ಲಕ್ಷ್ಮೀಕಾಂತರಾಜು ಎಂ.ಜೆ.
ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಚುರುಕುಗೊಂಡಿದೆ. ಕಳೆದ ವಾರ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ತಹಸೀಲ್ದಾರ್ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿಕೊಂಡು ಜೈಲಿಗಟ್ಟಿದ ಸುದ್ದಿ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆಯ ಕಿತ್ತೂರಿನ ತಹಸೀಲ್ದಾರ್ ಅವರೂ ಖಾತೆ ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಪೊಲೀಸರಿಗೆ ಆಹಾರವಾಗಿರುವುದು ಶನಿವಾರ ವರದಿಯಾಗಿದೆ.
ಜಮೀನುಗಳ ಖಾತೆ ಬದಲಾವಣೆಯ ವಹಿವಾಟುಗಳಾದ ಕ್ರಯ,ವಿಭಾಗ, ದಾನ, ವಿಲ್, ಮರಣ ಶಾಸನ ಮುಂತಾದ ವಹಿವಾಟುಗಳ ನೋಂದಣಿಯಂತೆ ಬರೆದುಕೊಟ್ಟ ಪಹಣಿಯಲ್ಲಿನ ಮೂಲ ಮಾಲೀಕರಿಂದ ಬರೆಯಿಸಿಕೊಂಡವರ ಹೆಸರನ್ನು ಪಹಣಿಯಲ್ಲಿ ದಾಖಲಿಸುವ ಪ್ರಕ್ತಿಯೆಗೆ ತಹಸೀಲ್ದಾರ್, ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗರು ತನಿಖಾ ಸಂಸ್ಥೆಗಳಿಗೆ ಅಹಾರವಾಗುತ್ತಲೇ ಇದ್ದು ಕೇವಲ ದೂರು ಕೊಟ್ಟ ಪ್ರಕರಣಗಳಲ್ಲಿ ಮಾತ್ರ ಅಧಿಕಾರಿಗಳ ಬಂಧನವಾಗುತ್ತಿದ್ದು ಉಳಿದ ಪ್ರಕರಣಗಳಲ್ಲಿ ಅಧಿಕಾರಿಗಳು ಲಂಚದ ಹಣ ಗಳಿಸುತ್ತಲೇ ಇದ್ದಾರೆ.
ಖಾತೆ ಬದಲಾವಣೆ ಸಂಬಂಧ ಕಾಲ ಕಾಲಕ್ಕೆ ಚಾಲ್ತಿಯಲ್ಲಿರುವ ತನಿಖಾ ಸಂಸ್ಥೆಗಳಿಗೆ ಆಹಾರವಾಗುತ್ತಿರುವುದು ತಹಸೀಲ್ದಾರ್ ಗಳು ಮಾತ್ರವಲ್ಲ. ಕಂದಾಯ ಇಲಾಖೆಯ ತಳಹಂತದ ಗ್ರಾಮಲೆಕ್ಕಿಗರಿಂದ ಹಿಡಿದು ರಾಜಸ್ವ ನಿರೀಕ್ಷಕ , ಹಾಗೂ ತಹಸೀಲ್ದಾರ್ ಗಳು ತನಿಖಾ ಸಂಸ್ಥೆಗಳ ಪೊಲೀಸರ ಬಲೆಗೆ ಬೀಳುತ್ತಲೇ ಇದ್ದಾರೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ವಿಷಯ ಏನೆಂದರೆ, ತನಿಖಾ ಸಂಸ್ಥೆಗಳಿಗೆ ಬಲಿಯಾಗಿರುವ ನೌಕರ,ಅಧಿಕಾರಿಗಳ ಪೈಕಿ ಹೆಚ್ಚಿನವರು ಕಂದಾಯ ಇಲಾಖೆಯವರು ಮಾತ್ರ.
ದಾನ,ವಿಭಾಗ, ಮರಣ ಶಾಸನ, ವಿಲ್ ವಹಿವಾಟುಗಳು ಕುಟುಂಬದೊಳಗೆ ನಡೆಯುವಂತಹ ಹಕ್ಕುಬದಲಾವಣೆಗಳು ಹಾಗಾಗಿ ಇಲ್ಲಿ ಲಂಚ ಕೊಡುವ ಅಗತ್ಯವೂ ಇಲ್ಲ. ನಿಯಮ ಬಾಹಿರವಾಗಿ ನಡೆಯುವ ಯಾವ ಪ್ರಕ್ರಿಯೆಯೂ ಇಲ್ಲ. ಇನ್ನು ಕ್ರಯದ ವಹಿವಾಟಿನ ಮೂಲಕ ಹಕ್ಕು ಬದಲಾವಣೆಯ ಸಂದರ್ಭದಲ್ಲಿ ಈ ಹಿಂದೆ ಕೆಲ ನಿಯಮಗಳ ಉಲ್ಲಂಘನೆಯಾಗುತ್ತಿದ್ದು ಹಣದ ಕೈ ಬದಲಾವಣೆಯೂ ಯಾವ ದೂರುಗಳಿಲ್ಲದೆಯೂ ಸರಾಗವಾಗಿ ನಡೆಯುತ್ತಿತ್ತು.
2020 ರಲ್ಲಿ ಪ್ರಸ್ತುತ ಆಡಳಿತ ಸರ್ಕಾರ ಭೂ ಖರೀದಿಗಿದ್ದ ನಿರ್ಬಂಧ ಗಳನ್ನ ರದ್ದುಪಡಿಸುವ ಮೂಲಕ , ಭೂ ಖರೀದಿಗೆ ನಿರ್ಭಂದವಿದ್ದ 79 a & b ಕಾಯಿದೆಯನ್ನ ರದ್ದು ಪಡಿಸಲಾಗಿದೆ. ಈಗ ಭೂ ಖರೀದಿಗೆ ಮುಕ್ತ ವಾತಾವರಣವಿದೆ . 79 a & b ರದ್ದಾದ ಬಳಿಕ ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದಾಗಿದ್ದು, ಹೊರ ರಾಜ್ಯದವರೂ ಸಹ ನಮ್ಮಲ್ಲಿ ಭೂ ಖರೀದಿಯನ್ನ ಯಾವ ಅಡಚಣೆ ಇಲ್ಲದೆಯೂ ಖರೀದಿಸಬಹುದಾಗಿದೆ.ಖರೀದಿಯೂ ನಡೆಯುತ್ತಿದೆ.
79 a & b ಚಾಲ್ತಿಯಲ್ಲಿದ್ದ ಸಮಯದಲ್ಲಿ ಕೃಷಿಕ ಕುಟುಂಬದವರೂ ಮಾತ್ರ ಕೃಷಿ ಭೂಮಿ ಖರೀದಿಸಬೇಕಿತ್ತು. ಆ ಕುರಿತು ಪ್ರಮಾಣ ಪತ್ರ ಹೊಂದಿದವರಿಗೆ ಮಾತ್ರ ಖರೀದಿಯ ನೋಂದಣಿ ಮಾಡಲಾಗುತ್ತಿತ್ತು. ಕೆಲವೊಮ್ಮೆ ನಕಲಿ ದಾಖಲೆಗಳನ್ನ ಸೃಷ್ಠಿಸಿ ಖರೀದಿ ಮಾಡಿ, ಲಂಚ ನೀಡುವ ಮೂಲಕ ಹಕ್ಕು ಬದಲಾವಣೆಯನ್ನ ಮಾಡಿಸಿಕೊಳ್ಳುತ್ತಿದ್ದರು.
ಆದರೀಗ , ಖರೀದಿಗೆ ಮುಕ್ತ ಅವಕಾಶವಿದೆ. ಕೃಷಿಕರಲ್ಲದವರೂ ಯಾವ ನಿರ್ಭಂಧವಿಲ್ಲದೇ ಭೂ ಖರೀದಿ ಮಾಡುತ್ತಿದ್ದಾರೆ. ನೋಂದಣಿಯ ಹಕ್ಕುಬದಲಾವಣೆಗೆ ಯಾವುದೇ ತೊಡಕಿಲ್ಲ. ಆದರೂ ಹಕ್ಕು ಬದಲಾವಣೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತಕ್ಕೆ ಸಿಕ್ಕಿಬೀಳುತ್ತಿದ್ದಾರೆ. ದೂರು ನೀಡಿದ ಪ್ರಕರಣಗಳಲ್ಲಿ ಮಾತ್ರ. ದೂರು ನೀಡದೇ ಸಲೀಸಾಗಿ ಸಾಕಷ್ಟು ಪ್ರಕರಣಗಳು ಸುಖಾಂತ್ಯವಾಗಿ ಲಂಚದಲ್ಲಿ ಮುಗಿದುಹೋಗುತ್ತವೆ.
ಈ ಎಲ್ಲ ಪ್ರಕರಣಗಳನ್ನ ನೋಡಿದಾಗ ಹಕ್ಕುಬದಲಾವಣೆಯ ಕುರಿತು ಸರ್ಕಾರ ನಿಯಮಗಳನ್ನ ಸರಳೀಕರಣ ಮಾಡಿದಾಗ್ಯೂ ಅಧಿಕಾರಿಗಳಿಗೆ ಒಂದಷ್ಟು ಟಿಪ್ಸ್ ರೀತಿ ಹಣ ಕೊಡಲೇ ಬೇಕೆಂಬ ಅಲಿಖಿತ ನಿಯಮ ಹಾಗೂ ಮನೋಭಾವ ಹೊಂದಿರುವ ಕಾರಣ ಕಂದಾಯ ಇಲಾಖೆಯಲ್ಲಿ ಲಂಚ ಎಂಬುದು ದೊಡ್ಡದಾಗಿಯೇ ಉಳಿದಿದೆ. ರೈತರುಗಳು, ಭೂ ಖರೀದಿದಾರರು ಹೆಚ್ಚು ಜಾಗ್ರತೆ ಹೆಚ್ಚು ದೂರುದಾರರು
ಮುಂದೆ ಬರದ ಹೊರತು ಈ ವ್ಯವಸ್ಥೆ ಹೀಗೆಯೆ ಮುಂದುವರೆಯುವದರಲ್ಲಿ ಅನುಮಾನವಿಲ್ಲ.
………….
✍ ಲಕ್ಷ್ಮೀಕಾಂತರಾಜು ಎಂ ಜಿ
lakshmikantharajumg@gmail.com