ತುರುವೇಕೆರೆ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ತಾಲ್ಲೂಕಿನ ಮುಸ್ಲಿಂ ಸಮುದಾಯದವರ ಮೇಲೆ ಅವಲಂಬಿತವಾಗಿದ್ದು, ಕಳೆದ ಬಾರಿ ಕಾಂಗ್ರೆಸ್ ಗೆ ಮತ ಹಾಕಿ ನನ್ನ ಅಲ್ಪ ಮತಗಳಿಂದ ಸೋಲುವಂತೆ ಮಾಡಿದ್ದೀರಿ; ಇದೊಂದು ಸಲ ನನ್ನ ಕೈಹಿಡಿಯಿರಿ ಎಂದು ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿಕೊಂಡರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಯುವ ಮೋರ್ಚಾ ನಗರ ಘಟಕದ ಉದ್ಘಾಟನೆ ಹಾಗು ಜೆಡಿಎಸ್ ಪಕ್ಷ ಸಂಘಟನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಬಾಂಧವರು ಕಾಂಗ್ರೆಸ್ ಗೆಲ್ಲುತ್ತದೆಂದು ಭಾವಿಸಿ ವೋಟು ಹಾಕಿದ್ದೀರಿ. ಆದರೆ ಅದು ಬಿಜೆಪಿ ಮಸಾಲ ಜಯರಾಂ ಗೆಲುವಿಗೆ ಕಾರಣವಾಗಿತು. ನಾನು ಕಾಂಗ್ರೆಸ್ ವಿರೋಧಿಯೂ ಅಲ್ಲ.
ನೀವು ವಾಸ್ತವ ಅರ್ಥ ಮಾಡಿಕೊಳ್ಳಿ ಈ ಬಾರಿ ಕಾಂಗ್ರೆಸ್ ಗೆ ಗೆಲುವಿಲ್ಲ. ಅಂತಹ ಕಾಲ ಬಂದಾಗ ನಾನೇ ಹೇಳುತ್ತೇನೆ ಆವಾಗ ಕಾಂಗ್ರೆಸ್ ಗೆ ಮತ ಹಾಕಿರುವಿರಂತೆ ಎಂದು ಸಲಹೆ ನೀಡಿದರು.
ಸದ್ಯಕ್ಕೆ ತಾಲ್ಲೂಕಿನಲ್ಲಿ ಮೂರೂ ಪಕ್ಷಗಳಿಗೆ ಸ್ಪರ್ಧೆಯಿಲ್ಲ. ಇರುವುದೇ ಜೆಡಿಎಸ್-ಬಿಜೆಪಿಗೆ ಮಾತ್ರ.
ದಯಮಾಡಿ ಮುಸ್ಲಿಂ ಯುವಕರು ಜಾಣರಿದ್ದೀರಿ ತಮ್ಮ ಸಮುದಾಯದ ಅಸ್ಥಿತ್ವಕ್ಕಾಗಿ ಸೆಕ್ಯೂಲರ್ ಪಕ್ಷವಾದ ಜೆಡಿಎಸ್ ಗೆ ವೋಟ್ ಹಾಕಬೇಕೆಂಬ ವಾಸ್ತವ ರಾಜಕಾರಣ ಚನ್ನಾಗಿ ಅರಿತಿದ್ದೀರಿ. ತಾವೆಲ್ಲ ತಮ್ಮ ಸಮುದಾಯದ ಜನರಿಗೆ ಜಾಗೃತಿ ಮೂಡಿಸಿ ಜೆಡಿಎಸ್ ಗೆ ಮತ ಹಾಕುವಂತೆ ಸಜ್ಜುಗೊಳಿಸಬೇಕೆಂದು ಕಿವಿ ಮಾತು ಹೇಳಿದರು.
ತಾಲ್ಲೂಕಿನ ಮುಸ್ಲಿಂ ಸಮುದಾಯದ ಯುವಕರ ಮೇಲೆ ದೌರ್ಜನ್ಯ ನಡೆದಾಗ ನಾನು ಅವರ ಪರವಾಗಿ ಪ್ರತಿಭಟನೆ ಮಾಡಿ ಖಂಡಿಸಿದ್ದೇನೆ. ಇದರ ಪರಿಣಾಮವಾಗಿ ನನ್ನ ಮೇಲೆ 8 ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಅದಕ್ಕೆ ನಾನು ತಲೆಕೆಡಿಸಿಕೊಂಡಿಲ್ಲ ಹಾಗಾಗಿ ದೇವೇಗೌಡರು, ಎಚ್.ಡಿ.ಕುಮಾರ ಸ್ವಾಮಿಯವರಿಗಿರುಷ್ಟು ಮುಸ್ಲಿಂಮರ ಮೇಲಿನ ಕಾಳಜಿ ಬೇರೆ ಯಾವ ಪಕ್ಷದ ನಾಯಕರಿಗೂ ಇಲ್ಲ ಎಂದರು.
ನನ್ನ ಅವಧಿಯಲ್ಲಿ ದೇವೇಗೌಡ ಬಡಾವಣೆಯಲ್ಲಿ ಸಾಕಷ್ಟು ಮಂದಿಗೆ ಮನೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದೇನೆ.
ಡಿ.27ರಂದು ತಾಲ್ಲೂಕಿಗೆ ಜೆಡಿಸ್ ವರಿಷ್ಠ ಎಚ್.ಡಿ.ಕುಮಾರ ಸ್ವಾಮಿಯವರ ಪಂಚರತ್ನ ರಥಯಾತ್ರೆ ಬರಲಿದ್ದು, ಅಂದು ಮುಸ್ಲಿಂರು, ವಿವಿಧ ಮಹಿಳಾ ಸಂಘಗಳು, ಜೆಡಿಎಸ್, ಕಾರ್ಯಕರ್ತರು, ರೈತರು, ಅಭಿಮಾನಿಗಳು, ಬೆಂಬಲಿಗರು ಸೇರಿದಂತೆ ಸುಮಾರು 50 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜನ ಸೇರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸ್ವಾಮಿ, ರಾಜ್ಯ ಯುವ ಜೆಡಿಎಸ್ ಘಟಕದ ಅಧ್ಯಕ್ಷ ಚಂದ್ರೇಶ್, ತಾಲ್ಲೂಕು ಯುವ ಮುಖಂಡ ಬಾಣಸಂದ್ರ ರಮೇಶ್, ಮುಖಂಡರುಗಳಾದ ಜಫ್ರಲ್ಲಾಖಾನ್, ಟಿಂಬರ್ ನಯಾಜ್ ಅಹಮದ್, ಅಸ್ಲಾಂ ಪಾಷಾ, ಷಬ್ಬೀರ್, ಸುರೇಶ್, ಮಂಗಿಕುಪ್ಪೆ ಬಸವರಾಜು ಮತ್ತು ಮುಸ್ಲಿಂ ಯುವಕರು ಭಾಗವಹಿಸಿದ್ದರು.