ಕಳೆದ ಸಂಚಿಕೆಯಿಂದ…….
ಇವರ ದೂರದರ್ಶಿತ್ವ ,ಸ್ನೇಹಶೀಲ ವ್ಯವಹಾರ, ಮಂದಹಾಸ ಸರಳತೆ , ಸಜ್ಜನಿಕೆ, ಎಲ್ಲರೊಳಗೊಂದಾಗಿ ಬೆರೆಯುವ ವ್ಯಕ್ತಿತ್ವದ ಕೃಷ್ಣ ಅವರ ಶೈಕ್ಷಣಿಕ ಸೇವೆ ಅನನ್ಯವಾದದ್ದು. ಕೃಷ್ಣರವರು ಇಂಜಿನಿಯರಿಂಗ್, ಕಾನೂನು ಹಾಗೂ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದಿರುವುದು ಇವರ ಶಿಕ್ಷಣ ಕ್ಷೇತ್ರದ ಸೇವೆಗೆ ಪೂರಕವಾಗಿದೆ.
ಈ ಸಂಸ್ಥೆ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ಉನ್ನತ ಶಿಕ್ಷಣದ ವಲಯಗಳಿಗೆ ವಿಸ್ತರಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟವನ್ನು ತಲುಪಿದ್ದಾರೆ ಅದಕ್ಕೆ ಕಾರಣ ಡಾ. ಕೃಷ್ಣರವರು.
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಾದ “ಭಾರತೀಯ ವಿಶ್ವ ಶಾಂತಿ ಶಿಕ್ಷಣ ಪ್ರತಿಷ್ಠಾನ”ದ ಅಧ್ಯಕ್ಷರಾಗಿ, ಸದಾಶಿವನಗರದ ಶಿಕ್ಷಣ ಸಂಸ್ಥೆಗಳ ಆಡಳಿತ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಖಾಸಗಿ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳ ಸಂಘದ ಕಾರ್ಯದರ್ಶಿಯಾಗಿ, ಆಚಾರ್ಯ ವಿನೋಬಾ ಭಾವೆಯವರಿಂದ ಸ್ಥಾಪಿಸಲಾದ ವಿಶ್ವ ನೀಡಂ ದತ್ತಿಯ ಟ್ರಸ್ಟಿಯಾಗಿ ಅಪ್ಪಾವು ಪಿಳ್ಳೈ ಶಿಕ್ಷಣ ಸಂಸ್ಥೆಗಳ ದತ್ತಿ ಸದಸ್ಯರಾಗಿ, ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪಠ್ಯ ಪ್ರವಚನ ಹಾಗೂ ಪ್ರಗತಿ ಸಮಿತಿಯ ಸದಸ್ಯರಾಗಿ, ಬೆಂಗಳೂರಿನ ವಿಜ್ಞಾನ ಮತ್ತು ತಾಂತ್ರಿಕ ಕೇಂದ್ರದಲ್ಲಿ ಆಡಳಿತ ಸದಸ್ಯರಾಗಿ ಗುರುತರವಾದ ಜವಾಬ್ದಾರಿಗಳನ್ನು ನಿಭಾಯಿಸಿ ಸಂಸ್ಥೆಗಳನ್ನು ಬೆಳೆಸಿದ್ದಾರೆ.
ಯೂತ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷರಾಗಿ ಇವರು ಯುವಕರಲ್ಲಿ ಸಾಹಸೀ ಮನೋಭಾವದ ಚೈತನ್ಯವನ್ನು ತುಂಬುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಸಮಾವೇಶಗಳನ್ನು ಆಯೋಜಿಸಿ ಯುವಕರಲ್ಲಿ ಜ್ಞಾನ – ವಿಜ್ಞಾನಗಳ ವಿನಿಮಯಕ್ಕೆ ಅವಕಾಶ ಕಲ್ಪಿಸಿದ್ದಾರೆ.