ತುರುವೇಕೆರೆ: ‘ಈ ಬಾರಿ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರ ಸ್ವಾಮಿಯವರು ರಾಜ್ಯದ ಮುಖ್ಯ ಮಂತ್ರಿಯಾದರೆ ನನಗೂ ಸಚಿವನಾಗುವ ಅವಕಾಶ ಸಿಗಲಿದ್ದು ನಿಮ್ಮೆಲ್ಲರ ಆಶೀರ್ವಾದದಿಂದ 20 ಸಾವಿರ ಲೀಡ್‍ನಲ್ಲಿ ನನ್ನನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮತದಾರರಲ್ಲಿ ಮನವಿ ಮಾಡಿಕೊಂಡರು..
ಪಟ್ಟಣದ ತಿಪಟೂರು ವೃತ್ತದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ನಾಮ ಪತ್ರ ಸಲ್ಲಿಸುವ ಚುನಾವಣಾ ರ್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ
ಆಗ ತುರುವೇಕೆರೆಯನ್ನು ಜಿಲ್ಲಾ ಮುಖ್ಯ ಕೇಂದ್ರವನ್ನಾಗಿಸುವೆ ಜೊತೆಗೆ ಸಿ.ಎಸ್.ಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿ ಜನರ ಋಣವನ್ನು ತೀರಿಸುವೆ.
ನನ್ನ ಅವಧಿಯಲ್ಲಿ ಆಸ್ಪತ್ರೆ, ಶಾಲಾ ಕಾಲೇಜು, ಬಸ್ ನಿಲ್ದಾಣ, ಏತ ನೀರಾವರಿ ಸೇರಿದಂತೆ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಆದರೆ ಬಿಜೆಪಿ ಶಾಸಕ ಜಯರಾಮ್ ಎ.ಎಸ್ ಕೇವಲ ಕಮಿಷನ್ ಬರುವ ಕಾಮಗಾರಿಗಳನ್ನು ಮಾತ್ರ ಮಾಡಿ ಅಭಿವೃದ್ದಿಗೆ ತಿಲಾಂಜಲಿ ಇಟ್ಟಿದ್ದಾರೆಂದು ದೂರಿದರು.
ಕೊಬ್ಬರಿ ಬೆಲೆ ಪಾತಾಳಕ್ಕೆ ಇಳಿದಿದ್ದು ಇಲ್ಲಿನ ಶಾಸಕರು ಸೇರಿದಂತೆ ಯಾವ ಸರ್ಕಾರಗಳೂ ರೈತ ಸಮಸ್ಯೆ ಆಲಿಸಿಲ್ಲ. ಈ ಬಗ್ಗೆ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ ಎಂದರು.
ಬಿಜೆಪಿ ಶಾಸಕರ ದುರಾಡಳಿತಕ್ಕೆ ಬೇಸತ್ತು ಶೇ 50 ರಷ್ಟು ಬಿಜೆಪಿ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಪಾಳಯ ಸೇರಿದ್ದು ಆ ಮೂಲಕ ಜಯರಾಮ್ಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು. ಸಿ.ಎಸ್.ಪುರ ಗುಬ್ಬಿ ತಾಲ್ಲೂಕಿನ ಕ್ಷೇತ್ರವಲ್ಲ ಅದು ತುರುವೇಕೆರೆಗೆ ಸೇರಿದ್ದು ಅದು ಸಂಪೂರ್ಣ ಜೆಡಿಎಸ್ ಪರವಾಗಿದೆ ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಸ್ಪಷ್ಟಪಡಿಸಿದರು.
ಮೇ10 ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ತಮ್ಮ ಭೂತ್ನಲ್ಲಿ ಇದ್ದು ವೋಟ್ ಹಾಕಿಸುವ ಜವಬ್ದಾರಿ ನಿಮ್ಮದು. ನೀವೆಲ್ಲ ಗೆದ್ದಿದ್ದೇವೆ ಎಂದು ಬೀಗದೆ ಗೆಲ್ಲಬೇಕು ಎಂದು ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಗುಬ್ಬಿ ವಿಧಾನ ಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಜಿ.ಎನ್.ಬೆಟ್ಟಸ್ವಾಮಿ ಎಂ.ಟಿ.ಕೃಷ್ಣಪ್ಪ ಪರ ಪ್ರಚಾರ ನಡೆಸುತ್ತಾ, ಗುಬ್ಬಿ ತಾಲ್ಲೂಕಿನ ಕುತಂತ್ರ ರಾಜಕಾರಣದಿಂದ ದೂರ ಉಳಿಯುವ ಸಂದರ್ಭದಲ್ಲಿ ನನ್ನನ್ನು ಜೆಡಿಸ್ ಪ್ರಮುಖರು ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸೂಟ್ಕೇಸ್ ಸಂಸ್ಕೃತಿವುಳ್ಳ ಪಕ್ಷಗಳಾಗಿದ್ದು ನಿಷ್ಠಾವಂತರಿಗೆ ಬೆಲೆ ಇಲ್ಲದಾಗಿದೆಂದು ಬಿಜೆಪಿ ವಿರುದ್ದ ಹರಿಹಾಯ್ದರು.
ನಾನೂ ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ 30 ಸಾವಿರ ಲೀಡ್ನಲ್ಲಿ ಗೆಲ್ಲುವ ಭರವಸೆ ಇತ್ತು ಆದರೆ ಹಿಂದುಳಿದ ವರ್ಗಗಳ ವ್ಯಕ್ತಿಯೊಬ್ಬ ಶಾಸಕನಾಗುತ್ತಾನೆ ಎಂಬ ಸಣ್ಣತನದಿಂದ ರಾಜ್ಯ ಹಾಗು ಸ್ಥಳೀಯ ನಾಯಕರುಗಳ ಕುತಂತ್ರದಿಂದ ನನಗೆ ಟಿಕೇಟ್ ಕೈತಪ್ಪಿತು ಅದರಲ್ಲಿ ತುರುವೇಕೆರೆ ಶಾಸಕ ಜಯರಾಮ್ ಎ.ಎಸ್ ಅವರ ಪಾತ್ರವೂ ಇದೆ ಎಂದು ಆರೋಪಿಸಿದ ಅವರು
ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ತುರುವೇಕೆರೆ ಕ್ಷೇತ್ರದ ಶಾಸಕರಿಗೂ ನಂಟಿದ್ದು ನಗೆ ಟಿಕೇಟ್ ತಪ್ಪಿಸಲು ಕೈಜೋಡಿದವರೆಂದು ಗುಡುಗಿದ ಅವರು ಬಿಜೆಪಿಯವರು ತಾವು ಗೆಲ್ಲಲು ಹಿಂದುಳಿದ ವರ್ಗಗಳ ಮತ ಪಡೆದು ನನಗೆ ದ್ರೋಹವೆಸಗಿದರು. ಇವರೆಲ್ಲ ಕರುಣೆ ಇಲ್ಲದ ಕಟುಕರು. ನಾನು ಹೇಳುತ್ತಿದ್ದೇನೆ ಯಾದವ ಸಮುದಾಯದವರು ಬಿಜೆಪಿ ಮತ್ತು ಕಾಂಗ್ರೆಸ್ಗೆ ಮತಹಾಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ನಮ್ಮ ಪಕ್ಷದ ಅಭ್ಯಥರ್ಿ ಎಂ.ಟಿ.ಕೃಷ್ಣಪ್ಪ ಉತ್ತಮ ಆಡಳಿತಗಾರ, ನೊಂದವರ ಹರಿಕಾರ ಅವರಿಗೆ ವೋಟ್ ಕೊಡಿ ಅಪ್ಪಿತಪ್ಪಿಯೂ ಬಿಜೆಪಿ ಅಭ್ಯರ್ಥಿಗೆ ವೋಟ್ ಕೊಡಬೇಡಿ ಎಂದರು.
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ದೊಡ್ಡಾಘಟ್ಟಚಂದ್ರೇಶ್ ಮಾತನಾಡಿದರು. ನಂತರ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ತಾಲ್ಲೂಕು ಕಚೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನಾ ಬಿಸಿಲು ಲೆಕ್ಕಿಸದೆ ಹರಿದು ಬಂದ ಜನಸಾಗರ ವೈಟಿ ರಸ್ತೆಯಲ್ಲಿ ಕೃಷ್ಣಾ ಚಿತ್ರಮಂದಿರದ ಬಳಿ ಸಾವಿರಾರು ಸಂಖ್ಯೆಯ ಕಾರ್ಯಕರ್ತಯರು, ಮುಖಂಡರು ಮತ್ತು ಅಭಿಮಾನಿಗಳು ಜಮಾವಣೆಗೊಂಡು ತೆರೆದ ವಾಹನದಲ್ಲಿ ಮೆರವಣಿಗೆ ಹೊರಟರು.
ಎರಡೂ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯ ಯುವಕರು, ಅಭಿಮಾನಿಗಳು ಹಾಡಿಗೆ ನೃತ್ಯ ಹಾಕಿ ಕುಣಿದು ಕುಪ್ಪಳಿಸುತ್ತಾ ಎಂ.ಟಿ.ಕೃಷ್ಣಪ್ಪ, ಎಚ್.ಡಿ.ಕುಮಾರ್ ಸ್ವಾಮಿ ಮತ್ತು ದೇವೆಗೌಡರ ಪರ ಘೋಷಣೆ ಕೂಗುತ್ತಾ ತಾಲ್ಲೂಕು ಕಚೇರಿಯತ್ತಾ ಸಾಗಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ರಮೇಶ್ಗೌಡ, ಮುಖಂಡರುಗಳಾದ ದೊಡ್ಡಾಘಟ್ಟಚಂದ್ರೇಶ್, ವೆಂಕಟಾಪುರ ಯೋಗೀಶ್, ರಾಜೀವ್ ಕೃಷ್ಣಪ್ಪ, ವೆಂಕಟೇಶ್, ಶಂಕರೇಗೌಡ ಬಾಣಸಂದ್ರ ರಮೇಶ್, ಧನಪಾಲ್, ಹಾವಾಳ ರಾಮೇಗೌಡ, ಕೊಪ್ಪಾ ಜಯರಾಮ್, ರಾಘು ಇದ್ದರು.