ಪಬ್ಲಿಕ್ ಸ್ಟೋರಿ:
ತುಮಕೂರು ಜಿಲ್ಲೆಯಾದ್ಯಂತ ಮಟ್ಕಾ ಜೂಜಾಟ ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. 10 ದಿನಗಳೊಳಗೆ ಎರಡಕ್ಕಿಂತ ಹೆಚ್ಚು ಪ್ರಕರಣಗಳಿರುವ ಜೂಜುಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಿದ್ದತೆ ನಡೆಸಲಾಗಿದೆ. ರೌಡಿ ಷೀಟರ್ ಪಟ್ಟಿಗೆ ಸೇರಿಸಿ ಗಡಿಪಾರು ಮಾಡಲಾಗುವುದು ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು.
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮಗಳನ್ನು ಮದ್ಯ ಮುಕ್ತ ಗ್ರಾಮಗಳನ್ನಾಗಿಸಲು ಒತ್ತು ನೀಡಲಾಗುವುದು. ಕುಟುಂಬಗಳ ನೆಮ್ಮದಿ ಹಾಳು ಮಾಡುವ ಅಕ್ರಮ ಮದ್ಯ ಮಾರಾಟ ಕೇಂದ್ರಗಳನ್ನು ನಿಯಂತ್ರಿಸುವತ್ತ ಗಮನಹರಿಸಲಾಗುವುದು. ತಾಲ್ಲೂಕಿನ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು. ದೊಮ್ಮತಮರಿ, ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸ್ ಔಟ್ ಪೋಸ್ಟ್ ಆರಂಭಿಸುವ ಬಗ್ಗೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದರು.
ಡಿವೈಎಸ್ ಪಿ ಎಂ.ಪ್ರವೀಣ್ ಮಾತನಾಡಿ, ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಲಾಗುವುದು. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಜನ ಸಂಪರ್ಕ ಸಭೆಯಲ್ಲಿ ಪರಿಹರಿಸಿಕೊಳ್ಳಬಹುದು ಎಂದರು.
ತಾಲ್ಲೂಕಿನಾದ್ಯಂತ ಮಟ್ಕಾ ಜೂಜಾಟ ಹೆಚ್ಚಿದೆ. ಜೂಜಾಟವನ್ನು ಸಂಪೂರ್ಣವಾಗಿ ನಿಯಂತ್ರಿಸುವತ್ತ ಇಲಾಖೆ ಗಮನಹರಿಸಬೇಕು ಎಂದು ಬಿಜೆಪಿ ರೈತ ಮೋರ್ಚ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಒತ್ತಾಯಿಸಿದರು.
ಸರಗಳ್ಳತನ ಪ್ರಕರಣಗಳು ಹೆಚ್ಚಿವೆ. ಮಹಿಳೆಯರು ನಿರ್ಭಯವಾಗಿ ಸಂಚರಿಸುವ ವಾತಾವರಣ ನಿರ್ಮಿಸಬೇಕು ಎಂದು ಸುಶೀಲಮ್ಮ ಒತ್ತಾಯಿಸಿದರು.
ಸೋಲಾರ್ ನಲ್ಲಿ ಕತ್ತಲು
ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ರೈತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ದಲ್ಲಾಳಿಗಳು ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ. ಸರ್ಕಾರದ ಆದೇಶದಂತೆ ವಿದ್ಯುತ್ ಲೈನ್ ಎಳೆಯುವ ಜಮೀನುಗಳ ಮಾಲೀಕರಿಗೆ ಪರಿಹಾರ ಕೊಡಿಸಿಕೊಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ತಿಳಿಸಿದರು.
ಪಟ್ಟಣದ ಎಲ್ಲೆಂದರಲ್ಲಿ ಮಾಂಸದ ಅಂಗಡಿಗಳನ್ನು ತೆರೆಯಲಾಗಿದೆ. ಪಟ್ಟಣದ ಕೆಲವೆಡೆ ವಾಹನ ದಟ್ಟಣೆ ಹೆಚ್ಚಿದೆ ಎಂದು ರೈತ ಮುಖಂಡ ಕೃಷ್ಣರಾವ್ ತಿಳಿಸಿದರು.
ಸಂವಿಧಾನ, ಕಾನೂನಿನ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ದಲಿತ ಮುಖಂಡ ಸಿ.ಕೆ. ತಿಪ್ಪೇಸ್ವಾಮಿ ತಿಳಿಸಿದರು.
ಸರ್ಕಲ್ ಇನ್ ಸ್ಪೆಕ್ಟರ್ ಶ್ರೀಶೈಲಮೂರ್ತಿ, ನಾಗರಾಜು, ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ, ರಾಮಕೃಷ್ಣಯ್ಯ, ರಾಮಯ್ಯ, ಕಾಂತರಾಜು, ಮಂಜುನಾಥ್, ಮಂಗಳಗೌರಮ್ಮ ಉಪಸ್ಥಿತರಿದ್ದರು.
Comment here