Saturday, October 5, 2024
Google search engine
Homeಸಾಹಿತ್ಯ ಸಂವಾದಅಂತರಾಳಪಟ್ಟು ಹಾಕಿ ಗೆದ್ದ ಸಿದ್ದರಾಮಯ್ಯ

ಪಟ್ಟು ಹಾಕಿ ಗೆದ್ದ ಸಿದ್ದರಾಮಯ್ಯ

ಜಿ.ಎನ್.ಮೋಹನ್


ಬಾಗಿಲು ತಟ್ಟಿದ ಸದ್ದಾಯಿತು

ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಗಲ ಗಲ ಮಾತನಾಡುತ್ತಿದ್ದ ನಾನು ಒಂದೇ ಏಟಿಗೆ ಹಾರಿ ಬಾಗಿಲು ತೆಗೆದೆ .

ಒಂದು ಕ್ಷಣ ನಾನು ಮಾತಿಲ್ಲದೆ ನಿಂತೆ.

ಬಾಗಿಲು ಬಡಿದದ್ದು ಇನ್ನಾರೂ ಅಲ್ಲ. ಅದೇ ಪಂಚೆ, ಅದೇ ಜುಬ್ಬಾ, ಅದೇ ಮೇಲು ಹೊದಿಕೆ ಹೊದ್ದ ಅದೇ ಅರೆ ನೆರೆತ ಗಡ್ಡದ- ಸಿದ್ದರಾಮಯ್ಯ.

‘ಈಟಿವಿ’ ಚಾನಲ್ ಗಾಗಿ ನ್ಯೂಸ್ ರೀಡರ್ ಗಳನ್ನು ಆಯ್ಕೆ ಮಾಡಲು ರಾಜ್ಯದ ಎಲ್ಲೆಡೆ ಸಂದರ್ಶನ ನಡೆಸುತ್ತಾ ನಾನು ಮೈಸೂರು ತಲುಪಿಕೊಂಡಿದ್ದೆ.

ಮೈಸೂರು ತಲುಪಿದ ಮೇಲೆ ಕೆ ರಾಮದಾಸ್ ಅವರಿಗೆ ಒಂದು ನಮಸ್ಕಾರ ಹೇಳದೇ ಬರಲು ನನಗಿರಲಿ, ಯಾರಿಗೂ ಸಾಧ್ಯವಿಲ್ಲ.

ಹಾಗಾಗಿ ಅವರ ಮನೆಯಲ್ಲಿ ಕುಳಿತು ಹರಟೆ ಹೊಡೆಯುತ್ತಾ ಇದ್ದಾಗ ಬಂದದ್ದು ಸಿದ್ದರಾಮಯ್ಯನವರು.

ಆನಂತರ ನಾನು ಮತ್ತೆ ಅವರ ಕೈ ಕುಲುಕಿದ್ದು ‘ಕೃಷ್ಣಾ’ದ ಅಂಗಳದಲ್ಲಿ.

ಮೊದಲ ಬಾರಿಗೆ ಕೈ ಕುಲುಕಿದಾಗ ಅವರು ಶಾಸಕರಾಗಿದ್ದರು. ಎರಡನೆಯ ಬಾರಿ ನಾನು ಮುಖ್ಯಮಂತ್ರಿಯ ಕೈ ಕುಲುಕುತ್ತಾ ನಿಂತಿದ್ದೆ.

‘ಹೇಗಿದ್ದೀರಿ ಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್’ ಎಂದೆ .

‘ಅಯ್ಯೋ ಸುಮ್ಮನಿರು ಮಾರಾಯ. ಎಕ್ಸ್ ಪ್ರೆಸ್ ವೇಗದಲ್ಲಿ ವಿಧಾನಸೌಧ ಸಿಗಬೇಕಾದರೆ ನೂರೆಂಟು ವಿದ್ಯೆ ಗೊತ್ತಿರಬೇಕು. ನಾನು ಒಂದು ಶಟಲ್ ಗಾಡಿ ಅಷ್ಟೇ’ ಎಂದು ನಕ್ಕರು.

‘ನಾನು ಹೆಲಿಕ್ಯಾಪ್ಟರ್ ನಿಂದ ಜಿಗಿದು ವಿಧಾನಸೌಧದ ಖುರ್ಚಿಯಲ್ಲಿ ಕೂಡಲಿಲ್ಲ. ಬಹಳ ಹೋರಾಟ ಮಾಡಿಕೊಂಡು ರಾಜಕೀಯದಲ್ಲಿ ಮೇಲೆಬಂದೆ. ಸ್ವಂತ ಶಕ್ತಿಯಿಂದ ರಾಜಕೀಯ ಮಾಡುತ್ತಾಬಂದೆ. ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯನಿಂದ ಶುರು ಮಾಡಿ ಇಲ್ಲಿಯವರೆಗೂ ಬಂದಿದ್ದೇನೆ..’

‘..ಯಾವುದೇ ರಾಜಕೀಯ ಜೀವನಕ್ಕೆಒಂದು ಸ್ಟ್ರಗಲ್ ಬೇಕು, ಒಂದು ಸಿದ್ದಾಂತ ಬೇಕು’ ಎಂದು ತಮ್ಮ ಶಟಲ್ ಗಾಡಿ ಅಲ್ಲಲ್ಲಿ ನಿಲ್ಲುತ್ತಾ ವಿಧಾನಸೌಧದವರೆಗೂ ಅದರಲ್ಲೂ ಮುಖ್ಯಮಂತ್ರಿ ಖುರ್ಚಿಯವರೆಗೂ ಬಂದು ಮುಟ್ಟಿದ ಕಥೆ ಹೇಳಿದರು.

ನನಗೆ ಅವರು ಮರಳಲ್ಲಿ ತಿದ್ದಿ ಅಕ್ಷರ ಕಲಿತ ಕಥೆ ಗೊತ್ತಿತ್ತು. ಹಾಗಾಗಿ ಅವರ ಬಾಲ್ಯಕ್ಕೆ ಅವರನ್ನು ಕರೆದುಕೊಂಡು ಹೋದೆ.

ಸಿದ್ದರಾಮನಹುಂಡಿಯ ನೆನಪು ಮಾಡುತ್ತಿದ್ದಂತೆ ಅವರ ಮುಖ ಅರಳಿತು.

‘ನಮ್ಮ ತಂದೆ ನನ್ನನ್ನು ವೀರಮಕ್ಕಳ ಕುಣಿತಕ್ಕೆ ಸೇರಿಸಿದ್ದರು. ಒಂದು ವೇಳೆ ಅಲ್ಲಿ ಸೇರದೆ ಹೋಗಿದ್ದರೆ ನಾನು ವಿದ್ಯೆಕಲೀತಾ ಇದ್ದೆನೋ ಇಲ್ಲವೋ ಗೊತ್ತಿಲ್ಲ’.

‘ನಾನು ಪ್ರೈಮರಿ ಶಾಲೆ ಮುಖ ಕಂಡವನೇ ಅಲ್ಲ. ನಮಗೆ ವೀರಮಕ್ಕಳ ಕುಣಿತ ಕಲಿಸುತ್ತಿದ್ದಂತಹ ಮೇಷ್ಟ್ರು ನಂಜೇಗೌಡರು ನಮಗೆಲ್ಲಾ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿದರು. ಅವರು ಅಕ್ಷರಾಭ್ಯಾಸ ಮಾಡಿಸಿ, ಕಾಗುಣಿತ ಕಲಿಸಿ, ಲೆಕ್ಕಹೇಳಿಕೊಟ್ಟಿದ್ದರಿಂದ ನನಗೆ ಮುಂದೆ ಓದುವ ಆಸಕ್ತಿ ಬೆಳೆಯಿತು. ಆ ನೆನಪು ನನ್ನೊಳಗಡೆ ಸದಾ ಇರುತ್ತದೆ’ ಎಂದು ಭಾವಪರಾಶರಾದರು.

ಸಿದ್ದರಾಮಯ್ಯನವರಿಗೆ ವೀರಗಾಸೆ ಕುಣಿತದ ಹೆಜ್ಜೆಗಳು ಚೆನ್ನಾಗಿ ಗೊತ್ತು. ಪಟ್ಟು ಹಿಡಿದು ಕಲಿತದ್ದು. ಅದಕ್ಕೇ ಇರಬೇಕು ಅವರಿಗೆ ನಂತರದ ರಾಜಕೀಯ ಹೆಜ್ಜೆಗಳೂ ಸುಲಭವಾದವು.

ಪಟ್ಟು ಹಾಕಿದರೆ ಗೆದ್ದೇ ಸಿದ್ಧ ಎನ್ನುವ ಛಲ ಅವರದ್ದು.

ಹಾಗಾಗಿಯೇ ನೆನಪಿಸಿದೆ. ‘ನೀವು ವಿಧಾನಸೌಧದ ಒಳಗೆ ಹೋಗದಂತೆ ಪೊಲೀಸ್ ಅಧಿಕಾರಿ ತಡೆದಿದ್ದರು’ ಅಂತ.

‘ಅದು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ಘಟನೆಗಳಲ್ಲಿ ಒಂದು. ವಿಧಾನಸೌಧದ ಒಳಗೆ ಸಿಕ್ಕಾಪಟ್ಟೆ ಗಲಾಟೆ ಆಗಿತ್ತು. ಆಗ ಇದ್ದ ಪೋಲೀಸ್ ಕಮಿಷನರ್ ತಮ್ಮ ಯೂನಿಫಾರ್ಮ್ ಮತ್ತು ಆಯುಧಗಳ ಸಮೇತ ಬಂದು ನನ್ನನ್ನು ಒಳಗೆಬಿಡದಂತೆ ತಡೆದರು’.

‘ಹಾಗೆ ಮಾಡಬಾರದಿತ್ತು ಅವರು. ಆಗ ನಾನು ಅವರಿಗೆ, ಒಂದು ದಿನ ನಾನು ಮುಖ್ಯಮಂತ್ರಿ ಆಗಿಯೇ ವಿಧಾನಸೌಧಕ್ಕೆ ಬರುತ್ತೇನೆ, ಎಚ್ಚರಿಕೆಯಿಂದಿರಿ ಎಂದು ಹೇಳಿದ್ದೆ’.

ಮಗ ಡಾಕ್ಟರ್ ಆಗಬೇಕು ಅನ್ನುವ ಕನಸು ಅಪ್ಪನಿಗಿತ್ತು. ಆದರೆ ಸಿದ್ದರಾಮಯ್ಯನವರಿಗೆ ವಿಜ್ಞಾನ ವಿಷಯಗಳ ಮೇಲೆ ಕಣ್ಣು. ಬಾಟನಿ, ಜುವಾಲಜಿ ಮೇಜರ್ ತೆಗೆದುಕೊಂಡು ಬಿಎಸ್ಸಿ ಮುಗಿಸಿದರು.

‘ಬಾಟನಿಯಲ್ಲಿ ಎಂಎಸ್ಸಿ ಓದುವ ಆಸೆ ಇತ್ತು ನನಗೆ. ಸೀಟ್ ಸಿಗಲಿಲ್ಲ. ವಿದ್ಯಾಭ್ಯಾಸ ನಿಲ್ಲಿಸಿ, ವ್ಯವಸಾಯ ಮಾಡೋಣ ಎಂದುಕೊಂಡು ಊರಿಗೆ ಹಿಂದಿರುಗಿದೆ. ಒಂದು ವರ್ಷ ಊರಿನಲ್ಲೇ ವ್ಯವಸಾಯ ಮಾಡಿಕೊಂಡಿದ್ದೆ. ವ್ಯವಸಾಯದಿಂದ ಏನೂ ಲಾಭವಾಗುವುದಿಲ್ಲ ಎಂದುಕೊಂಡು ಲಾ ಓದುವ ಆಲೋಚನೆ ನನಗೆ ಬಂತು. ಹಾಗಾಗಿ ಲಾ ಕಾಲೇಜಿಗೆ ಸೇರಿದೆ’.

ಅಷ್ಟು ಹೇಳುವ ವೇಳೆಗೆ ಸಿದ್ದರಾಮಯ್ಯನವರ ಕಣ್ಣಲ್ಲಿ ಮಿಂಚಿತ್ತು. ಯಾಕೆಂದರೆ ಅವರ ಬದುಕಿಗೆ ದೊಡ್ಡ ತಿರುವು ಸಿಕ್ಕಿದ್ದೇ ಇಲ್ಲಿ.

ಅವರಿಗೆ ಲಾ ಕಾಲೇಜಿನಲ್ಲಿ ಪ್ರೊ ಎಂ ಡಿ ನಂಜುಂಡಸ್ವಾಮಿ ಸಿಕ್ಕಿ ಹೋಗಿದ್ದರು.

‘ಲಾ ಓದುವಾಗ ಪ್ರೊ ನಂಜುಂಡಸ್ವಾಮಿಯವರ ಪರಿಚಯ ಆಯಿತು. ಅವರು ಆಗಾಗಲೇ ಸೋಷಲಿಸ್ಟ್ ಪಾರ್ಟಿಯಲ್ಲಿ ಸಕ್ರಿಯರಾಗಿದ್ದರು. ನಮ್ಮನ್ನೂ ಅವರು ಸೋಷಲಿಸ್ಟ್ ಪಾರ್ಟಿಗೆ ಸೇರಿಸಿದರು’.

‘ನಮಗೆ ಅವರು ಪಾಠ ಮಾಡದೇ ಇದ್ದರೂ ಅವರ ಸಂಪರ್ಕ ಪ್ರತಿನಿತ್ಯ ಆಗುತ್ತಲೇ ಇತ್ತು. ಸ್ನೇಹಿತರ ಒಂದು ಗುಂಪನ್ನು ಸೇರಿಸಿ ರಾಜಕೀಯ ಚರ್ಚೆಗಳನ್ನು ಮಾಡುತ್ತಿದ್ದರು. ಹಾಗಾಗಿ ಅವರ ಬಗ್ಗೆ ನಮಗೆ ಬಹಳ ಅಭಿಮಾನ ಮತ್ತು ಪ್ರೀತಿ ಇತ್ತು. ನಾನು ರಾಜಕೀಯಕ್ಕೆ ಎಂಟ್ರಿ ಕೊಡಲು ಅವರೇ ಕಾರಣ’ ಎಂದರು.

‘ಪ್ಲೈಮೌತ್ ಕಾರು..’ ಎಂದು ನಾನು ರಾಗವೆಳೆದೆ.

ನಾನು ಏನು ಕೇಳಲು ಹೊರಟಿದ್ದೇನೆ ಎಂದು ಅವರಿಗೆ ಗೊತ್ತಾಗಿ ಹೋಯಿತು.

‘ಹೌದು, ನಂಜುಂಡಸ್ವಾಮಿ ಅವರು ತಮ್ಮ ಬಳಿ ಇದ್ದ ಪ್ಲೈಮೌತ್ ಕಾರನ್ನು ಚುನಾವಣಾ ಓಡಾಟಕ್ಕೆ ಅಂತ ಕೊಟ್ಟರು. ಒಂದಿಷ್ಟು ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಕೊಟ್ಟರು. ಕಾರು ಎರಡು ಮೂರು ದಿನ ಓಡಿ ನಿಂತುಹೋಯಿತು’ ಎಂದರು.

ಅವರು ಹಣಕಾಸು ಅಂದಾಕ್ಷಣ ನನ್ನ ನೆನಪಿಗೆ ಬಂದದ್ದು ಇವರು ಕಡಲೆ ಕಾಯಿ ಮಾರುವ ಅಜ್ಜಿಯ ಬಳಿ ಸಾಲ ತೆಗೆದುಕೊಳ್ಳುತ್ತಾ ಇದ್ದದ್ದು.

‘ನಾನು ಲಾಯರ್ ಗಿರಿ ಶುರು ಮಾಡಿದೆ. ಕಕ್ಷಿದಾರರು ಸಿಗಬೇಕಲ್ಲ. ಕೈ ಎಲ್ಲಾ ಖಾಲಿ. ಅಲ್ಲೇ ಕಡ್ಲೆ ಕಾಯಿ ಮಾರುವವಳ ಹತ್ರ ಸಾಲ ಮಾಡಿ ಸಿಗರೇಟು ಸೇದುತ್ತಿದ್ದೆ, ಆಮೇಲ್ಯಾವಾಗಾದ್ರೂ ದುಡ್ಡು ಬಂದಾಗ ಒಟ್ಟಿಗೆ ಅದನ್ನು ತೀರಿಸುವುದು ನಡೀತಾ ಇತ್ತು’.

‘ನಾನು ಎಂಎಲ್ ಎ ಆದ ಮೇಲೆ ಹೋಗಿ ಎಷ್ಟು ಸಾಲ ಬಾಕಿ ಇಟ್ಟಿದ್ದೆನೋ ಅಷ್ಟೂ ಚುಕ್ತಾ ಮಾಡಿ ಬಂದೆ’ ಎಂದು ನಕ್ಕರು.

‘ಎಂ ಡಿ ಎನ್ ಪ್ರಭಾವ ಇರಬೇಕು. ಚೆನ್ನಾಗಿ ಲೆಕ್ಚರ್ ಕೊಡ್ತೀರಾ..’ ಅಂತ ಅವರ ಕಡೆ ಒಂದು ಬಾಣ ಬಿಟ್ಟೆ.

ನಾನು ಏನು ಕೇಳುತ್ತಿದ್ದೇನೆ ಎನ್ನುವುದು ಅವರಿಗೆ ತಕ್ಷಣ ಗೊತ್ತಾಗಿ ಹೋಯಿತು.

‘ಹೌದು ನಾನು ಸ್ವಲ್ಪ ದಿನ ಪಾರ್ಟ್ ಟೈಮ್ ಲೆಕ್ಚರರ್ ಆಗಿದ್ದೆ, ಸುಮಾರು ಮೂರು ವರ್ಷಗಳ ಕಾಲ. ಆ ಅನುಭವ ನನಗೆ ಬಹಳ ಖುಷಿ ಕೊಟ್ಟಿದೆ. ಲಾಯರ್ ಹುದ್ದೆಗಿಂತಾ ಪಾಠ ಮಾಡುವ ಹುದ್ದೆಯನ್ನು ನಾನು ಬಹಳ ಪ್ರೀತಿಸುತ್ತಿದ್ದೆ.’

‘ಕುರಿಗಳ ಲೆಕ್ಕ ಮಾಡೋದಿಕ್ಕೆ ಬರದೇ ಇರೋ ಸಿದ್ದರಾಮಯ್ಯ ಬಜೆಟ್ ಮಂಡಿಸ್ತಾನಂತೆ ಅಂದರು..’ ಎಂದು ಅವರ ನೆನಪು ಮೀಟಿದೆ.

‘ನಾನು ಅರ್ಥಶಾಸ್ತ್ರ ಖಂಡಿತಾ ಓದಿಲ್ಲ. ಬಾಟನಿ, ಜುವಾಲಜಿ, ಕಾನೂನು ಓದಿದವನು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗನನಗೆ ಹಣಕಾಸಿನ ಮಂತ್ರಿ ಆಗಲು ಆಹ್ವಾನಿಸಿದರು. ನಿಜ ಹೇಳಬೇಕು ಎಂದರೆ ಆಗ ನನ್ನ ಮನಸ್ಸಿನಲ್ಲಿದ್ದದ್ದು ಗೃಹ ಅಥವಾ ಕಂದಾಯ ಇಲಾಖೆ. ಹಣಕಾಸಿನ ಇಲಾಖೆ ಎಂದಾಗ ಅದನ್ನು ಒಂದು ಸವಾಲು ಎಂದೇ ನಾನು ಸ್ವೀಕರಿಸಿದೆ’.

‘ಆಗಲೇ ಕೆಲವರು ಕುಹಕವಾಡಿದ್ದು. ಸಿದ್ದರಾಮಯ್ಯನಿಗೆ ಕುರಿ ಎಣಿಸಲು ಸಹ ಬರೋಲ್ಲ,ಹಣಕಾಸು ಇಲಾಖೆ ಹೇಗೆ ನಿಭಾಯಿಸ್ತಾನೆ ಅಂತ. ನಾನು ಅದನ್ನು ಒಂದು ಚಾಲೆಂಜ್ ಅಂತ ತಗೊಂಡೆ’ ಎಂದು ತಾವು ಪಟ್ಟು ಹಾಕಿ ಗೆದ್ದ ಕಥೆಯನ್ನು ಹೇಳಿದರು.

ಸಿದ್ದರಾಮಯ್ಯನವರಿಗೆ ಕುಸ್ತಿ ಸಹಾ ಇಷ್ಟ ಎನ್ನುವುದು ಎಷ್ಟೋ ಜನಕ್ಕೆ ಗೊತ್ತಿಲ್ಲ. ‘ನೀವು ಹಾಕಿದ ಕುಸ್ತಿ ಪಟ್ಟುಗಳನ್ನು ಒಂದೊಂದಾಗಿ ನೆನಪಿಸಿಕೊಳ್ಳಿ’ ಎಂದೆ.

‘ನನಗೂ ಮುಖ್ಯಮಂತ್ರಿ ಆಗಲು ಸಾಧ್ಯ ಎಂದು ನನಗೆ ಅನ್ನಿಸಿತ್ತು. ಅದಕ್ಕೆ ನಾನು ಅರ್ಹನಿದ್ದೇನೆ ಎಂದು ಸಹ ನನಗೆ ನಂಬಿಕೆ ಇತ್ತು. ೧೯೯೬ ರಲ್ಲಿ ಮತ್ತೆ ೨೦೦೪ ರಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ನನಗೆ ಇತ್ತು
ಎರಡು ಬಾರಿಯೂ ತಪ್ಪಿಹೋಯಿತು. ಕಾಂಗ್ರೆಸ್ ಸೇರಿದ ಮೇಲೆ ಮತ್ತೆ ಆ ಆಸೆ ಚಿಗುರೊಡೆಯಿತು. ಮುಖ್ಯಮಂತ್ರಿ ಆದೆ’ ಎಂದರು.

‘ಸರ್ ನೀವು ಇನ್ನೂ ಒಂದು ಕುಸ್ತಿ ಮಾಡಿದ್ದೀರಿ ಇಂಗ್ಲಿಷ್ ಜೊತೆ’ ಎಂದೆ.

ಅಯ್ಯೋ ಹೌದಪ್ಪಾ, ಈ ಇಂಗ್ಲಿಷ್ ಸಹವಾಸ ಯಾರಿಗೂ ಬೇಡ. ಇಂಗ್ಲಿಷ್ ನನ್ನನ್ನ ಹೆದರಿಸಿ ಹಾಕಿತ್ತು. ನಾನು ಬೆಳೆದು ಬಂದ ಹಿನ್ನಲೆ ಮತ್ತು ವಾತಾವರಣ ಇದಕ್ಕೆ ಕಾರಣ. ಹಳ್ಳಿಯಲ್ಲಿ ನಾನು ಯಾರ ಜೊತೆ ಇಂಗ್ಲಿಷ್ ಮಾತನಾಡಬಹುದಿತ್ತು? ಹಳ್ಳಿ ಶಾಲೆಗಳಲ್ಲಿ ಇಂಗ್ಲಿಷ್ ಗೊತ್ತಿರುವ ಉಪಾಧ್ಯಾಯರೂ ಇರ್ತಾ ಇರಲಿಲ್ಲ. ಹೀಗಾಗಿ ಅದನ್ನೂ ಮಣಿಸಬೇಕಾಗಿ ಬಂತು’ ಎಂದು ಗೆದ್ದ ನಗು ಬೀರಿದರು.

‘ಸಾಧಾರಣವಾಗಿ ಮುಖ್ಯಮಂತ್ರಿ ಆದ ತಕ್ಷಣ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಾರೆ, ಮಠಗಳಿಗೆ ಹೋಗಿ ಸ್ವಾಮಿಗಳ ಕಾಲಿಗೆಬೀಳುತ್ತಾರೆ. ಆದರೆ ನೀವು ಸಾಹಿತಿಗಳನ್ನು, ವಿಚಾರವಂತರನ್ನೂ ಭೇಟಿಮಾಡಿದಿರಿ?

‘ಈ ಸಾಹಿತಿಗಳುಈ ನಾಡಿನ ಸಂಪತ್ತು. ತಮ್ಮ ತಮ್ಮ ಕ್ಷೇತ್ರಗಳಲ್ಲಿಅಪಾರವಾದ ಕೆಲಸ ಮಾಡಿದಂತವರು. ಸಮಾಜದ ಬಗ್ಗೆಕಳಕಳಿ ಇಟ್ಟುಕೊಡಿರುವಂತವರು. ರಾಜ್ಯದ ಹಿತದಬಗ್ಗೆ ಕಳಕಳಿ ಇಟ್ಟುಕೊಂಡಿರುವವರು. ಅದಕ್ಕಾಗೇ ನಾನು ಸಾಹಿತಿಗಳನ್ನು ಭೇಟಿಮಾಡಿ, ಅವರ ಜೊತೆ ಚರ್ಚೆ ಮಾಡಿ, ಅವರ ಹಾರೈಕೆಗಳನ್ನು ತೆಗೆದುಕೊಳ್ಳೋಣ ಎಂದು ನಾನು ಅವರನ್ನುಭೇಟಿ ಮಾಡಿದೆ’.

ಇಷ್ಟೆಲ್ಲಾ ಮಾತನಾಡುತ್ತಿರುವಾಗಲೇ ನಾನು ಅವರ ಪಂಚೆಯುತ್ತ ಬೆರಳು ತೋರಿಸಿದೆ.

ತಕ್ಷಣ ನನ್ನ ಹೆಗಲ ಮೇಲೆ ಕೈ ಹಾಕಿದವರೇ ‘ಪಂಚೆ ನಾನು ಬಯಸಿ ಆಯ್ಕೆಮಾಡಿಕೊಂಡ ಟ್ರೇಡ್ ಮಾರ್ಕ್ ಏನಲ್ಲ’ ಎಂಬ ಗುಟ್ಟು ಬಿಟ್ಟುಕೊಟ್ಟರು.

‘ನಾನೂ ಪ್ಯಾಂಟು, ಶರ್ಟು, ಕೋಟು ಎಲ್ಲಾ ಹಾಕ್ಕೋತಾ ಇದ್ದೆ. ನನಗೆ ಈ ‘ಡ್ರೈ ಸ್ಕಿನ್’ ಸಮಸ್ಯೆ ಬಂತು. ಆಗ ಡಾಕ್ಟರು ನೀವು ಸದಾ ಕಾಟನ್ ಬಟ್ಟೆ ಹಾಕಿಕೊಳ್ಳಬೇಕುಎಂದು ಹೇಳಿದರು. ಸ್ವಲ್ಪ ಗಾಳಿ ಆಡುವಂತಹ ಬಟ್ಟೆಹಾಕಿಕೊಳ್ಳಬೇಕು ಎಂದರು

‘೧೯೯೪ ರಿಂದ ನಾನು ಕಾಟನ್ ಬಟ್ಟೆ ಹಾಕಲು ಶುರು ಮಾಡಿದೆ, ಧೋತಿ ಕುರ್ತಾ ಹಾಕಲು ಶುರು ಮಾಡಿದೆ. ಹಾಗಾಗಿ ಆಗಿನಿಂದ ಇದೇ ಅಭ್ಯಾಸ ಆಯಿತು’.

‘ಡ್ರೈ ಸ್ಕಿನ್ ಸಮಸ್ಯೆ ಏನೋ ಕಡಿಮೆ ಆಯಿತು, ಆದರೆ ಪಂಚೆ ಮೇಲಿನ ಪ್ರೀತಿ ಜಾಸ್ತಿ ಆಗಿ ಹೋಗಿತ್ತು’ ಎಂದವರೇ ‘ಫಾರಿನ್ ಗೆ ಹೋದಾಗ ನಾನೂ ಸೂಟು, ಬೂಟುಹಾಕಿಕೊಳ್ತೀನಪ್ಪಾ’ ಎಂದು ಜೋರಾಗಿ ನಕ್ಕರು.

ಸಿದ್ದರಾಮಯ್ಯನವರಿಗೆ ತಮ್ಮ ಅಮ್ಮ ಎಂದರೆ ಇನ್ನಿಲ್ಲದ ಪ್ರಾಣ. ಯಾವಾಗಲೇ ಊರಿಗೆ ಹೋದರೂ ನೂರಾರು ರೊಪಾಯಿಯ ಅಡಿಕೆ ಎಲೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು.

ತಕ್ಷಣ ದೊಡ್ಡದಾಗಿ ನಕ್ಕುಬಿಟ್ಟ ಸಿದ್ದರಾಮಯ್ಯನವರು ‘ಅಮ್ಮನ ಮೇಲೆ ಪ್ರೀತಿ ಏನೋ ಇತ್ತು. ಆದರೆ ಎಲೆ ಅಡಿಕೆ ಕೊಡೋದರ ಹಿಂದೆ ಒಂದು ಸ್ವಾರ್ಥವೂ ಇತ್ತು. ಹಾಗೆ ನಮ್ಮವ್ವನಿಗೆ ಒಳ್ಳೆ ವೀಳ್ಯೆದೆಲೆ, ಅಡಿಕೆ ತೆಗೆದುಕೊಂಡು ಹೋದರೆ ಬರುವಾಗ ಸ್ವಲ್ಪ ದುಡ್ಡು ಹೆಚ್ಚಾಗಿ ಕೊಡ್ತಾ ಇದ್ಲು’ ಎಂದರು.

ಸಿದ್ದರಾಮಯ್ಯನವರಿಗೆ ಹಿಂದುಸ್ಥಾನಿ ಸಂಗೀತ ಎಂದರೆ ಪ್ರಾಣ.
ಈ ಗುಟ್ಟು ನನಗೆ ಗೊತ್ತಿತ್ತು.

ಮಹಮದ್ ರಫಿ ಹಾಡುಗಳಿಗಂತೂ ಅವರ ಎಲ್ಲಾ ಒತ್ತಡಗಳನ್ನ ಒಂದೇ ಕ್ಷಣಕ್ಕೆ ದೂರ ಎಸೆಯುವಷ್ಟು ತಾಖತ್ತು ಇದೆ.

ಅದು ಗೊತ್ತಿದ್ದ ನಾನು ಅಲ್ಲಿಯವರೆಗೂ ಅಡಗಿಸಿಟ್ಟುಕೊಂಡಿದ್ದ ಮಹಮದ್ ರಫಿ ಅವರ ಸಿ ಡಿಗಳನ್ನು ತೆಗೆದು ಅವರ ಕೈಗಿಟ್ಟೆ.

ಅವರು ಮಾತಿಲ್ಲದಂತಾದರು.

ಅವರ ಕೈಗಳು ನನ್ನನ್ನು ಒತ್ತಿ ಹಿಡಿದ ರೀತಿಯೇ ಅವರ ಸಂಭ್ರಮವನ್ನು ನನಗೆ ದಾಟಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?