ಜಿ.ಎನ್.ಮೋಹನ್
ಒಂದು ಹಗ್ ಬೇಕಿತ್ತು
-ಗೆಳೆಯ ಮಂಸೋರೆ ಇದನ್ನು ಹೇಳುವ ವೇಳೆಗಾಗಲೇ ಹನಿಗಣ್ಣಾಗಿದ್ದರು.
ನಾನು ಕೇಳಿದ್ದು ಇಷ್ಟೇ. ‘ಹರಿವು’ನಲ್ಲಿ ಇರುವುದು ಅಪ್ಪ ಮಗನ ಸಂಬಂಧ. ನಿಮ್ಮ ಮತ್ತು ಅಪ್ಪನ ಸಂಬಂಧ ಹೇಗಿತ್ತು? ಅಂತ.
ಮಂಸೋರೆಗೆ ಸುಧಾರಿಸಿಕೊಳ್ಳಲು ತುಂಬಾ ತುಂಬಾ ಸಮಯವೇ ಹಿಡಿಯಿತು. ನಾನೂ ಇದನ್ನು ನಿರೀಕ್ಷಿಸಿರಲಿಲ್ಲ.
ಅಪ್ಪ ತೆಲುಗು ಚಿತ್ರಗಳ ಹಿನ್ನೆಲೆಯುಳ್ಳವರು. ‘ಸೂರ್ಯವಂಶ’ ಸಿನೆಮಾವನ್ನು ೨೦೦ ಬಾರಿ ನೋಡಿದವರು. ಅವರಿಗೆ ‘ನೋಡಪ್ಪಾ ನಾನೂ ಸಿನೆಮಾ ಮಾಡ್ತೇನೆ. ಸಿನೆಮಾ ಅಂದ್ರೆ ಹೀಗಿರಬೇಕು ಅಂತ ತೋರಿಸ್ತೇನೆ ಅಂದಿದ್ದೆ. ಆದರೆ ಕಥೆ ಆರಿಸಿ ಸಿನೆಮಾ ಮಾಡಿ ಅಪ್ಪನ ಕೈಗಿಡುವ ವೇಳೆಗೆ ಅವರೇ ಇರಲಿಲ್ಲ’ ಎಂದು ಮಾತು ನಿಲ್ಲಿಸಿದರು.
‘ಒಂದು ವಿಷಯ ಗೊತ್ತಾ.. ನನಗೆ ಈಗಲೂ ಅಚ್ಚರಿ ಅಪ್ಪ ಪ್ರತೀ ಬಾರಿ ಸೂರ್ಯವಂಶ ನೋಡುವಾಗಲೂ ಅಪ್ಪ ಕಣ್ಣೀರಿಡುತ್ತಿದ್ದರು. ಒಂದು ಸಿನೆಮಾದಲ್ಲಿ ಏನಾಗುತ್ತೆ ಎನ್ನುವುದು ಎರಡನೇ ಬಾರಿ ಸಿನೆಮಾ ನೋಡುವ ವೇಳೆಗೆ ಗೊತ್ತಾಗಿ ಹೋಗಿರುತ್ತದೆ. ಆದರೆ ೨೦೦ ನೇ ಸಲ ಅದೇ ಸಿನೆಮಾ ನೋಡುವಾಗಲೂ ಅಪ್ಪ ಅದಕ್ಕೆ ಎಮೋಷನಲ್ ಆಗಿ ಕನೆಕ್ಟ್ ಆಗ್ತಾ ಇದ್ದರು. ಎಂತಹ ಮ್ಯಾಜಿಕ್ ಇದು. ಬಹುಷಃ ಇಂತಹ ಉತ್ತರ ಸಿಗದ ಯಕ್ಷಿಣಿಯೇ ನನ್ನನ್ನು ಸಿನೆಮಾ ಲೋಕಕ್ಕೆ ಎಳೆದುಕೊಂಡು ಬಂತು’ ಎಂದರು.
‘ಆಕ್ಟ್ ೧೯೭೮’ ಮಂಸೋರೆ ಅವರ ಮೂರನೆಯ ಚಿತ್ರ ಹೊಸ್ತಿಲು ದಾಟಲು ಸಿದ್ಧವಾಗಿತ್ತು. ಆ ಸಮಯದಲ್ಲಿಯೇ ನಾನು ಮಂಸೋರೆ ಅವರನ್ನು ಅಕ್ಷರಶಃ ಎದುರಿಗೆ ನಿಲ್ಲಿಸಿಕೊಂಡಿದ್ದೆ. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಪಿಯುಸಿಯಲ್ಲಿ ಡುಮ್ಕಿ ಹೊಡೆದ ಅಷ್ಟೂ ಪೇಪರ್ ಗಳಿಗೆ ಬಂದ ಮಾರ್ಕ್ಸ್ ಗಳನ್ನು ಕೂಡಿದರೂ ೧೦ ಅಂಕ ದಾಟದ ಹುಡುಗ ಇವನೇನಾ ಎನ್ನುವಂತಾಗಿತ್ತು.
‘ನನಗೆ ಕಥೆ ಹೇಳೋದು ಅಂದರೆ ತುಂಬಾ ಇಷ್ಟ. ಇದಕ್ಕೂ ಅಪ್ಪನೇ ಕಾರಣ. ಅಪ್ಪ ವಯಸ್ಕರ ಶಿಕ್ಷಣ ಇಲಾಖೆಯಲ್ಲಿದ್ದರು. ಹಾಗಾಗಿ ಆ ಇಲಾಖೆ ಪ್ರಕಟಿಸಿದ ಪುಸ್ತಕ ಎಲ್ಲಾ ನನ್ನ ಕೈನಲ್ಲಿರುತ್ತಿತ್ತು. ಓದಿಯೇ ಓದಿದೆ. ಕಥೆ, ಕಥನ ಕಲೆ ಎರಡೂ ನನ್ನೊಳಗೆ ಇಳಿದು ಹೋಯ್ತು’ ಎಂದರು.
ಊರಲ್ಲಿ ಸೈನ್ ಬೋರ್ಡ್ ಮಾಡುತ್ತಿದ್ದ ನೆಂಟರಿದ್ದರು. ಅವರ ಜೊತೆ ಸೇರಿ ಬ್ಯಾನರ್ ಗೆ ಬಣ್ಣ ತುಂಬುತ್ತಾ, ಇಲ್ಲವೇ ಅವರು ಪೇಂಟ್ ಮಾಡುವಾಗ ಬಣ್ಣದ ಡಬ್ಬ ಹಿಡಿದುಕೊಂಡು ನಿಂತಿರುತ್ತಿದ್ದೆ. ಅಮ್ಮ ಒಡವೆ ಮಾರಿ ನನ್ನನ್ನ ಚಿತ್ರಕಲಾ ಪರಿಷತ್ ಮೆಟ್ಟಿಲು ಹತ್ತಿಸದೇ ಇದ್ದಿದ್ದರೆ ಬಹುಷಃ ಈಗಲೂ ಬ್ಯಾನರ್ ಬರೆದುಕೊಂಡು ಇರುತ್ತಿದ್ದೆನೇನೋ..’ ಎಂದು ಗತಕಾಲಕ್ಕೆ ಜಾರಿದರು.
ಚಿತ್ರಕಲಾ ಪರಿಷತ್ ನಲ್ಲಿ ನನಗೆ ಎಚ್ ಎ ಅನಿಲ್ ಕುಮಾರ್ ಸಿಕ್ಕಿದ್ದು ನನ್ನ ಮುಂದಿನ ದಾರಿ ಬೇರೆಯದೇ ದಿಕ್ಕಿಗೆ ಹೊರಳಲು ಕಾರಣವಾಯಿತು. ಇದಕ್ಕೆ ಕ್ಲೈಮಾಕ್ಸ್ ಎನ್ನುವಂತೆ ಸಿಕ್ಕಿದ್ದು ೨೦೧೧ರಲ್ಲಿ ಪ್ರಕಟವಾದ ಆಶಾ ಬೆನಕಪ್ಪ ಅವರ ‘ಪ್ರಜಾವಾಣಿ’ ಅಂಕಣ ಎಂದು ಮಾತು ನಿಲ್ಲಿಸಿದರು.
ಅಲ್ಲಿಂದ ಅವರು ಉಸಿರುತೆಗೆದುಕೊಳ್ಳಲು ಒಂದಷ್ಟು ಸಮಯ ಬೇಕಾಯಿತು. ‘ಮಗನ ಚಿಕಿತ್ಸೆಗೆ ಹಣವಿಲ್ಲದ ಅಪ್ಪನೊಬ್ಬ ಮಗ ಇಲ್ಲವಾದಾಗ ಊರಿಗೆ ದೇಹವನ್ನು ಸಾಗಿಸಲು ಪಡುವ ಯಾತನೆಯ ಕಥೆ ಅದು. ಒಂದು ಟ್ರಂಕ್ ಖರೀದಿಸಿ ಅದರಲ್ಲಿ ಮಗನ ಶವ ಇಟ್ಟುಕೊಂಡು ಊರು ಸೇರುವ ಮನ ಕಲಕುವ ಕಥೆ ಅದು. ಆಶಾ ಬೆನಕಪ್ಪ ಅವರ ಕಣ್ಣೆದುರು ನಡೆದದ್ದು. ಅದೇ ಮಂಸೋರೆ ಕಣ್ಣಲ್ಲಿ ಹರಿವು ಆಯಿತು.
‘ಬಡವರ ಬದುಕು ತುಟ್ಟಿ, ಸಾವು ಇನ್ನೂ ತುಟ್ಟಿ’ ಎನ್ನುವ ಕಥನ ಅದು. ಅಪ್ಪ ಮಗನ ದೇಹ ಸಾಗಿಸಿದ ಪಯಣ ಇದೆಯಲ್ಲಾ ಅದು ಇನ್ನೊಂದು ರೀತಿಯಲ್ಲಿ ನನ್ನ ಬದುಕಿನಲ್ಲಿ ಆಗಿತ್ತು. ನಾನು ಪ್ರಜ್ಞೆ ಇಲ್ಲದ, ಇನ್ನು ಕೆಲವೇ ದಿನಗಳ ಕಾಲ ಬದುಕುತ್ತಾರೆ ಎನ್ನುವ ಅಪ್ಪನನ್ನು ಇದೆ ರೀತಿ ಊರಿಗೆ ಕರೆದುಕೊಂಡು ಹೋದ ನೆನಪು ಅದರೊಳಗಿತ್ತು ಹಾಗಾಗಿ ಬಹುಷಃ ಆ ಸಿನೆಮಾ ಅಷ್ಟು ಇಂಟೆನ್ಸ್ ಆಗಿ ಬಂದುಹೋಯಿತು’ ಎಂದರು.
ಆಗಲೇ ನಾನು ಅವರಿಗೆ ಈ ಮಂಸೋರೆ’ ಎಂದರೆ ಯಾರು ಎನ್ನುವ ಪ್ರಶ್ನೆ ಕೇಳಿದ್ದು.
‘ಸೋಮಕೇಶವ ರೆಡ್ಡಿಯ ಮಗ ಈ ಮಂಜುನಾಥ. ಮೂರರಿಂದಲೂ ಒಂದು ಅಕ್ಷರ ಆಯ್ದುಕೊಂಡು ಈ ಮಂಸೋರೆ ಹುಟ್ಟಿದ’ ಎಂದು ನಕ್ಕರು.
ನನಗೆ ಜಾತಿ ಸೂಚಕ ಹೆಸರು ಖಂಡಿತಾ ಇಷ್ಟ ಇಲ್ಲ. ಹಾಗಾಗಿ ನಾನು ಮಂಜುನಾಥ ಅಷ್ಟೇ ಆಗಿದ್ದೆ. ಆದರೆ ನನ್ನೊಳಗೆ ಅಪ್ಪನನ್ನು ಸದಾ ಉಳಿಸಿಕೊಳ್ಳಲು ಅವರ ಹೆಸರು ಸೇರಿಸಿಕೊಂಡೆ. ಹಾಗಾಗಿ ಸೋಮಕೇಶವರ ಜೊತೆಗೆ ರೆಡ್ಡಿಯೂ ಬಂದು ಸೇರಿಹೋಯ್ತು’ ಎಂದರು ‘ಮಂ’ಜುನಾಥ ‘ಸೋ’ಮಕೇಶವ ‘ರೆ’ಡ್ಡಿ.
‘ಹರಿವು ಒಂದು ಸಿನೆಮಾ ಅಲ್ಲ ಎರಡು ಗೊತ್ತಾ..’ ಎಂದು ಮಂಸೋರೆ ನನ್ನತ್ತ ನೋಡಿ ಮುಗುಳ್ನಕ್ಕರು. ನನಗೂ ಅದು ಬ್ರೇಕಿಂಗ್ ನ್ಯೂಸೇ. ಹೌದಾ ಎಂದು ಕಣ್ಣರಳಿಸಿದೆ.
‘ಅಕ್ಕನ ಮದುವೆಗೆ ಅಂತ ಇಟ್ಟಿದ್ದ ಲಕ್ಷಾಂತರ ಹಣವನ್ನ ಖರ್ಚು ಮಾಡಿ ಸಿನೆಮಾ ಮಾಡಲು ದಂಡು ಕಟ್ಟಿಕೊಂಡು ಹೋದೆ. ಸಿನೆಮಾ ಹೇಗೆ ನಿರ್ದೇಶಿಸಬೇಕು ಎನ್ನುವುದೇ ಗೊತ್ತಿಲ್ಲದ, ಶೂಟಿಂಗ್ ಸ್ಕ್ರಿಪ್ಟ್ ಮಾಡಲು ಗೊತ್ತಿಲ್ಲದ ನಾನು ಅಷ್ಟೂ ಹಣವನ್ನು ಕಳೆದು ಡಿಪ್ರೆಶನ್ ಗೆ ಜಾರಿ ಹೋದೆ.
ಆದರೆ ಸಿನೆಮಾದಲ್ಲಿ ತಂದೆ ಪಾತ್ರ ಮಾಡುತ್ತಿದ್ದ ಸಂಚಾರಿ ವಿಜಯ್ ಬಿಡಲಿಲ್ಲ. ಎರಡು ವರ್ಷದ ನಂತರ ಮತ್ತೆ ಬಂದು ಈ ಕಥೆ ನನ್ನನ್ನು ಎರಡು ವರ್ಷದಿಂದ ಮಲಗಲು ಬಿಟ್ಟಿಲ್ಲ ಬನ್ನಿ ಇಬ್ಬರೂ ಸೇರಿ ಯಾರಾದರೂ ಪ್ರೊಡ್ಯೂಸರ್ ಹುಡುಕಿಯೇ ಬಿಡೋಣ ಅಂದರು. ಎರಡು ವರ್ಷದ ನಂತರ ಮತ್ತೆ ಡೈರೆಕ್ಷನ್ ಗೆ ನಿಂತಾಗ ಈ ಮಂಸೋರೆ ಸಾಕಷ್ಟು ಪಾಠ ಕಲಿತಿದ್ದ’ ಎಂದರು.
ಇಷ್ಟೆಲ್ಲಾ ಆದ ನಂತರ ನಾನೂ, ಮಂಸೋರೆ ಕನ್ನಡ ಭವನದ ಅಂಗಳದಲ್ಲಿ ನಿಂತಿದ್ದೆವು. ‘ಏನ್ ಗೊತ್ತಾ’ ಎಂದರು. ‘ಏನು’ ಎಂದೆ. ‘ಹೊಸ ಸಿನೆಮಾ ಪ್ಲಾನ್ ಮಾಡ್ತಾ ಇದ್ದೀನಿ’ ಅಂದರು ‘ವಾಹ್!’ ಎಂದವನೇ ಅಲ್ಲಿದ್ದ ಗೆಳೆಯರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಸಂಜೆ ಸಿಟ್ಟಿಂಗ್ ಮಾಡಿಯೇಬಿಟ್ಟೆವು.
ಆಗಲೇ ಅವರು ಹೇಳಿದ್ದು ಹೆಸರು ‘ನಾತಿಚರಾಮಿ’ ಅಂತ. ನನ್ನ ಕಿವಿ ದೊಡ್ಡದಾಯಿತು. ಮಂಸೋರೆಗೂ ಗೊತ್ತಾಯಿತೇನೋ ಎಂ ಎಸ್ ಆಶಾದೇವಿ ಅವರು ಬರೆಯುತ್ತಿದ್ದ ‘ನಾರಿ ಕೇಳಾ’ ಅಂಕಣ ನನ್ನೊಳಗನ್ನು ಶೋಧಿಸಿಕೊಳ್ಳಲು ಕಾರಣ ಆಯಿತು. ಹೆಣ್ಣಿನ ದೃಷ್ಟಿಯಿಂದ ನೋಡುವುದು ಕಲಿತೆ. ಅಷ್ಟೇ ಅಲ್ಲ ಗಂಡಾಗಿ ನಾನು ಮಾಡುತ್ತಿರುವ ತಪ್ಪನ್ನು ಗೊತ್ತುಮಾಡಿಕೊಳ್ಳುತ್ತಾ ಹೋದೆ. ಅದರ ಪರಿಣಾಮವೇ ‘ನಾತಿಚರಾಮಿ’. ಹೆಣ್ಣಿನ ಒಳತುಮುಲಕ್ಕೆ ಒಂದು ಕನ್ನಡಿ ಎಂದರು.
ನಾವು ಮಾತನಾಡುತ್ತಲೇ ಹೋದೆವು. ಹತ್ತು ಹಲವಾರು ಕಥೆ. ಮಂಸೋರೆ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದು. ಬೆನ್ನತ್ತಿ ಬಂದ ರಾಷ್ಟ್ರ ಪ್ರಶಸ್ತಿಗಳು ಅವರನ್ನು ಚಿತ್ರರಂಗದಲ್ಲೇ ಉಳಿಯುವಂತೆ ಮಾಡಿದ್ದು, ಅವರ ಪತ್ರಕರ್ತ ರೂಪ ಹೀಗೆ ಏನೆಲ್ಲಾ..
ಇಷ್ಟು ಮಾತಾಡುವಾಗಲೇ ‘ಹೇಳಿ ಈಗ ‘ಆಕ್ಟ್ ೧೯೭೮’ ಸಿನೆಮಾ ರಿಲೀಸ್ ಗೆ ನಿಂತಿದ್ದೀರಿ. ಈ ಕ್ಷಣದಲ್ಲಿ ಅಪ್ಪನಿಗೆ ಏನು ಹೇಳಲು ಬಯಸುತ್ತೀರಾ’ ಎಂದೆ.
ಹನಿಗಣ್ಣಾದ ಮಂಸೋರೆ ‘ಅಪ್ಪನ ಹಗ್’ ಎಂದರು.
ಗೊತ್ತಿಲ್ಲ ಯಾಕೆ ಅಂತ. ನಾನು ಕ್ಯಾಮೆರಾ ರೋಲ್ ಆಗುತ್ತಿರುವುದನ್ನೂ ಮರೆತು ಮಂಸೋರೆಯನ್ನು ಬಾಚಿ ಅಪ್ಪಿಕೊಂಡೆ. ಆದರೆ ಅದು ಆ ಅಪ್ಪನ ಹಗ್ ಗೆ ಸಮನಾದದ್ದಾಗಿರಲಿಲ್ಲ.