Saturday, November 2, 2024
Google search engine
Homeಸಾಹಿತ್ಯ ಸಂವಾದಅಂತರಾಳಶಬ್ದದ ಬೆನ್ನು ಹತ್ತಿ ಹೊರಟೆ..

ಶಬ್ದದ ಬೆನ್ನು ಹತ್ತಿ ಹೊರಟೆ..

ಜಿ.ಎನ್.ಮೋಹನ್


ಸದನದಲ್ಲಿ ಗಣಿ ಗಲಾಟೆ ನಡೀತಾ ಇದ್ದರೆ ನನಗೆ ಮತ್ತೆಮತ್ತೆ ಸಾಯಿನಾಥ್ ನೆನಪಿಗೆ ಬರ್ತಾ ಇದ್ದಾರೆ.

‘Everybody loves a good drought’ ಅನ್ನೋ ಬ್ಯೂಟಿಫುಲ್ ಇಮೇಜ್ ಅನ್ನು ಅವರು ಪತ್ರಿಕೋದ್ಯಮಕ್ಕೆ ಕೊಟ್ಟರು.

ಇದು ಪತ್ರಿಕೋದ್ಯಮಕ್ಕೆ ಮಾತ್ರ ಅಲ್ಲ ಭ್ರಷ್ಟಾಚಾರವನ್ನು ವರ್ಣಿಸೋದಕ್ಕೆ, ಹಣ ಮಾಡೋರ ದರ್ಬಾರ್ ಬಣ್ಣಿಸೋದಿಕ್ಕೆ, ಜನಸಾಮಾನ್ಯರ ಹತಾಶಸ್ಥಿತಿ ಹೇಳೋದಕ್ಕೆ ಎಲ್ಲಕ್ಕೂ ಒಂದು ಒಳ್ಳೆಯ ಸಾಲು.

ಬರ ಅಂದ್ರೆ ಎಲ್ಲರಿಗೂ ಇಷ್ಟ. Everybody loves a good drought.. ಗಣಿ ಗಲಾಟೆ ಆಗ್ತಾ ಇರುವಾಗ ಯಾಕೆ ಇದು ಮತ್ತೆ ಮತ್ತೆ ನೆನಪಿಗೆ ಬಂತು ಅಂದ್ರೆ yes! Everybody loves mining. ಗಣಿಗಾರಿಕೆ ಮಾಡೋದಕ್ಕೆ ಎಲ್ಲರಿಗೂ ಇಷ್ಟ ಅನ್ನೋದು ಹೊಳೆದಾಗ. ‘ಗಣಿಗಾರಿಕೆ’ ಅನ್ನೋ ಶಬ್ದ ಹೇಗೆ ತನ್ನ ಒರಿಜಿನಲ್ ಅರ್ಥ ಬಿಟ್ಟುಕೊಟ್ಟು ಅಕ್ರಮ, ಭ್ರಷ್ಟಾಚಾರ, ದರ್ಬಾರ್ ಅನ್ನೋ ಅರ್ಥ ಪಡೆದುಕೊಂಡುಬಿಟ್ಟಿದೆ!

ಮಂಗಳೂರಿನಲ್ಲಿ ಗೆಳೆಯ ಗೋಪಾಡ್ಕರ್ ‘ಸ್ವರೂಪ ಅಧ್ಯಯನ ಶಿಬಿರ’ ನಡೆಸಿದರು. ನೂರೆಂಟು ವಿಷಯದ ಬಗ್ಗೆ ಚರ್ಚೆ ಬಂತು. ಅದರಲ್ಲಿ ನನಗೆ ತುಂಬಾ ಇಂಟರೆಸ್ಟಿಂಗ್ ಅನಿಸಿದ್ದು ಭಾಷೆ ಅನ್ನೋದು ಹೇಗೆ ತನ್ನ ಬಣ್ಣ ಬದಲಾಯಿಸಿಕೊಳ್ಳುತ್ತೆ ಅನ್ನೋದು.

ಭಾಷೆ ಅನ್ನೋದು ಊಸರವಳ್ಳಿ ಥರಾ. ಅದಕ್ಕೆ ನಿಮಿಷ ನಿಮಿಷಾನೂ ಬಣ್ಣ ಬದಲಾಯಿಸಿಕೊಳ್ತಾ ಇದ್ರೆ ಖುಷಿ.

ಪತ್ರಿಕೋದ್ಯಮ ಅನ್ನೋದೇ ಪದಗಳ ರಿಸರ್ವ್ ಬ್ಯಾಂಕ್ ಅಂತ ಹಿರಿಯರು ಕರೆದಿದ್ದು ಅದಕ್ಕೇ ಅಲ್ಲವಾ.. ಇಲ್ಲಿ ಪ್ರತೀ ದಿನ ಪದಾ ಹುಟ್ಟುತ್ತೆ. ಅಷ್ಟೇ ಅಲ್ಲ ಇರೋ ಪದ ಬಣ್ಣ ಬದಲಾಯಿಸಿಕೊಳ್ಳುತ್ತೆ, ಹೊಸ ಅರ್ಥ ಪಡೆದುಕೊಳ್ಳುತ್ತೆ.

ಕೈಮಾ ಉಂಡೆ ಹೇಗೆ ಮಾಡ್ತಾರೆ ಅಂತ ಗೊತ್ತಾ… ಪತ್ರಕರ್ತರೂ ಸಹಾ ಥೇಟ್ ಅದೇ ಸ್ಟೈಲ್ ನಲ್ಲಿ ತಮ್ಮ ಎದುರುಗಡೆ ಪದಗಳನ್ನು ಹರಡಿಕೊಂಡು ಕೈಯಲ್ಲಿ ಕತ್ತಿ ಬದಲು ಪೆನ್ ಹಿಡಕೊಂಡು ಕಚಕಚ ಅಂತ ಕತ್ತರಿಸಿ ಕೈಮಾ ಮಾಡಿಬಿಡ್ತಾರೆ.

ಎಚ್.ಎನ್. ಆನಂದ ‘ಸುಧಾ’ಗೆ ಒಂದು ಲೇಖನ ಬರೆದಿದ್ದರು. ಶಿವಾರಪಟ್ಟಣದ ಬಗ್ಗೆ. ಶಿವಾರಪಟ್ಟಣ ಹೇಳಿ ಕೇಳಿ ಶಿಲ್ಪಿಗಳ ತವರು. ಯಾವುದೇ ದೇವಸ್ಥಾನಕ್ಕೆ ದೇವರ ಶಿಲ್ಪ ಬೇಕೆಂದರೆ ಜನ ನೇರವಾಗಿ ಹುಡುಕಿಕೊಂಡು ಬರುವುದು ಶಿವಾರಪಟ್ಟಣದ ಶಿಲ್ಪಿಗಳನ್ನು.

ಆನಂದ ಈ ಊರಿನ ಬಗ್ಗೆ ಒಂದು ಲೇಖ ಬರೆದರು. ಅದಕ್ಕೆ ಅವರು ಕೊಟ್ಟ ಹೆಸರು ‘ಇಲ್ಲಿ ದೇವರುಗಳನ್ನು ಸೃಷ್ಟಿಸಲಾಗುತ್ತದೆ’ ಅಂತ.

ವಾರೆವ್ವಾ! ಅನಿಸಿತು. ದೇವರು ಸೃಷ್ಟಿಕರ್ತ. ಅಂತಹ ಸೃಷ್ಟಿಕರ್ತನನ್ನೇ ಇಲ್ಲಿ ಸೃಷ್ಟಿಸಲಾಗುತ್ತದೆ ಅನ್ನುವುದು ಹೊಳೆದದ್ದು ಆನಂದ್ ಗೆ ಅರ್ಥಾತ್ ಮೀಡಿಯಾಮ್ಯಾನ್ ಗೆ. ಪತ್ರಕರ್ತ ಅಂದರೆ ಹಾಗೇ ಆತ ಸೃಷ್ಟಿಕರ್ತ.

ಸ್ವರೂಪ ಶಿಬಿರದಲ್ಲಿ ಮಾತಾಡುವಾಗ ಒಂದು ಶಬ್ದಕ್ಕೆ ಹೇಗೆ ಸಂಕುಚಿತಾರ್ಥ, ವಿಶಾಲಾರ್ಥ, ಅನ್ಯಾರ್ಥ ಬರುತ್ತೆ ಅಂತ ವಿವರಿಸುತ್ತಿದ್ದೆ.

ಆಗ ತಟ್ಟನೆ ಹೊಳೆದದ್ದು ‘ಸೂಟ್ ಕೇಸ್’.

ಪಾಪ ನಾವು ನೀವೆಲ್ಲಾ ಹೆಂಡತಿ ಮಕ್ಕಳೊಡನೆ ಎಲ್ಲಿಗಾದರೂ ಒಂದಷ್ಟು ದಿನ ಹೋಗಿ ಬರುವಾಗ ಅಟ್ಟದ ಮೇಲಿದ್ದ ಸೂಟ್ ಕೇಸ್ ಕೆಳಗಿಳಿಯುತ್ತೆ. ಆದರೆ ಅದೇ ರಾಜಕಾರಣಿಗಳು ಸೂಟ್ ಕೇಸ್ ಹಿಡಿದುಕೊಂಡಿದ್ದರೆ ಯಾವ ಅರ್ಥ ಬರುತ್ತದೆ. ಪತ್ರಿಕೆಗಳಲ್ಲಿ ಸೂಟ್ ಕೇಸ್ ವ್ಯವಹಾರ ನಡೆಯುತ್ತಿದೆ ಎಂದು ಬರೆದೂ ಬರೆದೂ ಸೂಟ್ ಕೇಸ್ ಅರ್ಥವೇ ಬದಲಾಗಿ ಹೋಗಿದೆ.

ಇನ್ನೊಂದು ‘ಕುದುರೆ ವ್ಯಾಪಾರ’. ಕುದುರೆ ಕೊಂಡುಕೊಳ್ಳುವುದಕ್ಕೂ ರಾಜಕಾರಣಕ್ಕೂ ಏನು ಸಂಬಂಧ?. ಆದರೆ ರಾಜಕಾರಣದಲ್ಲಿ ಕುದುರೆ ವ್ಯಾಪಾರ ಎಂದಾಕ್ಷಣ ಹೊಸ ಅರ್ಥ ಹೊಳೆದುಬಿಡುತ್ತೆ. ಒಂದು ಶಬ್ದ ತನ್ನ ಬಣ್ಣ ಬದಲಾಯಿಸಿ ಕೊಳ್ಳುವುದೇ ಹೀಗೆ.

‘ಈಟಿವಿ’ಯಲ್ಲಿದ್ದಾಗ ಒಂದು ಘಟನೆ ನಡೆದುಹೋಯ್ತು. ಜರ್ನಲಿಸಂ ವಿದ್ಯಾರ್ಥಿಯೊಬ್ಬನನ್ನು ಕ್ಯಾಂಪಸ್ ಸೆಲೆಕ್ಷನ್ ಮಾಡಿಕೊಂಡಿದ್ವಿ. ಆತ ಆಗಲೇ ‘ಅಫೇರ್’ನಲ್ಲಿದ್ದ. ಆತನಿಗೆ ಆಕೆಯ ಬಗ್ಗೆ ಇನ್ನಿಲ್ಲದ ಕಾಳಜಿ. ಹಾಗಿರುವಾಗ ಅವಳನ್ನು ಬಿಟ್ಟು ದೂರದ ಹೈದ್ರಾಬಾದ್ ಗೆ ಹೋಗಬೇಕಲ್ಲಾ ಅಂತ ಚಿಂತೆ. ಆತ ಅತೀವ ಮುತುವರ್ಜಿಯಿಂದ ತನ್ನ ಗೆಳೆಯನ ಬಳಿ ದುಃಖ ತೋಡಿಕೊಂಡ. ನಾನು ತುಂಬಾ ದೂರದಲ್ಲಿರ್ತೀನಿ. ನೀನು ಅವಳನ್ನು ಕೇರ್ ಮಾಡ್ಬೇಕು ಗುರು ಅಂದ. ಭಾಷೆ ತೆಗೆದುಕೊಂಡು ರಾಮೋಜಿ ಫಿಲಂ ಸಿಟಿಗೆ ಬಂದಿಳಿದ.

ಒಂದು ವರ್ಷ ಆಯ್ತು. ಆತನ ಎದೆ ಒಡೆದುಹೋಗುವ ಸುದ್ದಿ ಬಂತು. ಆ ಹುಡುಗಿ ಆ ಹುಡುಗ ಮದುವೆಯಾಗಿಬಿಟ್ಟರು. ಇದಾಗಿ ಎರಡು ವರ್ಷ ಆಯ್ತು. ಅವನು ನನ್ನ ಜೊತೆ ತನ್ನ ಕಥೆ ಎಲ್ಲಾ ಹೇಳ್ತಾ ಇದ್ದ. ‘ಅವನು ನನ್ನ ಫ್ರೆಂಡು ಅನ್ಕೊಂಡಿದ್ದೆ ಸಾರ್’ ಆದ್ರೆ ಅವನೇ ನನ್ನ ಬಾಳಲ್ಲಿ ‘ಆಪರೇಷನ್ ಕಮಲ’ ಮಾಡ್ಬಿಟ್ಟ’ ಅಂದ.

ನನ್ನ ಕಿವಿ ಮತ್ತೆ ಚುರುಕಾಯಿತು. ಎಲಾ.. ಎಲಾ.. ಒಂದು ಶಬ್ದ ಹೇಗೆ ಗುಬ್ಬಿ ವೀರಣ್ಣ ನಾಟಕ ಕಂಪನಿಯವರ ಥರಾ ವೇಷ ಬದಲಾಯಿಸಿಕೊಳ್ಳುತ್ತಲ್ಲಾ ಅಂತ ಆಶ್ಚರ್ಯ ಆಯ್ತು.

ಇನ್ನೊಂದು ಪ್ರಸಂಗ ಆಯ್ತು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಫುಟ್ಬಾಲ್ ಫೈನಲ್ ನೋಡ್ತಾ ಇದ್ವಿ. ಜಬುಲಾನಿ ಬಾಲ್ ಒಳ್ಳೆ ರಿಂಗ್ ಮಾಸ್ಟರ್ ಕೈಗೆ ಸಿಕ್ಕ ಹುಲೀ ಥರ ಆಗಿತ್ತು. ಹೇಗೆ ಬೇಕಾದ್ರೆ ಹಾಗೆ ತಿರುಗುತ್ತಾ ಇತ್ತು. Look at him he is doing ‘ಶಕೀರ’ to the ball ಅಂದ ನನ್ನ ಮೀಡಿಯಾ ಗೆಳೆಯ.

ಶಕೀರಾ ಹಾಗೂ ಬಾಲು ಎರಡೂ ತಿರುಗೋದು ಒಂದೇ ಥರಾ ಅನ್ನೋದು ಅವನ ಮೀನಿಂಗ್. ಬದಲಾವಣೆ ಹೇಗೆಲ್ಲಾ ಸಾಧ್ಯ ಅಲ್ವಾ?

ಗುಲ್ಬರ್ಗಾದಲ್ಲಿ ‘ಪ್ರಜಾವಾಣಿ’ಯಲ್ಲಿದ್ದ ದಿನಗಳು. ಹೈದ್ರಾಬಾದ್ ಕರ್ನಾಟಕಕ್ಕೇ ಒಂದು ವಿಶೇಷ ಆವೃತ್ತಿ ತರಬೇಕು ಅಂತ ಸಿದ್ಧತೆ ನಡೆದಿತ್ತು. ಆಗ ಕೆ.ಎನ್.ತಿಲಕ್ ಕುಮಾರ್ ಮೇಲಿಂದ ಮೇಲೆ ಸಿದ್ಧತಾ ಸಭೆ ನಡೆಸ್ತಾ ಇದ್ರು. ಒಂದು ಸಲ ಸಾಹಿತಿಗಳ, ಕಲಾವಿದರ, ಓದುಗರ ಸಭೆ ಕರೆದಿದ್ರು.

ವೀರಭದ್ರ ಸಿಂಪಿ ಎಂದಿನ ತನ್ನ ದೊಡ್ಡ ದನಿಯಲ್ಲಿ ಏನೇನೋ ಸಜೆಷನ್ ಕೊಟ್ಟ. ಪಕ್ಕದಲ್ಲಿದ್ದ ತಿಲಕ್ ಕುಮಾರ್ ನನ್ನ ಕಿವಿಯಲ್ಲಿ ‘ಕ್ವಿಕ್ಸಾಟಿಕ್’ ಅಂದ್ರು. ನಾನು ಹಲ್ಲು ಬಿಟ್ಟೆ. ಕ್ವಿಕ್ಸಾಟಿಕ್ ಅಂದ್ರೆ ಏನು ಅನ್ನೋದು ಗೊತ್ತಿದ್ರೆ ತಾನೇ ಎರಡನೇ ಮಾತಾಡೋದಿಕ್ಕೆ.

ನನ್ನ ತಲೆಯಲ್ಲಿ ಗುಂಗೀ ಹುಳು ಬಿಟ್ಟ ಹಾಗಾಯ್ತು. ಮೀಟಿಂಗ್ ಮುಗಿಸಿ ಮನೆಗೆ ಬಂದವನೇ ಮೊದಲು ಕೈಹಾಕಿದ್ದು ಡಿಕ್ಷನರಿಗೆ. ಮಣ ಭಾರದ ಮೈಸೂರು ಯೂನಿವರ್ಸಿಟಿ ಡಿಕ್ಷನರಿ ತಿರುವಿ ಹಾಕಿದಾಗ ಕಂಡದ್ದು ‘ಭಾವನಾ ರಾಜ್ಯದವರು, ಉದಾತ್ತವಾದರೂ ಕಾರ್ಯಸಾಧ್ಯವಲ್ಲದ ಕೆಲಸಗಳನ್ನು ಹಿಡಿದು ಹೋಗುವವರು’ ಅಂತ.

ಓಹ್! ಗೊತ್ತಾಯಿತು ಬಿಡು ಅಂತ ನಿಘಂಟನ್ನು ಹಾಗೇ ಕೆಳಕ್ಕಿಟ್ಟುಬಿಡುತ್ತಿದ್ದೇನೇನೋ? ಈ ಪದ ಸ್ಪಾನಿಷ್ ಭಾಷೆಯ ಕಾದಂಬರಿಯ ನಾಯಕ ಡಾನ್ ಕ್ವಿಕ್ಸೊಟ್ ಎನ್ನುವನ ಹೆಸರಿನಿಂದ ರೂಪುಗೊಂಡಿರಬಹುದು ಅಂತಿತ್ತು. ಎಲಾ ಇವನ! ಕಾದಂಬರಿಯ ಒಂದು ಪಾತ್ರವೇ ಒಂದು ಶಬ್ದ ಆಗಿಬಿಡೋದ ಹೇಗೆ ಅಂತ ಕುತೂಹಲ ಕೆರಳ್ತು.

ಅಲ್ಲಿಂದ ಶುರುವಾಯ್ತು ನೋಡಿ ಈ ಶಬ್ದಗಳ ಬೆನ್ನತ್ತೋ ಆಟ. ಯಾವುದೇ ಶಬ್ದ ಕೈಗೆ ಸಿಕ್ಕರೂ ಅದನ್ನ ತಿರುಗಿ ತಿರುಗಿಸಿ ನೋಡ್ತಿದ್ದೆ. ಇದು ಎಲ್ಲಿಂದ, ಹೇಗೆ ಬಂದಿರಬಹುದು. ಏನಾಗಿ ಬದಲಾಗಿರಬಹುದು. ಯಾಕೆ ಬದಲಾಗಿರಬಹುದು ಅಂತ.

ಪತ್ರಕರ್ತನಿಗೆ ಬರೀ ಸುದ್ದಿ ಹಿಡಿಯೋ ಮೂಗಿದ್ರೆ ಮಾತ್ರ ಸಾಲದು, ಶಬ್ದಗಳ ವಾಸನೆ ಹಿಡಿಯೋ ಮೂಗೂ ಇರಬೇಕು ಅನಿಸ್ತು.

ಹೀಗೆ ಹುಡುಕುತ್ತಾ ಹುಡುಕುತ್ತಾ ಇರುವಾಗ ಸಿಕ್ಕಿಹಾಕಿಕೊಂಡಿದ್ದು ವಿಲ್ಪ್ರಡ್ ಫಂಕ್. ಅವನೂ ನನ್ನ ಥರಾನೇ ಹುಚ್ಚ. ಒಂದಲ್ಲಾ ಎರಡಲ್ಲಾ ಹತ್ತಾರು ವರ್ಷದಿಂದ ಶಬ್ದಗಳ ಬೆನ್ನ ಹಿಂದೆ ಬಿದ್ದಿದ್ದಾನೆ. ಅಷ್ಟೇ ಅಲ್ಲ ಶಬ್ದಗಳ ಕಥೇನಾ ಹಿಡಿದೂ ಹಿಡಿದೂ ಒಂದು ಪುಸ್ತಕದಲ್ಲಿ ಕೂಡಿಟ್ಟಿದ್ದಾನೆ.

ಆತ ಹೇಳಿದ- ಶಬ್ದಗಳೂ ಸಹಾ ನಮ್ಮ ಥರಾನೇ ಜೀವನ ಮಾಡುತ್ತೆ. ಅವು ನಮ್ಮ ಥರಾನೇ ಹುಟ್ಟುತ್ತೆ, ಅಂಬೆಗಾಲಿಡುತ್ತೆ, ಎಡವಿ ಬೀಳುತ್ತೆ, ಎದ್ದು ನಿಲ್ಲುತ್ತೆ, ಆಟ ಆಡುತ್ತೆ, ಯೌವ್ವನ ಬರುತ್ತೆ, ನೆಲ ಕಾಣದ ರೀತಿ ಓಡಾಡುತ್ತೆ, ವಯಸ್ಸಾಗುತ್ತೆ, ಮುದಿಯಾಗುತ್ತೆ. ನಮ್ಮ ಥರಾನೇ ಒಂದು ದಿನ ‘ಹರಹರಾ’ ಅಂತ ಪ್ರಾಣ ಬಿಡುತ್ತೆ ಅಂತ.

ಕನ್ನಡದಲ್ಲಿ ಮಹಾಬಲ ಸೀತಾಳಭಾವಿ ಸುಭಾಷಿತಗಳ ಬಗ್ಗೆ ಬರೆಯೋರು. ಬರೀ ಅರ್ಥ ಅಲ್ಲ. ಅದು ಹೇಗೆ ಯಾವಾಗ ಹುಟ್ಟಿದೆ ಅಂತ. ಗಾದೆಗಳ ಬಗ್ಗೆಯೂ ಅಷ್ಟೆ. ಈ ಗಾದೆ ಯಾಕೆ ಹುಟ್ಟಿತು ಅನ್ನೋದೇ ಒಳ್ಳೆ ಥ್ರಿಲ್ಲರ್ ಕಥೆ ಥರಾ ಇರುತ್ತೆ. ಹಾಗೇ ಪದಗಳ ಬಗ್ಗೇನೂ ಕಥೆ ಹೇಳೋವರಿದ್ರೆ ಎಷ್ಟು ಚೆನ್ನ ಅನಿಸಿತ್ತು.

ಜಿ.ಕೆ. ಮಧ್ಯಸ್ಥ ಅಂಡ್ ಗ್ಯಾಂಗ್ ವಿಜಯ ಕರ್ನಾಟಕದಲ್ಲಿ ‘ಪದೋನ್ನತಿ’ ಶುರು ಮಾಡೇಬಿಡ್ತು. ‘ಚರನ್ ವೈ ಮಧು ವಿಂದತಿ’- ಚಲಿಸಿದವನು ಜೇನನ್ನು ಸಂಗ್ರಹಿಸ್ತಾನೆ ಅಂತ. ಹಾಗೇ ಪದಗಳೂ ಅಷ್ಟೇ. ಅವು ಚಲಿಸುತ್ತೆ. ಹಾಗೆ ಚಲಿಸುತ್ತಾ ಚಲಿಸುತ್ತಲೇ ತುಂಬಾ ಸ್ವೀಟ್, ಸ್ವೀಟಾಗಿ ಬದಲಾಗಿಬಿಡುತ್ತೆ.

‘album’ ಕಥೆ ನೋಡಿ. ಮದುವೆ ಆಲ್ಬಂ ಅಂತ ಬಳಸ್ತೀವಿ. ಆಲ್ಬಂ ಅರ್ಥ ಏನು ಅಂತ ಹುಡುಕಿದ್ರೆ ‘white, ಬಿಳಿ’ ಅಂತ. ಆಲ್ಬಂ ಅನ್ನೋದು ಫ್ರೆಂಚ್ ನ albus ಅನ್ನೋ ಹೆಸರಿನಿಂದ ಹುಟ್ಟಿದ್ದು.

ಖಾಲಿ ಅಥವಾ ಬಿಳಿ ಅನ್ನೋದಕ್ಕೆ ಆಲ್ಬಂ ಅಂತ ಕರೀತಿದ್ರು. ರೋಂನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಅಂಟಿಸೋದಿಕ್ಕೆ ಇಟ್ಟಿದ್ದ ಖಾಲಿ ಫಲಕಗಳನ್ನು ಆಲ್ಬಂ ಅಂತ ಕರೀತಿದ್ರು. ಲ್ಯಾಟಿನ್ ಭಾಷೆಗೆ ಬಂದ ಈ ಪದ ನಂತರ ಈಗಿನ ಅರ್ಥದ ‘ಆಲ್ಬಂ’ ಆಗಿದೆ.

ಮೊನ್ನೆ ಗಣಿ ಗಲಾಟೆ ನಡೀತಾ ಇರುವಾಗ ಬರೋ ಶಬ್ದಗಳ ಮೇಲೆಲ್ಲಾ ಒಂದು ಕಣ್ಣಿಟ್ಟಿದ್ದೆ. ‘ವಿಲನ್’ ಅಂತ ಆರೋಪ ಪ್ರತ್ಯಾರೋಪ ಮಾಡಿದ್ರು. ವಾದವಿವಾದ ಎಲ್ಲಾ ಆಗೋಯ್ತು. ನಾನು ವಿಲನ್ ಶಬ್ದದ ಬೆನ್ನತ್ತಿದೆ.

ಹಾಂ..!! ವಿಲನ್ ಅನ್ನೋದರ ನಿಜವಾದ ಅರ್ಥ ‘ರೈತ’ ಅಂತ. ಈ ಪದ ಫ್ರೆಂಚ್ ನಿಂದ ಲ್ಯಾಟಿನ್ ಗೆ ಬಂತು. ಲ್ಯಾಟಿನ್ ನಲ್ಲಿ ಜಮೀನು, ಮನೆ ಅನ್ನೋದಕ್ಕೆ vill ಅಂತಾರೆ. ಹಾಗಾಗಿ ಜಮೀನು ಮಾಡಿಸುವವರು, ನೋಡಿಕೊಳ್ಳುವವರು ಅರ್ಥಾತ್ ಮಣ್ಣಿನ ಮಗ ಅನ್ನೋ ಶಬ್ದ ಬಂದುಬಿಡ್ತು.

ಸರಿ ವಿಲನ್ ಅಂದ್ರೆ ರೈತ ಅಂತಾಯ್ತು ಹಾಗಾದ್ರೆ ರೈತ-ಫಾರ್ಮರ್ ಅನ್ನುವ ಶಬ್ದದ ಅರ್ಥ ಏನಿರಬಹುದು ಅಂತ ಕುತೂಹಲ ಆಯ್ತು.

ಮತ್ತೆ ಪುಟ ಮಗುಚ್ತಾ ಕೂತೆ. Farmer ಅಂದ್ರೆ ತೆರಿಗೆ ಅಂತ ಅರ್ಥ ಬರೋದಾ..? governer ಅಂದ್ರೆ ಹಡಗನ್ನ ನಿರ್ದೇಶಿಸುವವರು, protocol ಅಂದ್ರೆ ಅಂಟು, bribe ಅಂದ್ರೆ ಬ್ರೆಡ್ಡಿನ ತುಂಡು, candidate ಅಂದ್ರೆ ಬಿಳಿ ಬಟ್ಟೆ ಧರಿಸಿದವರು…

ಅಯ್ಯೋ ಶಿವನೆ ಏನೇನೆಲ್ಲಾ ಅರ್ಥ.

ಶಬ್ದ ಅನ್ನೋದು ಭೃಂಗವಿದ್ದ ಹಾಗೆ. ಅದರ ಬೆನ್ನೇರಿ ಎಷ್ಟೊಂದು ಕಲ್ಪನಾ ವಿಲಾಸ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?