ತುಮಕೂರು:
ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿನ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದುಗೊಳಿಸಿ ಸರ್ಕಾರದ ವಶಕ್ಕೆ ಪಡೆದುಕೊಂಡು ಕಾಲೇಜಿನ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಸ್ಥಳಾಂತರಿಸಲು ಸೂಚಿಸಿರುವ ಮೇರೆಗೆ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಹೋಗುವುದಿಲ್ಲ ಎಂದು ಕಾಲೇಜು ಎದುರು ಪಟ್ಟು ಹಿಡಿದು ಕುಳಿತರು.
ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರದ ಅನುದಾನ ಪಡೆದ ಆರೋಪದ ಮೇರೆಗೆ ಇಲ್ಲಿನ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಮಾನ್ಯತೆ ರದ್ದುಗೊಳಿಲಾಗಿದೆ. ವೇತನಾನುದಾನ ಹಿಂಪಡೆದು ಸರ್ಕಾರದ ವಶಕ್ಕೆ ಪಡೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೋಮವಾರ ಸೂಚಿನೆ ನೀಡಲಾಗಿತ್ತು. ಈ ಹಿನ್ನೆಯಲ್ಲಿ ಡಿಡಿಪಿಯು ಅವರು ಕಾಲೇಜಿಗೆ ಭೇಟಿ ನಿಡಿ ಸೋಮವಾರ ವಿದ್ಯಾರ್ಥಿಗಳನ್ನು ಸರ್ಕಾರಿ ಜೂನಿಯರ್ ಕಾಲೇಜಿಗೆ ತೆರಳುವಂತೆ ಮನ ಒಲಿಸಿದ್ದರು. ಕಾಲೇಜಿನ ಮಾನ್ಯತೆ ರದ್ದಾಗಿದ್ದು, ಇಲ್ಲಿ ಪಾಠ ಪ್ರವಚನ ಮಾಡಲು ಅವಕಾಶ ಇಲ್ಲ. ಆಗಾಗಿ ವಿದ್ಯಾರ್ಥಿ ಭವಿಷ್ಯದ ದೃಷ್ಟಿಯಿಂದ ಸ್ಥಳಾಂತರ ಮಾಡಿ ಬೋಧನೆ ಮಾಡಿಸುವುದು ಅನಿವಾರ್ಯ ಎಂದು ಉಪನಿರ್ದೇಶಕಿ ಲಲಿತಾಕುಮಾರಿ ಅವರು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀನಿವಾಸ ಕಾಲೇಜು ಬಳಿ ಬಂದ 253 ವಿದ್ಯಾರ್ಥಿಗಳು ಕೊಠಡಿ ಒಳಗೆ ಹೋಗದೇ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಕುಳಿತು ಬೇರೆ ಕಾಲೇಜಿಗೆ ಹೋಗುವುದಿಲ್ಲ. ಇದೇ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷಾತ್ಯಂದ ವರೆಗೆ ಬೋಧನೆ ಮುಂದುವರೆಸಿ ಎಂದು ಪಟ್ಟು ಹಿಡಿದು ಧರಣಿ ಕುಳಿತರು.
ಕಾಲೇಜಿನ ಆಡಳಿತ ಮಂಡಳಿ ಹಾಗೂ ಇಲಾಖೆ ನಡುವೆ ಏನೇ ವಿವಾದ ಇರಲಿ ಅದು ನಮಗೆ ಬೇಕಾಗಿಲ್ಲ. ನಮ್ಮ ಭವಿಷ್ಯದ ಹಿತದೃಷ್ಟಿಯಿಂದ ಕಾಲೇಜಿನ ಪಾಠ ಪ್ರವಚನವನ್ನು ಶೈಕ್ಷಣಿಕ ವರ್ಷಾಂತ್ಯದ ವರೆಗೆ ಯಥಾವತ್ತಾಗಿ ಮುಂದುವರೆಸುವಂತೆ ಪಟ್ಟು ಹಿಡಿದರು.
ಪರೀಕ್ಷೆಗಳು ಕೇವಲ ಮೂರು ತಿಂಗಳಿದ್ದು, ಈ ಸಮಯದಲ್ಲಿ ಬೇರೆ ಕಾಲೇಜಿಗೆ ಹೋಗುವುದರಿಂದ ಅಲ್ಲಿನ ವಾತಾವರಣ ಹಾಗೂ ಬದಲಾದ ಉಪನ್ಯಾಸದಿಂದ ತೊಂದರೆ ಉಂಟಾಗಲಿದೆ. ಜೊತೆಗೆ ನಮ್ಮ ಕಾಲೇಜಿನಲ್ಲಿರುವ ಭೂಗೋಳ ಶಾಸ್ತ್ರ, ಐಚ್ಛಿಕ ಕನ್ನಡ, ಸಂಸ್ಕೃತ ವಿಷಯಗಳು ಸ್ಥಳೀಯ ಕಾಲೇಜಿನಲ್ಲಿ ಇಲ್ಲ. ಸಂಬಂಧಿಸಿದ ವಿಷಯದ ಉಪನ್ಯಾಸಕರು ಆ ಕಾಲೇಜಲಿಲ್ಲ. ಈಗಾಗಲೇ ಅಲ್ಲಿ ಅಧಿಕ ಸಂಖ್ಯೆ ವಿದ್ಯಾರ್ಥಿಗಳಿದ್ದು, ಕೊಠಡಿ, ಶೌಚಾಲಯ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಮತ್ತೆ ಈ ಕಾಲೇಜಿನ 253 ಸಂಖ್ಯೆ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿಗೆ ಸ್ಥಳಾಂತರವಾಗುವುದರಿಂದ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸಲಿವೆ. ಹಾಗಾಗಿ ಪರೀಕ್ಷೆ ಮುಗಿಯುವ ತನಕ ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.
ಮದ್ಯಾಹ್ನದ ವರೆಗೆ ಕಾಲೇಜಿನ ಮುಂದೆ ಧರಣಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರೊಂದಿಗೆ ಆನಂತರ ಸ್ಥಳೀಯ ಶಾಸಕ ಡಾ. ಜಿ. ಪರಮೇಶ್ವರ ಅವರನ್ನು ತುಮಕೂರಿನಲ್ಲಿ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು. ಸಮಸ್ಯೆ ಆಲಿಸಿದ ಶಾಸಕರು ತಕ್ಷಣ ಶೀಕ್ಷಣ ಸಚಿವ ಸುರೇಶ್ ಕುಮಾರ್ವ ಅವರಿಗೆ ದೂರವಾಣಿ ಕರೆ ಮಾಡಿ ಪರೀಕ್ಷೆಗಳು ಮುಗಿಯುವ ತನಕ ಇದೇ ಕಾಲೇಜಿನಲ್ಲಿ ಬೋಧನೆ ಮುಂದುವರೆಸಿ ಅನುಕೂಲ ಮಾಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂಧಿಸಿದ ಶಿಕ್ಷಣ ಸಚಿವರು ಶೈಕ್ಷಣಿಕ ವರ್ಷಾತ್ಯಂದ ವರೆಗೆ ವಿದ್ಯಾರ್ಥಿಗಳ ಬೋಧನೆಗೆ ಅನುಕೂಲ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳನ್ನು ಬೇರೆಡೆ ಸ್ಥಳಾಂತರಿಸುವ ಪ್ರಕ್ರಿಯೆ ಸದ್ಯಕ್ಕೆ ಮೊಟುಕಾಗಿದೆ. ಹಾಗಾಗಿ ಸಮಸ್ಯೆ ತಕ್ಷಣಕ್ಕೆ ಸುಖಾಂತ್ಯ ಪಡೆದುಕೊಂಡಿದೆ.
ಪಿಯುಸಿ ಪರೀಕ್ಷೆ ಮುಗಿದ ನಂತರ ಸಂಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬಹುದು. ಅಲ್ಲಿವರೆಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ ಎಂಬ ಭರವಸೆ ಮೇರೆಗೆ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.