ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಕುಣಿಕೇನಹಳ್ಳಿ ಗ್ರಾಮದೇವತೆ ಕೆಂಪಮ್ಮದೇವಿಯ ದೇವಸ್ಥಾನದೊಳಕ್ಕೆ ಅಲ್ಲಿನ ದಲಿತರು ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಶುಕ್ರವಾರ ರಾತ್ರಿ ಪ್ರವೇಶ ಮಾಡಿ ದೇವಿಗೆ ಪೂಜೆ ಸಲ್ಲಿಸಿದರು.
ತಾಲ್ಲೂಕು ಛಲವಾದಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಜಗದೀಶ ಮಾತನಾಡಿ, ಕುಣಿಕೇನಹಳ್ಳಿ ಗ್ರಾಮದಲ್ಲಿ 110 ದಲಿತ ಕುಟುಂಬಗಳಿವೆ. ಇಲ್ಲಿನ ಕೆಂಪಮ್ಮದೇವಿಯ ದೇವಸ್ಥಾನ ಪ್ರಾರಂಭವಾದ ಅಂದಿನಿಂದಲೂ ಗ್ರಾಮದ ದಲಿತರು ದೇವಸ್ಥಾನಕ್ಕೆ ಸಂಬಂಧಿಸಿದ ಜಾತ್ರೆಯ ಖರ್ಚುವೆಚ್ಚಗಳನ್ನು ಕೊಡುತ್ತಾ ಪೂಜಾ ಕಾರ್ಯಕ್ರಮಗಳನ್ನು ಚಾಚುತಪ್ಪದೇ ಮಾಡಿಕೊಂಡು ಬರುತ್ತಿದ್ದರು. ಆದರೆ ಯಾವುದೇ ಕಾರಣಕ್ಕೂ ದೇವಸ್ಥಾನ ಪ್ರವೇಶಮಾಡಬೇಕೆಂಬ ಯೋಜನೆ ಹಿಂದಿನವರಿಗೆ ಬಂದಿರಲಿಲ್ಲ.
ಮೊನ್ನೆ ಮೊನ್ನೆಯಿಂದ ಹೊಸ ತಲೆಮಾರಿನ ಯುವಕರು ಕೆಂಪಮ್ಮ ನಮ್ಮೂರಿನ ಗ್ರಾಮದೇವತೆ, ಅದಕ್ಕೆ ನಾವೆಲ್ಲ ಭಕ್ತಿಯಿಂದ ನಡೆದುಕೊಂಡು ದೇವಾಲಯದ ಜಾತ್ರಾ ಖರ್ಚು ವೆಚ್ಚ ನೀಡುತ್ತಾ ಬಂದಿದ್ದೇವೆ. ಜಾತ್ರಾ ಸಮಯದಲ್ಲಿ ದಲಿತ ಸಮುದಾಯದ ಹೆಣ್ಣು ಮಕ್ಕಳು ದೇವಿಗೆ ಅರ್ಪಿಸಲು ತಂದಿದ್ದ ಆರತಿಯನ್ನು ಹೊತ್ತು ಮಳೆಗಾಲದಲ್ಲಿ ಹಾಗು ಬಿಸಿಲಿನಲ್ಲಿ ದೇವಾಲಯದ ಹೊರಗೆ ನಿಂತು ಅಲ್ಲಿಯೇ ಪೂಜಿಸಬೇಕಿತ್ತು ಎಲ್ಲರಂತೆ ನಾವೂ ಕೂಡ ಒಳಗೆ ಹೋಗಿ ಪೂಜೆ ಮಾಡಿಸಬೇಕೆಂದ ಹಂಬಲ ವ್ಯಕ್ತಪಡಿಸಿದರು.
ಆ ಕಾರಣದಿಂದ ಈ ವಿಚಾರವನ್ನು ಗ್ರಾಮದ ಪ್ರಮುಖರ ಬಳಿ ಪ್ರಸ್ತಾಪ ಮಾಡಿದ್ದೆವು. ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ ಅಂದಿದ್ದರು. ಆದರೂ ಸಹ ದಲಿತರು ದೇವಾಲಯ ಪ್ರವೇಶದಂತಹ ವಿಚಾರಗಳು ಸೂಕ್ಷವಾಗಿರುವ ಕಾರಣ ಹಾಗು ಕಾನೂನುಬದ್ಧವಾಗಿ ಹೋಗಬೇಕೆಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತ್ರಿವೇಣಿ, ದಂಡಿನಶಿವರ ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಿದ್ದೆವು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ರವರು ಗ್ರಾಮಕ್ಕೆ ಭೇಟಿ ನೀಡಿ ದಲಿತರು ಮತ್ತು ಗ್ರಾಮಸ್ಥರೊಂದಿಗೆ ಸಮಾಲೋಚಿಸಿದರು. ದಲಿತರಿಗೆ ದೇವಾಲಯ ಪ್ರವೇಶ ನಿರಾಕರಣೆ ಕಾನೂನಿಗೆ ವಿರುದ್ದವಾದದು. ಎಲ್ಲರೂ ಸಾಮರಸ್ಯದಿಂದ ಹೋಗಬೇಕೆಂದು ಶಾಂತಿ ಸಭೆ ನಡೆಸಿದ್ದರು. ಅದರ ಪರಿಣಾಮವಾಗಿ ದೇವಾಲಯ ಪ್ರವೇಶ ಸಾದ್ಯವಾಯಿತು. ಹಾಗಾಗಿ ಎಲ್ಲ ಅಧಿಕಾರಿಗಳಿಗೂ ಧನ್ಯವಾದ ತಿಳಿಸಿದರು.
ಕುಣಿಗಲ್ ಡಿವೈಎಸ್ಪಿ ಓಂಪ್ರಕಾಶ್, ತುರುವೇಕೆರೆ ಸಿಪಿಐ ಬಿ.ಎನ್.ಲೋಹಿತ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಅರಿವು ಮೂಡಿಸಿದ್ದರು.
ಈ ಸಂದರ್ಭದಲ್ಲಿ ದಂಡಿನಶಿವರ ಪಿಎಸ್ಐ ಚಂದ್ರಕಾಂತ, ಸಮಾಜ ಕಲ್ಯಾಣ ಇಲಾಖೆ ನಿದರ್ೇಶಕಿ ತ್ರಿವೇಣಿ, ಕಸಬಾ ಕಂದಾಯ ತನಿಖಾಧಿಕಾರಿ ಶಿವಕುಮಾರ ಸ್ವಾಮಿ, ಗ್ರಾಮಲೆಕ್ಕಾಧಿಕಾರಿ ರಮೇಶ್, ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ದೊಂಕಿಹಳ್ಳಿ ರಾಮಣ್ಣ, ಕಾಯರ್ಾಧ್ಯಕ್ಷ ಎಂ.ಎಸ್.ಸೋಮಶೇಖರಯ್ಯ ಉಪಾಧ್ಯಕ್ಷ ಬಿ.ಎನ್.ರಾಮಚಂದ್ರಯ್ಯ ಸದಸ್ಯರಾದ ಪ್ರಸನ್ನಕುಮಾರ್ ಮತ್ತು ದಲಿತ ಕುಟುಂಬದವರು ಇದ್ದರು.