Monday, June 17, 2024
Google search engine
Homeಸಾಹಿತ್ಯ ಸಂವಾದಒಂದೊಮ್ಮೆ ಮನುಕುಲವನ್ನು ನಡುಗಿಸಿದ ಕತೆ: ಪಿಳೇಕು

ಒಂದೊಮ್ಮೆ ಮನುಕುಲವನ್ನು ನಡುಗಿಸಿದ ಕತೆ: ಪಿಳೇಕು

ಡಾ.ಓ.ನಾಗರಾಜ್ ಅವರು ಬರೆದಿರುವ ಈ ಪಿಳೇಕು ಕತೆ ಕೊರೊನಾವನ್ನು ಮೀರಿದ ಭಯಾನಕತೆಯನ್ನು ತೆರೆದಿಡುತ್ತದೆ.


ಇದು ಯಾವ ಪಕ್ಷಿ ಹಾಕಿದ ಹಿಕ್ಕೆಯೊಳಗಿನ ಬೀಜ ಮೊಳೆತು ಇಷ್ಟು ದೊಡ್ದಾಗಿ ಬೆಳಕ್ಕಂಡಿರಂತ ಮರವೊ ! ಉತ್ತಮರು ಅದುಕ್ಕೆ ಅಶ್ವತ್ಥ ವೃಕ್ಷ ಅಂಥ ಹೆಸರು ಕೊಟ್ಟವರೆ.ಅದರ ಪಕ್ಕದಾಗೆ ಹೆಂಡ್ರು ಇರಲಿ ಅಂತೇಳಿ ಬೇವಿನ ಗಿಡವ ನೆಟ್ಟವ್ರೆ .ದನ ಕಾಯೊ ಹುಡ್ರು ಸುತ್ತ ಕಟ್ಟೆ ಕಟ್ಟಿದಾರೆ.

ಒಟ್ನಲ್ಲಿ ಅದು ಹಿಂದೂಪುರದ ಒಳಗಿರದೆ ಅಲ್ಲಿ ಕಾಣ ಬಂತೆಗುಟ್ಟೆಗೂ ಹೊಂದಿಕಳ್ಳದೆ ಬಯಲೊಳಗೆ ನಡುವಂತರದಲ್ಲದೆ.ಸುತ್ತ ಮುತ್ತ ಹೊಲಗಳವ್ವೆ.ಅದರ ಸನ್ನಿಧಿಯಲ್ಲಿ ರಸ್ತೆ ಹಾದೋಗದೆ.

ಎದುರು ಬಿಸ್ಲಾಗೆ ನೆಡ್ಕ ಬಂದ ಇವರಿಗೆ ಸುಸ್ತು ಬಡಿದಂಗಾಗಿತ್ತು.ಮೂವರೂ ಇದೇ ಅಳ್ಳಿಮರದಡಿಕ್ಕೆ ಬಂದರು. ಸ್ಯಾನಬೋಗ್ರು ಸೆಲ್ಯದಿಂದ ಮಕ ಒರಿಸ್ಕೆಂತ ಕತ್ತಲಂಗಿದ್ದ ನೆಳ್ಳಾಗೆ ನಿಂತ್ಕಂಡಿದ್ದರು.

ಎಲ್ಲ ಅಂಗೆ ಹಿಂತಿರುಗಿ ಹಿಂದೂಪುರದ ಕಡಿಕ್ಕೆ ಕಣ್ಣಾಯಿಸಿದ್ರು. ಅಲ್ಲಿ ಒಂದು ನರಪಿಳ್ಳೆ ಸುಳಿವು ಕಾಮದೆ ಊರು ಹಾಳು ಸುರೀತಿತ್ತು. ಸತ್ತುಬಿದ್ದಿರ ಇಲಿ ಯಗ್ಗಣಗಳನ್ನ ತಿಂಬಾಕೆ ನಾಯ್ಗಳು ಮುಗಿಬಿದ್ದಿದ್ದವೊ ಏನೊ, ಅವ್ವು ಕಚ್ಚಾಡ್ಕಂಡು ಕಯ್ಗುಡುತ್ತಿದ್ದ ಸವುಂಡು ಇವರಿಗೆ ಮಾರ್ಧನಿಯಾಗಿ ಕೇಳುಸ್ತಿತ್ತು.

ಮನೆಗಳ ಮ್ಯಾಲೆ ಹಾರಾಡ್ತ ಇದ್ದ ಹದ್ದು ಕಾಗೆಗಳ ಹಿಂಡು ಏನೊ ಕಸ್ಕಮ ಯತ್ನದೊಳಗಿದ್ದವು.ಇದುನ್ನೆಲ್ಲ ನೋಡ್ತ ನಿಟ್ಟುಸಿರು ಬಿಟ್ಟಂತ ಶಾಂತವೀರಪ್ಪರು “ಎಂಥಾ ದೊಡ್ಡಾಪತ್ತು ಒದಿಕ್ಯ ಬಿಡ್ತಪ್ಪಾ ನಮ್ಮ ಗ್ರಾಮಕ್ಕೆ. ಮತ್ತೆ ನಮ್ಮೂರವ್ರ ಬದುಕು ನ್ಯಾರ ಆಗೋದು ಯಾವಾಗ?”ಎಂದು ವೇದನೆಯಿಂದ ನುಡಿದರು.ಪಟೇಲ ಸೋಮಶೇಕರಪ್ಪ “ಪಿಳೇಕು ಅಂಟು ಜಾಡ್ಯಕಣ್ ಗೌಡ್ರೆ. ಒಬ್ಬರಿಗೆ ಬಂತು ಅಂದ್ರೆ ಮನೆ ಮಕ್ಕಳಿಗೆಲ್ಲ ಹಬ್ಕಂತದೆ.ಒಂದು ಮನೇಲಿ ಕಾಣಿಸ್ಕೆಣ ಅದು ಊರಿಗೇ ಹಲ್ಡಿಬಿಡ್ತದೆ.ಅಂಗೇನೆ ಊರೂರು ತಟಾಯ್ಸಿ ಜನರನ್ನ ಬಲಿ ತಕಂತದೆ “ಎನ್ನಲು, ಗೌಡ್ರು” ಇದುನ್ನ ಥಟ್ಟಂತ ನಿಲ್ಲಿಸ ಔಸ್ತಿನ ಯಾರು ಕಂಡಿಡಿದಿಲ್ಲವೆ ಸೂರಪ್ಪ” ಎಂದು ಕೇಳಿದರು.

ಸ್ಯಾನಬೋಗ್ರು” ಇದು ಮದ್ದಿಗೆಲ್ಲ ಜಗ್ಗಂತದಲ್ಲ ಗೌಡ್ರೆ, ಪ್ಲೇಗ್ ಮಾರಿ ಕ್ವಾಪ ಮಾಡ್ಕೊಂಡ್ರೆ ಹಿಂಗಾಗ್ತದೆ ತುರುಕರಿಗೆ ಸಪ್ಪೇಜಾಡ್ಯ ನರಮಾನವರಿಗೆ ಪ್ಲೇಗು ಕಾಲರಾ, ಮಕ್ಕಳಿಗೆ ಕುಕ್ಕಲುಕೆಮ್ಮು ಬಾಲಗ್ರಾವು ತಂದಿಕ್ಕಿ ಬಿಡ್ತಾಳೆ.ಅದಿಕ್ಕೆ ಮಾರೆಮ್ಮನ ಪರಿಷೆ ಮಾಡಿ ಕ್ವಾಣನ್ನ ಬಲಿಕೊಟ್ಟು ಶಾಂತಿಮಾಡಬೇಕು. ಅವಳು ತಾಂಸವಾಗದ ಹೊರತು ಕಾಯಿಲೆ ಹೋಗಲ್ಲ “ಎಂದು ಸಲಹೆ ಕೊಟ್ಟರು.

ಸ್ಯಾನಬೋಗ್ರಮಾತಿಗೆ ಗೌಡ್ರುಕ್ವಾಪ ಮಾಡ್ಕೆಂಡು ” ನೀನು ಸುಮ್ಕೆ ನಿಂತ್ಕತೀಯ. ಮಾತೆತುದ್ರೆ ಮಾರಿ ಮಸಣಿ, ದೇವರು ದಿಂಡ್ರುಅಂತೀಯಲ್ಲ.ನಾವು ಈಟೊರ್ಸದಿಂದ ಊರಾಗೆ ಪರಸೆ ಮಾಡ್ತಿಲ್ಲವಾ ?ಪೂಜೆ ಮಾಡಿ ಏನು ಬಲಿ ಕೊಟ್ಟೇ ಇಲ್ಲವಾ? ಶಾಂತಿ ಮಾಡಿಸಬೇಕಂತೆ ಶಾಂತಿ..” ಎಂದರು.

ಪಟೇಲರು ” ಜನ ಊರು ಬಿಟ್ಟು ವರಚ್ಚಿಗೆ ಇದ್ದು, ಸುಚಿಯಾಗಿದ್ಕಂಡು ರುಚಿಯಾಗಿರದ್ನ ತಿಂಬೋದೇ ಇದಕ್ಕೆ ಸರಿಯಾದ ಪಥ್ಯ”ಎಂದರು. ಸ್ಯಾನಬೋಗ್ರು ವಕ್ರವಾಗಿ ಪಟೇಲರ ಮಕವ ನೋಡಿದರು.

ಆಗ ಪಟೇಲರು ” ಸೂರಪ್ಪಣ್ಣ, ನಿಮ್ಮಪ್ಪಾರು ಟುಮುಕೂರಿಗೆ ಸಂಬಂಧಿಕರ ಶ್ರಾದ್ಧಕ್ಕೆಅಂತಹೋಗಿ ಪಿಳೇಕ್ನ ಅಂಟಿಸ್ಕ ಬಂದ್ರು. ಅತ್ತ ಮೂರುದಿನಕ್ಕೆ ಪಿಂಕೆಂಡ್ರಲ್ಲವಾ?ಎಂದು ತಮ್ಮಷ್ಟಕ್ಕೇ ಅಂದುಕೊಳ್ಳುವಾಗ, ಸ್ಯಾನಬೋಗ್ರು “ಗೌಡ್ರ ಅಪ್ಪ ಹಟ್ಟಿಯಂಕಟಿಗನ ಕೊಲೆ ಕೇಸಿನ ಸಂಬಂಧ ಬೆಂಗಳೂರು ಕೋರ್ಟ್ ಗೆ ಅಲೆದಾಡಿ ಬಂದವರು, ಒಣಕೆಮ್ಮುಅಂತ ಮಲಗಿ ಮನೆ ಮುಂದೆ ಹೊಗೆ ಹಾಕಿಸ್ಕಂಡ್ರು.ದೊಡ್ಡೋರಿಂದ ಸುರುವಾದ ಈ ಕಾಯಿಲೆ ಇವತ್ತು ಜನ ಮನೆಬಿಟ್ಟು ಬಯಲಿಗೆ ಬೀಳೊ ಹಂತಕ್ಕೆ ತಲುಪೈತೆ”ಅಂಬ್ತ ಮನಸ್ಸಿನಾಗೇ ಗೊಣಿಕ್ಕಂಡರು.
ಹಿಂಗೆ ಈ ಮಹಾ ಮಹಿಮರು! ಹಿಂದೂಪುರಕ್ಕೆ ಬಂದಿರ ವ್ಯಾಧಿ ಮೂಲದ ಗುಟ್ಟನ್ನ ರಟ್ಟುಮಾಡದೆ ಇವರ ಮನ್ಯಾಗೆ ಹುಟ್ಕಂಡ ಕಾಯಿಲೆ ಊರಿಗೆ ಮಾರಕವಾಗಿರುವ ಹೊತ್ನಲ್ಲಿ ಇವರ ಮೂಗಿನ ನೇರಕ್ಕೆ ಲೋಕೋದ್ಧಾರದ ಮಾತುಕತೆ ನಡೆಸ್ತ ನಿಂತವ್ರೆ.
ಉರಿಯಾ ಬಿಸ್ಲಾಗೆ ಇವರ ಸವಾರಿ ಪಿಳೇಕ್ ಸಂತ್ರಸ್ತರಿರ ಕಡೆ ನೋಡ್ಕಬರಾಕೆ ಹೊರಟು ನಿಂತದೆ. ಇವರ ಜತಿಯಾಗೆ ಸೇವೆ ಮಾಡತಕ್ಕಂತ ಆಳುಗಳಿಲ್ಲ. ನೊಂದವರಿಗೆ ನೀಡಕಂತಾವ ಕೈಯಾಗೆ ಕಾಳಿಲ್ಲ. ಜೋಪ್ನಾಗೆ ಒಂದು ದಮ್ಮಡಿ ಕೂಡ ಇಕ್ಕ ಬಂದಿಲ್ಲ.
ವಲಸೆ ಬಂದ ಪಳಾಂತ್ರ ಪ್ರಾಣ ಉಳಿಸ್ಕೆಮ ದರ್ದಿನೊಳಗೆ ಯಣಗಾಡ್ತ ಬಂತೆಗುಟ್ಟೆ ಬುಡದಲ್ಲಿ ಇದ್ದಾಗ, ಇದ್ದಕ್ಕಿದ್ದಂತೆ ಆ ಜೀವದಾಣಗಳ ಕಣ್ಣಲ್ಲಿ ಕಾಂತಿಮೂಡ್ತು. ದೂರದಲ್ಲಿ ಬತ್ತಿದ್ದ ಈ ಊರೆಜಮಾನ್ರನ ಕಂಡು ಸತ್ತೋಗಂತ ವಟ್ಟೆ ಹಸಿವು ಮತ್ತೆ ಉಸಿಡಾಕ್ಕೆ ತಿರಿಕೆಂತು.ಆದ್ರೆ ದೊಡ್ಡವ್ರು ಹತ್ರುಕ್ಕೆ ಬಂದಾಗ ತಿಳೀತು, ಬಾಯಿಮಾತಲ್ಲೇ ಹೊಟ್ಟೆ ತುಂಬಿಸಾಕೆ ಬಂದವ್ರೆ ಅಂಬ್ತ. ಇದರಿಂದ ಹಸಿದ ಹೊಟ್ಟೆಗಳು ತಿರುಗ ನಿರಾಸೆ ಕಾರ್ಮೋಡವ ಗುಬುರಾಕ್ಕಂಡುವು.ಅವರ ಬಾಳು ಹದ್ದು ಬಾಸ್ಕಂಡೋಗೊ ಹೊತ್ತಿನಾಗೆ ಭೀತಿ ಸರಿದು ತತ್ತರಿಸಿರ ಕೋಳಿಪಿಳ್ಳೆ ಥರವಾಗಿ ಸಾವು ಬದುಕಿನ ಉದೊಸ್ಲು ಮೇಲೆ ಡೋಲಾಮಾನಸ್ಥಿತಿ ತಲುಪಿತು.
ಈ ಮಧ್ಯೆ ಸೋಂಕಿಗೆ ತುತ್ತಾದ ಜನ ಬೊಗಸೆನ ಮೂಗುಬಾಯಿಗೆ ಅಡ್ಡವಾಗಿಕ್ಕಂಡು ಇರಬರ ಸಕ್ತಿಬಿಟ್ಟು ಕೆಮ್ಮಿ ಕ್ಯಾಕರಿಸೋರು. ಜೀವ ಅಂಗೈಗೇ ಬಿತ್ತೇನೊ ಎಂಬ ಆತಂಕದೊಳಗೆ ಕಣ್ಣಾಗೆ ನೀರುಬರಿಸ್ಕಂಡು ಮೂಗಾಗೆ ಸಿಂಬಳ ಕಾರ್ತ ಇದ್ದರು. ಕೆಲವರ ತೊಡೆಸಂಧಿಯಲ್ಲಿ ಬೊಕ್ಕೆಗಳೆದ್ದು ಮರ್ಮ ಸ್ಥಳದಲ್ಲಿ ಅದ್ಗಾಳ್ ಕಟ್ಟಿ ನಡೀಲಾರದೆ ಕಾಲೆಳ್ಕಂಡು ಕಾಲ್ಮಡಿಯಾಕೆ ನಿರಕಡಿಕ್ಕೆ ಅಡ್ಡಾಡೋರು.ಇನ್ನ ಕೆಲವರಿಗೆ ಗಂಟಲು ಬ್ಯಾನಿಬಂದು ಗದ್ದಗಲ್ ಕಟ್ಕಂಡು ಕೀರಲು ಸ್ವರದಲ್ಲಿ ಮಾತಾಡ್ತ ಕೈಸನ್ನೆ ಬಾಯಿಸನ್ನೆ ಮಾಡಿಕೆಂತ ಕಾಲದೂಡುತ್ತಿದ್ದರು.ಇವರಿಗೆ ರೋಗಕ್ಕೆ ತುತ್ತಾಗಿ ಮಣ್ಣಾದ ತಮ್ಮವರನ್ನ ನೆಪ್ಪು ಮಾಡ್ಕಮಕೆ ಆಗದಿರಾಷ್ಟು ಭಯ ಹುಟ್ಟಿಸಿತ್ತು ಈ ಕಾಯಿಲೆ. ಮೊದ ಮೊದಲು ಒಬ್ಬೊಬ್ರೆ ಸಾಯಾರು,ಒಂದೊಂದು ಗುಂಡಿ ತೋಡಿ ಮುಚ್ಚಲಾಗುತಿತ್ತು.ಮನೆ ಒಳಗೆ ಇಲಿ ಸತ್ತು ಬಿದ್ದಷ್ಟು ಯಣಗಳು ಬೀಳಾಕತ್ತಿದಾಗ ಒಂದೇಗುಂಡಿಗೆ ಎಲ್ಲರನ್ನ ಇಕ್ಕ ಪರಿಸ್ಥಿತಿ ಬಂತು. ಎಷ್ಟು ಹೆಣ ಚಟ್ಟ ಕಟ್ಟಿಸ್ಕಂಡವೊ? ಅದೆಷ್ಟು ಜನವ ಚಾಪೇಗ್ ಸುತ್ಕಂಡೋಗಿ ಗುಂಡಿಕ್ಕಲಾಯ್ತೊ!
ಬಲಿತವರ ಜಾಣತನದಿಂದ ಹಿಂದೂಪುರದ ಹಟ್ಬಿಗಳು ಮೊದಲೇ ಬಡವಾಗಿದ್ದವು. ಈಗ ಮಧ್ಯೆಗಾಲದ ದಾರಿದ್ರ್ಯಜೋಪಡಿಗಳ ರೂಪ ಪಡ್ಕಂಡಿತ್ತು ಅದರೊಳಗೆ ಜೀವಿಸಿರಾರ ದೊಡ್ಡಜೀವ ವಲ್ಟೋಗಿತ್ತು. ಹಿಂಗಿರುವಾಗ ಸಣ್ಣಜೀವ ಗಾಡಿಬಿಡೊ ಸೂಚನೆಯಾಗಿ ಅದೇ ಗುಡಿಸಲ ಮಧ್ಯೆ ದೊಡ್ಡದಾಗಿ ಬೆಂಕಿ ಹೊತ್ತಿಕಂಡಿರಂಗೆ ಕಾಣಿಸ್ತು. ದಟ್ಟವಾದ ಊದ್ರ ಆವರಿಸಿ ಮ್ಯಾಲಕ್ಕೆ ಏರುತ್ತಾ,ಅದರ ಲೀಲೆ ಆಕಾಶದ ಬಿಳಿಮೋಡದ ಜತೆ ಸಖ್ಯ ಬೆಳೆಸ ಸಾಸ ಮಾಡುತ್ತಿತ್ತು.ಅದುನ್ನ ದೂರದಿಂದಲೇ ಕಂಡಂತ ಗೌಡ್ರು “ಏನಾರ ಗುಡುಸ್ಲುಗಳಿಗೆ ಬೆಂಕಿ ಬಿತ್ತಾ ಯಂಗೆ?ಅಂಗೇನಾರ ಆದ್ರೆ ನಮ್ಮೂರವರು ಪೀಳೇಕಾವಳಿ ತಟ್ಕಮಕಾಗ್ದೆ ಬದುಕು ಬ್ಯಾನೆ ಅನಿಸಿ ಬೆಂಕಿಇಕ್ಕಂಡು ದಯಿಸೋದ್ರು ಅಂಬೋ ಸುದ್ದಿ ಎಲ್ಲ ಕಡೆ ಹಬ್ಬಿಕ ಬಿಡ್ತದೆ ಸೇಕ್ರಿ.ಆಗ ನಮ್ಮ ಮರ್ವಾದೆ ಏನಾಗಬೇಕು ಹೇಳು? ಬೇಕಾದ್ರೆ ಹಸ್ಗಂಡು ಅಂಗೆ ಸಾಯ್ಲಿ.ಅವರ ಸಾವಿನ ಹೊಣೆಯ ಪಿಳೇಕಿನ್ ತಲೇಗೆ ಕಟ್ಟಿದ್ರಾತು. ಮಾತ್ರ ಅಲ್ಲಿರಾರು ಬೆಂಕಿಗೆ ಬಿದ್ದು ಸಾಯ್ದೆ ಇರಲಿ”ಎಂಬುವವರಾದರು. ಪಟೇಲರು” ನೀನು ಹೇಳೋದು ಸರಿ ಐತೆ ಕಣಣ್ಣ” ಎನ್ನುತ್ತಿರುವಾಗ ಸೂರಪ್ಪನೋರು “ಈ ಹಾಳಾದ್ ಕಾಯಿಲೆ ಬಂದು ಆದಾಯಕ್ಕೆ ಕಲ್ಲುಬಿತ್ತಲ್ಲಪ್ಪ”ಅಂಬ್ತ ಅನ್ಯಮನಸ್ಕರಾಗಿದ್ದರು.
ಎಲ್ಲರೂ ನೆಡ್ಕಂಡೋಗವಾಗ ಸೇಕ್ರಪ್ಪ “ಅಲ್ನೋಡ್ರಿ ನಮ್ಮೂರ ತೋಟಿ ಕೊಂಡ ಗುಡುಸ್ಲು ಮುಂದೆ ಯಾತುಕ್ಕೊ ಸುಡಿಗೆ ಇಕ್ಕವನೆ” ಎಂದು ಬೊಟ್ಟುಮಾಡಿ ತೋರಿಸಿದರು. ಗೌಡ್ರು “ಯಾವ್ದಾರ ಮಿಕ ಗಿಕ ಹೊಡ್ಕಬಂದಿರ್ತಾನೆ. ಬಡ್ಡೀಮಗ ನಾಲ್ಗೆ ಚಪಲ ಹತ್ತುತು ಅಂದ್ರೆ ಸಾಕು ಏನಾರ ಹಿಡ್ಕ ಬಂದು ಬಿಡ್ತಾನೆ ” ಎನ್ನುತ್ತಿರುವಾಗಲೇ ಅವರು ಕೊಂಡ ಹೊಗೆ ಎಬ್ಬಿಸಿದ್ದ ಜಾಗದಲ್ಲಿ ನಿಂತಿದ್ದರು.ಮರದ ಕೆಳಗಿದ್ದಾಗ ಇವರಿಗೆ ಕಾಣಿಸಿದ್ದುಇದೇ ಬೆಂಕಿ ಊದ್ರ ಆಗಿತ್ತು.
ಇವಾಗ ಗಪ್ಪಂತ ನುಗ್ಗಿ ಬಂದ ಕಮುಟು ವಾಸಣೆಗೆ ಮೂವರೂ ಮೂಗ್ನ ರಪ್ಪಂತ ಮುಚ್ಚಿಕೊಂಡರು. ಗೌಡ್ರು ಅಸಹನೆಯಲಿ ಮೂಗ್ನ ತುರಿಸ್ಕೆಂತ “ಏನ್ಲಾ ಸುಡುತ್ತಿದ್ದೀಯ ಕೊಂಡಾ “ಎಂದು ಕೇಳಿದರು.ಅವನು ಯಾವುದೇ ಅಳುಕಿಲ್ಲದೆ “ಕಾಣಿಸ್ತಿಲ್ಲವಾ ಬುದ್ದೇರಾ..ನೆಲ್ಲು ತುಂಬಿರ ಮಡಕೆ ಸ್ವಾರೆ ವಳಗೆ ಇಲಿ ಸೇರ್ಕಬಿಟ್ಟಿದ್ದುವು.ಇವುನೆತ್ತೋಳ್ನ ಕ್ಯಾಯ ನಮಗೇ ತಿನ್ನಾಕೆ ಗತಿ ಇಲ್ದಿರ ಹೊತ್ನಾಗೆ ಒಳ್ಗೇಮೆದ್ದ ಗುಳಿಗೆ ಸಿದ್ದ ಅಂಬಂಗೆ ದವಸವ ತಿಂದು ಕೊಬ್ಬಿ ಮರಿ ಹಾಕ್ಕಂಡವ್ವೆ.ಇವುನ್ನ ಸಮ್ನೆ ಬಿಟ್ಟೋರುಂಟಾ?ಸುಟ್ಕಂಡು ತಿಂದ್ ಬಿಡ್ತೀನಿ. ನೋಡ್ರಿ ಯಂಗೆ ಬಲುತ್ಕಂಡವ್ವೆ “ಎನ್ನುತ ಬೆಂಕಿಗೆ ಸೀದು ಕರಕಲಾಗಿರ ಒಂದರ ತ್ವಾಕೆನ ಹಿಡಿದೆತ್ತಿ ಇವರಿಗೆ ತೋರಿಸಿದನು.
ಅವನ ಮಾತ್ನ ಕೇಳಿ ಗೌಡ್ರು ಹೌಹಾರಿಬಿಟ್ಟರು. ಸ್ಯಾನಬೋಗ್ರು”ಮುಂಡೇದೇ ಅದು ವಿನಾಯಕನ ವಾನ “ಎಂದರು. ಪಟೇಲರು “ಶಿವ ಶಿವಾ “ಎನ್ನುತ ಕೆನ್ನೆ ಬಡುಕೊಂಡರು.ಅವರನ್ನ ಓರೆ ಗಣ್ಣಲ್ಲಿನೋಡ್ತ ಕೊಂಡ “ಯಾವ ಸಿವನೊ ಯಾವ ಇನಾಯಕನೊ, ನೀವು ಕಂಡಿದ್ದೀರಾ? ನಂಗಂತು ಇವತ್ತು ವಟ್ಟೆಪಾಡಿಗೆ ಮಾರ್ಗ ಆಯ್ತು. ಕಾರ ಮೆಣಸು ಅರಿಯೆಲೇ ಮುದ್ದೀ ” ಅಂತ ಗುಡಿಸಲ ಕಡೆ ನೋಡ್ತಾ ಇವರೂ ಕೇಳಿಸ್ಕೆಮ್ಮಂಗೆ ಅವನೆಂಡ್ರುಗೆ ಕೂಗಿ ಹೇಳಿದ. ಮನಸ್ಸಿನೊಳಗೆ ” ದೊಡ್ಡ ಮನುಷ್ರು ಬರೆಕೈಯಾಗೆ ಬಂದವರೆ ಅಳ್ಳಾಡಿಸ್ಕಂಡು. ಸತ್ತವ್ರಾ ಬದಿಕವ್ರ ಅಂತ ನೋಡ್ಕೊಂಡುಹೋಗಾಕೆ ” ಎಂದು ಕೊಳ್ಳುತ್ತ ಮತ್ತದೇ ಮೂಷಿಕ ದಹನ ಕ್ರಿಯೆಯೊಳಗೆ ತೊಡಗಿಕೊಂಡನು.
ಅವನ ಗುಡಿಸಲೊಳಗಿಂದ” ಬ್ಯಾಡ ಮಾಮಯ್ಯ ಕರೇ ಇಲೀನ ತಿಂಬಾರ್ದು, ನಿಂಗೆ ದೊಡ್ಡಬಾಡ್ನ ನಾನ್ ತರಿಸಿ ಕೊಡ್ತೀನಿ.ನಿಂಗೆ ಕೈಮುಗಿತೀನಿ. ಇಲಿ ಸವಾಸ ಒಳ್ಳೇದಲ್ಲ”ಎಂದು ಪರಿಪರಿಯಾಗಿ ಬೇಡ್ಕಂತಿರ ಅವನ ಮಡದಿ ಸಬುದ ಕೇಳಿ ಬರುತ್ತಿತ್ತು.
ಇದುನ್ನೆಲ್ಲ ನೋಡ್ತ ಕೇಳ್ತ ಇದ್ದಂತಗೌಡ್ರು ಗಾಬರಿಯಿಂದ ಹೊರಿಕ್ಕೆ ಬಂದಿರನಿಲ್ಲ.”ಲೋ ಕೊಂಡ..ಈ ಇಲಿ ದೆಸೆಯಿಂದನೇ ಕಣೊ ಊರಿಗೆ ಪಿಳೇಕು ಬಂದಿರಾದು. ಎಲ್ಲಾರ ಮನೆವಳಗೆ ಯಣ ಬೀಳ್ತಿರಾದು ನೀವು ಊರುತೊರೆದು ಬಂದಿರಾದು”ಎಂಬುವವರಾದರು. ಪಟೇಲರು “ಹೂಂ ಕಣ್ ಕೊಂಡ..ಈ ಇಲಿಗಳ್ನ ಕಚ್ಚೊ ಚಿಗಟ ಸೊಳ್ಳೆ ಮನುಷ್ಯರನ್ನ ಕಚ್ಚಿ ಜಾಡ್ಯ ತಂದಿಕ್ತವೆ. ಇಂತ ಸಾವಿಗೆ ಕಾರಣ ಆಗಿರ ಇಲಿಗಳ್ನ ತಿಂಬಾಕೆ ಹೊರಟಿದ್ದೀಯಲ್ಲೊ ದಡ್ಡಾ “ಎಂದು ತಿಳುವಳಿಕೆ ಕೊಡಲು ಯತ್ನಿಸಿದರು. ಸ್ಯಾನಬೋಗ್ರಂತು ಅಲ್ಲಿಂದದೂರಕ್ಕೆ ಹೋಗಿ ಒಂದು ಮರದ ನೆಳ್ಳಾಗೆ ನಿಂತು ಕತ್ತಲಾಗಿದ್ದರು.
ಕೊಂಡ ” ಇದುನ್ನೇಳಕೆ ನೀವು ಅಷ್ಟು ದೂರದಿಂದ ಬಂದ್ರಾ ಬುದ್ದೇರ..? ಇಲಿಗಳಿಂದ್ಲೇ ಪಿಳೇಕು ಬರೋದು ಅಂಬ್ತ ನಂಗೂ ಗೊತ್ತು. ಏಟು ದಿನಾಂತ ಎಲ್ಲಾರ ಕೈಲಿ ಕೈಲಾಗದೋನು, ಕ್ಯಾಮೆಮಾಡಲ್ಲ, ಆಗ ಕೂಳಿಗೆ ಕಾಯ್ಕಂಡಿರ್ತನೆ ಅಂಬ್ತ ಬಯಿಸ್ಕಮದು. ಪಿಳೇಕು ಬಂದಂತೂ ನಾನು ವರಗಲಿಲ್ಲ. ಇಂಗಾದ್ರು ವಟ್ಟೆ ತುಂಬಿಸ್ಕೆಂಡು ಪಕ್ನೆ ಪ್ರಾಣ ಬಿಡಾನ ಅಂದ್ಕಂಡಿದ್ದೀನಿ. ಅದಿಕ್ಕೆ ನಾನಿರಬೇಕು ಇಲ್ಲವಾ ಈ ಇಲಿಗಳಿರಬೇಕು”ಎನ್ನುತ ಹಠಕ್ಕೆ ಬಿದ್ದವನಂತೆ ಸೌದೆಪುಳ್ಳೆ ಯಾರಾಕುತ್ತ ಅಂದ್ಕಂಡ ಕಾರ್ಯ ಮುಂದುವರಿಸಿದನು.
ಈ ಮೊದಲು ಯಜಮಾನ್ರುನ ಕಂಡಕೂಡಲೇ ನಡಾಬಗ್ಗಿಸಿ ವಿನಯ ತೋರಿಸಿ ಮುಖದಲ್ಲಿ ಭಯ ತಂದುಕೊಳ್ಳುತ್ತಿದ್ದನು. ಇವತ್ತು ಎದುರಿದ್ದವರನ್ನು ಓಸಳಕು ಮಾಡಿ ಬಿಸಾಕಿದ್ದನು.
ಗುಡಿಸಲ ಒಳಗೆ ರೋದನೆಮಾಡ್ತಿದ್ದ ಕೊಂಡನ ಹೆಂಡ್ರು ಮುದ್ದಮ್ಮ ಇವರು ನಿಂತು ಮಾತಾಡ್ತಿರತಾಕೆ ತಡಿಕೆ ಬಾಗ್ಲ ಕಿತ್ತು ಬಿಸಾಕಿ ನುಗ್ಗಿ ಬಂದಳು. ಕೊಂಡ ಅವುಳ್ನ ಕೂಡಾಕಿದ್ದ ಅಂತ ಇವರಿಗೆಅವಾಗಲೇ ಮನವರಿಕೆ ಆಗಿತ್ತು.ಇವಾಗ ಅವಳು ಸುಂಟರಗಾಳಿ ತರವಾಗಿ ಧಾವಿಸಿ ಬರ್ತಇರಾದ್ನ ಕಂಡು ” ನಾವು ಏನು ತರದೆ ಇರಾದಿಕ್ಕೆ ಸಿಟ್ಗಂಡು ಛೀಮಾರಿ ಹಾಕದಿಕ್ಕೆ ಬತ್ತಾವಳೆ “ಎಂದು ಚಣೊತ್ತು ದಿಗಿಲುಬಿದ್ದರು.
ಆದರೆ ಅವಳು ಬಂದವಳೆ “ಸ್ವಾಮೇರ ನನ್ನ ಗಂಡುನ್ನ ಬದುಕಿಸಿ ಕೊಡ್ರಿ. ಯಂಗಾರ ಮಾಡಿ ಮನೆ ಇಲಿತಿಂದು ಸಾಯಾದನ್ನ ತಡೀರಿ.ಇಲಿ ಸಣ್ಣಾವು ಅಂತ ತಾಚ್ಚಾರ ಮಾಡ್ಕಂಡವನೆ. ಮಕ್ಕಳು ಬ್ಯಾರೆ ಮನ್ಯಾಗಿಲ್ಲ ಕೆರೆ ಬ್ಯಾಟೆಗೋಗವ್ರೆ. ಬುದ್ದೇರಾ ನಮ್ಮುನ್ನ ಕಾಪಾಡ್ರಿ ದಮ್ಮಯ್ಯ ಅಂತೀನಿ “ಎಂದು ಕೈ ಮುಕ್ಕಂಡು ಗೋಗರೆದಳು. ದೂರದಲ್ಲಿ ನೋಡಿಕೆಂತ ನಿಂತಿದ್ದ ಅದಾಗತಾನೆ ಲಗ್ಣವಾಗಿದ್ದ ಹರೇದುಡುಗಿ ಒಬ್ಬಳು ಮನಸಿನಾಗೆ ” ಈವಜ್ಜಂಗೆ ಬರಬಾರದೇ ಬಂದು ಸಾಯಾ..ಅವತ್ತು ಗಂಡ ಯಂಡ್ರುನಾವು ವಳಗಿದ್ರೆ ಬಂದುಬಿಟ್ಟು ಲೇ ನಾಮರ್ದ ನಿಮ್ಮಪ್ಪ ಸಾಯ್ತ ಮನಿಗವನೆ ನೀನು ಯಂಡ್ರತಾವ ಸೆಕ್ಕಂದ ಆಡ್ಕಂಡು ಒಳಗಿದ್ದೀಯ ಅಂತಾನೆ.ಇವನು ನೆಗುದು ಬೀಳ “ಎಂದು ಸಾಪರ್ಸಿ ಸರಿಗಟ್ಟಿದಳು. ಕೊಂಡ ಮಾತ್ರ ಏನೂ ಕೇಳಿಸ್ಕಳ್ಳದೆ ಒಂದೊಂದೆ ಇಲಿಗಳ್ನ ಸುಟ್ಟು ಮುತ್ತುಗದ ಎಲೆ ಮೇಲೆ ಸಾಲಾಗಿ ಜೋಡಿಸುತ್ತಿದ್ದನು.
ಕೆಲವು ಇಲಿಗಳಿಗೆ ಕಳ್ಳುಪಚ್ಚಿವಲ್ಡಕ ಬಿಟ್ಟಿತ್ತು. ಮುಖಂಡರಿಗೆ ಅಸಿಸಿ ಅನಿಸಿ ಬಾಯಿ ಮಾತು ಬಿದ್ದೋಗಿತ್ತು.
ಇವರು ಬಂದ ಕೂಡ್ಲೇ ಮಿಕ್ಕ ಗುಡಿಸಲಾಗಿದ್ದ ವಯಸ್ಸಾದವರು, ರೋಗಕ್ಕೆ ತುತ್ತಾಗಿ ನರಳ್ತಿದ್ದವರು ಒಬ್ಬೊಬ್ಬರಾಗಿ ಬರಲಾಂಭಿಸಿದ್ದರು. ಯಜಮಾನ್ರು ಏನಾರ ತಂದವರೇನೊ ಕೈಎತ್ತಿ ಕೊಡ್ತರೇನೊ ನಾವು ಬೊಗಸೆವೊಡ್ಡಿ ಇಸ್ಕಮನ ಅಂದ್ಕಂಡು ಕಾಯ್ಕಂಡೆ ನಿಂತಿದ್ದರು. ಅವರಾರೂ “ಕೊಂಡಪ್ಪ ನೀನು ಮಾಡ್ತಿರಾದು ಸರಿಯಲ್ಲ” ಅಂತೇಳಿರಲಿಲ್ಲ. ಯಾಕಂದ್ರೆ ಕೊಂಡ ಬೆಳದಿಂಗಳ ಬ್ಯಾಟೆ ಆಡಿ ಬೆಳ್ಳಿಲಿ ಇಡ್ಕಬಂದು ಸುಟ್ಕಂಡು ತಿಂಬಾಕೆ ಬೆಂಕಿಹಾಕವನೆ ಅಂದ್ಕಂಡಿದ್ದರು. ಮುದ್ದಮ್ಮ ಮನೆಇಲಿ ತಿಂದು ಸಾಯಾದ್ನ ತಡುದು ಗಂಡುನ್ನ ಬದುಕಿಸಿರಿ ಅಂದಾಗಲೇ ಅವರಿಗೂ ಗೊತ್ತಾಗಿದ್ದು.
ಅಂಗಾಗಿ ಹಟ್ಟಿ ಜನ ಧಣೇರ ಕಡೆ ನೋಡೊ ಬದಲು ಈಗ ಕೊಂಡನ ಕಡೆ ನೋಡ್ತಾ ಅವನ ನಡೆಗೆ ಬೆಕ್ಕಸ ಬೆರಗಾದ್ರು. ಅವಾಗ ಗುಂಪಿನಲ್ಲಿದ್ದವ, ಆಂಧ್ರದಿಂದ ಬಂದು ಇಲ್ಲಿ ನೆಲೆಕಂಡ್ಕಂಡು ಕನ್ನಡಿಗನಾಗಿದ್ದವ, ಮಾತ್ರ ತನ್ನ ಮಾತೃಭಾಷೆಯನ್ನ ಅಂಗೆ ಉಳಿಸಿಕೊಂಡಿದ್ದ ಮುಸಲನೊಬ್ಬ”ಇಂಟಿ ಯಲಕ ಸಂಪೇಸಿ ತಿನೇಕಿ ಎಲ್ಲಿಂಡೇವಂಟೇ, ನುವ್ವೇರಾ ನಿಜಮೈನ ಮೊಗವಾಡು. ಮಾಕಿ ಯೀ ಉಪಾಯಮು ತೆಲೀಕ ಪಾಯ. ದೀನ್ನಿ ತಿಂಟೈನ ಮೇಮು ಬದುಕುಂಟೆ ಇಂಟೆಲಕ ಅನ್ನಮು ಅನಿಕೊಂದಾಮು.ತಿನ್ನಪ್ಪಡೆ ಸಚ್ಚಿ ಪೋತೆ ಮರಣಂ ಕರುಣಿಂಚಿನ ದೇವುಡು ಅನುಕೊಂಟಾಮು. ನೇನೂ ಇದೆ ಪನಿ ಜೇಸ್ತಾನು ಕೊಂಡನ್ನ ವಸ್ತಾನು “ಎನ್ನುತ ತನ್ನ ವಾಸದ ಗುಡಿಸಲತ್ತ ಗಾಳಿ ಮೆಟ್ಟಿಸಿಕೊಂಡವನಂತೆ ಹೋಗೇಬಿಟ್ಟನು. ಅವನು ಆಡಿದ ಪ್ರತಿ ಮಾತು ಊರವರಿಗೆ ಕೇಳಿಸಿತ್ತು. ಮತ್ತು ಅರ್ಥವಾಗಿತ್ತು. ಆದ್ರೆ ಅವರು ಯಾವ ಪ್ರತಿಕ್ರಿಯೆ ಕೊಡಲಿಲ್ಲ. ಸಾವಿನ ಸನ್ನಿಧಿಯಲ್ಲಿದ್ದೇವೆ ಅಂದ್ಕಂಡರೇನೊ ? ದೂಸ್ರ ಮಾತಾಡದೆ ಹೊರಟು ಬಿಟ್ಟರು.
ಕೊಂಡನು” ಅಲ್ಲಾ ಎಲ್ಲಸೆಂದಾಗಿ ನೆಡಿಯವಾಗ ನಾವು ಬೇಕಿತ್ತು,ನಿಮ್ಮೊಲಗಳಾಗೆ ನಾವು ದುಡಿದು ನಿಮ್ಮ
ಅಗೇವು ಕಣಜ ತಿಜೋರಿ ತುಂಬಿಸಬೇಕಾಗಿತ್ತು.
ನಿಮ್ಮವ್ರು ಸತ್ರೆ ಗುಣಿತೋಡಬೇಕು ಸಾವಿನ ಸುದ್ಧಿ ಮುಟ್ಟಿಸಬೇಕು. ನಮಗೆ ಎಡ ಮಗ್ಗುಲಾಗಿರವಾಗ ಬ್ಯಾಡವಾದ್ವ? ಕಾಲ ಇಂಗೇ ಇರಲ್ಲ ಹೋಗ್ರಿ”ಎನ್ನುತ ಮತ್ತದೆ ಕೆಲ್ಸ ಮಾಡತೊಡಗಿದನು.
ಹೆಚ್ಚು ಕಮ್ಮಿ ಅವನು ಸುಡುತ್ತಇದ್ದಂತ ಇಲಿಗ್ಳು ಅವನ ಬಣ್ಣಕ್ಕೆ ಕರ್ರಗಿದ್ದವು.ಮುಷ್ಠಿ ಗಾತ್ರದ ಹೆಬ್ಬಿಲಿ,ಮಿದಿಕೆ ಸೈಜಿನ ಸೊಂಡಿಲಿ ,ಹೆಬ್ಬೆಟ್ಟನಂತ ಸಿಟ್ಟಿಲಿ ಹಿಂಗೆ ತರಾವರಿ ಇಲಿಗಳ್ನ ಬೆಂಕಿಗದ್ದಿ ತೆಗೀತಿರಬೇಕಾದ್ರೆ ಮುದ್ದಮ್ಮ ಹತ್ರುಕ್ ಬಂದು ಅವನ ಪಕ್ಕೆಲುಬಿಗೆ ತಿವಿದು “ಮಾಮಯ್ಯ ತಲೆ ಎತ್ತಿನೋಡು ಯಾರು ಬಂದವ್ರೆಅಂತ”ಕಿವಿಯಲ್ಲಿ ಉಸುರಿದಳು. “ಏ ತೆಗಿಯೆ ಅತ್ಲಾಗಿ ನೀನೊಬ್ಳು” ಎನ್ನುತ ನಿಧಾನವಾಗಿ ಕತ್ತೆತ್ತಿ ನೋಡಿದನು. ಅವಂಗೆ ಅಷ್ಟು ದೂರದಲ್ಲಿ ನಿಂತಿದ್ದವರ್ನಕಂಡು ಐಸೋಜಿಗ ಆಗಿಬಿಡ್ತು. ನಿಧಾನವಾಗಿ ಮೇಲಕ್ಕೆದ್ದು ಕೈಮುಕ್ಕಂಡು ನಿಂತನು. ಎದುರುಗಡೆ ನಿಂತಿದ್ದವರಿಗೆ ಮೈಮೇಲೆ ಒಂದು ನೂಲಿನಷ್ಟೂ ಬಟ್ಟೆ ಇರಲಿಲ್ಲ.ಇನ್ನಿಬ್ಬರು ಎಡಬಲದಲ್ಲಿ ಅದೆ ಬಗೆಯ ನಿರ್ವಾಣ ಸ್ಥಿತಿಯಲ್ಲಿದ್ದರು.ಅವರು ಜೈನಿಗ್ರು ಅಂತ ಅವನಿಗೆ ಗೊತ್ತಾಗಿ ಬಿಡ್ತು.
ದಾರಿವಳಗೆ ಹೋಗ್ತಿರುವಾಗ ದಿಗಂಬರ ಸ್ವಾಮೀಜಿಯವರು ಕಣ್ಣಿಗೆ ಕಂಡಂತ ಗುಡಿಸಲಗಳನ್ನ ಗಮನಿಸಿದರು.ಇದೇ ಹಾದಿಯಲ್ಲಿ ಗೋರಿಬಿದನೂರಿಂದ ಶ್ರವಣಬೆಳಗೊಳಕ್ಕೆ ಅದೆಷ್ಟು ಸಾರಿ ಅಡ್ಡಾಡಿದ್ದರು.ಅವಾಗೆಲ್ಲ ಇಲ್ಲಿ ಜೋಪಡಿಗಳಿಲ್ಲದ್ದನ್ನು ನೆನೆಸಿಕೊಂಡರು. ಇವತ್ತು ಏನೊ ತಾಪತ್ರಯ ಆಗಿ ಜನವಸತಿ ಎದ್ದಿರಬೇಕು ಅಂದುಕೊಂಡೆ ವಿಚಾರಿಸಲೆಂದು ಬಂದಿದ್ದರು.ತಮ್ಮ ಮತಸ್ತರಿದ್ದಲ್ಲಿಗೇ ಹೋಗಬೇಕು ಪ್ರವಚನ ನೀಡಬೇಕು ಎಂಬ ನಿಯಮಾವಳಿ ಮೀರಿದವರಾಗಿದ್ದ ಇವರು ಇಂದು ಅಚಾನಕ್ಕಾಗಿ ಕೊಂಡನ ಮುಂದೆ ನಿಂತಿದ್ದರು.ಅವನೂ ಕೂಡ ಹೆಚ್ಚು ಕಡಿಮೆ ಇವರಂತೆಯೇ ಬೆತ್ತಲಾಗಿರುವನು.. ಸ್ವಂಟ ಬಳಸಿರುವ ಅವನ ಉಡುದಾರವು ಪುಟಗೋಸಿಯ ತಲೆತ್ವಾಕೆಗಳನ್ನ ಬಿಗಿಗೊಳಿಸಿದ ಸ್ಥಿತಿಯಿಂದ ಒಂದು ಪಕ್ಷ ವಿಮುಖವಾದರೆ ಇವನೂ ಹಟ್ಟಿಗೊಮ್ಮಟ ಆಗಿರುತ್ತಿದ್ದ. ಇವುನ್ನ ನೋಡಿದ ಸ್ವಾಮ್ಗಳು “ಸರ್ವಸಂಗ ಪರಿತ್ಯಾಗಿ ಆಗಿರುವ ನಾನು ವಿವಸ್ತ್ರನಾಗುವುದು ಸರಿ.ಆದರೆ ಗೃಹಸ್ಥನಾಗಿರುವ ಇವನೇಕೆ ಹೀಗಿರಬೇಕು.ಇವನ ಈ ಸ್ಥಿತಿಗೆ ಕಾರಣವೇನು? ಎಂದು ಆಲೋಚಿಸುವಾಗ ಯಾಕೊ ಅವರ ಕಣ್ಣಲ್ಲಿ ನೀರಿಳಿಯತೊಡಗಿತು.
ಹಾಗೆ ನೋಡುತ್ತಿದ್ದ ಅವರ ಶಿಷ್ಯರಿಗೂ ಮತ್ತು ಹಿಂಬಾಲಕರಿಗೆ ಗುರುವರ್ಯರು ಅಚ್ಚರಿಯಾಗಿ ಕಂಡರು. ಮೌನವೇ ಆವರಿಸಿದ್ದ ಆ ಜಾಗದಲ್ಲಿ ತದೇಕಚಿತ್ತದಿಂದ ನೋಡುತಲಿದ್ದ ಕೊಂಡನನ್ನು”ಏನು ಮಾಡುತ್ತಿರುವೆ ಗೃಹಸ್ಥ “ಅಂದರು. ಅವ ಕ್ಷೀಣ ಸ್ವರದಲ್ಲಿ “ಇಲಿ ಸುಡ್ತ ಇದ್ದೆ ಸ್ವಾಮೇರಾ “ಎಂದನು. “ನಿನ್ನ ಪರಿಸ್ಥಿತಿ ನನಗೆ ಅರ್ಥವಾಯ್ತು. ಆದರೆ ಒಂದುನ್ನ ತಿಳುಕೊ, ನೀನು ಹಚ್ಚಿರ ಬೆಂಕಿಯಲ್ಲಿರುವ ಸೌದೆ ಕಡ್ಡಿಗಳನ್ನ ನೋಡು.ನಿಗಿನಿಗಿ ಕೆಂಡವಾಗಿ ಉರಿಯುವಾಗಲೂ, ಕೆಲವೇ ಹೊತ್ತಿಗೆ ಅದು ಸುಟ್ಟು ಭಸ್ಮವಾಗುವ ಹಂತದೊಳಗೂ ಗಿಡವಾಗಿದ್ದಾಗಿನ ಮೂಲ ಆಕಾರವನ್ನ ಬಿಟ್ಟುಕೊಟ್ಟಿಲ್ಲ. ನೋಡು ಅಲ್ಲಿ ಕಡ್ಡಿ ಕೆಂಡವಾಗಿ, ಕೆಂಡ ಇದ್ದಿಲಾಗಿ, ಇದ್ದಿಲು ಸುಟ್ಟು ಬೂದಿ ಆಗುವ ತನಕವೂ ಇನ್ನೊಬ್ಬರಿಗೆ ಆಹಾರ ಒದಗಿಸುತ್ತಲೇ ತನ್ನ ಬಾಳನ್ನು ನಂದಿಸಿಕೊಳ್ಳುತ್ತಿದೆ.ಮನುಷ್ಯಕೂಡ ಇದೇ ರೀತಿಯೊಳಗೆ ಇನ್ನೊಬ್ಬರಿಗಾಗಿ ಬದುಕಬೇಕು. ಇಲಿ ನಿನ್ನ ಆಹಾರವಲ್ಲ ಮಿತ್ರ.ನಿನ್ನಸಿವಿನ ತೀವ್ರತೆ ತಿಳಿದೇ ಹೇಳುತ್ತಿರುವೆ. ಆಹಾರ ಮೂಲ ಮನುಷ್ಯನಿಗೆ ಬಹಳಷ್ಟು ಇವೆ.ದಾರಿ ಕಂಡು ಕೊಳ್ಳುವುದೆ ಜಾಣತನ.ಹೆದರದಿರು ” ಎಂದು ಆಶೀರ್ವದಿಸಿ ಬೆನ್ನು ತಿರುಗಿಸಿದರು.ಆಗ ಇವನ ಕಣ್ಣೆದುರೇ ಬೆಕ್ಕೊಂದು ಬಂದು ಸುಟ್ಟ ಇಲಿಗಳನ್ನ ಗಬರಾಡ್ಕಂಡು ತಿಂತಾಇತ್ತು. ಅವನು ಗರಬಡಿದಂತೆ ನಿಂತಿದ್ದನು. ಅಷ್ಟರಲ್ಲಿ ಕೆರೆ ಬೇಟೆಗೆ ಹೋಗಿದ್ದ ಕೊಂಡನ ಸಂತಾನ ಜೋಪಡಿಗೆ ಹಿಂತಿರುಗಿತು. ಶ್ರಮಪಟ್ಟು ಹಿಡಿದು ತಂದಿದ್ದ ತರಾವರಿ ಮೀನುಗಳನ್ನ ಚೀಲದಿಂದ ಹೊರತೆಗೆದು ಅವರಮ್ಮನಿಗೆ ವರ್ಣಿಸಿ ಒಪ್ಪಿಸುತ್ತಿದ್ದರು.
ಊರಾಳೋರು ಬಿಸಿಲಿಗೆ ಬಸವಳಿದು ಮತ್ತದೆ ಅಳ್ಳಿಮರದ ಕೆಳಗೆ ಸುಧಾರಿಸ್ಕೆಂತ ಕುಂತರು. ಶಾಂತವೀರಪ್ಪಪಗೌಡ್ರು “ಏನ್ರಯ್ಯ ಕೊಂಡ ಈ ಪಾಟಿ ರೋಸೆದ್ದು ಬಿಟ್ಟವನೆ.ಎಲ್ಲಾರು ಇವನಂಗೆ ಮಾಡಿಬಿಟ್ರೆ ಏನುಗತಿ ?ಈ ನನ್ನ ಮಕ್ಕಳು ಇಲಿತಿಂದು ಸತ್ರು ಅಂತ ಸುತ್ತಮುತ್ತ ಊರುಗಳಿಗೆ ಸುದ್ದಿ ಹೋದ್ರೆ ನಾವು ಪಂಚಾಯ್ತಿ ದಾರರಾಗಿ ಮಕ ಯತ್ಕಂಡು ತಿರುಗಾಡೊದೆಂಗೆ “ಎಂದರು.ಮಿಕ್ಕವರು ಎಲ್ಲಿ ಸವ್ಕಬೇಕಾಗ್ತದೊ ಅಂತೇಳಿ ತುಟಿ ಬಿಚ್ಚಲಿಲ್ಲ.

ಇವರು ಸಾಗಿ ಬಂದ ಹಾದಿಯಲ್ಲೇ ಸುಡೊಬಿಸಿಲು ಲೆಕ್ಕಿಸದೆ ಒಂದಷ್ಟು ಜನ ಇವರು ಕುಂತಿರ ಕಡಿಕ್ಕೇ ನೆಡ್ಕಬತ್ತಿರಾದು ಕಾಣಿಸ್ತು. ಅವರು ಜೈನಮತಸ್ಥರು ಅಂಬ್ತ ಅರಿವಾಯಿತು.ಇಲಿ ಸುಡುತಿದ್ದ ಆ ಕೊಂಡನಿಗೂ ನಿರ್ವಾಣವಾಗಿದ್ದ ಈ ಸ್ವಾಮ್ಗಳಿಗೂ ಏನು ವ್ಯತ್ಯಾಸ ಅನಿಸಲಿಲ್ಲ. ಅವರು ಹತ್ರ ಬಂದಂಗೆ ಒಳಗೊಳಗೆ ಭಕ್ತಿ ಭಾವ ಅಂಕುರಿಸ್ತು. ಅದೆ ಕೊಂಡನ್ನ ಕಂಡಾಗ ಅಸಹ್ಯ ಅನಿಸಿತ್ತು.ಅವರು ಮರದಡಿ ಬರುತ್ತಿದ್ದಂತೆ ದೀರ್ಘದಂಡ ನಮಸ್ಕಾರ ಬಿದ್ದರು. ಕಾಲಿಗೆರಗಿದವರನ್ನು ಮೇಲೇಳಲು ಹೇಳಿದಜ್ಞಾನಿಗಳು, ಇವರು ನಿಂತಮೇಲೆ “ನೀವು ಹಿಂದೂಪುರದ ದೊರೆಗಳಲ್ಲವೇ?ಎಂದು ಪ್ರಶ್ನಿಸಿದರು. ಇವರು ಮಕಮಕ ನೋಡಿಕೆಂತ ನಿಂತ್ರು. ಬೈರಾಗಿಗಳು ಇವರನ್ನವಲೋಕಿಸಿ ” ನಮಗೆ ಎಲ್ಲ ಅರ್ಥವಾಗಿದೆ. ಶ್ರಮಿಕರ ಬೆವರಿನ ನಾತವು ಸತ್ತಿಗೆಯಡಿ ಕುಂತು ಉಂಬುವವನ ಅನ್ನದ ಪರಿಮಳ. ಎಲ್ಲಾ ಸಮಯವೂ ಎಲ್ಲರಿಗೂ ಸಂಕಟಮಯವಾಗಿರುವುದಿಲ್ಲ ಬಂಧುಗಳೇ .ಕಾಲನ ಮುಂದೆ ನಾವೆಲ್ಲ ಸರಿಸಮಾನರು. ಹರುಷದ ಸಹಜಮರಣವೇ ನಿಜವಾದ ಸುಖದಬುತ್ತಿ.ಮಾಲಕನ ಹಸಿವೆ ಕಾರಣದ ಅಕಾಲಿಕ ಸಾವು ಮಾಲೀಕಗೆ ಪಾಪದಗಂಟು. ಮನುಷ್ಯನಿಗೆ ಯಾವುದನ್ನೂ ಸೃಷ್ಟಿಸಲಾಗದ ಮೇಲೆ ಮತ್ತೆ ಬದುಕಿಸಲಾಗದ ಹೊರತು ಪ್ರತ್ಯಕ್ಷವಾಗಿಯಾಗಲಿ ಪರೋಕ್ಷವಾಗಿಯಾಗಲಿ ಕೊಲ್ಲುವ,ಅಕಾಲಸಾವಿಗೆ ಕಾರಣವಾಗುವ ಹಕ್ಕು ಎಲ್ಲಿರುತ್ತೆದೆ? ಅಲ್ಲವೆ ಹಿಂದೂಪುರದ ಒಡೆಯರೇ? ನೀವು ಬುದ್ಧನಿಗೆ ಜ್ಞಾನೋದಯವಾದ ವೃಕ್ಷದಡಿಯಲ್ಲಿದ್ದೀರಿ ಆಲೋಚಿಸಿ ನೋಡಿ. ನಿಮಗೆ ಒಳ್ಳೆಯದಾಗಲಿ “ಎಂದು ಆಶೀರ್ವಾದ ಮಾಡಿ ಹೊರಟರು. ಇವರು ಕೈಮುಗಿಯುತ್ತ ನಿಂತರು.

ಇತ್ತ ಹೊಲ ಗದ್ದೆಗಳಲ್ಲಿ ಬೀಡು ಬಿಟ್ಕಂಡಿರಾಂತ ಊರೆಜಮಾನ್ರು ಬಂದೋದ್ರು ಎಂಬ ವಾಗ್ದಾನವನ್ನೆಲ್ಲಾ ಆಲಿಸಿದ ಯುವ ಪೀಳಿಗೆಗೆ ಎಲ್ಲಿಲ್ಲದ ಸಿಟ್ಟು ಬಂದುಬಿಡ್ತು. ಅವ್ರು ” ಹಿರೇರು ಇನ್ನೊಂದು ಕಿತ್ತ ಆ ಕೆಲ್ಸ ಐತೆ ಈ ಕೆಲ್ಸ ಐತೆ ಅಂತಾವ ಬರ್ಲಿ,ನಾವು ಅಂದ್ರೆ ಏನು? ನಮ್ಮ ಕಿಮ್ಮತ್ತೇನು ಅಂಬ್ತ ತೋರಿಸ್ತೀವಿ” ಎಂದು ಕೊಂಡನ ಹಿರಿಮಗ ಮದ್ಲೇಟಿ, ಛಲವಾದಿ ಯಂಗಟಿಗನ ಮಗ ದಾಸಯ್ಯ, ನಾಯಕರ ಪೈಕಿ ಕೆಂಚಣ್ಣನ ಮಗ ಕರಿಯ ಮತ್ತು ಸಾಬರಜಾತಿ ವಾಜೀದ್ ಒಟ್ಟಿಗೆ ಸಂಸತ್ತು ಸೇರಿ ಯಗರಾಡಕತ್ತಿದ್ರು. ಕಡೆಗೆ ಇನ್ನೆಂದೂ ಬಿಟ್ಟಿಚಾಕ್ರಿ ಮಾಡಬಾರ್ದು ಅಂಬೊ ತೀರ್ಮಾನಕ್ಕೆ ಬಂದ್ರು.

ಇಂಗಂದಂಕ್ಕಂಡ ಮಾರನೆ ದಿವಸವೇ ಇವರಿರ ಜಾಗಕ್ಕೆ ನಾಕು ಬಂಡಿಗಳು ಬಂದು ನಿಂತ್ಕಂಡವು.ಅವು ನಮ್ಮ ಹಿಂದೂಪುರದವೇ ಅಂತ ಖಾತ್ರಿ ಮಾಡ್ಕೆಂಡ ಈ ನೊಂದಿರ ಹುಡ್ರು, ಮಾತಾಡ್ದೆ ಪಡಿ ಪದಾರ್ಥತುಂಬಿರ ಸೀಲಗಳಿಗೆ ಹೆಗಲು ಕೊಟ್ಟರು.
ಯಾವಾಗ ತಿಂಬಾ ಅನ್ನಕ್ಕೆ ಅವಕಾಶ ಒದಿಗಿ ಬಂತೊ ಅವಾಗ ಜೋಪಡಿಯವರ ಮುಖ ಅರಳಿತು. ಇದೆಲ್ಲ ಬಂದೋದ ಸ್ವಾಮ್ಗಳ ಮಹಿಮೆ ಎಂದ್ಕಂಡ ಕೊಂಡನು ನೆಮ್ಮದಿಯ ನಿಟ್ಟುಸಿರು ಬಿಟ್ಟನು. ಇದುಕ್ಕೆಲ್ಲಾ ಕಾರಣ ನಮ್ಮ ಕೊಂಡನೆ ಎಂದುಕೊಂಡ ಪಿಳೇಕು ಸಂತ್ರಸ್ತರು ಅವುನ್ನ ಗೌರವದಿಂದ ಕಾಣಕತ್ತಿದ್ರು.ಆದ್ರೆ ಅವನು “ಯಾಕಾದ್ರು ನಾನು ಇಲಿಸುಟ್ಕತಿಂಬ ಮನಸು ಮಾಡಿದೆನೊ? ಎಲ್ಲಿ ಆ ಸ್ವಾಮ್ಗಳು ನೊಂದು ಕೊಂಡೋದ್ರೊ?” ಅಂಬೊ ಸಂವೇದನೆಯೊಳಗೇ ಹರಿದೋಗಿರ ರಗ್ಗು ಗುಬರಾಕ್ಕೆಂಡು ಮನಿಕೆಂಡಿದ್ದನು.

ಅತ್ತ ಕೆಲಹೊತ್ತಿಗೆ ಆಸ್ಪತ್ರೆ ಜೀಪು ಬಂತು. ಕುಚ್ಚೋರು ಬಂದವ್ರೆ ಅಂತಾವ ಜನ ಬೆದರಿಬಿಟ್ಟರು. ಜೀಪಿಳಿದ ಡಾಕುಟ್ರು ನರಸಮ್ಮದೀರು ಜೋಪಡಿಗಳತ್ತ ಬರುವಾಗ್ಗೆ ಕೆಲವರು ದಿಕ್ಕಾಪಾಲಾಗಿ ಓಡಿಬಿಟ್ಟರು.ಹರೇದುಡುಗರಿಗೆ ಓಡೋಗೋರನ್ನ ಹಿಡ್ಕಬಂದು ಡಾಕುಟ್ರಿಗೆ ಒಪ್ಪಿಸವತ್ತಿಗೆ ಸಾಕು ಬೇಕಾಗಿಹೋಯ್ತು.ಹಿಂಗೆ ರೋಗ ಅಂಟಿರಾರ್ನ ಗುರುತಿಸಿ ಚುಚ್ಚುಮದ್ದು ಕೊಡ್ತ ಇರುವಾಗ್ಗೆ, ಮದ್ಲೇಟಿಯು ಮುಲಿಕ್ಕೆಂಡು ಮನಿಗಿದ್ದ ಅವರಪ್ಪನ್ನ ಬಾಸಿಎತ್ತಿ ಹೆಗಲಿಗಾಕ್ಕಂಡು ಬಂದು ವೈದ್ಯರ ಮುಂದೆ ನಿಲಾಕಿದನು. “ಸ್ವಾಮೇರಾ ನಮ್ಮಪ್ಪ ಪಿಳೇಕು ಜಾಡ್ಯ ಬರಿಸೊ ಇಲಿಗಳನ್ನೇ ಸುಟ್ಕ ತಿಂದುಬಿಟ್ಟವ್ನೆ ಸೂಜಿ ಸುಚ್ರಿ”ಅಂದನು. ವೈದ್ಯರು ದಿಗ್ಭಾಂತರಾಗಿಬಿಟ್ರು. ಅವನ ಮಾತು ಕೇಳಿಸ್ಕಂಡಂತ ಒಬ್ಬ ನರ್ಸು ತಲೆತಿರುಗಿ ಬಿದ್ದುಬಿಟ್ಟಳು.


ಕುರಂಗ ರಾಜ ವೈಭವದಂತ ಐತಿಹಾಸಿಕ ಕಾದಂಬರಿ ಮೂಲಕ ಸಾಹಿತ್ಯಕ ಹಾಗೂ ಸಾಮಾಜಿಕ ವಲಯದ ಗಮನ ಸೆಳೆದ ಡಾ.ಓ. ನಾಗರಾಜು ಅವರು ಕೊರಟಗೆರೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ

ಕನ್ನಡ ಸಹ ಪ್ರಾಧ್ಯಾಪಕರು.

ಮತ್ತು ಸಾಹಿತಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?