Monday, October 14, 2024
Google search engine
Homeಸಾಹಿತ್ಯ ಸಂವಾದಅಂತರಾಳಈಗ ನನಗೆ ತುಟಿ ನೋಡುವ ಅಭ್ಯಾಸ..

ಈಗ ನನಗೆ ತುಟಿ ನೋಡುವ ಅಭ್ಯಾಸ..

ಜಿ ಎನ್ ಮೋಹನ್


ಅಮ್ಮ ಮನೆಗೆ ಬೇಕಾದ ತಿಂಗಳ ದಿನಸಿಯ ಪಟ್ಟಿ ಬರೆಸುತ್ತಿದ್ದರು
ಅಕ್ಕಿ 25 ಕೆ ಜಿ
ರಾಗಿ 5 ಕೆ ಜಿ
ಗೋದಿ ಹಿಟ್ಟು 5 ಕೆ ಜಿ
ಎಲ್ಲಾ ದಾಟಿಕೊಂಡು..
ಧನಿಯ 1 ಕೆ ಜಿ
ಕಡಲೆಬೇಳೆ 1 ಕೆ ಜಿ
ಹೆಸರುಕಾಳು 1 ಕೆ ಜಿಎಲ್ಲಾ ಮುಗಿಸಿ ಅಮ್ಮ ‘ಒಣ ಮೆಣಸಿನಕಾಯಿ’ ಬರಿ ಅಂದರು
ಬರೆದೆ
ಗುಂಟೂರು ಮೆಣಸಿನಕಾಯಿ ಅರ್ಧ ಕೆ ಜಿ
ಬ್ಯಾಡಗಿ ಮೆಣಸಿನಕಾಯಿ ಅರ್ಧ ಕೆ ಜಿ
ಅಂತ ಡಿಕ್ಟೇಟ್ ಮಾಡಲು ಶುರು ಮಾಡಿದರುಪಟ್ಟಿ ಬರೆಯುತ್ತಾ ಇದ್ದ ನಾನು ‘ಎಲ್ಲಾ ದಿನಸಿಗೂ ಒಂದೇ ವೆರೈಟಿ, ಮೆಣಸಿನಕಾಯಿಗೇಕೆ ಎರಡು?’ ಎಂದೆ
ಅಮ್ಮ ‘ಗುಂಟೂರು ಮೆಣಸಿನಕಾಯಿ ಖಾರ ಕೊಡುತ್ತೆ
ಬ್ಯಾಡಗಿ ಮೆಣಸಿನಕಾಯಿ ಬಣ್ಣ ಕೊಡುತ್ತೆ’ ಅಂದರು
ಪಟ್ಟಿ ಬರೆಯುತ್ತಿದ್ದ ನನ್ನ ಕೈ ಅಲ್ಲಿಯೇ ನಿಂತಿತುನೆನಪುಗಳ ಸರಮಾಲೆಅದು ನಾನು ಮಂಗಳೂರಿನಲ್ಲಿದ್ದ ಕಾಲ
ಹೌದು, ಮಂಗಳೂರಿನಿಂದ ಹೊರಟು ನಾನು ಇಡೀ ಕರ್ನಾಟಕ ಸುತ್ತುತ್ತಾ ಹಾವೇರಿಗೆ ತಲುಪಿಕೊಂಡಿದ್ದೆ.ಚುನಾವಣೆ ಘೋಷಣೆಯಾಗಿತ್ತು. ಎಲ್ಲೆಡೆ ಯುದ್ಧೋನ್ಮಾದ .
ನಾನು ಪ್ರತೀ ಜಿಲ್ಲೆಗೂ ಹೋಗಿ ಅಲ್ಲಿನ ಉದ್ಯಮ, ರೈತರನ್ನು ಗಮನದಲ್ಲಿಟ್ಟುಕೊಂಡು ಅವರ ಬದುಕಿಗೆ ಚುನಾವಣೆ ಏನು ಮಾಡಿದೆ ಎಂಬುದಕ್ಕೆ ಉತ್ತರ ಹುಡುಕುತ್ತಿದ್ದೆಹಾಗೆ ಹಾವೇರಿಗೆ ಬಂದ ನಾನು ಮೊದಲು ಹೆಜ್ಜೆ ಇಟ್ಟಿದ್ದೆ – ಬ್ಯಾಡಗಿಗೆ
ಬ್ಯಾಡಗಿ ಎಂದರೆ ಸಾಕು ಮೆಣಸಿನಕಾಯಿ ಎಂದು ನಿದ್ದೆಯಲ್ಲಿ ಅಲುಗಾಡಿಸಿದರೂ ಸಹಾ ಹೇಳಬಹುದು
ಬ್ಯಾಡಗಿಗೂ ಮೆಣಸಿನಕಾಯಿಗೂ ಅಷ್ಟು ನಂಟುಇಡೀ ನನ್ನ ಟೀಮ್ ಬ್ಯಾಡಗಿಯ ದಿಕ್ಕಿನತ್ತ ಮುಖ ಮಾಡಿತು
ಅಲ್ಲಿಯವರೆಗೂ ನನಗೆ ಇದ್ದದ್ದು ಸಮುದ್ರದ ಕಲ್ಪನೆ ಮಾತ್ರ.
ಇನ್ನೂ ಮಾರು ದೂರ ಇರುವಾಗಲೇ ಸಮುದ್ರ ಬಿಚ್ಚಿಕೊಂಡು ಎಂತಹವರನ್ನೂ ಬೆರಗಾಗಿಸುತ್ತದೆ
‘ಓ ಸಮುದ್ರಾ..’ ಎಂದು ಎಷ್ಟು ಉದ್ಘಾರಗಳನ್ನು ನಾನು ಕೇಳಿಲ್ಲ!.ನನಗೂ ಈಗ ಹಾಗೇ ಆಗಿ ಹೋಯಿತು
ಬ್ಯಾಡಗಿಯ ಬರಡು ನೆಲದಲ್ಲಿ ಸಮುದ್ರ!
ಆದರೆ ಒಂದೇ ವ್ಯತ್ಯಾಸ.. ನಾನು ನೋಡುತ್ತಿದ್ದ ಸಮುದ್ರದ ಬಣ್ಣ ಮಾತ್ರ ಬೇರೆ
ಕೆಂಪು, ಎಲ್ಲೆಲ್ಲೂ ಕೆಂಪು
ಅದು ಮೆಣಸಿನಕಾಯಿಯ ಸಮುದ್ರ,ಹಾಗೆ ಇಡೀ ಊರಿಗೆ ಊರೇ ಕೆಂಪು ಬಣ್ಣ ಬಳಿದುಕೊಂಡದ್ದನ್ನು ನೋಡಿದ್ದು ನನ್ನ ಜೀವಮಾನದಲ್ಲಿ ಇದೇ ಮೊದಲು.
ಊರಿನ ಎಲ್ಲೆಡೆಯೂ ಮೆಣಸಿನಕಾಯಿಯನ್ನು ಒಣಗಿಹಾಕಿದ್ದರು
ನಾನು ಊರಿನ ಒಳಗೆ ಹೆಜ್ಜೆ ಇಡುತ್ತಾ ಹೋದಂತೆ ಊರಿಗೆ ಊರೇ ಮೆಣಸಿನಕಾಯಿಯನ್ನು ಮಾತ್ರವೇ ಉಸಿರಾಡುತ್ತಿದ್ದುದನ್ನು ಕಂಡೆಹೆಂಗಸರು ಆ ವಿಶಾಲ ಮೆಣಸಿನಕಾಯಿ ಸಮುದ್ರದಲ್ಲಿ ಚುಕ್ಕಿಗಳೇನೋ ಎಂಬಂತೆ ಕಾಣುತ್ತಿದ್ದರು
ಎರಡೂ ಕೈನಲ್ಲಿ ಪಟಪಟನೆ ತೊಟ್ಟು ಬಿಡಿಸುತ್ತಾ ಇದ್ದರು.
ಇನ್ನೊಂದೆಡೆ ಮೆಣಸಿನಕಾಯಿ ಹೊಲದಲ್ಲಿ ಮೆಣಸಿನಕಾಯಿ ಕೀಳುತ್ತಿದ್ದರು, ಇನ್ನೊಂದೆಡೆ ದಲಾಲಿಗಳ ಅಬ್ಬರ
ಮೆಣಸಿನಕಾಯಿ ಹೊತ್ತ ಟ್ರಾಕ್ಟರ್ ಗಳು, ಮೆಣಸಿನಕಾಯಿ ಮೂಟೆ ಹೊರುತ್ತಿದ್ದವರು..ಆ ಘಾಟಿನ ಲೋಕದಲ್ಲಿ ಉಸಿರುಬಿಡಲು ಕಷ್ಟಪಡುತ್ತಾ ನಾನು ಒಂದೊಂದೇ ಹೆಜ್ಜೆ ಇಡುತ್ತಿದ್ದೆ.
ಊರಲ್ಲಿ ಹತ್ತಾರು ರೀತಿಯ ಕೆಲಸ ಮಾಡುತ್ತಿದ್ದವರನ್ನು ಮಾತನಾಡಿಸುತ್ತಾ ಹೋದೆ
ಹೀಗೆ ಬಂದ ಮೆಣಸಿನಕಾಯಿ ಹಾಗೆ ಖಾಲಿ ಆಗುತ್ತಿತ್ತುಅರೆ! ಬ್ಯಾಡಗಿ ಎಂದರೆ ಎಂತ ಡಿಮ್ಯಾಂಡ್ ಎಂಬ ಕೋಡು ಮೂಡಿತು
‘ನಿಮ್ಮ ವಹಿವಾಟು ನೋಡಿದರೆ ಇಡೀ ದೇಶದ ಎಲ್ಲರೂ ಬ್ಯಾಡಗಿ ಮೆಣಸಿನಕಾಯಿಯನ್ನೇ ತಿನ್ನುತ್ತಿರಬೇಕು’ ಎಂದೆ
ನನ್ನ ಜೊತೆ ಮಾತನಾಡುತ್ತಿದ್ದವರು ನನ್ನ ನೋಡಿ ನಕ್ಕರುನಾನೋ ಒಂದು ಕ್ಷಣ ಏನೂ ಅರ್ಥ ಆಗದೆ ಅವರ ಮುಖವನ್ನೇ ನೋಡಿದೆ
ಅವರು ‘ಬ್ಯಾಡಗಿ ಮೆಣಸಿನಕಾಯಿ ತಿನ್ನೋದಕ್ಕೆ ಎಲ್ಲಿ ಉಳಿಯುತ್ತೆ ಸಾರ್..’ ಎಂದರು
‘ಅಂದರೆ..’ ಎಂದೆ
ಇದೆಲ್ಲಾ ಹೋಗೋದು ನೋಡಿ ಅಲ್ಲಿಗೆ.. ಎಂದು ಕೈ ಮಾಡಿದರು
ನಾನು ಆ ಕಡೆ ನೋಡಿದರೆ ದೂರದಲ್ಲಿ ಕಾರ್ಖಾನೆಯ ಚಿಮಣಿಗಳು ಕಾಣಿಸಿದವುಅರ್ಥವಾಗದೆ ಮತ್ತೆ ಅವರತ್ತ ನೋಡಿದೆ
ಅವರು ಅದು ಬಣ್ಣದ ಕಾರ್ಖಾನೆ ಸಾರ್
ಬ್ಯಾಡಗಿ ಮೆಣಸಿನಕಾಯಿ ಈಗ ತಿನ್ನೋಕಲ್ಲ ಬಣ್ಣಕ್ಕೆ ಬಳಸ್ತಾರೆ
ಬ್ಯಾಡಗಿ ಮೆಣಸಿನಕಾಯಿಯಿಂದ ತೆಗೆದ ಬಣ್ಣ ಇದೆಯಲ್ಲಾ ಅದು ಲಿಪ್ ಸ್ಟಿಕ್ ಗೆ ಫಸ್ಟ್ ಕ್ಲಾಸ್ ಅಂದರುಎಲ್ಲಿನ ಮೆಣಸಿನಕಾಯಿ ಎಲ್ಲಿಯ ಲಿಪ್ ಸ್ಟಿಕ್ ಎಂದು ನಾನು ಕಣ್ಣೂ ಬಾಯಿ ಬಿಟ್ಟೆ
ನಾನಂದುಕೊಂಡಂತೆ ಇಡೀ ದೇಶ ಬ್ಯಾಡಗಿ ಮೆಣಸಿನಕಾಯಿ ತಿನ್ನುತ್ತಿರಲಿಲ್ಲ, ಬದಲಿಗೆ ಇಡೀ ಜಗತ್ತೇ ಅದನ್ನು ತುಟಿಗೆ ಬಳಿದುಕೊಳ್ಳುತ್ತಿತ್ತುಅಲ್ಲಿಂದ ನನ್ನ ಪಯಣದ ದಿಕ್ಕೇ ಬದಲಾಯ್ತು
ನಾನು ಕಾಣುತ್ತಿದ್ದ ಚಿಮಣಿಗಳ ಕಡೆ ಹೊರಳಿದೆ
ಕಂಡ ಕಂಡವರ ಬೆನ್ನು ಬಿದ್ದೆ, ಕಾರ್ಖಾನೆಗಳ ಬಾಗಿಲು ಬಡಿದೆಬ್ಯಾಡಗಿ ಮೆಣಸಿನಕಾಯಿ ಘಾಟು ಕಡಿಮೆ, ಬಣ್ಣ ಜಾಸ್ತಿ
ಯಾವಾಗ ಇದು ಗೊತ್ತಾಯಿತೋ ಬಹುರಾಷ್ಟ್ರೀಯ ಕಂಪನಿಗಳಿಗೆ ಬ್ಯಾಡಗಿ ಎನ್ನುವುದು ಪ್ರಿಯವಾಗಿ ಹೋಯಿತುಮೊದಲು ಮೆಣಸಿನಕಾಯಿಯನ್ನೇ ತರಿಸಿಕೊಳ್ಳುತ್ತಿದ್ದರು ಅದು ಬ್ಯಾಡಗಿಯಿಂದ ಮುಂಬೈಗೆ ಹಾರಿ, ಅಲ್ಲಿ ಬಣ್ಣವಾಗಿ ಬದಲಾಗುತ್ತಿತ್ತು
ಆಮೇಲೆ ಈ ಕಷ್ಟ ಯಾಕೆ ಅಂತ ಬಹುರಾಷ್ಟ್ರೀಯ ಕಂಪನಿಗಳು ತಾವೇ ಬ್ಯಾಡಗಿ ಹೆದ್ದಾರಿಗೆ ಬಂದು ಮನೆ ಮಾಡಿದವುತೊಟ್ಟು ಬಿಡಿಸಿದ ಮೆಣಸಿನಕಾಯಿ ತಂಪಾಗಿಟ್ಟಷ್ಟೂ ಹೆಚ್ಚು ಬಣ್ಣ ಬಿಡುತ್ತದೆ
ಇದು ಗೊತ್ತಾದ ತಕ್ಷಣ ಕೋಲ್ಡ್ ಸ್ಟೋರೇಜ್ ಗಳು ಬ್ಯಾಡಗಿಗೆ ಎಂಟ್ರಿ ಕೊಟ್ಟವುಮೆಣಸಿನಕಾಯಿ ಹಿಂಡಿ ‘ಓಲಿಯೋರೆಸಿನ್’ ಎನ್ನುವ ಬಣ್ಣ ತೆಗೆಯುತ್ತಾರೆ
ಒಂದು ಟನ್ ಮೆಣಸಿನಕಾಯಿ ಹಿಂಡಿದರೆ 50 ಲೀಟರ್ ಬಣ್ಣ ಸಿದ್ಧಅಲ್ಲಿಂದ ನನ್ನ ದಿಕ್ಕು ಮತ್ತೆ ಬ್ಯಾಡಗಿಯತ್ತ
12 ಲಕ್ಷ ಟನ್ ಬ್ಯಾಡಗಿ ಮೆಣಸಿನಕಾಯಿ ಫಸಲು ಬಂದಿದೆ
ಬಹುರಾಷ್ಟ್ರೀಯ ಕಂಪನಿಗಳು ಎಲ್ಲೆಲ್ಲಿಂದಲೋ ಬಂದು ಬೀಡು ಬಿಟ್ಟಿವೆನಾನು ಆ ಕೆಂಪು ಸಮುದ್ರದೊಳಗೆ ಹೆಜ್ಜೆ ಹಾಕುತ್ತಾ ಅಲ್ಲಿ ಮೂಗು ಬಾಯಿ ಕಟ್ಟಿಕೊಂಡು
ಚಕಚಕನೆ ರೋಬೋಟ್ ಗಿಂದ ವೇಗವಾಗಿ ತೊಟ್ಟು ಮುರಿಯುತ್ತಿದ್ದ ಹೆಂಗಸಿನ ಬಳಿ ಕುಳಿತೆಬದುಕು ಹೇಗಿದೆ ತಾಯಿ ಎಂದೆ
ಅಷ್ಟೇ, ಆಕೆಯ ಕಣ್ಣಲ್ಲಿ ನೀರು ಸುರಿಯಲಾರಂಭಿಸಿತು
ಘಾಟಿನ ಕಾರಣಕ್ಕೆ ಅಸ್ತಮಾ, ಹಲವರಿಗೆ ಕ್ಯಾನ್ಸರ್
ಖಾರದಲ್ಲಿ ಕೈ ಆಡೀ ಆಡೀ ಕೈ ಸ್ಪರ್ಶ ಜ್ಞಾನವನ್ನೇ ಕಳೆದುಕೊಂಡಿದೆಹಾಗೆಯೇ ಜಗತ್ತಿನಾದ್ಯಂತ ಅದನ್ನು ತಿಂದರೂ, ಹಚ್ಚಿಕೊಂಡರೂ ಅವರ ಬದುಕಿಗೆ ಮಾತ್ರ ಬಣ್ಣ ಬಂದಿಲ್ಲ
ಕತ್ತಲು ಒಂದಿಂಚೂ ಜರುಗಿಲ್ಲಅಮೆರಿಕಾದ ‘ಸಿ ಎನ್ ಎನ್’ ಚಾನಲ್ ಗೆ ಈ ಕಥೆಯನ್ನು ಹೊತ್ತೊಯ್ದೆ
ತೆರೆಯ ಮೇಲೆ ಮೆಣಸಿನಕಾಯಿ ಕಥೆ ಬಿಚ್ಚುತ್ತಾ ಹೋದಂತೆ ಎಲ್ಲರೂ ನಿಟ್ಟುಸಿರಾದರು
ಜಗತ್ತನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿರುವ ಅಮೆರಿಕಾದ ಕಂಪನಿಗಳಿಗೆ ಸಿ ಎನ್ ಎನ್ ಆದರೂ ಪಾಠ ಹೇಳಲಿ ಎನ್ನುವ ಆಸೆ ನನ್ನದುಈ ಮಧ್ಯೆ ಮಂಗಳೂರಿನ ಮನೆಯ ಬಾಗಿಲು ಬಡಿದ ಸದ್ದಾಯ್ತು
ತೆರೆದರೆ ಸಿದ್ಧಾರ್ಥ ವರದರಾಜನ್
‘ಹಿಂದೂ’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿರುವ ಸಿದ್ಧಾರ್ಥ್ ಆಗ ‘ಟೈಮ್ಸ್ ಆಫ್ ಇಂಡಿಯಾ’ದ ದೆಹಲಿ ಸ್ಥಾನಿಕ ಸಂಪಾದಕನನಗೋ ಅಚ್ಚರಿ
ಅವರು ಒಳಗೆ ಕಾಲಿಟ್ಟ ತಕ್ಷಣ ಮೆಣಸಿನಕಾಯಿ ಎಂದರು
ನನಗೆ ಅರ್ಥವಾಗಿ ಹೋಯ್ತುನನ್ನ ಬ್ಯಾಡಗಿ ವರದಿ ನೋಡಿದ್ದ ಸಿದ್ಧಾರ್ಥ್ ವರದರಾಜನ್ ಅವರು ದೆಹಲಿಯಿಂದ ಆ ಕಥೆಯ ಬೆನ್ನತ್ತಿ ಬಂದಿದ್ದರು
ವಿವರ ಕೊಟ್ಟ ತಕ್ಷಣ ಅವರೂ ಬ್ಯಾಡಗಿಯತ್ತ ಮುಖ ಮಾಡಿದರುಈಗ ನಾನು ಯಾರು ಲಿಪ್ ಸ್ಟಿಕ್ ಹಾಕಿದ್ದರೂ ಅವರ ತುಟಿ ನೋಡುತ್ತೇನೆ
ಅಲ್ಲಿ ಬಣ್ಣದ ಬದಲು ಕದಡಿ ಹೋಗುತ್ತಿರುವ ಬದುಕು ಕಾಣುತ್ತದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?