Saturday, September 7, 2024
Google search engine
Homeಸಾಹಿತ್ಯ ಸಂವಾದಅಂತರಾಳನಿನ್ನ ಕೈಲಾಡೋ ಗೊಂಬೆ ನಾನಯ್ಯ...

ನಿನ್ನ ಕೈಲಾಡೋ ಗೊಂಬೆ ನಾನಯ್ಯ…

ಸಿ ಎನ್ ಎನ್ ಚಾನಲ್ ನ ಅಟ್ಲಾಂಟ ಪ್ರಧಾನ ಕಚೇರಿಯಲ್ಲಿ ಜಿ.ಎನ್.ಮೋಹನ್

ಜಿ.ಎನ್.ಮೋಹನ್


ಶ್ರೀದೇವಿ ಧಡ ಧಡ ಹೆಜ್ಜೆ ಹಾಕುತ್ತಾ ನನ್ನ ಕ್ಯಾಬಿನ್ ನತ್ತ ಬರುತ್ತಿರುವುದನ್ನು ನೋಡಿದಾಗಲೇ ನನಗೆ ಗೊತ್ತಾಯ್ತು. ಇವತ್ತೇನೋ ಗ್ರಹಚಾರ ಕಾದಿದೆ ಅಂತ.

ಕ್ಯಾಬಿನ್ ಒಳಗೆ ಬಂದವಳೇ ‘ಪ್ರೋಮೋದಲ್ಲಿರುವ ಆ ಲೈನ್ ತೆಗೀಲೇಬೇಕು’ ಅಂದಳು.

ನಾನು ‘ಯಾವ ಪ್ರೋಮೋ’ ಎಂದು ಏನೂ ಗೊತ್ತಿಲ್ಲದವನಂತೆ ಕೇಳಿದೆ.

‘ಅದೇ ನ್ಯೂಸ್ ರೀಡರ್ ಗಳು ಬೇಕು ಅಂತ ಬರ್ತಾ ಇದೆಯಲ್ಲ ಆ ಪ್ರೋಮೋ.. ನೋಡೋದಿಕ್ಕೆ ಚಂದ ಇರ್ಬೇಕು ಅಂದರೇನು ಸಾರ್. ಚಂದ ಇಲ್ದೆ ಇದ್ರೂ ನ್ಯೂಸ್ ಗೊತ್ತಿದ್ದರೆ ಸಾಕಾಗಲ್ವಾ. ನೀವೂ ಹೀಗೆ ಯೋಚನೆ ಮಾಡ್ತೀರಾ ಅಂದುಕೊಂಡಿರಲಿಲ್ಲ’ ಅಂತ ಒಂದೊಂದೇ ಬುಲೆಟ್ ಅನ್ನು ಎದೆಗೆ ಅಪ್ಪಳಿಸುತ್ತಾ ಹೋದಳು.

ಲೈಫ್ ಜ್ಯಾಕೆಟ್ ಧರಿಸದೇ ಇವತ್ತು ಯಾವ್ ನ್ಯೂಸ್ ಪೇಪರ್, ಚಾನಲ್ ನ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ!

ನಾನು ಶ್ರೀದೇವಿ ಹೇಳಿದ ಕಾರಣಕ್ಕೆ ಬುದ್ದಿ ಬಂತೇನೋ ಎಂಬಂತೆ ‘ಹೋಗ್ಲಿ ಬಿಡು, ಸರಿ ಮಾಡೋಣ’ ಅಂದೆ.

ಆಗಿದ್ದದ್ದು ಇಷ್ಟು. ಈಟಿವಿಗೆ ಆ ದಯಾಮಯನು ಕೊಟ್ಟ ಶಾಪಗಳಲ್ಲಿ ಮೊದಲನೆಯದು ನಿಮಗೆ ಎಂದೆಂದೂ ನ್ಯೂಸ್ ರೀಡರ್ ಗಳು ಸಿಗದೇ ಇರಲಿ ಅನ್ನೋದು.

ನ್ಯೂಸ್ ರೀಡರ್ ಗಳು ಒಂದು ದಿನ ಬವಳಿ ಬಿದ್ದರೆ, ನಾಕು ದಿನ ಊರಿಗೆ ಹೋದರೆ, ಇದ್ದವರೂ ಮೂಗು ಮೇಲೇರಿಸಿಕೊಂಡು ನಡೆದಾಡಿದರೆ ಡೆಸ್ಕ್ ನಲ್ಲಿ ಪೀಕಲಾಟ.

ಇದ್ದ ಐದು ಬುಲೆಟಿನ್ ಗೂ ನ್ಯೂಸ್ ಓದುವವರು ಇಲ್ಲ ಅನ್ನೋ ಪರಿಸ್ಥಿತಿ. ಹಾಗಾಗಿ ರಾಜ್ಯಾದ್ಯಂತ ಬಲೆ ಬೀಸಿಯಾದರೂ ಸಮಸ್ಯೆ ರಿಪೇರಿ ಮಾಡಿಯೇ ಸೈ ಅಂತ ಸಿದ್ಧನಾಗಿಬಿಟ್ಟೆ.

ಅದಕ್ಕೆ ಮೊದಲ ಹೆಜ್ಜೆಯಾಗಿ ತೆರೆಯ ಮೇಲೆ ಕಾಣಿಸಿಕೊಂಡದ್ದೇ ’25 ವರ್ಷ ದಾಟಿರದ, ಪದವಿ ವ್ಯಾಸಂಗ ಮಾಡಿರುವ, ವಿಷಯ ಜ್ಞಾನ, ಸ್ಪಷ್ಟ ಉಚ್ಚಾರಣೆ ಗೊತ್ತಿರುವ, ನೋಡಲು ಚೆನ್ನಾಗಿರುವ ಯುವಕ/ಯುವತಿಯರು ಬೇಕಾಗಿದ್ದಾರೆ’ ಅನ್ನೋ ಪ್ರೋಮೋ..

ಆಗ ಎದ್ದದ್ದೇ ಈ ಚಂಡಮಾರುತ. ಗ್ರಾಫಿಕ್ಸ್ ಮುಖ್ಯಸ್ಥರನ್ನು ಕರೆಸಿ ‘ನೋಡಲು ಚೆನ್ನಾಗಿರುವ’ ಅನ್ನೋದನ್ನ ತೆಗೆದುಬಿಡಿ ಎಂದೆ.

ನಿಜಕ್ಕೂ ಆಗ ಚಂಡಮಾರುತದ ಕಾಲ. ಅದೇ ಕಾಲಕ್ಕೆ ನಾನು ಅಟ್ಲಾಂಟದ ಸಿಎನ್ ಎನ್ ಕಚೇರಿಯಲ್ಲಿ ನ್ಯೂಸ್ ರೀಡರ್ ಜೇನ್ ವೆರ್ಗೀ ಮುಂದೆ ಕುಳಿತಿದ್ದೆ.

ಅಮೆರಿಕಾವನ್ನು ‘ಕತ್ರಿನಾ’ ಚಂಡಮಾರುತ ಕೊಚ್ಚಿಹಾಕಿತ್ತು. ಈಗ ‘ವಿಲ್ಮಾ’ ಅದೇ ಸಾವಿನ ಸದ್ದಿನೊಂದಿಗೆ ಫ್ಲೋರಿಡಾದ ಮೂಲಕ ಅಮೆರಿಕಾವನ್ನು ಅಪ್ಪಳಿಸುತ್ತಿತ್ತು.

ನನ್ನ ಮಂಗಳೂರು ಗೆಳೆಯ ‘ಯಾಕೆ, ಈ ಚಂಡಮಾರುತಗಳಿಗೆ ಕತ್ರಿನಾ, ರೀಟಾ, ವಿಲ್ಮಾ ಅಂತ ಹುಡುಗಿಯರ ಹೆಸರೇ ಇಡುತ್ತಾರೆ’ ಅಂತ ಕೇಳಿದ್ದ.

ವೆರ್ಗೀ ಜೊತೆ ಮಾತನಾಡುತ್ತಾ ಇದ್ದವನಿಗೆ ಅದು ತಟಕ್ಕನೆ ನೆನಪಿಗೆ ಬಂತು. ಕೇಳಿಯೂಬಿಟ್ಟೆ.

ಆಕೆ ಮುಗುಳ್ನಗುತ್ತಾ ‘ಅದು ಹುಡುಗಿಯರ ಹೆಸರಲ್ಲ. ಲ್ಯಾಟಿನ್ ವರ್ಣಮಾಲೆಯ ಅಕ್ಷರಗಳು. ಲ್ಯಾಟಿನ್ ನಲ್ಲಿ ‘K’ ಅಂದರೆ ‘ಕತ್ರೀನಾ’, ‘W’ ಅಂದರೆ ‘ವಿಲ್ಮಾ’ ಅಂತ ಅಷ್ಟೇ’ ಅಂದರು.

ನನ್ನ ಸಮಸ್ಯೆ ಇನ್ನೂ ಮುಗಿದಿರಲಿಲ್ಲ.

ಏಕೆಂದರೆ ಲ್ಯಾಟಿನ್ ನಲ್ಲಿ ಇಂಗ್ಲಿಷ್ ನಂತೆ X,Y,Z ಇಲ್ಲ. Wನೊಂದಿಗೆ ಮುಗಿಯುತ್ತದೆ. ‘ಹಾಗಾದರೆ ಮುಂದಿನ ಚಂಡಮಾರುತಗಳ ಗತಿ. ಅದಕ್ಕೇನು ಮಾಡುತ್ತೀರಾ?’ ಅಂದೆ.

ಆಕೆ ಇನ್ನು ಮುಂದೆ ಬರುವ ಚಂಡಮಾರುತಕ್ಕೆ ಗ್ರೀಕ್ ವರ್ಣ ಮಾಲೆಯ ಹೆಸರು ಇಡಬೇಕು ಅಂತ ನಿರ್ಧರಿಸಿ ಆಗಿದೆ. ಮುಂದೆ ಬರುವ ಮೊದಲ ಚಂಡಮಾರುತದ ಹೆಸರು ಆಲ್ಫಾ, ನಂತರ ಬೀಟಾ, ಆಮೇಲೆನದ್ದು ತೀಟಾ ಅಂದರು.

ಚಾನಲ್ ಒಳಗೆ ಕಾಲಿಟ್ಟು ಆಗಲೇ ವರ್ಷಗಳೇ ಕಳೆದಿತ್ತು. ನ್ಯೂಸ್ ರೂಂ, ನ್ಯೂಸ್ ರೀಡರ್ ರೂಂ ಎರಡರಲ್ಲಿಯೂ ಸುದ್ದಿ ವಾಸನೆ ಹಿಡಿಯುವ ಮೂಗುಗಳು ಕಾಣದೆ ಕಂಗಾಲಾಗಿ ಕುಳಿತಿದ್ದೆ.

‘ನಿನ್ನ ಕೈಲಾಡೋ ಗೊಂಬೆ ನಾನಯ್ಯ, ಗೊಂಬೆ ನಾನಯ್ಯ..’ ಅಂತ ಚೆಂದವಾಗಿ ಸುದ್ದಿ ಓದುತ್ತಿದ್ದ ಸಂತತಿಯೇ ಸಾವಿರವಿತ್ತು.

ಈಗ ನನ್ನ ಕಿವಿಯನ್ನು ನಾನೇ ನಂಬದ ಸ್ಥಿತಿಗೆ ಬಂದಿದ್ದೆ. ಒಳ್ಳೆ ಶತಾವಧಾನದ ಪಟ್ಟು ಹಾಗೂ ಗುಟ್ಟು ಎಲ್ಲಾ ಗುತ್ತಿರುವವಳಂತೆ ವೆರ್ಗೀ ಬಳಿ ಎಲ್ಲಕ್ಕೂ ಉತ್ತರವಿತ್ತು.

ನಾನು ಕುತೂಹಲದಿಂದ ಕೇಳಿದೆ. ‘ನಿಮ್ಮ ದಿನಚರಿ ಹೇಗಿರುತ್ತೆ. ನ್ಯೂಸ್ ಗೆ ಹೇಗೆ ಪ್ರಿಪೇರ್ ಆಗ್ತೀರಾ’ ಅಂತ.

ಬೆಳಗ್ಗೆ ನಾಲ್ಕಕ್ಕೆ ಎದ್ದು ವೆಬ್ ಸೈಟ್, ಪೇಪರ್, ಸಂಪಾದಕೀಯ ಎಲ್ಲಾ ತಿರುವಿ ಹಾಕಿ ಆ ದಿನವನ್ನ ತಿಳಿದುಕೊಳ್ಳುವುದು ಮೊದಲ ಕೆಲಸ.

ಆಫೀಸಿಗೆ ಬಂದ ನಂತರ ಬುಲೆಟಿನ್ ಪ್ರೊಡ್ಯೂಸರ್ ಜೊತೆ ಚರ್ಚಿಸಿ ಸ್ಕ್ರಿಪ್ಟ್ ಬರೆಯಲು, ಪ್ಯಾಕೇಜ್ ಎಡಿಟ್ ಮಾಡಲು ಕೂಡುವುದು. ಬುಲೆಟಿನ್ ನ ರನ್ ಆರ್ಡರ್ ರೆಡಿ ಆಗುತ್ತಿದ್ದಂತೆ ವಾಯ್ಸ್ ಎಕ್ಸರ್ಸೈಸ್ ತೆರಳಿ ಐದು ನಿಮಿಷದಲ್ಲಿ ಸ್ಟುಡಿಯೋ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವುದು…

ನ್ಯೂಸ್ ರೂಂ ನಲ್ಲಿರುವವರಿಗೆ ನ್ಯೂಸ್ ಜ್ಞಾನ ಇರಬೇಕು ಅನ್ನುವುದನ್ನು ಆಕೆ ನನಗೆ ಮನದಟ್ಟು ಮಾಡಿಕೊಡುತ್ತಾ ಇದ್ದರು.

ತಕ್ಷಣ ನನಗೆ ಬಾಲು ನೆನಪಿಗೆ ಬಂದ. ನ್ಯೂಸ್ ಓದಿ ಮೀಟಿಂಗ್ ಗೆ ಬರುವ ನ್ಯೂಸ್ ರೀಡರ್ ಗಳಿಗೆ ಬಾಲು ಕೇಳುತ್ತಿದ್ದ ಮೊದಲ ಪ್ರಶ್ನೆ ‘ಇವತ್ತಿನ ಐದು ಹೆಡ್ ಲೈನ್ ಯಾವುದಿತ್ತು’ ಅಂತ.

ನನಗೆ ಇದು ತುಂಬಾ ಕ್ರೂರವಾದ ಪ್ರಶ್ನೆ ಅನಿಸುತ್ತಿತ್ತು. ಆದರೆ ಆಶ್ಚರ್ಯ, ಆದರೆ ಅಷ್ಟೇ ನಿಜ. ಆಗಷ್ಟೇ ತಾವೇ ಎರಡು ಬಾರಿ ಓದಿರುವ ಸುದ್ದಿಯ ಐದು ಹೆಡ್ ಲೈನ್ ಗಳು ಬಹುತೇಕರಿಗೆ ನೆನಪಿಗೆ ಬರುತ್ತಿರಲಿಲ್ಲ.

ನ್ಯೂಸ್ ಸೆನ್ಸ್ ಅನ್ನೋದು ನ್ಯೂಸ್ ರೂಂಗಳಲ್ಲಿ ಸಿಗುವ ಅಪರೂಪದ ಪದಾರ್ಥ ಅನ್ನುವಂತಹ ಸ್ಥಿತಿಗೆ ಬಂದು ನಿಂತಿದ್ದೇವೆ.

ಸ್ಟುಡಿಯೋದಲ್ಲಿ ಮುಗುಳ್ನಗುತ್ತಾ ಸುದ್ದಿಯ ಕೊನೆಹನಿಗೆ ಬಂದಿರುವ ನ್ಯೂಸ್ ರೀಡರ್ ಇಯರ್ ಫೋನ್ ಸದ್ದು ಮಾಡುತ್ತದೆ.

ಪಕ್ಕದ ಕಂಟ್ರೋಲ್ ರೂಮಿನಿಂದ ‘ಆಲಮಟ್ಟಿಯಲ್ಲಿ ಲಾರಿ ನದಿಗೆ ಬಿದ್ದುಬಿಟ್ಟಿದೆ. 15 ಸಾವು ಬ್ರೇಕ್ ಮಾಡಿ’ ಅಂತ ನಿರ್ದೇಶನ ಬರುತ್ತೆ.

ಮುಗುಳ್ನಗುತ್ತಾ ಇದ್ದ ನ್ಯೂಸ್ ರೀಡರ್ ತಕ್ಷಣ ಮುಖ ಬಿಗಿ ಮಾಡಿಕೊಂಡು, ದನಿಗೆ ಗಂಭೀರತೆ ತಂದು ‘ಇದೀಗ ತಾನೇ ಬಂದ ಸುದ್ದಿ..’ ಅಂತ ಶುರು ಮಾಡಬೇಕು.

ನ್ಯೂಸ್ ರೀಡರ್ ಬಳಿ ಇರುವುದು ಕಿವಿಗೆ ಸಿಕ್ಕ ಒಂದೆರಡು ಮಾಹಿತಿ ಅಷ್ಟೇ.. ಆದರೆ ಸುದ್ದಿ ಗಂಭೀರವಾಗಿದೆ. ಹೆಚ್ಚು ಮಾಹಿತಿ ಇಲ್ಲದೆಯೂ ಕುಳಿತ ಕಡೆಯೇ ಸುದ್ದಿ ವಿವರ ಸೃಷ್ಟಿ ಮಾಡುತ್ತಾ ಹೋಗಬೇಕು.

ಇಲ್ಲಿಯೇ ಮೊದಲ ಸವಾಲು ಎದುರಾಗುವುದು.

ಆಲಮಟ್ಟಿಯಲ್ಲಿ ಲಾರಿ ಬಿದ್ದಿದ್ದರೆ, ಆಲಮಟ್ಟಿ ಎಲ್ಲಿದೆ ಅಂತ ಗೊತ್ತಿರಬೇಕು. ಯಾವ ಜಿಲ್ಲೆಗೆ ಬರುತ್ತೆ ಅಂತ ತಿಳಿದಿರಬೇಕು. ಹಿಂದೆ ಆಗಿದ್ದ ದುರ್ಘಟನೆ ಗೊತ್ತಿರಬೇಕು. ಅಲ್ಲಿರುವ ವರದಿಗಾರ ಯಾರು ಅಂತ ಥಟ್ಟಂತ ನೆನಪಿಗೆ ಬರಬೇಕು. ಇಲ್ಲದಿದ್ದಲ್ಲಿ ‘ಜಟ್ಟಿ ಬಲು ಗಟ್ಟಿ, ಹೊಡದ್ರೆ ಮಾತ್ರ ನೂರು ಪಲ್ಟಿ’ ಅನ್ನುವಂತಾಗಿಬಿಡುತ್ತೆ.

ಒಂದು ಕಾಲವಿತ್ತು. ಅದು ನ್ಯೂಸ್ ರೀಡರ್ ಗಳ ಸ್ವರ್ಣ ಯುಗವೂ ಹೌದು.

ಸಿದ್ಧಲಿಂಗಯ್ಯ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ. ಚೆಲುವಾದ ನಿನ್ನ ಮಲ್ಲಿಗೆಯ ಮಯ್ಯ ಸುಟ್ಟಾವು ಬೆಳ್ಳಿ ಕಿರಣ’ ಅನ್ನುವ ಕವಿತೆ ಬರೆದದ್ದೇ ನ್ಯೂಸ್ ರೀಡರ್ ಗಳಿಗೇನೋ ಅನಿಸಿಬಿಡಬೇಕು ಹಾಗಿತ್ತು. ಬಿಸಿಲಲ್ಲಿ ಸುಳಿಯುವಂತಿಲ್ಲ, ನಡೆದು ದಣಿಯುವಂತಿಲ್ಲ.

ಆದರೆ ಯಾವಾಗ ಚಾನಲ್ ಗಳಿಗೆ ಸುದ್ದಿ ಸಹಾ ಸಾಕಷ್ಟು ಲಾಭ ತಂದುಕೊಡುತ್ತದೆ ಅಂತ ಗೊತ್ತಾಗಿಹೋಯಿತೋ ಒಂದರ ಮೇಲೊಂದರಂತೆ ನ್ಯೂಸ್ ಚಾನಲ್ ಗಳು ರಂಗ ಪ್ರವೇಶಿಸಿ ಕೂತಿವೆ.

ಕೊರತೆ ದೊಡ್ಡದಾಗಿ ಕಾಣಿಸುತ್ತಿರುವುದು ಈಗಲೇ. ಶ್ರೀದೇವಿ ಹೇಳಿದಂತೆ ‘ನೋಡಲು ಚಂದವಿರುವ’ ಅನ್ನುವ ಸಾಲಿಗೆ ನಿಜಕ್ಕೂ ಅರ್ಥವಿಲ್ಲ. ಆದರೆ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.

ಶಾಲಾ ಪ್ರವಾಸಕ್ಕೆ ಹೋಗಿದ್ದ ಹುಡುಗಿಯೊಬ್ಬಳ ಬದುಕೇ ನಾಶವಾಗಿ ಹೋದ ಕಥೆಯನ್ನ ನ್ಯೂಸ್ ರೀಡರ್ ನಿಭಾಯಿಸ್ತಾ ಇದ್ದ ರೀತಿ ನೋಡಿ ಚಡಪಡಿಸ್ತಾ ಇದ್ದ ಜೊತೆಯಲ್ಲಿದ್ದವರು ‘ಕನ್ನಡ ಚಾನಲ್ ಗಳಿಗೆ ಯಾಕೆ ಒಬ್ಬ ಬರ್ಖಾದತ್ ನ ಕೊಡೋಕೆ ಆಗಲ್ಲ’ ಅಂತ ಕೇಳಿದ್ರು.

ಒಬ್ಬ ಬರ್ಖಾದತ್ ನ ಹುಡುಕಿಬಿಡ್ಬೇಕು ಅಂತಲೇ ಬಿರುಗಾಳಿಯಂತೆ ಇಡೀ ಕರ್ನಾಟಕ ಸುತ್ತಿದ್ದು ನೆನಪಿಗೆ ಬಂತು.

ಐದು ಸಾವಿರಕ್ಕೂ ಜಾಸ್ತಿ ಮುಖಗಳನ್ನ ನೋಡಿ ವಾಪಸ್ ಬಂದಾಗ ನನ್ನ ಕರ್ನಾಟಕ ಜ್ಞಾನ ಜಾಸ್ತಿ ಆಗಿತ್ತೇ ಹೊರತು ಬರ್ಖಾದತ್ ಮಾತ್ರ ಸಿಕ್ಲಿಲ್ಲ.

ಇಷ್ಟೆಲ್ಲಾ ಆದ ಮೇಲೆ ಅದೇ ಗ್ರಾಫಿಕ್ಸ್ ನವರನ್ನ ಕರೆದು ‘ನೋಡಲು ಚೆನ್ನಾಗಿರುವ’ ಅನ್ನೋ ಲೈನ್ ಸೇರಿಸಪ್ಪಾ ಅಂದೆ. ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣುವವರು ಸಿಕ್ಕರೂ ಸಾಕಾಗಿತ್ತು.
—-

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?