Publicstory/prajayoga
ತುರುವೇಕೆರೆ: ರೈತರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವಲ್ಲಿ ಸರ್ಕಾರ ಜಾರಿಗೆ ತಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಶಾಸಕ ಮಸಾಲಜಯರಾಮ್ ಅಭಿಪ್ರಾಯಪಟ್ಟರು.
ತಾಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಬಳಿಗೆ ಸರ್ಕಾರದ ಇಲಾಖೆಗಳು ತೆರಳಿ ಅಹವಾಲು ಆಲಿಸುತ್ತಿರುವುದು ಸಂತಸದ ಸಂಗತಿ. ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಕ್ಷೇತ್ರ ವ್ಯಾಪ್ತಿಯ ಜನತೆ ತಮ್ಮ ಸಮಸ್ಯೆಗಳಿದ್ದರೆ ಖುದ್ದು ನನ್ನನ್ನು ಬೇಟಿ ಮಾಡಿ ಎಂದು ಶಾಸಕರು ತಿಳಿಸಿದರು.
ವರುಣನ ಕೃಪೆಯಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ತಾಂಡವಾಡುತ್ತಿದ್ದ ಜಲಕ್ಷಾಮ ಇಲ್ಲವಾಗಿದೆ. ಕ್ಷೇತ್ರದೆಲ್ಲೆಡೆ ಜಲ ಸಮೃದ್ಧಿ ಮನೆ ಮಾಡಿದೆ. ಕೃಪಿ ಚಟುವಟಿಕೆಗೆ, ಹೈನುಗಾರಿಕೆಗೆ ಪೂರಕವಾದ ಪರಿಸರ ನಿರ್ಮಾಣಗೊಂಡಿದೆ. ಆದರೇ ರೈತಾಪಿಗಳು ಜಮೀನು ಉಳುಮೆ ಮಾಡಿ ಬೆಳೆ ಬೆಳೆಯಲು ಆಸಕ್ತಿ ತೋರದಿರುವುದು ಸಾಧುವಲ್ಲ. ರೈತರು ಪರಾವಲಂಬಿಗಳಾಗದೇ ಸ್ವಾವಲಂಬಿಗಳಾಗುವಂತೆ ಶಾಸಕರು ಕಿವಿ ಮಾತು ಹೇಳಿದರು.
ತಹಶಿಲ್ದಾರ್ ವೈ.ಎಂ .ರೇಣುಕುಮಾರ್ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರದ ಇಲಾಖೆಗಳಲ್ಲಿ ಲಭ್ಯವಾಗುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತಾಗಬೇಕಿದೆ. ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಗೆ ತಾಲೂಕಿನಲ್ಲಿ ಕುಸಿದು ಬಿದ್ದಿದ್ದ 83 ಮನೆಗಳಿಗೂ ಪರಿಹಾರ ದೊರಕಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಮೋಹನಕುಮಾರಿ ಮಹೇಶ್, ಇ.ಒ. ಸತೀಶ್‌ಕುಮಾರ್, ಬಿ.ಇ.ಒ. ಪದ್ಮನಾಭ್, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ವಿ.ಟಿ.ವೆಂಕಟರಾಮ್, ವಿ.ಬಿ.ಸುರೇಶ್, ಹಿರಿಯ ಮುಖಂಡ ಸಿದ್ದೇಗೌಡ, ಉಪ ತಹಶಿಲ್ದಾರ್ ಅನಿಲ್‌ಕುಮಾರ್ ಶಿಂಧೆ, ಆರ್.ಐ. ರಂಗಸ್ವಾಮಿ, ಗ್ರಾಮ ಲೆಕ್ಕಿಗರಾದ ಜಗದೀಶ್, ಪ್ರಶಾಂತ್, ಮಲ್ಲಿಕಾರ್ಜುನ್, ಸೇರಿದಂತೆ ತಾಲೂಕು ಮಟ್ಟದ ನಾನಾ ಇಲಾಖಾ ಮುಖ್ಯಸ್ಥರು ಹಾಜರಿದ್ದರು.