ತುಮಕೂರು: ಕೇಂದ್ರ ಸರ್ಕಾರ CAA ಮತ್ತು NCR ಜಾರಿಗೊಳಿಸಲು ಹೊರಟಿದ್ದು ಇದು ಸಂವಿಧಾನ ವಿರೋಧಿಯಾಗಿದೆ. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಸಹ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ಕಾಯ್ದೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.
ತುಮಕೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಿಎಎ ಮತ್ತು ಎನ್ಆರ್.ಸಿ ಕಾಯ್ದೆಗಳು ಸಂವಿಧಾನದ ಆರ್ಟಿಕಲ್ 14, 15, 21, 25 ಮತ್ತು 51ಎ ವಿರುದ್ಧವಾಗಿದೆ. ಈ ಕಾಯ್ದೆಗಳಿಂದ ಮುಸ್ಲೀಂ ಸಮುದಾಯವನ್ನು ಹೊರಗಿಡುವ ಕೆಲಸ ನಡೆಯುತ್ತಿದೆ. ಅಷ್ಟೇ ಅಲ್ಲ ಬೇರೆಯವರಿಗೂ ಇದರಿಂದ ತೊಂದರೆಯಾಗಲಿದೆ ಎಂದು ಆರೋಪಿಸಿದರು.
ಸಿಎಎ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಮುಸ್ಲೀಮರಿಗೆ ಪೌರತ್ವ ನೀಡುವುದಿಲ್ಲ. ಇದು ಧರ್ಮಾಧಾರಿತವಾದ ಕಾಯ್ದೆಯಾಗಿದೆ. ಅಮೇರಿಕಾ ಅಧ್ಯಕ್ಷರ ಭಯದಿಂದಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ, ಕ್ರಿಶ್ಚಿಯನ್ನರಿಗೆ ಪೌರತ್ವ ನೀಡಲು ಅವಕಾಶ ಕೊಟ್ಟಿದ್ದಾರೆ. ಆದರೆ ಶ್ರೀಲಂಕಾ, ಬಾಂಗ್ಲಾ, ನೇಪಾಳದಿಂದ ಬರುವ ಹಿಂದೂಗಳು ಸೇರಿದಂತೆ ಎಲ್ಲಾ ಧರ್ಮೀಯರಿಗೂ ಪೌರತ್ವ ನೀಡಬೇಕು.
ಆದರೆ ಕೇಂದ್ರ ಸರ್ಕಾರ ಜಾತಿ, ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುತ್ತಿದೆ. ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅವುಗಳ ಕಡೆ ಗಮನ ಕೊಡದೆ ಸಿಎಎ ಮತ್ತು ಎನ್ಆರ್.ಸಿಯಂತಹ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಜನರ ಮನಸ್ಸುಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಸಿಎಎ ಮತ್ತು ಎನ್ಆರ್.ಸಿ ಜಾರಿಗೆ ತರುವವರೆಗೂ ವಿರಮಿಸುವುದಿಲ್ಲ ಎಂದು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜವನ್ನು ಒಡೆಯುವ ಮೂಲಕ ಓಟ್ ಬ್ಯಾಂಕ್ ಗಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಭಾರತದ ಸಂಸ್ಕೃತಿ ಸರ್ವೇಜನೋ ಸುಖಿನೋ ಭವಂತು ಎನ್ನುತ್ತದೆ. ವಿಶ್ವಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಸಾರಿದ ವಿಶ್ವಮಾನವ ಸಂದೇಶವೂ ಇದೇ ಆಗಿದೆ. ಭಾರತ ಎಲ್ಲಾ ಧರ್ಮಗಳಿಗೂ ಸಮಾನ ರಕ್ಷಣೆ ನೀಡಿದೆ ಎಂದು ಹೇಳಿದರು. ಆದರೆ ಇಂದು ಬಿಜೆಪಿ ಸಿಎಎ ಮತ್ತು ಎನ್ಆರ್.ಸಿ ಮೂಲಕ ವಿವೇಕಾನಂದರ ತತ್ವಗಳನ್ನುಗಾಳಿಗೆ ತೂರುತ್ತಿದೆ.
ಸಿಎಎ ಮತ್ತು ಎನ್.ಆರ್.ಸಿ ಪರ ಸಹಿ ಸಂಗ್ರಹ ಚಳವಳಿಗೆ ಬಿಜೆಪಿ ಮುಂದಾಗಿದೆ. ಮನೆಮನೆ ಭೇಟಿ ಮಾಡುತ್ತಿದೆ. ಆದರೆ ದೇಶದಲ್ಲಿರುವ ಸಮಸ್ಯೆಗಳ ಬಗ್ಗೆ ತುಟಿಬಿಚ್ಚುತ್ತಿಲ್ಲ. ಅನಗತ್ಯ ಗೊಂದಲ ಸೃಷ್ಟಿಸಿ ದೇಶವನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕುಸಿದಿರುವ ದೇಶದ ಆರ್ಥಿಕತೆ ಬಗ್ಗೆ ಗಮನ ಹರಿಸಬೇಕು ಎಂದು ಆಗ್ಹಹಿಸಿದರು.
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ರಾಜಾಹುಲಿ ಅಲ್ಲ, ರಾಜಾ ಇಲಿ. ಅವರದ್ದು ವೀಕ್ ಮೈಂಡ್, ಕೆಲಸ ಮಾಡುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ವಕ್ತಾರ ಮುರಳೀಧರ ಹಾಲಪ್ಪ, ನಿರಂಜನ್ ಮೊದಲಾದವರು ಉಪಸ್ಥಿತರಿದ್ದರು.