟರು.

‘ಲಂಕೇಶ್ ಪತ್ರಿಕೆ’ ಮಾರುಕಟ್ಟೆಗೆ ಬಂದಾಗ ನಮಗೆಲ್ಲಾ ಆಶ್ಟರ್ಯವಾಗಿ ಹೋಗಿತ್ತು. ಜಾಹಿರಾತು ಇಲ್ಲದೆ ಬದುಕುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆ ಕುಣಿದಾಡುತ್ತಿತ್ತು. ಏನೇ ಬರಲಿ, ಜಾಹಿರಾತು ನನ್ನ ಪತ್ರಿಕೆಯಲ್ಲಿರುವುದಿಲ್ಲ ಎಂದು ಲಂಕೇಶ್ ಘೋಷಿಸಿ ಕುಳಿತಿದ್ದರು.

ಜಾಹಿರಾತಿಲ್ಲದೆ ಒಂದು ಪತ್ರಿಕೆ ನಡೆಸಲು ಸಾಧ್ಯ ಎಂಬುದನ್ನು ಗಾಂಧಿ ತೋರಿಸಿಕೊಟ್ಟಿದ್ದರು ಎಂಬುವುದು ಅರ್ಥವಾಗುತ್ತಿರುವುದು ಈಗ.

ಗಾಂಧೀಜಿಗೆ ವೈದ್ಯರೊಬ್ಬರು ಬೆಡ್ ರೆಸ್ಟ್ ಹೇಳಿದರು. ಮಲಗಿ ಸಾಕಾದ ಗಾಂಧೀಜಿ ಪತ್ರಿಕೆಯ ಪ್ರಬಂಧ, ಜಾಹಿರಾತು ತಿರುವಿಹಾಕುತ್ತಾ ಹೋದರು. ಜಾಹಿರಾತಿನ ಬಗ್ಗೆ ಅವರ ಅಸಹನೆ ಎಷ್ಟು ಹೆಚ್ಚುತ್ತಾ ಹೋಯಿತೆಂದರೆ ‘ಅಯೋಗ್ಯ ಜಾಹಿರಾತು’ ಅನ್ನುವ ಸಂಪಾದಕೀಯವನ್ನೇ ಬರೆದರು.

ಗಾಂಧಿಯವರ ವಾದ ಇಷ್ಟೆ. ಯೋಗದ ಪುಸ್ತಕ ಅಂತ ಜಾಹಿರಾತು ಕೊಡುತ್ತಾರೆ, ಆದರೆ ಆ ಪುಸ್ತಕ ಪಟ್ಟಿ ನೋಡಿದರೆ ಅಲ್ಲಿರೋದು ಒಂದೇ ಒಂದು ಯೋಗದ ಪುಸ್ತಕ . ಇನ್ನುಳಿದದ್ದೆಲ್ಲಾ ಸೆಕ್ಸ್ ಬುಕ್ ಗಳು ಅನ್ನೋ ಆಕ್ರೋಶ ಅವರದ್ದು. ಇದನ್ನೆಲ್ಲಾ ನನ್ನ ಪತ್ರಿಕೆಗೆ ಹೇಗೆ ತರಲಿ ಅನ್ನೋ ತಲೆ ಬಿಸಿ ಅವರದ್ದು.

ಗಾಂಧಿಗೆ ಪತ್ರಿಕೋದ್ಯಮ ಅನ್ನೋದು ಬರಿ ಪತ್ರಿಕೋದ್ಯಮ ಆಗಿರಲಿಲ್ಲ. ಅವರೇ ಹೇಳಿಕೊಳ್ಳುವ ಪ್ರಕಾರ ಅದು ಅವರ ಆತ್ಮದ ತಳಮಳಕ್ಕೆ ನೀಡಿದ ಅಕ್ಷರ ರೂಪವಾಗಿತ್ತು.

ಗಾಂಧಿಗೆ ಗಾಂಧಿಯನ್ನು ನೋಡಿಕೊಳ್ಳುವ ಒಂದು ಕನ್ನಡಿಯಾಗಿ ಅದು ರೂಪುಗೊಳ್ಳುತ್ತಿತ್ತು. ಗಾಂಧಿ ಪತ್ರಿಕೆಗೆ ಬರೆಯುತ್ತಲೇ ತಮ್ಮ ದೌರ್ಬಲ್ಯಗಳನ್ನೂ ಕಂಡುಕೊಳ್ಳುತ್ತಾ ಹೋದರು.

ಪತ್ರಿಕೆ ಎನ್ನುವುದು ಒಂದು ಉದ್ಯಮ ಆಗುವುದೇ ಗಾಂಧಿಗೆ ಸರಿ ಬರದ ವಿಚಾರವಾಗಿತ್ತು. Journalism should never be prostituted for selfish ends or for the sake of carrying livelihood ಅಂದಿದ್ದರು.

ಭಾರತದ ಪತ್ರಿಕೋದ್ಯಮ ಅಂದರೆ ಬ್ರಿಟಿಷರು ಕಿಸಕ್ಕನೆ ನಗುವ ಪರಿಸ್ಥಿತಿ ಇತ್ತು. ಭಾರತದ ಪತ್ರಿಕೆ ಓದಿದರೆ ಅರೇಬಿಯನ್ ನೈಟ್ಸ್ ಕಥೆ ಓದಿದ ಹಾಗಿರುತ್ತದೆ ಅಂತ ಬ್ರಿಟನ್ನಿನ ಪ್ರಧಾನಿ ಬೆಂಜಮಿನ್ ಡಿಸ್ರೇಲಿ ನಗಾಡಿದ್ದ.

ಅಂತಹ ಕಾಲದಲ್ಲೇ ಗಾಂಧಿ ಪತ್ರಿಕೆಯ ಅಂಗಳ ಪ್ರವೇಶಿಸಿದರು. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವಾಗ ಗಾಂಧಿ ರೈಲು ಡಬ್ಬಿಯಿಂದ ಬಿಳಿಯರು ಎಸೆದ ಸೂಟ್ ಕೇಸನ್ನು ಮಾತ್ರ ಹೊತ್ತು ತರಲಿಲ್ಲ. ಪ್ರತಿಭಟನೆಯ ಕಿಚ್ಚನ್ನೂ, ಪತ್ರಿಕೆ ಎಂಬ ಕಂದೀಲನ್ನೂ ಹಿಡಿದುಕೊಂಡೇ ಬಂದರು.

ಯಂಗ್ ಇಂಡಿಯಾ ಕೈಗೆತ್ತಿಕೊಂಡರು. ನವ ಜೀವನ, ಸತ್ಯಾಗ್ರಹಿ, ಹರಿಜನ, ಹರಿಜನ ಬಂಧು, ಹರಿಜನ ಸೇವಕ…ಹತ್ತು ಭಾಷೆಯನ್ನು ಆವರಿಸಿ ನಿಂತರು. ಅಷ್ಟೇ ಅಲ್ಲ, ಏನಿಲ್ಲೆಂದರೂ ಐದು ದಶಕ ಅವರಿಗೆ ಪತ್ರಿಕೆ ಇನ್ನೊಂದು ಊರುಗೋಲೇ ಆಗಿಹೋಗಿತ್ತು.

ಪತ್ರಿಕೆಗೆ ಒಂದು ಎಥಿಕ್ಸ್ ಇರ್ಬೇಕು ಅನ್ನೋದು ಗಾಂಧಿಯವರಿಗೆ ಗೊತ್ತಾಗಿತ್ತು. ‘ಜಾಹೀರಾತಿಲ್ಲದೆ ಪತ್ರಿಕೆ ನಡೆಸೋದಕ್ಕಾಗಲ್ಲ ಅಂತ ಸುಳ್ಳು ಹೇಳೋ ಜಾಹೀರಾತೆಲ್ಲಾ ಹಾಕೋದಿಕ್ಕೆ ಆಗುತ್ತಾ. ಒಂದಿಷ್ಟು ನೀತಿ ನಿಯಮ ಇರ್ಬೇಕು, ಪತ್ರಕರ್ತರ ಸಂಘಗಳು ನಿಬಂಧನೆ ಮಾಡ್ಬೇಕು’ ಅಂತಿದ್ರು.

ಸಂತೋಷ್ ಕುಮಾರ್ ಗುಲ್ವಾಡಿ ಅವರ ಪುಸ್ತಕ ತೆಗೆದು ನೋಡಿ. ಗಾಂಧಿ ಹೇಳಿದರಂತೆ- ‘ಪತ್ರಕರ್ತರು ನಡೆದಾಡೋ ಪ್ಲೇಗ್ ನಂತ ಮಹಾರೋಗಿಗಳು. ಪತ್ರಿಕೆಗಳು ಬೈಬಲ್, ಕುರಾನ್, ಗೀತೆ ಎಲ್ಲವನ್ನೂ ಒಂದರಲ್ಲೇ ಅಳವಡಿಸೋ ಕೃತಿಗಳಾಗಿವೆ. ಇಷ್ಟರಲ್ಲೇ ರಾಜಕೀಯ ದೊಂಬಿಯಾಗಲಿದೆ ಅಂತ ಪತ್ರಿಕೆಗಳಲ್ಲಿ ಪ್ರಕಟವಾದರೆ ದೆಹಲಿಯಲ್ಲಿರುವ ಎಲ್ಲಾ ಕತ್ತಿ, ಬಾರುಕೋಲುಗಳು ಕ್ಷಣ ಮಾತ್ರದೊಳಗೆ ಮಾರಾಟವಾಗುತ್ತವೆ. ಜನರು ಧೈರ್ಯಶಾಲಿಗಳಾಗಬೇಕೆಂದು ಪತ್ರಿಕೆಗಳು ಕಲಿಸಿಕೊಡಬೇಕೇ ಹೊರತು ಅವರಲ್ಲಿ ಭಯವನ್ನು ಹುಟ್ಟಿಸುವುದಲ್ಲ’.

ಕಾಲೇಜಿನಲ್ಲಿದ್ದಾಗ ನಮ್ಮ ನಡುವೆ ಒಂದು ಹಾಡು ಭಾರೀ ಪಾಪ್ಯುಲರ್ ಆಗಿತ್ತು.’ಗಾಂಧಿ ಹೇಳಿಕೊಟ್ಟ ಪಾಠ, ಗುರುವಿಗೆ ತಿರುಮಂತ್ರ ಮಾಟ, ಸತ್ಯಾಗ್ರಹ- ಸ್ಟ್ರೈಕ್, ಸ್ಟ್ರೈಕ್, ಸ್ಟ್ರೈಕ್…’ ಅಂತ ಹೇಳಿ ಸ್ಟ್ರೈಕ್ ಗೆ ಇಳೀತಿದ್ವಿ.

ಈಗ ‘ಗಾಂಧಿ ಜರ್ನಲಿಸಂ’ಗೆ ಬಂದಿರೋ ಸ್ಥಿತೀನೂ ಅದೇ.

ಇವತ್ತಿನ ಪತ್ರಿಕೋದ್ಯಮ ಗಾಂಧಿ ಎಂಬ ಗುರುವಿಗೇ ತಿರುಮಂತ್ರ ಹೇಳುತ್ತಿದೆ.

ಗಾಂಧಿಯ ನೆನಪಿನ ಓಣಿಯಲ್ಲಿ ನಡೆಯುತ್ತಾ ಇರುವಾಗ ಏಕೋ ಗೋವಿಂದ ಪೈ ಬರೆದ ‘ಇನ್ನಿನಿಸು ದಿನ ಮಹಾತ್ಮ ನೀ ಬದುಕಬೇಕಿತ್ತು…’ ಸಾಲುಗಳು ನೆನಪಿಗೆ ಬಂತು.

ಹೌದು, ನೀ ಇನ್ನಿನಿಸು ದಿನ ಬದುಕಬೇಕಿತ್ತು…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?