Thursday, June 20, 2024
Google search engine
Homeಸಾಹಿತ್ಯ ಸಂವಾದಅಂತರಾಳಕೆರೆ ಕಾಯಕದಲ್ಲೊಂದು ಅನುಭವ

ಕೆರೆ ಕಾಯಕದಲ್ಲೊಂದು ಅನುಭವ

ಲೇಖನ: ಡಾ.ವೆಂಕಟೇಶಯ್ಯ ನೆಲ್ಲುಕುಂಟೆ


ತೀರಾ ವೈಯಕ್ತಿಕವಾದ ಬರಹಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದೆ ಎಂಬ ಪ್ರಶ್ನೆ ನನ್ನನ್ನು ಬಹಳ ಕಾಲದಿಂದ ಕಾಡುತ್ತಿದೆ. ಹಾಗೆ ಹಂಚಿಕೊಳ್ಳುವುದು ಲಜ್ಜೆ ಎನ್ನಿಸುತ್ತಿದ್ದ ಕಾರಣದಿಂದ ಈ ರೀತಿಯ ಬರಹಗಳನ್ನು ಬರೆಯದೆ ಹತ್ತನ್ನೆರಡು ವರ್ಷಗಳಿಂದ‌ ಸುಮ್ಮನಿದ್ದು ಬಿಟ್ಟಿದ್ದೇನೆ. ಆದರೆ ಹಿರಿಯರಾದ ನಾಗೇಶ್ ಹೆಗಡೆ, ಕೆ.ಪಿ.ಸುರೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಕರೀಗೌಡ್ರು ಮುಂತಾದವರು ನಮ್ಮ ‘ಕೆರೆ ಕಾಯಕ’ ದ ಕುರಿತು ಬರೆಯಲು ಸಿಕ್ಕಾಗಲೆಲ್ಲ ಹೇಳುತ್ತಲೇ ಬಂದಿದ್ದರು. Documentation ಬಹಳ ಮುಖ್ಯ, ನಿಮ್ಮ ಅನುಭವಗಳು ಉಳಿದವರಿಗೆ‌ ಮಾರ್ಗದರ್ಶನ ನೀಡುವಂತಾದರೆ ಅನುಕೂಲ ಎಂಬುದು ಅವರ ಮಾತು.

ನಾಗೇಶ್ ಹೆಗಡೆಯವರು ಕನ್ನಡದ ನಟ ಯಶ್ ಗೆ ಒಂಥರಾ ಗುರುಗಳು. ಯಶ್ ಉತ್ತರ ಕರ್ನಾಟಕದ ಕೆಲವು ಕೆರೆಗಳನ್ನು ಸರಿ ಮಾಡಿ ನೀರು ನಿಲ್ಲುವಂತೆ ಮಾಡುತ್ತಿದ್ದರು. ಅವರಿಗೆ ನನ್ನ ನಂಬರ್ ಕೊಟ್ಟು ಹಲವು ಬಾರಿ ಮಾತನಾಡಿಸಿದ್ದರು. ಯಶ್ ಈಗ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ.

ನಮ್ಮ ಕೆರೆ ಅನುಭವ 2011-12 ರದು. ಅದುವರೆಗೆ ದೈನಂದಿನ ಕೆಲಸದ ನಡುವೆ ರಸ್ತೆ ವಿಸ್ತರಣೆಯಂಥ ಕೆಲಸಗಳು ಅಭಿವೃದ್ಧಿ ದೃಷ್ಟಿಯಿಂದ ಮುಖ್ಯ ಎಂದು ಭಾವಿಸಿ ಆ ದಿಕ್ಕಿನಲ್ಲಿ ತೊಡಗಿದ್ದೆವು. ಪುತ್ತೂರು ರಸ್ತೆ ವಿಸ್ತರಣೆಯ ಕತೆ ಕೂಡ ಒಂಥರಾ ರೋಚಕವೆ. ಅದನ್ನು ತಡೆಯಲು ಕೆಲವರು ಏನೆಲ್ಲ ಪ್ರಯತ್ನಗಳನ್ನು ಮಾಡಿದ್ದರು! ನಮ್ಮ ಮೂರೂ (AC,ASP ,TAHASILDAR) ವಸತಿ ಗೃಹಗಳಿಗೆ ಕೇರಳದಿಂದ ಮಾಂತ್ರಿಕರನ್ನು ಕರೆಸಿ ರಾತ್ರೋರಾತ್ರಿ ಕೋಳಿ ಬಲಿ ನೀಡಿ ಕಟ್ಟು ಮಾಡಿಸಿದ್ದರು. ಆದರೂ ರಸ್ತೆ ವಿಸ್ತರಣೆ ಆಯಿತು. ಅಲ್ಲಿ ಆಟೋ ಡ್ರೈವರುಗಳು, ಸಣ್ಣ ಪುಟ್ಟ ಜನ ನಮ್ಮ ಬೆಂಬಲಕ್ಕಿದ್ದರು. ಇಂಥ ಹಲವು ಅನುಭವಗಳಿದ್ದರೂ ಕೆರೆ ಕ್ಲೀನು ಮಾಡುವಂಥ ಸಾಮೂಹಿಕ ಸ್ವರೂಪದ ಕೆಲಸ ನನಗೂ ಹೊಸದೆ.

ತಿಪಟೂರು ರಸ್ತೆ ವಿಸ್ತರಣೆ ಕೆಲಸ ಮುಗಿದ ಕೂಡಲೆ ಕೆರೆ ಕೆಲಸ ಕೈಗೆತ್ತಿಕೊಂಡೆವು. ಅದು ಅದ್ಭುತ ಸಮಯ. ಶಾಸಕರು ,ಅಧಿಕಾರಿಗಳು, ಬಹುಪಾಲು ಸಂಘಟನೆಗಳು, ಜನತೆ, ಪತ್ರಕರ್ತರು ಒಂದೆ‌ ಆತ್ಮದಂತೆ ಯೋಚನೆ ಮಾಡುತ್ತಿದ್ದ ಕಾಲ. ಎಷ್ಟೊಂದು ಕೆಲಸಗಳು ನಡೆದವು ಆಗ. ಸಣ್ಣ ಸಣ್ಣ ಪ್ರಯತ್ನಗಳು ಎಷ್ಟೊಳ್ಳೆ ಫಲ ನೀಡಿದವು. ಸುಮಾರು ೫ ಲಕ್ಷದ ಆಸು ಪಾಸಿನಲ್ಲಿ ಗ್ರೀಕ್ ಮಾದರಿಯ ಬಯಲು ರಂಗ ಮಂದಿ ತಿಪಟೂರಿನಲ್ಲಿ ಕಟ್ಟಿದ್ದೇವೆ. ಅದು ರಾಜ್ಯದ ಅತ್ಯುತ್ತಮವಾದ ರಂಗಮಂದಿರಗಳಲ್ಲೊಂದೆಂದು ನೀನಾಸಂ ಗಣೇಶ್ ಆದಿಯಾಗಿ ಅನೇಕ ಗೆಳೆಯರು ಹೇಳಿದ್ದಾರೆ.

ಕೆರೆಯ ಕೆಲಸ ನಮಗೆ ಹಲವು ಪಾಠಗಳನ್ನು ಒಟ್ಟಿಗೆ ಕಲಿಸಿತು.
ತಿಪಟೂರು ಅಮಾನಿಕೆರೆಯ ವಿಸ್ತೀರ್ಣ ಸುಮಾರು‌ ೧೬೦ ಎಕರೆ. ಸುಮಾರು ಐವತ್ತು ಎಕರೆಯನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಉಳಿದ ೧೧೦ ಎಕರೆಯಲ್ಲಿನ ಕೆರೆಯನ್ನು ಕೆರೆಯ ರೂಪಕ್ಕೆ ತರುವ ಕುರಿತು ಶಾಸಕರಾದ ಶ್ರೀ ನಾಗೇಶ್ ಅವರು ಒಂದು ಸಂಜೆ ನಮ್ಮೊಂದಿಗೆ ಚರ್ಚಿಸಿದರು. ಒಂದಿಂಚೂ ಜಾಗವಿಲ್ಲದಂತೆ ಬಳ್ಳಾರಿ ಜಾಲಿ ಬೆಳೆದು ಕಾಡಾಗಿದ್ದ ಕೆರೆ ಅದು.

ಕೊಲೆ, ಸುಲಿಗೆ, ಇನ್ನಿತರ ಕಾಳ ವ್ಯವಹಾರಗಳೆಲ್ಲ ಅದರಲ್ಲಿ ನಡೆಯುತ್ತಿದ್ದವು. ಊರ ಮಧ್ಯದ ಕೆರೆ ಊರಿಗೆ ಸಂಭ್ರಮವಾಗುವುದರ ಬದಲು ಗಾಯದಂತೆ ನಾರುತ್ತಿತ್ತು. ಇದನ್ನು ಸರಿ ಮಾಡುವುದು ಸಾಮಾನ್ಯದ ಕೆಲಸವೆ ? ೩-೪ ಅಡಿ ಹೂಳು ತುಂಬಿ ಕೊಂಡಿತ್ತು. ಸರ್ಕಾರ‌ವೇ ಕೈಗೆತ್ತಿಕೊಂಡರೆ ಇದು ಹತ್ತಾರು ಕೋಟಿ ರೂಪಾಯಿಗಳ ಕಾಮಗಾರಿ. ಇಷ್ಟೊಂದು ಹಣವನ್ನೂ ನಿರೀಕ್ಷೆ ಮಾಡುವಂತಿರಲಿಲ್ಲ.

ಆಗಿದ್ದಾಗಲಿ ನೋಡೇ ಬಿಡೋಣ ಎಂದು ತೀರ್ಮಾನಿಸಿದೆವು. ೨೦೧೧ ರ ಅಂತ್ಯಕ್ಕೆ ಹೂಳೆತ್ತಲು ಪ್ರಾರಂಭಿಸುವುದು, ಸರ್ಕಾರದಿಂದ ಎಷ್ಟು ಹಣ ತರಲು ಸಾಧ್ಯವೋ ನೋಡೋಣ ಎಂದು ಶಾಸಕರು ಹೇಳಿದರು. ಉತ್ಸಾಹದಲ್ಲಿದ್ದ ನಾವೆಲ್ಲರೂ ತಲೆಗೊಂದೊಂದು ಐಡಿಯಾ ಹೇಳಿ ಹುರಿದುಂಬಿಸಿದೆವು. ಕೆರೆಯ ಗೋಡು ಮಣ್ಣು ತೋಟಕ್ಕೆ, ಇಟ್ಟಿಗೆ ಗೂಡಿಗೆ ತುಂಬಾ ಒಳ್ಳೆಯದೆಂದು ಹೇಳುತ್ತಾ ಹೋದೆವು. ಕೊನೆಗೆ ೨೦ ಕಿ.ಮೀ ಗಳಿಂದ ರೈತರು ಬಂದು ಮಣ್ಣು ತುಂಬಿ‌ ಸಾಗಿಸತೊಡಗಿದರು. ಮಣ್ಣು ತುಂಬುವ ಯಂತ್ರಗಳಿಗೆ ಬಾಡಿಗೆ, ಇಂಧನ ಇತ್ಯಾದಿಗಳಿಗಾಗಿ ಮಣ್ಣು ತುಂಬಿಸಿಕೊಂಡು ಹೋಗುವವರು ಕೈಲಾದಷ್ಟು ಸಹಾಯ ಮಾಡಬೇಕೆಂದು ಕೇಳಿಕೊಂಡೆವು.

ಸಂಗ್ರಹವಾಗುವ ಹಣದ ಪೈಸೆಗಳ ಲೆಕ್ಕವನ್ನೂ ಪಾರದರ್ಶಕವಾಗಿಡಲಾಯಿತು. ನಗರಸಭೆ ಮತ್ತು ಸಣ್ಣ ನೀರಾವರಿ ಇಲಾಖೆಗಳ ಇಂಜಿನಿಯರುಗಳು, ನೌಕರರು ಪೂರ್ಣವಾಗಿ ತೊಡಗಿಕೊಂಡರು. ಒಂದು ಅಂದಾಜಿನ ಪ್ರಕಾರ ಹೂಳೆತ್ತುವುದರಿಂದಾಗಿ ಎಲ್ಲ ಖರ್ಚುಗಳನ್ನು ಕಳೆದು ಸುಮಾರು 5 ಲಕ್ಷ ರೂಪಾಯಿಗಳಷ್ಟು ಹಣ ಉಳಿದಿತ್ತು.
ಕೆರೆ ಹೂಳೆತ್ತಲು ಸರ್ಕಾರದ ಹಣ ಬೇಕಿಲ್ಲ. ಬದಲಾಗಿ ಸರ್ಕಾರಕ್ಕೆ ಹಣ ತುಂಬಬಹುದು ಎಂಬ‌ ಪಾಠವನ್ನು ಇದರಿಂದ ಕಲಿತೆವು.

ಹೂಳು ಎಂಬುದು ಸಂಪತ್ತು ಎಂದು ಅರಿವಾಯಿತು. ಹಿಂದೆಲ್ಲ ಪ್ರತಿ ಬೇಸಿಗೆಯಲ್ಲಿ ಕೆರೆಯ ಗೋಡನ್ನು ಹೊಲಗದ್ದೆಗಳಿಗೆ ಸಾಗಿಸುತ್ತಿದ್ದ, ಅನೇಕ ಸಾರಿ ತಲೆಯ ಮೇಲೆ ಹೊತ್ತು ಬಂಡಿ ತುಂಬಿದ್ದ ನನ್ನಂಥವರಿಗೆ ಇದು ಹೊಸದಲ್ಲವಾದರೂ ಬದಲಾದ‌ ಕಾಲಘಟ್ಟದಲ್ಲಿ ಸಮುದಾಯಗಳು ಇದನ್ನೆಲ್ಲ ಮರೆತು ಹೋಗಿವೆ. ಇದೆಲ್ಲ ಸರ್ಕಾರದ ಕೆಲಸ ಎಂದು ಭಾವಿಸಲಾಗಿದೆ. ಹಾಗಾಗಿ ರಾಜ್ಯದ ಕೆರೆಗಳೆಲ್ಲ ಕೆರೆಯ ರೂಪಕ್ಕೆ ಬರಲು ಕಂಟ್ರಾಕ್ಟರುಗಳಿಗಾಗಿ ಕಾಯುತ್ತಿವೆ.

ನಮ್ಮ ತಿಪಟೂರು ಕೆರೆಯೇನೋ ಕೇವಲ ನಾಲ್ಕು ತಿಂಗಳಲ್ಲಿ ನೋಡ ನೋಡುತ್ತಿದ್ದಂತೆ ಸ್ವಚ್ಛವಾಗತೊಡಗಿತು. ಕೆರೆಯೊಂದು ಹೇಗಿರಬೇಕೆಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾಗಿದ್ದ ರವಿಯವರು(ಆಗ‌ ಮೈಸೂರು ಜ಼ೂ ನಲ್ಲಿ ಅಧಿಕಾರಿಯಾಗಿದ್ದರು). ಹಲವು ಸೂಚನೆಗಳನ್ನು ನೀಡಿದರು. ಕೆರೆಯೆಂದರೆ ಬರೀ ನೀರಲ್ಲ. ಅಲ್ಲಿ ಜಲಚರಗಳು, ಹಕ್ಕಿ, ಪ್ರಾಣಿಗಳು ಬದುಕಬೇಕಾದ, ಸಂತಾನಾಭಿವೃದ್ಧಿ ಮಾಡಬೇಕಾದ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕಾಗಿ ಹುಲ್ಲು, ಮರಗಿಡಗಳು ಅನಿವಾರ್ಯ ಎಂದೆಲ್ಲ ಹೇಳಿದರು. ಅದರಂತೆ ಕೆರೆ ರೂಪುಗೊಂಡಿತು. ಕೆರೆಯೇನೋ ರೂಪುಗೊಂಡಿತು.

ಆದರೆ ನಮ್ಮ ಈ ಉತ್ಸಾಹದಿಂದ ಊರೆಲ್ಲ ಧೂಳ್ಮಯವಾಯಿತು. ಕೆಲವರು ಈ ಆಡೋ ಹುಡುಗರಂಥ (ಎಲ್ಲರೂ ೩೦ ರ ಹರೆಯದವರು)ಅಧಿಕಾರಿಗಳನ್ನಿಟ್ಟುಕೊಂಡು ಈ ಶಾಸಕರೂ ಅವರಂಗೆ ಆಗಿಬಿಟ್ಟಿದ್ದಾರೆ ಎಂದು ಬಯ್ಯತೊಡಗಿದರು. ಊರಿನ ರಸ್ತೆಗಳಿಗೆ ಬೆಳಿಗ್ಗೆ ಸಂಜೆ ನೀರು ಚಿಮುಕಿಸುವುದನ್ನೂ ಮಾಡಿದೆವು.

ಅಂತೂ ಇಂತು ಜೂನ್ ಹೊತ್ತಿಗೆ ಕೆರೆ ಸಿದ್ಧವಾಯಿತು. ಜುಲೈನಿಂದ ಕೆರೆಗೆ ನೀರು ತುಂಬಲಾರಂಭಿಸಿತು.
ನೀರು ತುಂಬಿದಂತೆಲ್ಲ ಇನ್ನೊಂದು ಸಮಸ್ಯೆ ಶುರುವಾಯಿತು. ಇಡೀ ಕೆರೆಗೆ ಕೆರೆಯೇ ವಾಟರ್ ಹೈಸಿಂಥ್ ಎಂಬ ಕಳೆಗಿಡದಿಂದ ಮುಚ್ಚಿಹೋಯ್ತು. ಇದರ ವೇಗವೇ ಭಯಾನಕ.ಅಂಗೈ ಅಗಲ ಕಾಣಿಸಿಕೊಂಡ ಈ ಗಿಡ ತಿಂಗಳೊಪ್ಪತ್ತಿನಲ್ಲಿ ಕೆರೆಯನ್ನು ಹಸಿರು ಮಯ ಮಾಡಿತು.

ಸೆಪ್ಟೆಂಬರ್ ಕೊನೆಯ ಹೊತ್ತಿಗೆ ನೀರೇ ಕಾಣದಂತೆ ಗಿಡ ಆವರಿಸಿಕೊಂಡಿತು. ಏನು ಮಾಡುವುದು? ಇಂಜಿನಿಯರುಗಳನ್ನು ಕೇಳಿದರೆ ಕೋಟಿಗಳಲ್ಲಿ ಲೆಕ್ಕ ಹಾಕುತ್ತಾರೆ. ಕೊನೆಗೆ ಜನರ ಮುಂದಾಳತ್ವದಲ್ಲೆ ಗಿಡ ತೆಗೆಯುವುದೆಂದು ತೀರ್ಮಾನಿಸಿದೆವು.
ಅಗ್ನಿಶಾಮಕದಳದವರು ಲೈಫ್ ಜಾಕೆಟ್ಗಳನ್ನು , ಫೈಬರ್ ಬೋಟುಗಳನ್ನು ತಂದರು. ಯಾವುದಕ್ಕೂ ಇರಲಿ ಎಂದು ಒಂದಿಷ್ಟು ಮೀನುಗಾರ ಈಜಾಳುಗಳನ್ನು ಕರೆತಂದೆವು.

ಆಸಕ್ತಿ ಇರುವ ಜನ ಬರಬೇಕೆಂದು ಮನವಿ ಮಾಡಿದೆವು. ಅಕ್ಟೋಬರ್ ೨ ,೨೦೧೨ ರಂದು ಗಾಂಧಿ ಜಯಂತಿ ಮುಗಿಸಿ ಕೆರೆಗೆ ಇಳಿದೆವು. ಕೆರೆಯಲ್ಲಿ ೭ ಅಡಿ ವರೆಗೆ ನೀರು ನಿಂತಿತ್ತು. ನೋಡ ನೋಡುತ್ತಿದ್ದಂತೆ ಸ್ತ್ರೀಶಕ್ತಿ ಗುಂಪುಗಳಾದಿಯಾಗಿ ಹೆಂಗಸರು ಮಕ್ಕಳು ಬುತ್ತಿಗಳನ್ನು ಹೊತ್ತು ತಂದರು. ೩-೪ ಸಾವಿರ ಜನ ಕೆರೆಯ ಸುತ್ತ ಸೇರಿದರು. ಈಜು ಬರುವ ಎಲ್ಲ ಅಧಿಕಾರಿಗಳು, ಶಾಸಕರು ಅಂದು ಇಡೀ ದಿನ ಕೆರೆಯೊಳಗಿದ್ದೆವು. ಜನ ಪಕ್ಷ ಭೇದ ಮರೆತು ಸಂಭ್ರಮಿಸತೊಡಗಿದರು.

ಊರು ಒಟ್ಟಿಗೆ ಸಂಭ್ರಮಿಸುವುದು ಇಂಥ ಘಳಿಗೆಗಳಲ್ಲೆ ಅನ್ನಿಸುತ್ತದೆ. ಜನ ಜಾತಿ ಧರ್ಮ ಮೀರಿ ಸೇರಿದ್ದರು. ಅವರನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆಯಾಗತೊಡಗಿತು. ಹೀಗೆ ಮೂರು ರಜಾ ದಿನಗಳಲ್ಲಿ ಕೆರೆ ಸ್ವಚ್ಛವಾಯಿತು. ಬೆಳಗಿನ ಸೂರ್ಯ ಕಿರಣಗಳು ನೀರ ಮೇಲೆ ಬಿದ್ದರೆ ಅಚ್ಛೋದ ಸರೋವರ ನೆನಪಾಗುತ್ತಿತ್ತು. ಊರ ಒಂದು ಹನಿ ಕೊಳಚೆ ನೀರೂ ಕೆರೆಗೆ ಬರದಂತೆ ವ್ಯವಸ್ಥೆ ಮಾಡಲಾಯಿತು.

ಕೆರೆ ಅಕ್ಟೋಬರ್ ತಿಂಗಳಲ್ಲೆ‌ ಕೋಡಿ ಬಿತ್ತು.
ಇದನ್ನು ನೋಡಿ ತಾಲ್ಲೂಕಿನ ಹಲವು ಕಡೆ ಕೆರೆಗಳನ್ನು ಕೆರೆಯ ರೂಪಕ್ಕೆ ತರುವ ಪ್ರಯತ್ನಗಳಾದವಂತೆ. ತಿಪಟೂರು ಬಹಳ ಮೋಹಕವೆನ್ನಿಸಿ ಅಲ್ಲೇ ಉಳಿದು ಬಿಡೋಣ ಅನ್ನಿಸಿತ್ತು. ಇಲ್ಲೇ ಮನೆ ಕಟ್ಟೋಣ ಅಂತ ಪ್ರೇಮಾ ಹತ್ತಿರ ಪ್ರಸ್ತಾಪ ಮಾಡಿದೆ. ನನ್ನ ಹುಚ್ಚಾಟಗಳನ್ನು ಬೆಂಬಲಿಸುವ ಅವಳು ಬೇಡ ಅನ್ನಲಿಲ್ಲ. ಆದರೆ ಬೆಂಗಳೂರಿಗೆ Transfer ಆಯಿತು. ಊರೊಂದು ನನ್ನೊಳಗೆ ಇಷ್ಟೊಂದು ಮೋಹಕವಾಗಿ ಒಳಗಿಳಿದದ್ದು ತಿಪಟೂರೆ ಇರಬಹುದು.


ಇಲ್ಲಿ ಸೂಕ್ಷ್ಮತೆ ಮೈವೆತ್ತ ಅನೇಕ ಗೆಳೆಯರಿದ್ದರು. ಸಜ್ಜನ ನಾಗರಿಕರಿದ್ದರು. ಅಚ್ಚುಕಟ್ಟಾದ ರಸ್ತೆಗಳು, ಹಸಿರು, ಮಂಗಟ್ಟೆಯಂಥ ಪಶ್ಚಿಮಘಟ್ಟದ ಹಕ್ಕಿಗಳು ಇರುವ ಊರು ಅದು. ನಾವು ತಿಪಟೂರಿನಷ್ಟೆ, ಚಿಕ್ಕನಾಯಕನಹಳ್ಳಿಯಲ್ಲೂ ಓಡಾಡುತ್ತಿದ್ದೆವು. ಡಾ.ರಘುಪತಿ, ಗಂಗಾಧರಯ್ಯ, ಉಜ್ಜಜ್ಜಿ, ಸತೀಶ್, ಗೌಸಿ, ರಾಜಪ್ಪ ಮುಂತಾದ ಗೆಳೆಯರು ಚಿಕ್ಕನಾಯಕಹಳ್ಳಿಯನ್ನೂ ಜೀವಂತವಾಗಿಟ್ಟಿದ್ದರು. ಒಮ್ಮೆ ಮೀನು, ಕೋಳಿ ತಿಂದು ರಹಮತ್ ಮೇಷ್ಟ್ರು ಜೊತೆ ತುಂಬು ಬೆಳದಿಂಗಳ ರಾತ್ರಿಯಲ್ಲಿ ಕಾಡ ಮಧ್ಯದಲ್ಲಿದ್ದ ಕನ್ನಡಿಯಂಥ ಕೆರೆಯಲ್ಲಿ ಈಜಿದ್ದೆವು.
ತಿಪಟೂರು ಒಂದು ಸುಂದರ ನೆನಪು.

ಅಲ್ಲಿ ಈಗ ಎನ್ಕೆ ಇಲ್ಲ. ಹಳ್ಳಿ ಸುರೇಶ್ ಇಲ್ಲ. ಆ ಊರನ್ನು ನೆನೆದಾಗಲೆಲ್ಲ. ಈ ಇಬ್ಬರು ಅಮೂಲ್ಯವಾದ ಗೆಳೆಯರು ಇನ್ನಿಲ್ಲದಂತೆ ಕಾಡುತ್ತಾರೆ. ಭೂಮಿ‌ ಸತೀಶ್ ಲೈಬ್ರರಿಯಲ್ಲಿ ತಿಂದ ಕಡ್ಲೆಪುರಿಗೆ ,ನಡೆಸಿದ ಚರ್ಚೆಗಳಿಗೆ ಲೆಕ್ಕವೇ ಇಲ್ಲ.(ಇಲ್ಲಿ ಆಲೂರು ದೊಡ್ಡನಿಂಗಪ್ಪ(ಮೈಸೂರಿನಿಂದ ಬರುತ್ತಿದ್ದರು),ಫೀನಿಕ್ಸ್ ರವಿ, ಶಶಿ,ನಾಗಣ್ಣ,ಕೃಷ್ಣ ,ಸಂತೋಷ್,ನಗರಸಭೆಯಲ್ಲಿದ್ದ ಪ್ರಕಾಶ್,ರಾಮಿ ಮುಂತಾದವರು ಸೇರುತ್ತಿದ್ದರು. ಇವರಲ್ಲಿ ಅನೇಕರು ಸೈದ್ಧಾಂತಿಕ ಕಾರಣಗಳಿಗಾಗಿ ಶಾಸಕರನ್ನು ವಿರೋಧಿಸುತ್ತಿದ್ದರು. ಆದರೆ ಅನೇಕ ವಿಚಾರಗಳನ್ನು ಮೆಚ್ಚುತ್ತಿದ್ದರು.

ಇವರ ಸಣ್ಣ ಕೋರಿಕೆಗೆ ನರಸಿಂಹರಾಜು ರಂಗ ಮಂದಿರ ತಂದರು ಶಾಸಕರು. ಶಾಸಕರು ಸಹ ಭಿನ್ನಮತವನ್ನು ಗೌರವಿಸುತ್ತಿದ್ದರು. ಶಾಸಕರ ಮೇಲೆ ಮೊನ್ನೆ ಸುಳ್ಳು ಆರೋಪ ಹೊರಿಸಿದಾಗ ಇವರುಗಳಲ್ಲಿ ಅನೇಕರು ಶಾಸಕರಿಗೆ ಸಾಂತ್ವನ ಹೇಳಿದರು. ಇಂಥ ಸಜ್ಜನಿಕೆಗಳೆ ಊರನ್ನು ಮಾನವೀಯವಾಗಿಸುವುದು. ಜೀವಂತವಾಗಿಸುವುದು)

ಶಾಸಕರು, ಅಧಿಕಾರಿ ಮಿತ್ರರು, ಊರಜನರು ಸಜ್ಜನಿಕೆಯ ಸಾಕಾರದಂತೆ ಕಾಣಿಸಿದ್ದರು ನನಗೆ. ಊರೊಟ್ಟಿನ ಕೆಲಸಗಳು ಮನುಷ್ಯರೊಳಗೆ ಮನುಷ್ಯತ್ವವನ್ನು ತುಂಬಿ ಪೊರೆಯುತ್ತವೆ.

ಇತ್ತೀಚೆಗೆ ಹಿರಿಯ ಗೆಳೆಯರಾದ ಕರೀಗೌಡರು ಹಲವು ಬಾರಿ ಚರ್ಚಿಸಿ ಏಕಾಏಕಿ ಕೆರೆ ಕ್ಲೀನು ಮಾಡುವ ಕ್ರಿಯೆಗೆ ಇಳಿದರು. ಅವರೀಗ ಗ್ರಾಮಾಂತರ ಜಿಲ್ಲೆಯಲ್ಲಿ ಕೆರೆಗೌಡರೆಂದು ಖ್ಯಾತಿ. ಅವರ ಅಭಿಮಾನಿ ಸಂಘಗಳು ಅನೇಕ ಊರುಗಳಲ್ಲಿ ಹುಟ್ಟಿಕೊಂಡಿವೆ. ಇಡೀ ಜಿಲ್ಲೆಯ ಜನ ಅವರಿಂದ ಸ್ಫೂರ್ತಿಗೊಂಡು ಕೆರೆ ಕಾಯಕಕ್ಕೆ, ನೀಲಗಿರಿ ತೆರವಿಗೆ ಇಳಿದಿದ್ದರು.

ದುರಂತವೆಂದರೆ ಕೆಲ ದುಷ್ಟರು ತಿಪಟೂರು ಶಾಸಕರು ಮತ್ತು ಜಿಲ್ಲಾಧಿಕಾರಿಗಳಾಗಿದ್ದ ಕರೀಗೌಡರ ಮೇಲೆ ಹುಸಿ ಆರೋಪ ಮಾಡಿ ಅವರನ್ನು ನೋಯಿಸಿದರು. ಈ ಆರೋಪಗಳನ್ನು ತಿಪಟೂರು ಶಾಸಕರ ರಾಜಕೀಯ ವಿರೋಧಿಗಳೂ ಸಹ ಸಾರಾಸಗಟಾಗಿ ವಿರೋಧಿಸಿದರು. ಜನ ಅವರ ಬೆಂಬಲಕ್ಕೆ ನಿಂತರು. ಕರೀಗೌಡರು ಅಧಿಕಾರಿಯಾದ್ದರಿಂದ ನೋವು ನುಂಗಿಕೊಂಡರು.

ನಮ್ಮ ಕೆರೆಕಾಯಕದಲ್ಲಿ ಇಡೀ ತಾಲ್ಲೂಕಿನ ಅಧಿಕಾರಿಗಳು ಭಾಗವಹಿಸಿದ್ದರು. ಅವರೆಲ್ಲರ ಹೆಸರು ಹೇಳಲಾಗದು ಇಲ್ಲಿ. ಆದರೆ ಎಸಿಯಾಗಿದ್ದ ಪಾಟೀಲರು, ತಹಶೀಲ್ದಾರ್ ಮಿತ್ರ ವಿಜಯ್ ಕುಮಾರ್, ಎಸಿಪಿ ಬೋರಲಿಂಗಯ್ಯನವರು, ಉಮೇಶ್, ನಟರಾಜ್, ನ್ಯಾಮಗೌಡ, ಮನಮೋಹನ್ ಮುಂತಾದವರನ್ನು ಮರೆಯಲಾರೆ.

ನಾನು ವಿಡಿಯೋ ,ಫೋಟೋಗಳನ್ನೂ ಇಟ್ಟಿರಲಿಲ್ಲ. ಅಳಿಸಲಾರದ ಲಿಪಿಯನು ಬರೆಯಬಾರದು ಎಂಬ ಉದ್ದೇಶದಿಂದ. ತಮ್ಮ ಸಂಗ್ರಹದಲ್ಲಿ ಅಳಿದುಳಿದ ಫೋಟೋಗಳನ್ನು ಗೆಳೆಯ ತಿಪಟೂರು ಗುರು ಕಳಿಸಿಕೊಟ್ಟಿದ್ದಾರೆ. ಇವುಗಳಲ್ಲಿ ಸಣ್ಣ ಮಾಹಿತಿ ಸಿಗಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?