ಜಿ ಎನ್ ಮೋಹನ್
‘ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು’ ಅನ್ನುತ್ತಾರೆ ಟಿ ಪಿ ಕೈಲಾಸಂ.
ಹಾಸ್ಯದ ಮೂಲಕವೇ ಕಣ್ಣೀರಿನ ಕಥೆಗಳನ್ನು ನಮ್ಮೆಲ್ಲರ ಮುಂದಿಟ್ಟದ್ದು ಚಾರ್ಲಿ ಚಾಪ್ಲಿನ್.
ಕುಂ ವೀ ಈಗಿನಂತೆ ಬೆಂಗಳೂರನ್ನು ಆಗ ಇನ್ನೂ ತಮ್ಮದಾಗಿಸಿಕೊಂಡಿರಲಿಲ್ಲ. ಅದು ಫೇಸ್ ಬುಕ್ ಕಾಲವೂ ಅಲ್ಲ. ಒಮ್ಮೆ ಯಾವುದೋ ಕಾರಣಕ್ಕೆ ಫೋನ್ ಗೆ ಸಿಕ್ಕವರು ಚಾರ್ಲಿ ಚಾಪ್ಲಿನ್ ಬಗ್ಗೆ ಒಂದು ಪುಸ್ತಕ ಬರೆಯುತ್ತಿದ್ದೇನೆ ಎಂದರು.
ನನ್ನೊಳಗೆ ಒಂದು ಗುಂಗೀ ಹುಳ ಹೊಕ್ಕಿತು. ‘ನನಗೆ ಮಳೆ ಎಂದರೆ ಇಷ್ಟ. ಏಕೆಂದರೆ ಅದರೊಳಗೆ ನನ್ನ ಕಣ್ಣೀರು ಕಾಣಿಸುವುದಿಲ್ಲವಲ್ಲ’ ಎಂದ ಚಾರ್ಲಿ ಚಾಪ್ಲಿನ್ ಬಗ್ಗೆ ಕನ್ನಡಕ್ಕೆ ನಿಜಕ್ಕೂ ಒಂದು ಒಳ್ಳೆಯ ಕೃತಿಯ ಅಗತ್ಯವಿತ್ತು. ಅದರಲ್ಲೂ ಅದನ್ನು ಕುಂ ವೀ ಬರೆಯುತ್ತಾರೆ ಎಂದರೆ..?
ಹಾಗಾಗಿ ನನಗೆ ಎಲ್ಲಿ ಹೋದರೂ ಚಾರ್ಲಿ ಚಾಪ್ಲಿನ್ ಬಗ್ಗೆ ಪುಸ್ತಕ ಹುಡುಕುವುದು ಕೆಲಸವಾಗಿಹೋಯಿತು. ಆಗ ನಾನು ‘ಪ್ರಜಾವಾಣಿ’ಯ ವರದಿಗಾರನಾಗಿ ಕಲಬುರ್ಗಿಯಲ್ಲಿದ್ದೆ. ಅಲ್ಲಿನ ನವಕರ್ನಾಟಕ, ಸಿದ್ಧಲಿಂಗೇಶ್ವರ, ನೆರೆಯ ಹೈದ್ರಾಬಾದ್ ನ ರಸ್ತೆ ಬದಿ ಅಂಗಡಿಗಳು, ವಿಶಾಲಾಂಧ್ರದಂತಹ ಸ್ಟಾಲ್ ಗಳು, ಬೆಂಗಳೂರಿನಲ್ಲಿದ್ದ ಅಷ್ಟೂ ಪುಸ್ತಕ ತಾಣಗಳು.. ಎಲ್ಲದರಲ್ಲಿಯೂ ನನಗೆ ಬೇಕಾದ ಪುಸ್ತಕಕ್ಕಿಂತ ಚಾಪ್ಲಿನ್ ಪುಸ್ತಕ ಹುಡುಕುವುದೇ ನನ್ನ ಉದ್ಯೋಗವಾಯಿತು.
ಹಾಗೆ ಸಿಕ್ಕ ಪುಸ್ತಕಗಳನ್ನೆಲ್ಲಾ ಒಟ್ಟು ಮಾಡಿ ಕುಂ ವೀ ಅವರಿಗೆ ಕಳಿಸಿಕೊಟ್ಟೆ. ಕುಂ ವೀ ಗೆ ಎಷ್ಟು ಸಂತೋಷವಾಯಿತೆಂದರೆ ಪುಟ್ಟ ಕಾರ್ಡ್ ನಲ್ಲಿ, ತಮ್ಮ ಮುದ್ದಾದ ಅಕ್ಷರಗಳೊಂದಿಗೆ ‘ಥ್ಯಾಂಕ್ಸ್’ ಹೇಳಿದರು.
ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ಸಪ್ನಾ’ದವರು ಆ ಕೃತಿಯನ್ನು ಪ್ರಕಟಿಸಿದಾಗ ಅದರಲ್ಲೂ ನನಗೆ ಥ್ಯಾಂಕ್ಸ್ ಹೇಳಿದ್ದರು.
ಇದಾಗಿ ಮುಗಿಯಿತು. ಈ ಮಧ್ಯೆ ನಾನು ಕ್ಯೂಬಾಗೆ ಹೋಗಿ ಬಂದೆ. ಬಂದ ಮೂರು ವರ್ಷಗಳ ನಂತರ ಪ್ರವಾಸ ಕಥನ ಬರೆಯಲು ಕುಳಿತೆ. ಆಗ ಜಿ- ಮೇಲ್ ಕೂಡಾ ಇರಲಿಲ್ಲ, ಗೂಗಲ್ ಕೇಳುವುದೇ ಬೇಡ. ಇಂಟರ್ನೆಟ್ ಇನ್ನೂ ಕಣ್ಣು ಬಿಡುತ್ತಿತ್ತಷ್ಟೇ. ಹಾಗಾಗಿ ಕ್ಯೂಬಾ ಬಗ್ಗೆ ಅಧ್ಯಯನ ಮಾಡಲು ನೂರೆಂಟು ಕಡೆ ಹೋದೆ. ಹಲವು ಪತ್ರಿಕೆಗಳ ಸಂಗ್ರಹಾಲಯಕ್ಕೆ ಹೋದೆ. ಸಾಕಷ್ಟು ಜನರ ಮನೆ ಬಾಗಿಲು ತಟ್ಟಿದೆ. ಬೇಕಾದಷ್ಟು ಮಾಹಿತಿ ನನ್ನ ಕಣಜ ಸೇರಿತು.
ಆದರೆ ಸಮಸ್ಯೆ ಎಂದರೆ ನಾನು ಸಂಗ್ರಹಿಸಿದ ಮಾಹಿತಿಗಳಲ್ಲಿ ಒಂದಷ್ಟು ಬಗೆಹರಿಯದ ಗೊಂದಲಗಳಿದ್ದವು. ಅರ್ಥವಾಗದ ಹೆಸರುಗಳಿದ್ದವು, ಘಟನೆಗಳಿದ್ದವು. ಇಂಗ್ಲಿಷ್ ಮೂಲಕ ಈ ಎಲ್ಲವನ್ನೂ ತಡಕಾಡುತ್ತಿದ್ದ ನನಗೆ ಈ ಮಿಸ್ಸಿಂಗ್ ಲಿಂಕ್ ಗಳನ್ನು ಜೋಡಿಸುವುದೇ ದೊಡ್ಡ ತಲೆನೋವಾಯಿತು. ಅದನ್ನು ಜೋಡಿಸದೆ ಕ್ಯೂಬಾ ಅರ್ಥವೂ ಆಗುತ್ತಿರಲಿಲ್ಲ.
ಈ ಮಧ್ಯೆ ಒಂದು ತಪ್ಪು ಮಾಡಿಬಿಟ್ಟಿದ್ದೆ. ಕ್ಯೂಬಾದ ಬುಕ್ ಸ್ಟೋರಿನಲ್ಲಿ ಹೊಸಬರಿಗಾಗಿಯೇ ಕ್ಯೂಬಾ ಪರಿಚಯಿಸುವ ಗ್ರಾಫಿಕ್ ಪುಸ್ತಕ ಇತ್ತು. ಕೊಳ್ಳಬೇಕು ಎಂದುಕೊಂಡರೂ ನಾನು ಆ ನಂತರ ಇನ್ನೂ ಮುಂದುವರಿಸಬೇಕಾಗಿದ್ದ ಇಂಗ್ಲೆಂಡ್ ಭೇಟಿ ನನಗೆ ಆ ಅವಕಾಶ ನೀಡಿರಲಿಲ್ಲ. ಪ್ರವಾಸ ಕಥನ ಬರೆಯಲು ಕುಳಿತಾಗ ನನಗೆ ಬೇಕಾದದ್ದು ಆ ಪುಸ್ತಕವೇ ಎಂದು ಗೊತ್ತಾಗಿ ಹಳಹಳಿಸುತ್ತಿದ್ದೆ. ಸಾಕಷ್ಟು ದುಃಖದಲ್ಲಿದ್ದೆ.
ಆಗಲೇ ಒಂದು ದಿನ ನಮ್ಮ ಕಚೇರಿಯ ಬಾಗಿಲು ತಟ್ಟಿದ ಪೋಸ್ಟ್ ಮ್ಯಾನ್ ನನಗೊಂದು ಅಂಚೆ ಕೈಗಿತ್ತರು. ಒಂದು ಪುಸ್ತಕ. ತೆರೆದು ನೋಡುತ್ತೇನೆ.ವಾರೆವ್ವಾ ಯಾವ ಪುಸ್ತಕ ನಾನು ಕೊಳ್ಳಲಿಲ್ಲವಲ್ಲಾ, ಅದರಿಂದಾಗಿ ನನ್ನ ಈ ಕೃತಿ ನಿಂತು ಹೋಗುವ ಸಂದರ್ಭ ಬಂತಲ್ಲಾ ಎಂದು ಗೋಳಾಡುತ್ತಿದ್ದೆನೋ ಅದೇ ಪುಸ್ತಕ ನನ್ನ ಕೈನಲ್ಲಿತ್ತು.
ಕುಂ ವೀ ಥೇಟ್ ನನ್ನಂತೆಯೇ ನಾನು ಕ್ಯೂಬಾ ಬಗ್ಗೆ ಬರೆಯುತ್ತಿದ್ದೇನೆ ಎಂದು ಗೊತ್ತಾಗಿ ಊರೆಲ್ಲಾ ಕ್ಯೂಬಾದ ಬಗ್ಗೆ ಪುಸ್ತಕಗಳನ್ನು ಹುಡುಕುತ್ತಿದ್ದರು. ಈಗ ಬೆಲೆ ಕಟ್ಟಲಾಗದ ಅದೇ ಪುಸ್ತಕ ನನ್ನ ಕೈನಲ್ಲಿತ್ತು. ನಾನು ನೋಡಿದ ಪುಸ್ತಕ ಇಂಗ್ಲಿಷ್ ನದ್ದು ಇದು ತೆಲುಗು ಅನುವಾದ ಎನ್ನುವುದು ಬಿಟ್ಟರೆ ಏನೇನೂ ವ್ಯತ್ಯಾಸವಿರಲಿಲ್ಲ.
ನನಗೋ ‘ಎನಗೆ ಬರುತಿದೆ ಜಗದ ಮುದ, ಕುಣಿದಲ್ಲದೆ ನಾ ತಾಳೆನಿದ’ ಎನ್ನುವಷ್ಟು ಸಂತೋಷ. ಕುಂ ವೀ ಗೆ ನಾನು ಕಳಿಸಿದ ಚಾಪ್ಲಿನ್ ಪುಸ್ತಕಗಳಿಂದ ಏನು ಪ್ರಯೋಜನವಾಗಿತ್ತೋ ಗೊತ್ತಿಲ್ಲ ಆದರೆ ನನಗಂತೂ ಈ ಪುಸ್ತಕದಿಂದ ಸೆಸೇಮಳ ಗುಹೆ ಹೊಕ್ಕಲು ಬೇಕಿದ್ದ ಪಾಸ್ ವಾರ್ಡ್ ಸಿಕ್ಕಿ ಹೋಗಿತ್ತು.
ಆದರೆ ಇಲ್ಲೊಂದು ಸಮಸ್ಯೆ ಇತ್ತು. ನನಗೂ ತೆಲುಗಿಗೂ ಮಾರುದೂರ. ಆಗ ನನ್ನ ನೆರವಿಗೆ ಬಂದವರು ಈಗಿನ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಹಾಗೂ ಈಗಿನ ಕಲಬುರ್ಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ ಅವರು. ಅವರಿಬ್ಬರೂ ತಮ್ಮ ಊರು ಸೇಡಂನಲ್ಲಿ ಕುಳಿತು ಇಡೀ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟರು. ಅಲ್ಲಿಯವರೆಗೂ ‘ನನ್ನ ನೀನು ಗೆಲ್ಲಲಾರೆ’ ಎನ್ನುವಂತೆ ಕುಳಿತಿದ್ದ ಮಾಹಿತಿಗಳು ಸಲೀಸಾಗಿ ಪುಸ್ತಕದ ರೂಪು ಪಡೆದವು.
‘ನನ್ನೊಳಗಿನ ಹಾಡು ಕ್ಯೂಬಾ’ ಹೊರಬಂದಾಗ ನಾನೂ ಸಹಾ ಕುಂ ವೀ ಗೆ ಥ್ಯಾಂಕ್ಸ್ ಹೇಳಿದ್ದೇನೆ. ಆಫ್ ಕೋರ್ಸ್, ಮಹಿಪಾಲರೆಡ್ಡಿ ಹಾಗೂ ಪ್ರಭಾಕರ ಜೋಶಿ ಅವರಿಗೂ
ಹಾಗೆ ಚಾಪ್ಲಿನ್ ಮತ್ತು ಕ್ಯೂಬಾ ಕೈಕುಲುಕಿದರು.
—
ನಿನ್ನೆ ಚಾಪ್ಲಿನ್ ಹುಟ್ಟುಹಬ್ಬ
ಅದಕ್ಕೆ ಇದೆಲ್ಲಾ ನೆನಪಿಗೆ ಬಂದಿತು.