ತುಮಕೂರು:
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಎಸ್ಸಿ, ಎಸ್ಟಿ ಜನಾಂಗದ ಹಿತರಕ್ಷಣಾ ಸಭೆಯಲ್ಲಿ ಇಲಾಖಾ ವಾರು ಕಾರ್ಯಸೂಚಿ ನೀಡಿಲ್ಲ ಎಂದು ಆಪಾಧಿಸಿ ಮುಖಂಡರು ಸಭೆ ಬಹಿಷ್ಕರಿಸಿ ಹೊರನಡೆದ ಪ್ರಸಂಗ ಶುಕ್ರವಾರ ನಡೆಯಿತು.
ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿ ಸಭೆ ಎರಡು ವರ್ಷದ ನಂತರ ಕರೆದಿದ್ದಾರೆ. ಆದರೂ ಮುಖಂಡರಿಗೆ ಸಭೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸಭೆ ನಾಳೆ ಇದೆ ಎಂದಾಗ ಕೇವಲ ಒಂದು ದಿನ ಮಾತ್ರ ಮುಂಚಿತವಾಗಿ ಜನಾಂಗದ ಮುಖಂಡರಿಗೆ ಸಭೆ ಹಾಜರಾಗುವಂತೆ ಆತುರಾತುರವಾಗಿ ಆಹ್ವಾನ ನೀಡಲಾಗಿದೆ. ಈ ಹಿಂದೆ ಹಿತರಕ್ಷಣಾ ಸಭೆ ಇದ್ದಾಗ ಒಂದು ವಾರ ಮುಂಚಿತವಾಗಿ ಜನಾಂಗದ ಮುಖಂಡರಿಗೆ ಸಭೆಗೆ ಆಹ್ವಾನ ನೀಡುತ್ತಿದ್ದರು. ಆದರೆ ಈಗ ಏಕಾಏಕಿ ಸಭೆ ಕರೆಯಲಾಗಿದೆ. ಹಾಗೂ ಸಭಾ ಕಾರ್ಯಸೂಚಿ ಇಲ್ಲದೆ ಸಭೆ ವ್ಯವಸ್ಥೆ ಮಾಡಲಾಗಿದೆ ಎಂದು ಮುಖಂಡರು ಆರೋಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಗ್ರಾಮಗಳ ಅಭಿವೃದ್ದಿಯ ಜೊತೆ ಸಮುದಾಯದ ಬಡಜನರಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರದ ಜೊತೆ ಅಧಿಕಾರಿ ವರ್ಗವು ಸಂಪೂರ್ಣ ವಿಫಲವಾಗಿದೆ. ಕಳೆದ ಎರಡು ವರ್ಷದ ಹಿತರಕ್ಷಣಾ ಸಭೆಯಲ್ಲಿ ತಿಳಿಸಿರುವ ಸಮಸ್ಯೆಗಳೇ ಇನ್ನೂ ಜ್ವಲಂತವಾಗಿ ಉಳಿದಿವೆ. ನೂತನವಾಗಿ ವರ್ಗಾವಣೆ ಆಗಿ ಬಂದಿರುವ ಅಧಿಕಾರಿಗಳು ಹಿಂದಿನ ಸಭೆಯ ಮಾಹಿತಿ ಪಡೆದು ಸಭೆ ನಡೆಸಬೇಕು ಎಂದು ಆಗ್ರಹಪಡಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಕೆ.ಆರ್.ಓಬಳರಾಜು ಮಾತನಾಡಿ, ಎರಡು ವರ್ಷಗಳ ಬಳಿಕ ಹಿತರಕ್ಷಣಾ ಸಮಿತಿ ಸಭೆ ಕರೆಯಲಾಗಿದೆಯಾದರೂ ಸರಿಯಾದ ಕಾರ್ಯಸೂಚಿ ಇಲ್ಲ. ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದಾಗಿ ಆತುರಾತುರವಾಗಿ ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ ವಿನಹ ಹಿತರಕ್ಷಣಾ ಸಭೆಯ ಉದ್ದೇಶದಿಂದ ಕರೆದಿಲ್ಲ. ಮೂರು ತಿಂಗಳಿಗೊಮ್ಮೆ ಮಾಡಬೇಕಾದ ಹಿತರಕ್ಷಣಾ ಸಮಿತಿ ಸಭೆ ವರ್ಷಗಳ ನಂತರ ಮಾಡಲು ಶುರು ಮಾಡಿದ್ದಾರೆ. ಇದು ದಲಿರ ಬಗ್ಗೆ ಇರುವ ನಿರ್ಲಕ್ಷವನ್ನು ತೋರುತ್ತದೆ ಎಂದರು.
ಹೊಳವನಹಳ್ಳಿ ಜಯರಾಮ್ ಮಾತನಾಡಿ, ಅಂಬೇಡ್ಕರ್ ಮತ್ತು ವಾಲ್ಮೀಕಿಅಭಿವೃದ್ದಿ ನಿಗಮದಿಂದ ಫಲಾನುಭವಿಗಳಿಗೆ ದೊರಕಬಹುದಾದ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ನೀಡದೇ ಬಂದ ಹಣ ವಾಪಾಸ್ಸಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕನರಸಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ನಟರಾಜು, ಮುಖಂಡರಾದ ಬಿ.ಡಿ.ಪುರ ಸುರೇಶ್, ಚಿಕ್ಕರಂಗಯ್ಯ, ಹನುಂಂತರಾಜು, ದೊಡ್ಡಯ್ಯ, ಮಹೇಶ, ನರಸಿಂಹಮೂರ್ತಿ, ಗಂಗರಾಜು, ಸಿದ್ದೇಶ, ರಂಗರಾಜು, ಗಣೇಶ್, ಶ್ರೀರಾಮುಲು, ಲಕ್ಷ್ಮಿನಾರಾಯಣ, ಸಿಪಿಐ ಎಫ್.ಕೆ. ನದಾಪ್, ತಾಲ್ಲೂಕು ಪಂಚಾಯಿತಿ ಇಓ ಎಸ್. ಶಿವಪ್ರಕಾಶ್, ಕೃಷಿ ಇಲಾಖೆ ಎಡಿಎ ನಾಗರಾಜು, ರೇಷ್ಮೆಇಲಾಖೆ ಎಡಿಎ ಲಕ್ಷ್ಮೀನರಸಪ್ಪ, ಟಿಎಚ್ಓ ವಿಜಯಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕುಮಾರ್, ಎಸ್ಕಾಂ ಇಲಾಖೆ ಮಲ್ಲಣ್ಣ, ಪಶು ಇಲಾಖೆ ಡಾ. ಶಶಿಕುಮಾರ, ಎಇಇಗಳಾದ ಗಂಗಾಧರ್ ಕೊಡ್ಲಿ, ರಂಗಪ್ಪ, ಮಂಜುನಾಥ, ಅರಣ್ಯಾಧಿಕಾರಿ ಸತೀಶ್ ಚಂದ್ರ ಇತರರು ಇದ್ದರು.
ಈ ಹಿಂದಿನ ಸಭೆಯಲ್ಲಿ ಏನಾಗಿದೆ ಎಂಬುದು ಗೊತ್ತಿಲ್ಲ. ನಾನು ಬಂದು ಒಂದು ತಿಂಗಳಲ್ಲಿ ಸಭೆ ಕರೆದಿದ್ದೇವೆ. ಗ್ರಾಮಪಂಚಾಯಿತಿಯ ಶೇ. 25ರ ಮಾಹಿತಿ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗಿದೆ. ಮುಂದಿನ ಸಭೆಯ ದಿನಾಂಕ ನಿಗಧಿ ಪಡಿಸಿ ತಿಳಿಸಲಾಗುವುದು.
–ಶಮೀಮ್ ಉನ್ನಿಸಾ. ಸಮಾಜಕಲ್ಯಾಣಾದಿಕಾರಿ
ಎಸ್ಸಿ, ಎಸ್ಟಿ ಜನಾಂಗಕ್ಕೆ ಸರ್ಕಾರದಿಂದ ಬರುವ ಸೌಲಭ್ಯಗಳ ನಾಲ್ಕು ವರ್ಷದ ಮಾಹಿತಿ ಮುಂದಿನ ಸಭೆಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಇಲಾಖೆ ಅಧಿಕಾರಿಗಳು ಸಭೆಗೆ ಬರುವಾಗ ಸಮರ್ಪಕ ಮಾಹಿತಿಯೊಂದಿಗೆ ಬರುವಂತೆ ನೊಟೀಸ್ ಜಾರಿ ಮಾಡಲು ಸಮಾಜಕಲ್ಯಾಣಾಧಿಕಾರಿಗೆ ಸೂಚಿಸಲಾಗಿದೆ. ಮಾಹಿತಿ ನೀಡದಿದ್ದರೇ ಮೇಲಾಧಿಕಾರಿ ಗಮನಕ್ಕೆ ತರಲಾಗುವುದು.
–ಬಿ.ಎಂ. ಗೋವಿಂದರಾಜು. ತಹಶೀಲ್ದಾರ್.