Sunday, April 21, 2024
Google search engine
Homeಸಾಹಿತ್ಯ ಸಂವಾದಅಂತರಾಳದೇವನೂರು ಎಂಬ 'ಜೋತಮ್ಮ'

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್


ಅವರು ದಿಡೀರನೆ ರಂಗಕ್ಕೆ ನುಗ್ಗುತ್ತಾರೆ. ಖಾಕಿ ಧಿರಿಸು, ಹುರಿ ಮೀಸೆ, ಕೈಯಲ್ಲಿ ಲಾಟಿ. ಬೆಳಕು ಕಾಣದ ಆ ತಡಿಕೆಯ ಗುಡಿಸಲಿಗೆ ನುಗ್ಗಿದ ಅವರು ಪತ್ತೆ ಮಾಡಲು ಬಂದಿರುವುದು ಕದ್ದ ಕಡಲೆಕಾಯಿಯನ್ನು.

ಇಡೀ ಮನೆಯನ್ನು ಎಳೆದಾಡಿಬಿಡುವ ಆ ಪೊಲೀಸರು ಅಲ್ಲಿ ನೇತು ಹಾಕಿದ್ದ ಗಡಿಗೆಗೆ ತಮ್ಮ ಲಾಟಿ ಬೀಸು ಬೀಸುತ್ತಾರೆ. ಮಣ್ಣಿನ ಮಡಿಕೆ ಠಳಾರನೆ ಒಡೆದು ಚೂರಾಗುತ್ತದೆ.

ನಂತರ ಸಂಪೂರ್ಣ ನಿಶಬ್ದ.

ಒಂದು ಹಸಿವು ನೀಗಿಕೊಳ್ಳಲು, ಆ ದಿನದ ಬದುಕನ್ನು ದೂಡಿಬಿಡಲು ಮಾಡಿದ ಒಂದು ಪುಟ್ಟ ಕಳ್ಳತನದ ವಿರುದ್ಧ ನಡೆಯುವ ದೌರ್ಜನ್ಯ ಒಂದು ಕ್ಷಣ ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ.

ಆದರೆ ಅಲ್ಲಿ ನಿರ್ದೇಶಕರು ಆ ನೋವಿನ ಧಾರುಣತೆಯನ್ನು ಮುಟ್ಟಿಸಲು ಇನ್ನೂ ಒಂದು ಹೆಜ್ಜೆ ಮುಂದೆಹೋಗಿದ್ದರು. ಆ ಮಡಿಕೆಯೊಳಗೆ ಒಂದಿಷ್ಟು ಮೊಟ್ಟೆಗಳನ್ನು ಇರಿಸಿದ್ದರು ಲಾಟಿಯ ಬೀಸಿಗೆ ಮಡಿಕೆಯ ಜೊತೆಗೆ ಅದರಲ್ಲಿದ್ದ ಮೊಟ್ಟೆಗಳೂ ಒಡೆದುಹೋಗುತ್ತವೆ. ಒಡೆದ ಮಡಿಕೆ ಈ ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿ ಅತ್ತಿತ್ತ ತೂಗುತ್ತಿದೆ.

ಆ ಒಡೆದ ಮಡಿಕೆಯಿಂದ ಘಟನೆ ಮುಗಿದು ಸಾಕಷ್ಟು ಕಾಲವಾದರೂ ಆ ಮೊಟ್ಟೆಯ ಲೋಳೆ ಸೋರುತ್ತಾ ನಾಟಕದ ವಿಷಾದವನ್ನು ಪ್ರತಿಯೊಬ್ಬರ ಎದೆಗೂ ಇಳಿಸುತ್ತಿದೆ.

ಇದು ‘ಒಡಲಾಳ’.

ದೇವನೂರು ಮಹಾದೇವರ ‘ಒಡಲಾಳ’.

ಸಿ ಜಿ ಕೃಷ್ಣಸ್ವಾಮಿ ಈ ಕಥೆಯನ್ನು ರಂಗಕ್ಕೇರಿಸಿದ್ದರು. ನಾಟಕ ನೋಡಿ ಬಂದ ನಂತರವೂ ಯಾಕೋ ಅಲ್ಲಿ ಜಿನುಗಿದ ಆ ಲೋಳೆಯ ರಸ ನನ್ನನ್ನು ಕಾಡಲು ಆರಂಭಿಸಿತ್ತು. ಆ ದಿನಕ್ಕೇ ಅದು ಮುಗಿಯಲಿಲ್ಲ. ಹಲವು ದಿನಗಳ ನಂತರವೂ ಅದು ನನ್ನೊಳಗೆ ಒಂದು ವಿಷಾದ ರಾಗವನ್ನು ಹುಟ್ಟುಹಾಕುತ್ತಲೇ ಇತ್ತು.

ದೇವನೂರು ಮಹಾದೇವ ಒಡಲಾಳ ಬರೆದು ದಶಕಗಳು ಕಳೆದಿವೆ. ಸಿಜಿಕೆ ಅದನ್ನು ನಾಟಕವಾಗಿಸಿಯೂ ದಶಕಗಳಾಗಿದೆ.

ಆದರೆ ಆ ನೋವಿನ ಎಳೆ ನನ್ನೊಳಗೆ ಜೀಕುವುದನ್ನು ಮಾತ್ರ ನಿಲ್ಲಿಸಿಲ್ಲ. ಇದು ನಿನ್ನೆ ನಡೆದ ಘಟನೆಯೇನೋ ಎಂಬಂತೆ ಒಳಗೆ ತೂಗುತ್ತಲೇ ಇದೆ
ಮೊನ್ನೆ ‘ಗೋವಿನ ಹಾಡು’ ಓದುತ್ತಿದ್ದೆ. ಅದು ಮರು ಓದು. ಪುಣ್ಯಕೋಟಿ ಎಂಬ ಗೋವಿನ ಬಗ್ಗೆಯೂ, ಅರ್ಭುತನೆಂಬ ಹುಲಿಯ ಬಗ್ಗೆಯೂ ಈಗ ಮರುವ್ಯಾಖ್ಯಾನ ನಡೆಯುತ್ತಿರುವ ಹೊತ್ತು.

‘ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿ ರಕ್ತವಿದೆಕೋ..’ ಎನ್ನುವ ಸಾಲುಗಳನ್ನು ಓದುತ್ತಿದ್ದಂತೆ ನನಗೆ ಥಟ್ಟನೆ ನೆನಪಾದದ್ದು ದೇವನೂರು ಮಹಾದೇವ.

ನನಗೆ ಚೆನ್ನಾಗಿ ನೆನಪಿದೆ. ‘ದ್ಯಾವನೂರು’ ಕೃತಿಯ ಬೆನ್ನಪುಟದಲ್ಲಿ ದೇವನೂರು ಕಯ್ಯಾರೆ ಬರೆದ ಈ ಸಾಲುಗಳು ಅಚ್ಚಾಗಿದ್ದವು. ಹಾಗೆ ಬರೆಯುವ ಮೂಲಕ ಆ ಗೋವಿನ ಹಾಡಿಗೆ ಇನ್ನೊಂದೇ ಅರ್ಥ ಬಂದುಬಿಟ್ಟಿತ್ತು. ಅದು ಗೋವಿನ ಹಾಡಾಗಿ ಮಾತ್ರ ಉಳಿದಿರಲಿಲ್ಲ. ಗಾಯಗೊಂಡ ಭಾರತದ ಕಥೆಯಾಗಿಯೂ ಬದಲಾಗಿ ಹೋಗಿತ್ತು

ದೇವನೂರು ಗಾಯಗಳನ್ನು ಪರಿಚಯಿಸಿದ ಕಾರಣಕ್ಕೇ ನನಗೆ ಮುಖ್ಯರು.

ದೇವನೂರರ ಸಾಹಿತ್ಯದ್ದು ಒಂದು ತೂಕವಾದರೆ ಅವರ ಚಿಂತನೆಗಳದ್ದೇ ಇನ್ನೊಂದು ತೂಕ.

ನಾನು ಸದಾ ಮುಖಾಮುಖಿಯಾಗುತ್ತಾ ಹೋದದ್ದು ಅವರ ಚಿಂತನೆಗಳ ಜೊತೆಗೇ.

ಕೋಮುವಾದಕ್ಕೆ ರೆಕ್ಕೆ ಬಂದು ಅದು ಇಡೀ ದೇಶಕ್ಕೆ ಕೊಳ್ಳಿ ಇಡುತ್ತಿದ್ದ ದಿನಗಳು ಅವು. ಎಲ್ಲೋ ದೂರದಲ್ಲಿ ಮಾತ್ರ ಕೋಮು ಗಲಭೆಯಾಗುತ್ತವೆ ಎಂದು ನಂಬಿದ್ದ ಕಾಲದಲ್ಲಿ ಮನೆ ಬಾಗಿಲಿಗೇ ಬಂದ ಗಲಭೆಗಳು ನಮ್ಮನ್ನು ತಲ್ಲಣಿಸಿಹಾಕಿತ್ತು.

ಕಣ್ಣೆದುರಿಗೇ ಒಂದು ಕೋಮು ರಾಜಕೀಯ ತಳ ಊರುತ್ತಾ, ಸ್ಥಿರವಾಗುತ್ತಾ, ಪ್ರಬಲವಾಗುತ್ತಾ, ದೇಶದ ಮನಸ್ಥಿತಿ ಬದಲಾಯಿಸುತ್ತಾ ಹೋಗುತ್ತಿದ್ದುದನ್ನು ಕಂಡು ಅದನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂದು ತಲ್ಲಣಿಸಿದ್ದೆವು.

ದೇವನೂರು ಅವರು ನಮಗೆ ಆಸರೆಯಾಗಿ ಒದಗಿದ್ದು ಆಗಲೇ.

ಅವರು ಹೇಳುತ್ತಾರೆ-“ದಾಸ್ತೋವಸ್ಕಿಯ ‘ಕ್ರೈಮ್ ಅಂಡ್ ಪನಿಶ್ ಮೆಂಟ್ ‘ ಕೃತಿಯನ್ನು ಎದುರಿಗಿಟ್ಟುಕೊಂಡು ಅವರು ಈ ರಾಜಕಾರಣದ ಹಿಂದಿನ ರಾಜಕಾರಣವನ್ನು ಬಿಡಿಸಿಡುತ್ತಾ ಹೋದರು.

ಆ ಕಾದಂಬರಿಯ ನಾಯಕ ರೋಡಿಯಾನ್ ಎರಡು ಕೊಲೆ ಮಾಡುತ್ತಾನೆ. ಒಂದು ಕೊಲೆ ಸಂಚು ಹೂಡಿ ಮಾಡಿದ ಕೊಲೆ, ಇನ್ನೊಂದು ಆ ಕೊಲೆ ಮಾಡುವಾಗ ನೋಡಿದ ಸಾಕ್ಷಿಯದ್ದು. ಒಂದು ಪ್ರಜ್ಞಾಪೂರ್ವಕವಾಗಿ ಮಾಡಿದ ಕೊಲೆಯಾದರೆ, ಇನ್ನೊಂದು ಅಪ್ರಜ್ಞಾಪೂರ್ವಕವಾಗಿ ಮಾಡಿದ್ದು. ಆದರೆ ಪ್ರಜ್ಞಾಪೂರ್ವಕವಾಗಿ ಮಾಡಿದ ಕೊಲೆಯ ಬಗ್ಗೆ ವಿಹ್ವಲಗೊಳ್ಳುವ ಆತ ಇನ್ನೊಂದು ಕೊಲೆಯ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ.

“ಈ ಕಾದಂಬರಿಯ ಎಲ್ಲಾ ವಿವರಗಳನ್ನು ಮರೆತರೂ ಈ ವಿಲಕ್ಷಣ ನನ್ನ ಮನದಲ್ಲಿ ಉಳಿಯಿತು. ಕೊಲೆ, ಹಿಂಸೆಯನ್ನು ಪ್ರಜ್ಞಾಪೂರ್ವಕವಾಗಿ ಯೋಜನೆ ಮಾಡಿ ಮಾಡುವುದಕ್ಕೂ, ಉದ್ಧೇಶರಹಿತವಾಗಿ ಕೊಲೆ ಹಿಂಸೆ ಆಗುವುದಕ್ಕೂ ಇರುವ ಅಗಾಧ ವ್ಯತ್ಯಾಸವನ್ನು ಅದು ನನಗೆ ಮನಗಾಣಿಸಿತ್ತು. ಉದ್ಧೇಶರಹಿತ ನೂರು ಕೊಲೆಗಳ ಮುಂದೆ,ಕೊಲೆ-ಹಿಂಸೆಯನ್ನು ತಾತ್ವಿಕಗೊಳಿಸಿದ ಒಂದೇ ಕೊಲೆ ಸಮ ಸಮ ಅನಿಸಿಬಿಟ್ಟಿತು”.

ಸಮಾಜದೊಳಗಿನ ಒಂದು ಹೊಸ ಚಲನೆಯನ್ನು ಇಡೀ ದೇಶ ತನ್ನದಾಗಿಸಿಕೊಳ್ಳಲು ನಿರೀಕ್ಷಿಸುತ್ತಿದ್ದಾಗಲೇ ಬಿಎಸ್ಪಿ, ಬಿಜೆಪಿಯ ಜೊತೆ ಒಪ್ಪಂದ ಮಾಡಿಕೊಂಡು ಅಧಿಕಾರದ ಗದ್ದುಗೆಗೇರಿಬಿಟ್ಟಿತ್ತು.

ಬಿಎಸ್ಪಿ ಪಕ್ಷವು ಹೊಂದಾಣಿಕೆಯ ಪರವಾಗಿ ಸಾಕಷ್ಟು ವಾದಗಳನ್ನು ಮಂಡಿಸುತ್ತಿದ್ದಾಗ ದೇವನೂರು ಒಂದು ಪ್ರಶ್ನೆ ಕೇಳುತ್ತಾರೆ-

“ಡಾ. ಅಂಬೇಡ್ಕರ್ ತನ್ನ ಕಟು ವ್ಯಕ್ತಿತ್ವಕ್ಕೆ, ಆದರ್ಶಗಳಿಗೆ ತಿಲಾಂಜಲಿ ಬಿಟ್ಟು ಅವಕಾಶವಾದಿ ಹೊಂದಾಣಿಕೆ ರಾಜಕೀಯ ಮಾಡಿದ್ದರೆ ಏನಾಗುತ್ತಿತ್ತು? ಅವರು ಸತ್ತ ದಿನವೇ ಸತ್ತು ಹೋಗುತ್ತಿದ್ದರು”.

ಇಂತಹದ್ದೇ ಪ್ರಶ್ನೆಗಳು ನನಗೆ ಎದ್ದದ್ದು ನವರಾತ್ರಿಯ ಸಂದರ್ಭದಲ್ಲಿ.

ದಸರಾ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಧಾನ ಭಾಷಣ ಮಾಡಿದ ಹಂಪ ನಾಗರಾಜಯ್ಯ ಅವರು ‘ದಸರೆ ಎನ್ನುವುದು ಆರ್ಯರು ದ್ರಾವಿಡರನ್ನು ಸಂಹಾರ ಮಾಡಿದ ಕಥೆ. ಅಂತಹದರಲ್ಲಿ ದ್ರಾವಿಡರಾದ ನಾವು ದಸರೆಯನ್ನು ವಿರೋಧಿಸಬೇಕೇ ಹೊರತು ಆಚರಿಸುವುದು ತಪ್ಪು’ ಎಂದಿದ್ದರು. ಹೊಸ ಪಾಠವೊಂದು ನಮಗೆ ಸಿಕ್ಕಿತ್ತು.

ನಾನು ಅಲ್ಲಿಂದ ಗುಲ್ಬರ್ಗಾಗೆ ಹೋದೆ.

ಅಲ್ಲಿ ಕೋಣಗಳ ಬಲಿ. ನೂರಾರು ಕೋಣಗಳನ್ನು ಹಾಡಗಹಲೇ ಕೊಂದು ಹಾಕುವ ಆಚರಣೆಗಳು ನನ್ನೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಆಗಲೇ ದೇವನೂರು ಅಸ್ಪೃಶ್ಯನು ಬ್ರಾಹ್ಮಣ ಕನ್ಯೆಯನ್ನು ಪ್ರೀತಿಸುವ ಕಥೆ ವಿವರಿಸಿ ‘ಕೋಣವಾದ ತಮ್ಮವನನ್ನೇ ನಮ್ಮವರು ಬಲಿ ಕೊಡುತ್ತಾ, ಅಷ್ಟೇ ಅಲ್ಲ ತಿಂದು ಬಂದಿದ್ದಾರೆ. ಇಂದು ಕೋಣ ಬಲಿಯು ಮಾಂಸ ಮಾತ್ರವಾಗಿರಬಹುದು. ಆದರೆ ಹಿಂದೆ, ನಮ್ಮವರನ್ನು ನಮ್ಮಿಂದಲೇ ಕೊಲ್ಲಿಸುವುದನ್ನು ಈ ಕತೆ ಮಾಡಿಸಿತ್ತು. ವರ್ಣಸಂಕರವನ್ನು ತಡೆದಿತ್ತು’ ಎನ್ನುತ್ತಾರೆ.

ಧರ್ಮಸ್ಥಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೇ ಕಾರಣವಾಗಿ ಬಂಡಾಯ ಸಾಹಿತ್ಯ ಸಂಘಟನೆ ಮೂಡಿ ಬಂದಾಗ ‘ಹೀಗೇಕೆ?’ ಎಂದು ಅನಿಸಿತ್ತು.

ಕನ್ನಡ ಸಾಹಿತ್ಯ ಪರಿಷತ್ತನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂದು ಪ್ರಯತ್ನಿಸುತ್ತಿರುವಾಗ ದೇವನೂರರು “ಸಾಹಿತ್ಯ ಪರಿಷತ್ತು, ಅದಕ್ಕಿರುವ ರಚನೆಯಲ್ಲಿ ಎಂದೂ ನಮ್ಮಂಥವರ ಆಸೆಗಳನ್ನು ಮುಟ್ಟಲಾರದು. ನಮ್ಮ ಆಸೆಗಳ ಪೂರೈಕೆಗಾಗಿ ಅದರ ಕಡೆ ನೋಡುವುದೇ ತಪ್ಪು, ಮೂರ್ಖತನ ಇತ್ಯಾದಿ. ಪರಿಷತ್ ನಿಲುಗಡೆಯಾದ ಸಾಹಿತ್ಯವನ್ನು ಮೆರೆಸುತ್ತ ಬಂದಿದೆ. ಅದರಿಂದ ಆಗುವುದು ಅದೇನೆ. ನಮಗೆ ಬೇಕಾಗಿರುವುದು ನಡಿಗೆ” ಎಂದಿದ್ದರು.

ನನ್ನನ್ನು ಮ್ಯಾಕ್ಬೆತ್ ಓದು ಆವರಿಸಿಕೊಂಡಿದ್ದ ದಿನಗಳು. ರಾಮಚಂದ್ರ ದೇವರ ಅನುವಾದ ಅದು.

ಇಡೀ ಅರೇಬಿಯಾದ ಸುಗಂಧ ದ್ರವ್ಯಗಳೆಲ್ಲವೂ ನನ್ನ ಕೈಯಿನ ಕಲೆಗಳನ್ನು ಹೋಗಲಾಡಿಸಲಾರದೇ ..? ಎಂದು ಲೇಡಿ ಮ್ಯಾಕ್ಬೆತ್ ನಿಡುಸುಯ್ಯುತ್ತಾಳೆ.

ಆ ರಕ್ತದ ಕಲೆ, ತೊಳೆದರೂ ಹೋಗದ ರಕ್ತದ ಕಲೆಗಳು ನನ್ನ ಮನಸ್ಸನ್ನು ತಟ್ಟಿ ನಿಂತುಬಿಟ್ಟಿತ್ತು.

ಆಗಲೇ ದೇವನೂರು ತಮ್ಮ ‘ಕುಸುಮಬಾಲೆ’ ಹುಟ್ಟಿದ್ದರ ಪ್ರೇರೇಪಣೆ ಏನು ಅಂತ ಹುಡುಕುತ್ತಾ ಇದ್ದರು.

ಅಂದಾಜಾಗಿ ಅವರ ಮುಂದೆ ಮೂರು ಪ್ರೇರೇಪಣೆಗಳಿದ್ದವು. ಅದರಲ್ಲಿ ಒಂದು ಅವರ ದಲಿತ ಸ್ನೇಹಿತನೊಬ್ಬನ ಕೊಲೆ. “ದಲಿತ ಸಂಘಟನೆಯಲ್ಲಿದ್ದ ದಲಿತನ ಕೊಲೆ. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು ಎಂದಳು. ಆ ಕ್ಷಣ ನನಗೆ ‘ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೇ?’ ಅನ್ನಿಸಿ ಅದು ಒಳಗೇ ಬೆಳೆಯತೊಡಗಿತು” ಎನ್ನುತ್ತಾರೆ.

ನನ್ನೊಳಗೆ, ನನ್ನ ದಾರಿಯುದ್ದಕ್ಕೂ ಎದ್ದ ಎಷ್ಟೊಂದು ಪ್ರಶ್ನೆಗಳಿವೆ.

ಆ ಪ್ರಶ್ನೆಗಳಿಗೆ ದೇವನೂರು ಉತ್ತರವಾಗಿ ಒದಗಿಬಂದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಅವರು ನನಗೆ ಮುಖ್ಯ.

ದೇವನೂರು ಅವರು ‘ಕುಸುಮಬಾಲೆ’ ಕೃತಿಯಲ್ಲಿ ರೂಪಿಸಿದ ಜೋತಮ್ಮಗಳ ಕಥೆಗೆ ಬರುತ್ತೇನೆ.

“ರಾತ್ರಿ ದೀಪಗಳನ್ನು ಆರಿಸಿದ ನಂತರ ಈ ದೀಪಗಳ ಆತ್ಮಗಳು ಹಳ್ಳಿಯ ಒಂದು ಸ್ಥಳದಲ್ಲಿ, ಮರವೊಂದರ ಕೆಳಗಿರುವ ಮಂಟಪದಲ್ಲಿ ಸೇರಿ ತಂತಮ್ಮ ಮನೆಗಳಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಹಂಚಿಕೊಳ್ಳುತ್ತವೆ ಎನ್ನುವುದು ಈ ಕಥೆ. ಜನಪದ ಕಥೆಯಲ್ಲಿ ಇದನ್ನು ತಮಾಷೆಗೆಂದು ಬಳಸಲಾಗಿದೆ. ಆದರೆ ನಿಜವನ್ನು ನುಡಿಸುವ ಆತ್ಮವಾಗಿ ನನಗೆ ಇದು ಕಾಣಿಸಿತು” ಎನ್ನುತ್ತಾರೆ ದೇವನೂರು.

ನನಗೂ ಅಷ್ಟೆ, ದೇವನೂರು ಆ ಜೋತಮ್ಮಗಳಂತೆಯೇ ಕಂಡಿದ್ದಾರೆ. ನಿಜವನ್ನು ನುಡಿಸುವ ಆತ್ಮದಂತೆ..

‘ಎದೆಗೆ ಬಿದ್ದ ಅಕ್ಷರ’ದ ಓಣಿಯಲ್ಲಿ ನಡೆಯುತ್ತಾ ಇದ್ದೆ. ಹಾಗಾಗಿ ಈ ಎಲ್ಲವೂ ನನ್ನೆದುರು ಎದ್ದು ಬಂದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?