Tuesday, September 10, 2024
Google search engine
Homeಜೀವನ ಚರಿತ್ರೆರಾಜಕಾರಣ ನನ್ನ ಆದ್ಯತೆಯಲ್ಲ: ನಾಡೋಜ ಡಾ ವೂಡೇ ಪಿ ಕೃಷ್ಣ

ರಾಜಕಾರಣ ನನ್ನ ಆದ್ಯತೆಯಲ್ಲ: ನಾಡೋಜ ಡಾ ವೂಡೇ ಪಿ ಕೃಷ್ಣ

ಕಳೆದ ಸಂಚಿಕೆಯಿಂದ…….

ಯುವಜನ ಸೇವೆ.

ನಮ್ಮ ಸಮಾಜದ ನಾಳಿನ ಪ್ರಜೆಗಳಾದ ಇಂದಿನ ಯುವಜನಾಂಗದ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಅಪಾರ ಆಸಕ್ತಿಯಿರುವ ಡಾ. ಕೃಷ್ಣ ಅವರು ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಾ, ವಿವಿಧ ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ. ಯುವಶಕ್ತಿಯನ್ನು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸುವ ಅಂತಹ ಕಾರ್ಯಕ್ರಮಗಳಲ್ಲಿ ಮತ್ತು ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೇರಕರಾಗಿದ್ದಾರೆ. ಯುವಜನರ ಶ್ರೇಯೋಭಿವೃದ್ಧಿಗಾಗಿ ಯೂತ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷರಾಗಿರುವ ಇವರು ಹಿಮಾಲಯ ಟ್ರೆಕ್ಕಿಂಗ್ (ಚಾರಣ) ಕಾರ್ಯಕ್ರಮಗಳೂ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಡ್ವೆಂಚರ್ ಕ್ಲಬ್‌ಗಳನ್ನು ರೂಪಿಸುವಲ್ಲಿ ಶ್ರಮಿಸಿದ್ದಾರೆ. ಇವರು ನವಜೀವನ ಫಿಸಿಕಲ್ ಕಲ್ಟರ್ ಇನ್‌ಸ್ಟಿಟ್ಯೂಟ್‌ನ ಉಪಾಧ್ಯಕ್ಷರೂ ಹೌದು. ಈ ಸಂಸ್ಥೆಯು ಯುವಕರಿಗಾಗಿ ಉಚಿತ ವ್ಯಾಯಾಮ ಶಾಲೆ, ವಿದ್ಯಾರ್ಥಿನಿಲಯ ಹಾಗೂ ಒಂದು ಚಿಕಿತ್ಸಾಲಯವನ್ನು ನಡೆಸುತ್ತಿದೆ. 1863ರಲ್ಲಿ ಪ್ರಾರಂಭಗೊಂಡ ಒಂದು ಸೇವಾಸಂಸ್ಥೆ- ಶ್ರೀನಿವಾಸ ಮಂದಿರಮ್ ಧರ್ಮಸಂಸ್ಥೆ. ಡಾ. ಕೃಷ್ಣ ಅವರು ಇದರ ಆಡಳಿತ ಮಂಡಳಿಯಲ್ಲಿ ಸರ್ಕಾರದಿಂದ ನಾಮನಿರ್ದೇಶನ ಗೊಂಡ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ಯುವಜನ ಸೇವಾಕ್ಷೇತ್ರಕ್ಕೆ ಇವರು ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು 1992ರಲ್ಲಿ ಇವರಿಗೆ ‘ರಾಜ್ಯ ಯುವ ಪ್ರಶಸ್ತಿ’ಯನ್ನಿತ್ತು ಸತ್ಕರಿಸಿದೆ.

ಇವರು ರಾಜಕೀಯವಾಗಿ ಬೆಳೆಯಬಹುದಿತ್ತಾದರೂ, ‘ನನಗೆ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಇಷ್ಟ. ಹಾಗಾಗಿ ರಾಜಕಾರಣ ನನ್ನ ಆದ್ಯತೆಯಲ್ಲ’ ಎಂದು ಪ್ರಾಮಾಣಿಕವಾಗಿ ನುಡಿಯುತ್ತಾರೆ. ಪರಿಸರದ ಬಗ್ಗೆ, ಕಾನೂನಿನ ಅನುಕೂಲತೆ-ಅನಾನುಕೂಲತೆಗಳ ಬಗ್ಗೆ, ಗಾಂಧೀ ವಿಚಾರಧಾರೆಯ ಬಗ್ಗೆ ನಿರರ್ಗಳವಾಗಿ ಮನಮುಟ್ಟುವಂತೆ, ಕೇಳುಗರಿಗಿಷ್ಟವಾಗುವಂತೆ ಮಾತನಾಡಬಲ್ಲರು. ಹಲವು ಹತ್ತು ಪ್ರತಿಷ್ಠಿತ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿರುವ ಕೃಷ್ಣ ಅವರದ್ದು ಬಹುಮುಖ ಅನ್ನುವುದಕ್ಕಿಂತ ಶತಮುಖ ಪ್ರತಿಭೆ ಎಂದರೆ ಮಾತ್ರ ಸರಿಹೋದೀತು.

ಸದಾಶಿವನಗರ ವಾಸಿಗಳಿಗೆ ಸಾಮಾನ್ಯ ಜನರ ನೋವು-ನಲಿವು, ಕಷ್ಟ-ಸುಖ ಅರ್ಥವಾಗುವುದು ಕಷ್ಟ ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ಅಲ್ಲಿನ ಹೃದಯ ಭಾಗದಲ್ಲಿದ್ದುಕೊಂಡೇ ರಚನಾತ್ಮಕ ಕಾರ್ಯಗಳಲ್ಲಿ ವೈಯಕ್ತಿಕವಾಗಿ ಮತ್ತು ವೂಡೇ ಪ್ರತಿಷ್ಠಾನದ ಮುಖಾಂತರ ತೊಡಗಿಸಿಕೊಂಡಿರುವ ಕೃಷ್ಣ, ಸದಾಶಿವನಗರ ಯುವಕ ಸಂಘದ ಸಂಸ್ಥಾಪಕ ಸದಸ್ಯರಾಗಿ ಹಲವು ವರ್ಷಗಳಿಂದ ಅದರ ಅವಿಭಾಜ್ಯ ಅಂಗವಾಗಿ ದುಡಿಯುತ್ತಿರುವ ಅವರ ಪ್ರಾಮಾಣಿಕತೆ ಅನನ್ಯವಾದುದು.

ಹತ್ತು ಹಲವು ಪದವಿಗಳನ್ನು ಪಡೆದು ವೃತ್ತಿಯಲ್ಲಿ ಇಂಜಿನಿಯರ್ ಎಂದು ಕರೆಸಿಕೊಂಡು ಮನೆಯಲ್ಲೇ ಕುಳಿತು ಸುಖಪಡುವ ಎಲ್ಲ ಸೌಲಭ್ಯಗಳಿದ್ದರೂ ಕೃಷ್ಣ ಜನಸಾಮಾನ್ಯರಿಗಾಗಿ ಸ್ಪಂದಿಸುತ್ತಾರಲ್ಲ ಅದೇ ವೂಡೇ ವಂಶದ ವಿಶೇಷ ಎನ್ನಬಹುದು. ಇವರ ಇಡೀ ಮನೆತನವೇ ಸಮಾಜ ಸೇವೆಯಲ್ಲಿ

ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಜನಾನುರಾಗಿಯಾಗಿ ಸೇವೆ ಮಾಡಲು ರಾಜಮಾರ್ಗವನ್ನು ಹಾಕಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಅದನ್ನು ನಿರ್ವಂಚನೆಯಿಂದ ಡಾ.ಕೃಷ್ಣರವರು ನೆರವೇರಿಸುತ್ತಿದ್ದಾರೆ.

ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾರ್ವಜನಿಕ ಕಾಳಜಿಯ ಪತ್ರಗಳನ್ನು ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಗಳ ‘Letters to the Editor’ ಕಾಲಂಗೆ ಸತತವಾಗಿ ಬರೆಯುವ ಹವ್ಯಾಸ ಅವರದಾಗಿತ್ತು. ಇಂಥ ನೂರಾರು ಪತ್ರಗಳು ಅವರ ಸೇವಾಮನೋಭಾವದ ವಿವಿಧ ಮುಖಗಳನ್ನು ಬಿಂಬಿಸುತ್ತವೆ. ಹಾಗೂ ತಮ್ಮಂತೆಯೇ ಸೇವಾಕ್ಷೇತ್ರದಲ್ಲಿರುವ ಧುರೀಣರ ಬಗ್ಗೆ ಅನೇಕ ವ್ಯಕ್ತಿಚಿತ್ರಗಳನ್ನು ಬರೆದಿದ್ದಾರೆ. ಅವು ‘ಬೆಳ್ಳಕ್ಕಿ ಸಾಲು’ ಎಂಬ ಕೃತಿಯಲ್ಲಿ ಸಂಕಲಿತಗೊಂಡಿವೆ. ಸ್ವಯಂ ಇಂಜಿನಿಯರ್ ಆಗಿರುವ ತಾವು ತಮ್ಮ ಆದರ್ಶದ ಇಂಜಿನಿಯರ್ ಆಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ ಸಿದ್ಧಿ-ಸಾಧನೆಗಳನ್ನು ಕುರಿತು ಒಂದು ಕಿರುಹೊತ್ತಿಗೆಯನ್ನು ಪ್ರಕಟಿಸಿದ್ದಾರೆ.

ಅನೇಕ ಸಭೆ-ಸಮಾರಂಭಗಳಲ್ಲಿ ಇವರು ಮಾಡಿದ ವಿದ್ವತ್ತೂರ್ಣ ಭಾಷಣಗಳು, ಅವರು ಇಂಗ್ಲಿಷ್ ಪತ್ರಿಕೆಗಳ ವಾಚಕರವಾಣಿಗೆ ಬರೆದ ಪತ್ರಗಳು ಸೇರಿದಂತೆ ಅವು ‘Beyond the Boundaries’ ಕೃತಿಯಲ್ಲಿ ಸಂಕಲಿತಗೊಂಡಿವೆ. ಅವರ ಈ ಎಲ್ಲಾ ಕೃತಿಗಳೂ ಮನನೀಯವಾಗಿವೆ.

ಅಂಥ ಬಹುಮುಖ ವ್ಯಕ್ತಿತ್ವದ ಕೃಷ್ಣ ಅವರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಸಮರ್ಪಿಸಿದ ‘ಕೃಷ್ಣಸಿರಿ” ಎಂಬ ಸಂಭಾವನಾ ಗ್ರಂಥ ಅವರ ಬದುಕಿನ ವಿವಿಧ ಮಜಲುಗಳ ವಿರಾಟ್ ದರ್ಶನ ಮಾಡಿಸುತ್ತದೆ.

ಮುಂದುವರೆಯುವುದು……

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?