ತುಮಕೂರು: ಸರ್ಕಾರ ಎಲ್ಲಾ ಬಡವರಿಗೂ ಭೂಮಿ ಮತ್ತು ಮನೆಯನ್ನು ಒದಗಿಸಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದಿನಿಂದ ಅರೋರಾತ್ರಿ ಧರಣಿ ಆರಂಭವಾಗಿದೆ. ಮಧುಗಿರಿ ಮತ್ತು ಶಿರಾ ತಾಲೂಕಿನಿಂದ ಬಂದಿರುವ ಭೂರಹಿತರು ಮತ್ತು ಮನೆ ಇಲ್ಲದವರು ಧರಣಿ ನಡೆಸುತ್ತಿದ್ದಾರೆ.
ನೂರಕ್ಕೂ ಹೆಚ್ಚು ಮಂದಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಗೋಮಾಳದಲ್ಲಿ, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಸಾಗುವಳಿ ಚೀಟಿ ನೀಡಬೇಕು. ಮನೆ ಇಲ್ಲದವರಿಗೆ ಮನೆ ನೀಡಬೇಕು ಎಂಬ ಒತ್ತಾಯ ಅವರದ್ದು. ಈ ಧರಣಿ ಸತ್ಯಾಗ್ರಹಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಬೆಂಬಲ ವ್ಯಕ್ತಪಡಿಸಿ ಕೆಲ ಕಾಲ ಧರಣಿಯಲ್ಲಿ ಕುಳಿತು ಮಾತನಾಡಿದರು.
ಧರಣಿಯನ್ನು ಉದ್ಘಾಟಿಸಿ ಮಾತನಾಢಿದ ಅವರು ಬಡವರೂ ಕೂಡ ಭಾರತೀಯರು. ಅವರು ಘನತೆಯ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ನೆರವು ನೀಡಬೇಕು. ಕೇವಲ ಓಟು ಪಡೆಯುವುದು ಮಾತ್ರವಲ್ಲ ಬಡವರನ್ನು ಗೌರವಯುತವಾಗಿ ಕಾಣಬೇಕು. ಬದುಕಿ ಬಾಳಲು ಅವಕಾಶ ನೀಡಬೇಕು. ಅವರಿಗೆ ಬೇಕಾಗಿರುವ ಭೂಮಿ, ವಸತಿ, ಊಟ ಹೀಗೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕಾದುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.
ಹಲವು ಹೋರಾಟಗಳನ್ನು ನಡೆಸಿದರೂ ಸರ್ಕಾರಗಳು ಬಡವರ ಬಗ್ಗೆ ಗಮನಹರಿಸುತ್ತಿಲ್ಲ. ಬಡವರನ್ನು ಕಸದಂತೆ ಕಾಣುವ ಪ್ರಥೃತ್ತಿಯನ್ನು ಅಧಿಕಾರಿಗಳು, ರಾಜಕಾರಣಿಗಳು ಮತ್ತು ಜಿಲ್ಲಾಧಿಕಾರಿಗಳು ಬಿಡಬೇಕು. ಬಡವರು ಕೂಡ ಎಲ್ಲರಂತೆ ಮನುಷ್ಯರೇ ಆಗಿದ್ದಾರೆ. ಅವರೂ ಭಾರತೀಯ ಪ್ರಜೆಗಳು. ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನು ಕಾಣುವುದನ್ನು ಮೊದಲು ಬಿಡಬೇಕು ಎಂದು ತಿಳಿಸಿದರು.
ತಮಗೆ ಸ್ಥಾನ ಸಿಗಲಿಲ್ಲವೆಂದು ಪಕ್ಷ ತೊರೆಯುವವರಿಗೆ ತಕ್ಕ ಪಾಠ ಕಲಿಸಬೇಕು. ಅನರ್ಹರಿಗೆ ಯಾವುದೇ ತತ್ವ ಇಲ್ಲ. ವಿಚಾರ ಇಲ್ಲ. ಅವರಿಗೆ ಅಧಿಕಾರ ಬೇಕು. ಇಂಥವರಿಗೆ ನಾಚಿಕೆಯಾಗಬೇಕು. ಇವರು ಶ್ರೀಮಂತರು, ಕೋಟಿ ಕೋಟಿ ರೂಪಾಯಿ ಲೂಟಿ ಹೊಡೆದವರು. ಇಂಥವರಿಗೇ ನಮ್ಮ ಯುವಕರು ಜೈಕಾರ ಹಾಕುತ್ತಾರೆ. ಇದೇನು ವ್ಯವಸ್ಥೆ. ಇಂಥ ವ್ಯವಸ್ಥೆಯನ್ನು ನೋಡಿ ನೊವಾಗುತ್ತದೆ. ಯುವಕರು ದುಡ್ಡು, ಹೆಂಡಕ್ಕಾಗಿ ಜೈಕಾರ ಹಾಕುವುದನ್ನು ನಿಲ್ಲಿಸಭೇಕು ಎಂದು ಕಿವಿಮಾತು ಹೇಳಿದರು.
ನಾವು ಗಾಂಧಿಯೊಂದಿಗೆ ಹೋರಾಟ ಮಾಡಿದೆ. ನಮ್ಮ ಉದ್ದೇಶ ಸುಂದರ ಸಮಾಜ ನಿರ್ಮಾಣವಾಗಿತ್ತು. ಇಂದು ರಾಜ್ಯ ದೇಶ ಹಾಳಾಗಿ ಹೋಗುತ್ತಿದೆ. ಕೊಳ್ಳೆ ಹೊಡೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದನ್ನು ನೋಡಿಕೊಂಡು ಯುವಕರು-ಯುವತಿಯರು ಸುಮ್ಮನಿದ್ದಾರೆ. ಯುವಕರ ಮೌನ ಒಳ್ಳೆಯದಲ್ಲ. ಯುವರಕು ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ದೇಶ ಕಟ್ಟಲು ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರತಿಭಟನಾ ಧರಣಿಯಲ್ಲಿ ಸಿರಿಮನೆ ನಾಗರಾಜು ಪ್ರಾಸ್ತಾವಿಕ ಮಾತನಾಡಿ ಸರ್ಕಾರಗಳು ಜನರ ಬಗ್ಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿವೆ. ಹಲವು ವರ್ಷಗಳಿಂದ ಭೂಮಿ ಮತ್ತು ವಸತಿ ನೀಡುವಂತೆ ಮನವಿ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ಸರ್ಕಾರವೂ ಗಮನಹರಿಸುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.
ಧರಣಿಯಲ್ಲಿ ಜನಸಂಗ್ರಾಮ ಪರಿಷತ್ ನ ಸಿ.ಯತಿರಾಜು, ಎ.ನಾಗೇಶ್. ಪಿ.ಎನ್.ರಾಮಯ್ಯ, ಅಭಯಕುಮಾರ್, ಹಂದ್ರಾಳ್ ನಾಗಭೂಷಣ್, ಸಿದ್ದಪ್ಪ, ತು. ಮಲ್ಲೇಶ್, ರಾಜಸಿಂಹ, ವೈ.ಎಚ್.ಹುಚ್ಚಯ್ಯ, ರಾಘವೇಂದ್ರಸ್ವಾಮಿ, ವೆಂಕಟೇಶ್, ಮಲ್ಲಿಕಾರ್ಜನಯ್ಯ ಸೇರಿದಂತೆ ಹಲವರು ಇದ್ದರು. ಅಹೋರಾತ್ರಿ ಧರಣಿ ಮುಂದುವರೆದಿದೆ.