Saturday, May 18, 2024
Google search engine
HomeUncategorizedವಾರದ ಪುಸ್ತಕ: ಮಾರ್ಗಾನ್ವೇಷಣೆ

ವಾರದ ಪುಸ್ತಕ: ಮಾರ್ಗಾನ್ವೇಷಣೆ

ವಿಶ್ವವಿದ್ಯಾಲಯದಲ್ಲಿ ಪಾಠ-ಪ್ರವಚನ ಮಾಡಿ, ಕನ್ನಡ ಸಾಹಿತ್ಯದ ಅಧ್ಯಯನ ಮಾಡುವುದು ಹೇಗೆ ಎಂಬುದರ ಕುರಿತು ಲೇಖಕರು ಸಾವಧಾನವಾಗಿ ಮಾಡಿದ ಚಿಂತನಾ ಪ್ರಕ್ರಿಯೆಯೇ ಮಾರ್ಗಾನ್ವೇಷಣೆ’ ಎನ್ನುತ್ತಾರೆ ಲೇಖಕ ಎನ್.ಎಸ್. ಗುಂಡೂರ. ಅವರು ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅವರ ಸಂಶೋಧನಾತ್ಮಕ ಕೃತಿ ಮಾರ್ಗಾನ್ವೇಷಣೆಗೆ ಬರೆದ ಅರ್ಥಪೂರ್ಣ ಮುನ್ನುಡಿ ಇಲ್ಲಿದೆ.

ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ
-ಶಿಶುನಾಳ ಶರೀಫಜ್ಜ

ಕಂಡದ್ದರ ಬಲದ ಮೇಲೆ ಕಣ್ಣಿಗೆ ಕಾಣದ್ದನ್ನು
ಹುಡುಕುವುದೆಂದರೇ ಸಂಶೋಧನೆ.
-ಕೀರ್ತಿನಾಥ ಕುರ್ತಕೋಟಿ

ನಮಗಿರುವ ಕಾಳಜಿ ಮತ್ತು ಪ್ರಾಮಾಣಿಕತೆ ನಮ್ಮ ಕೆಲಸದ ಗುಣಮಟ್ಟವನ್ನು ನಿರ್ಧರಿಸುತ್ತವೆ ಎಂಬುದು ಅನುಭವದ ಮಾತು. ಒಂದು ಮನೆ ಕಟ್ಟುವುದಿರಲಿ, ಸಸಿ ನೆಟ್ಟು ಪೋಷಿಸುವುದಿರಲಿ, ವಿಶ್ವವಿದ್ಯಾಲಯವೊಂದರ ವಿಭಾಗವನ್ನು ಬೆಳೆಸುವುದಿರಲಿ, ಅಥವಾ ಸಣ್ಣದೊಂದು ಬರವಣಿಗೆ ಮಾಡುವುದೇ ಇರಲಿ, ನಾವು ತೋರಿಸುವ ಕಾಳಜಿ ಅವುಗಳ ಶ್ರೇಯಸ್ಸಿಗೆ ಕಾರಣವಾಗಿರುತ್ತದೆ. ಪ್ರಸ್ತುತ ಪುಸ್ತಕ ಲೇಖಕರಿಗಿರುವ ಕಾಳಜಿ ಮತ್ತು ಪ್ರಾಮಾಣಿಕತೆಗಳಿಂದ ರೂಪುಗೊಂಡಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಾದರೆ ಇಲ್ಲಿರುವ ಕಾಳಜಿಗಳು ಯಾವುವು? ಕನ್ನಡ, ಸಾಹಿತ್ಯ, ಸಂಶೋಧನೆ, ಶೈಕ್ಷಣಿಕ ಲೋಕ ಮತ್ತು ಕಲಿಕೆ ಇಲ್ಲಿ ಕಾಳಜಿಗೊಳಪಟ್ಟ ಅಂಶಗಳು. ಇವೆಲ್ಲವೂ ಒಂದಾಗುವುದು ಸಾಹಿತ್ಯ ಸಂಶೋಧನೆಯನ್ನು ಅನ್ವೇಷಣೆ ಮಾಡುವ ಹಂಬಲದಲ್ಲಿ.

ವಿಶ್ವವಿದ್ಯಾಲಯದಲ್ಲಿ ಪಾಠ-ಪ್ರವಚನ ಮಾಡಿ, ಕನ್ನಡ ಸಾಹಿತ್ಯದ ಅಧ್ಯಯನ ಮಾಡುವುದು ಹೇಗೆ ಎಂಬುದರ ಕುರಿತು ಲೇಖಕರು ಸಾವಧಾನವಾಗಿ ಮಾಡಿದ ಚಿಂತನಾ ಪ್ರಕ್ರಿಯೆಯೇ ಮಾರ್ಗಾನ್ವೇಷಣೆ. ‘ಬರದೇ ಬಾರಿಸದಿರು ತಂಬೂರಿ’ ಎಂದು ಶರೀಫಜ್ಜ ಹೇಳಿದ ಹಾಗೆ, ಲೇಖಕರು ಇಲ್ಲಿ ಕನ್ನಡ ಸಂಶೋಧನಾಸಕ್ತರಿಗೆ ‘ಸಂಶೋಧನೆಯ ಅರ್ಥ ಮನನ ಮಾಡಿಕೊಳ್ಳದೆ ಸಂಶೋಧನೆಗೆ ಇಳಿಯಬೇಡಿ’ ಎಂದು ಹೇಳುವ ಕಾಳಜಿ ತೋರಿಸಿದ್ದಾರೆ. ಇವೆಲ್ಲವುಗಳ ಜೊತೆ ಆಳವಾದ ಆಲೋಚನೆ, ಓದಿನ ಶ್ರಮ, ಬರವಣಿಗೆಯ ನೈಪುಣ್ಯತೆ, ಪರಾಮರ್ಶನದ ಪಾಂಡಿತ್ಯ ಈ ಪುಸ್ತಕದಲ್ಲಿ ನಡೆದಿರುವ ಚರ್ಚೆಗೆ ಹೆಚ್ಚಿನ ಶ್ರೇಯಸ್ಸನ್ನು ಒದಗಿಸಿವೆ. ಸಂಶೋಧನಾಸಕ್ತ ಮತ್ತು ಮಾರ್ಗದರ್ಶಕನ ಮಾತುಕತೆಯಲ್ಲಿ ಉದ್ಭವಿಸುವ ಇಲ್ಲಿಯ ಗಹನವಾದ ಚಿಂತನೆಗೆ ಮುನ್ನುಡಿ ಬರೆಯುವುದು ಸಾಹಸದ ಕೆಲಸ. ಅದಕ್ಕೊಂದು ಅಧಿಕಾರವೂ, ಅರ್ಹತೆಯೂ ಬೇಕಾಗುತ್ತದೆ. ಹಾಗಾಗಿ ಮುನ್ನುಡಿಯ ಬದಲು, ಇಲ್ಲಿ ಮೂಡಿಬಂದಿರುವ ಸಂಶೋಧನೆಯ ವಾಙ್ಮಯಕ್ಕೆ ಒಂದೆರಡು ವಿಚಾರಗಳನ್ನು ಪೋಣಿಸುವ ಕೆಲಸವನ್ನಷ್ಟೇ ನಾನು ಮಾಡುತ್ತೇನೆ. ಆದರೆ ಇಂಗ್ಲಿಶ್ ಅಧ್ಯಯನದ ಜ್ಞಾನಶಿಸ್ತಿನೊಳಗೆ ರೂಪುಗೊಳ್ಳುತ್ತಿರುವ ನನ್ನ ತಿಳಿವಿಗೆ ಹಲವು ಮಿತಿಗಳಿವೆ. ಭಾರತೀಯ ಜ್ಞಾನ ದರ್ಶನಗಳ, ಸ್ಥಳೀಯ ಪರಂಪರೆಗಳ ಪ್ರವೇಶ ನನ್ನ ವೈಚಾರಿಕ ಪ್ರಜ್ಞೆಯಲ್ಲಿ ಇಲ್ಲದಿರುವುದು ಒಂದು ದೊಡ್ಡ ಕೊರತೆ. ಅಂತಹ ತಯಾರಿ ಇರುವ ಓದುಗರು ಈ ಅಂತರವನ್ನು ತುಂಬಬೇಕು. ಮತ್ತೆ, ಸಂಶೊಧನಾ ಸಹೃದಯರಲ್ಲಿ ಒಂದು ಪ್ರಾರ್ಥನೆ. ಈ ಪುಸ್ತಕವನ್ನು ನಿಧಾನವಾಗಿ ಓದಿ, ಲೇಖಕರ ಜೊತೆ ಜಗಳವಾಡಿ, ಅವರು ಹೇಳಿದ್ದೆಲ್ಲವನ್ನು ಒಪ್ಪಿಕೊಳ್ಳಬೇಡಿ. ಈ ಭೂಮಿಕೆ ಓದುವ ಮೊದಲು ಪುಸ್ತಕ ಓದಿದ್ದರೆ, ಅದನ್ನು ಮತ್ತೆ ಓದಿ. ಮುಳಿಯ ತಿಮ್ಮಪ್ಪಯ್ಯನವರ ನಾಡೋಜ ಪಂಪ (1938)ವನ್ನು ಉದ್ಧರಿಸುತ್ತ ಲೇಖಕರ ಪರವಾಗಿ ನಾನು ಕೇಳಿಕೊಳ್ಳುವುದೇನೆಂದರೆ “ಉದಾರಹೃದಯರಾದ ವಾಚಕರು ಸಾವಧಾನ ಚಿತ್ತರಾಗಿ ಪರಿಶೀಲಿಸಬೇಕೆಂದು ಪ್ರಾರ್ಥನೆ” .

ಸಂಶೋಧನೆಯ ಅರ್ಥ


ಒಂದು ನಿರ್ದಿಷ್ಟ ಪರಂಪರೆಯಲ್ಲಿ ಬೆಳೆದು ಬಂದ ಸಂಶೋಧನೆಯ ಪ್ರಕಾರ ಮತ್ತು ಅದನ್ನು ಆಚರಿಸುವ ಸಾಂಸ್ಥಿಕ ತಾಣವಾದ ವಿಶ್ವವಿದ್ಯಾಲಯದ ಅಂತಃಸತ್ವವನ್ನು ಪ್ರಸ್ತುತ ಪುಸ್ತಕ ನಮ್ಮ ಮುಂದೆ ತೆರೆದಿಡುತ್ತದೆ. ಈ ಸಂಶೋಧನಾ ಪ್ರಕಾರ, ಐರೋಪ್ಯ ಸಂಸ್ಕೃತಿಯ ಒಡಲಾಳದಲ್ಲಿ ಹುಟ್ಟಿ, ಈಗ ಜಗತ್ತಿನಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ಅನುಸರಿಸಲಾಗುತ್ತಿರುವ ಜ್ಞಾನಸೃಷ್ಟಿಯ ಮಾರ್ಗವಾಗಿದೆ. ಸಂಶೋಧನೆ ಮತ್ತು ವಿಶ್ವವಿದ್ಯಾನಿಲಯ ಎಂಬ ಎರಡು ಪರಿಕಲ್ಪನೆಗಳನ್ನು ಈ ಕೃತಿಯಲ್ಲಿ ತೆರೆದಿಟ್ಟಿರುವುದು ಏಕಮುಖಿಯಾಗಿಲ್ಲ. ಪಶ್ಚಿಮದ ವಿಚಾರ ಧಾರೆಯ ಜೊತೆ ಭಾರತೀಯ ಜ್ಞಾನಮೀಮಾಂಸೆಯ ಪರಂಪರೆಗಳನ್ನೂ ಮನಸ್ಸಿನಲ್ಲಿಟ್ಟು ಕೊಂಡು, ಈ ಪುಸ್ತಕ ನಮ್ಮನ್ನು ಉದ್ದೇಶಿಸಿ ಮಾತನಾಡುತ್ತದೆ.

ವಿಶ್ವವಿದ್ಯಾಲಯವೆಂದರೆ ವಿವಿಧ ಜ್ಞಾನಶಿಸ್ತುಗಳ ಸಂಗಮ. ಆಯಾ ಜ್ಞಾನಶಿಸ್ತುಗಳಿಗೆ ತಕ್ಕಂತೆ ಸಂಶೋಧನೆಯ (ರಿಸರ್ಚ್) ಅರ್ಥ ಮತ್ತು ಉದ್ದೇಶಗಳು ಬೇರೆಬೇರೆ ಆಗಿರುತ್ತವೆ. ಆದರೆ ಸ್ಥೂಲವಾಗಿ ಸಂಶೋಧನೆಯ ಕೆಲಸವೆಂದರೆ ಈ ಜಗತ್ತಿನ ಕುರಿತಾದ ನಮ್ಮ ಅರಿವನ್ನು ಹಿಗ್ಗಿಸುವುದು, ನಾವು ಹೊಂದಿರುವ ತಪ್ಪು ಗ್ರಹಿಕೆಗಳನ್ನು ಸರಿಪಡಿಸುತ್ತ ನಮ್ಮ ತಿಳಿವಳಿಕೆಯನ್ನು ಸ್ಪಷ್ಟಪಡಿಸುವುದು, ನಮಗೆ ಎದುರಾಗುವ ಬೌದ್ಧಿಕ ಸಮಸ್ಯೆಗಳನ್ನು ಬಿಡಿಸುವುದು, ಹೊಸಬಗೆಯ ವಾದ-ಸಿದ್ಧಾಂತಗಳನ್ನು ಕಟ್ಟುವುದು, ವಿವೇಕ ಮತ್ತು ವೈಜ್ಞಾನಿಕತೆಗಳ ಮೂಲಕ ಈ ಲೋಕದ ವಿವರಣೆಯನ್ನು ಮಾಡುವುದು, ಪೂರ್ವಗ್ರಹಗಳನ್ನು ಪ್ರಶ್ನಿಸುವುದು, ಬೌದ್ಧಿಕ ಕತೆಗಳನ್ನು ಹೊಸೆಯುವುದು, ಹೊಸ ಚಿಂತನೆಗೆ ತೊಡಗುವುದು, ಒಳನೋಟಗಳನ್ನು ಒದಗಿಸುವುದು ಇತ್ಯಾದಿ ಇತ್ಯಾದಿ. ಸಂಶೋಧನೆಯನ್ನು ಕಲಿಯುವುದೆಂದರೆ ಇವೆಲ್ಲವುಗಳನ್ನು ಮಾಡುವ ಕ್ರಮ-ಉಪಕ್ರಮಗಳನ್ನು ಕಲಿಯುವುದೆಂದೇ ಅರ್ಥ. ಈ ಪುಸ್ತಕ ಸಂಶೋಧನಾಸಕ್ತರಿಗೆ ಅಂತಹ ಕ್ರಿಯಾಚರಣೆಗಳನ್ನು ಕಲಿಸುವ ಪ್ರಯತ್ನ ಮಾಡುತ್ತದೆ.

ಸಂರಚನೋತ್ತರ ಸಿದ್ಧಾಂತಗಳ ಜೊತೆ ಕೆಲಸ ಮಾಡಿದ ಬ್ರಿಟಶ್ ವಿಮರ್ಶಕಿ ಕ್ಯಾಥರಿನ್ ಬೆಲ್ಸಿ ವಿವರಿಸುವ ಹಾಗೆ: ‘ಸಂಶೋಧನೆ (ರಿಸರ್ಚ್) ಮತ್ತು ಇತರ ಅಧ್ಯಯನಗಳ (ಸ್ಟಡೀಸ್) ನಡುವೆ ವ್ಯತ್ಯಾಸಗಳಿವೆ. ಸಂಶೋಧನೆಯು ಹೊಸ ಜ್ಞಾನಸೃಷ್ಟಿ ಮಾಡಬೇಕೆಂದು ನಾವು ಅಪೇಕ್ಷಿಸುತ್ತೇವೆ; ಅದು ಹೊಸ ವಿಚಾರ ಅಥವಾ ತಿಳಿವಳಿಕೆಯನ್ನು ಹೊರಹೊಮ್ಮಿಸಬೇಕು. ಇಂತಹ ಅಧ್ಯಯನಗಳಲ್ಲಿ ಸ್ವಂತಿಕೆ ಇರಬೇಕು. ಅಂದರೆ ಕನಿಷ್ಟ ಪಕ್ಷ ಇಲ್ಲಿ ಉಂಟಾಗುವ ಚಿಕ್ಕ ಕೊಡುಗೆ ಸಂಶೋಧನೆ ಮಾಡುವವರಿಂದಲೇ ಹುಟ್ಟಿಕೊಂಡಿರಬೇಕು. ಹಾಗೆಂದು ಸಂಶೋಧಕರು ಇಲ್ಲಿಯವರೆಗೂ ನಮಗೆ ಗೊತ್ತೇ ಇರದ ಹೊಚ್ಚ ಹೊಸದಾದನ್ನು ಹೇಳಲೇಬೇಕು ಅಂತೇನೂ ಇಲ್ಲ. ನಮಗೆ ಗೊತ್ತಿರುವ ವಿಚಾರಗಳನ್ನೇ ಇಲ್ಲಿಯವರೆಗೆ ನೋಡಿರದ ರೀತಿಯಲ್ಲಿ ಹೊಸದಾಗಿ ಜೋಡಿಸಿದರೆ ಸಾಕು. ಸಂಶೋಧನೆ ಯುಗಪಲ್ಲಟ ಮಾಡುವ ಜ್ಞಾನವನ್ನೇ ಸೃಷ್ಟಿಸಬೇಕೆಂದೇನೂ ಇಲ್ಲ್ಲ; ಪದಬಂಧದಂತೆ ವಿಚಾರಗಳನ್ನು ಜೋಡಿಸುವ ಪುಟ್ಟ ಕೆಲಸವಾದರೂ ಪರವಾಗಿಲ್ಲ. ಆದರೆ ಯಾವ ವಿಷಯದ ಕುರಿತು ಸಂಶೋಧನೆ ಮಾಡಲಾಗುತ್ತಿದೆಯೋ ಆ ವಿಷಯದ ಬಗ್ಗೆ ಇಲ್ಲಿಯವರೆಗೆ ಬಂದಂತಹ ನಿರೂಪಣೆಗಳಿಗೆ ವ್ಯತ್ಯಾಸವನ್ನಂತೂ (ಡಿಫರನ್ಸ್) ಅದು ಉಂಟು ಮಾಡಲೇಬೇಕು .

ಸಂಶೋಧನೆಯನ್ನು ಈ ರೀತಿ ಸಾಮಾನ್ಯವಾಗಿ ಅರ್ಥೈಸಬಹುದಾದರೂ ಕೊನೆಗೆ ಜ್ಞಾನಶಿಸ್ತುಗಳಿಗೆ ಅನುಗುಣವಾಗಿ ಅದರ ಸೂಕ್ಷ್ಮತೆಯನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಸಂಶೋಧನೆಯನ್ನು ನಾವು ನಮ್ಮನಮ್ಮ ಜ್ಞಾನಶಿಸ್ತುಗಳ ದಾರಿಯಲ್ಲಿಯೇ ಕಂಡುಕೊಳ್ಳಬೇಕು. ಜ್ಞಾನಶಿಸ್ತುಗಳ ಆಚೆ ಸಂಶೋಧನೆ ನಡೆಯುವುದಿಲ್ಲ. ಆದ್ದರಿಂದ ಸಂಶೋಧನೆಯ ರೀತಿ-ನೀತಿ ಆಯಾ ಜ್ಞಾನಶಾಖೆಗಳಿಗೆ ಅನುಗುಣವಾಗಿ ಬೇರೆಬೇರೆ ಆಗಿರುತ್ತವೆ. ಉದಾಹರಣೆಗೆ ಸಾಹಿತ್ಯ ಅಧ್ಯಯನದಲ್ಲಿ ವಿಮರ್ಶೆಯೇ ಬೇರೆ, ಸಂಶೋಧನೆಯೇ ಬೇರೆ ಎಂಬ ಚರ್ಚೆ ಒಂದು ಕಾಲದಲ್ಲಿ ಕನ್ನಡ ಅಧ್ಯಯನವೆಂಬ ಜ್ಞಾನಶಾಖೆಯಲ್ಲಿ ಬಿಡಿಸಲಾಗದ ಸಮಸ್ಯೆಯಾಗಿತ್ತು. ಈ ಪುಸ್ತಕ ಅಂತಹ ಗೊಂದಲವನ್ನು ಪರಿಹರಿಸುವ ಪ್ರಯತ್ನವನ್ನು ಮಾಡಿದೆ.

ಸಂಶೋಧನೆಯ ಸವಾಲು


ಭಾರತದಂತಹ ಪಶ್ಚಿಮೇತರ ಸಂಸ್ಕೃತಿಗಳು ತಮ್ಮದೇ ಆದ ಲೋಕದೃಷ್ಟಿ, ಜ್ಞಾನಮಾರ್ಗಗಳ ಜೊತೆ, ಐರೋಪ್ಯ ಮಾದರಿಯ ಜ್ಞಾನಾರ್ಜನೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ವಸಾಹತುಶಾಹಿಯಂತಹ ಐತಿಹಾಸಿಕ ಪ್ರಕ್ರಿಯೆಯಿಂದ ಜಗತ್ತಿನಾದ್ಯಂತ ಹರಡಿದ ಈ ಜ್ಞಾನಕ್ರಿಯೆ ಭೌಗೋಳಿಕ ಅಸಮಾನತೆ ಸೃಷ್ಟಿಸಿದ್ದು ಆಶ್ಚರ್ಯವೇನಲ್ಲ. ಪಶ್ಚಿಮದ ಜಗತ್ತಿನಲ್ಲಿ ಸಾವಿರಾರು ವರ್ಷಗಳಿಂದ ಸಾವಯವ ಬೆಳವಣಿಗೆಯನ್ನು ಕಂಡ ಈ ಆಚರಣೆಯು, ದಕ್ಷಿಣದ ಜಗತ್ತಿನಲ್ಲಿ (ಗ್ಲೋಬಲ್ ಸೌತ್) ವಿರೂಪಗೊಂಡಿದ್ದು ಇತಿಹಾಸದ ಸಹಜ ಪ್ರಕ್ರಿಯೆಯಾಗಿದೆ. ಹಾಗಾಗಿ ನಮ್ಮ ಸಂಶೋಧನೆಗಳ ಪ್ರಗತಿಯನ್ನು ಪ್ರಥಮ ಜಗತ್ತಿನ ಸಂಶೋಧನೆಗಳ ಜೊತೆ ಹೋಲಿಸಿ, ನಾವು ಜಾಗತಿಕ ರ್ಯಾಂಕಿಂಗ್‍ನಲ್ಲಿ ಪಾಲ್ಗೊಳ್ಳುವುದು ಎಷ್ಟು ನ್ಯಾಯಯುತ ಮತ್ತು ನೈತಿಕವಾದುದು ಎಂಬ ಪ್ರಶ್ನೆ ಎದ್ದೇ ಏಳುತ್ತದೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳನ್ನು ಪಶ್ಚಿಮದ ವಿಶ್ವವಿದ್ಯಾಲಯಗಳ ಸಂಶೋಧನೆಗಳ ಜೊತೆ ಹೋಲಿಸಲೇಬಾರದು. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಗುಣಮಟ್ಟವನ್ನು ಅಳೆಯಲು ಬೇರೆಯೇ ಆದ ಮಾನದಂಡಗಳನ್ನು ರೂಪಿಸಿಕೊಳ್ಳಬೇಕು. ಏಕೆಂದರೆ ಉನ್ನತ ಕಲಿಕೆ ಹಾಗೂ ಸಂಶೋಧನೆಯ ತಾಣಗಳಾಗಿ ಭಾರತದ ವಿಶ್ವವಿದ್ಯಾನಿಲಯಗಳ ಬೇರು ಇನ್ನೂ ಗಟ್ಟಿಗೊಂಡಿಲ್ಲ.

ಪ್ರಥಮ ಜಗತ್ತಿನ ವಿಶ್ವವಿದ್ಯಾನಿಲಯಗಳ ಹಾಗೆ ನಮ್ಮಲ್ಲಿ ಅಂತಹ ಸಾವಯವ ಪರಂಪರೆ ರೂಪುಗೊಂಡಿಲ್ಲ . ಅವುಗಳ ಹಾಗೆ ನಮ್ಮ ಲೆಗಸಿ ದೊಡ್ಡದಲ್ಲ. ವಸಾಹತುಶಾಹಿ ರಾಜಕೀಯದ ಭಾಗವಾಗಿ ಹುಟ್ಟಿದ ಭಾರತೀಯ ವಿಶ್ವ ವಿದ್ಯಾಲಯಗಳು ಸ್ಥಾಪನೆಗೊಂಡಾಗ ಅವು ಪರೀಕ್ಷೆಗಳನ್ನು ನಡೆಸುವ ಕೇಂದ್ರಗಳಾಗಿ ಪ್ರಾರಂಭವಾದವು. ನೂರ ಅರುವತ್ತು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ವಿಶ್ವವಿದ್ಯಾನಿಲಯಗಳನ್ನು ಉನ್ನತ ಕಲಿಕೆ ಹಾಗೂ ಸಂಶೋಧನಾ ತಾಣಗಳೆಂದು ಕಾಣುತ್ತಿರುವುದು ಇತ್ತೀಚೆಗಷ್ಟೆ. ಆದರೆ ಇಂತಹ ಚರ್ಚೆಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತೀಯ ವಿಶ್ವವಿದ್ಯಾನಿಲಯಗಳು ಆಧುನಿಕ ಸಂಸ್ಥೆಗಳಾಗಿ ನಮ್ಮ ಸಾರ್ವಜನಿಕ ಬದುಕಿಗೆ ಹೊಸ ಆಯಾಮವನ್ನು ಕೊಟ್ಟಿವೆ. ಎಲ್ಲ ಸಮಸ್ಯೆಗಳ ನಡುವೆ ಅವು ವಿವಿಧ ಜಾತಿ, ಮತ, ಲಿಂಗ, ಪಂಗಡಗಳು ಒಂದುಗೂಡುವ ಜಾಗಗಳೂ ಆಗಿವೆ ಎಂಬುದನ್ನು ನಾವು ಮರೆಯಬಾರದು. ನಮ್ಮ ವಿಶ್ವವಿದ್ಯಾನಿಲಯಗಳು ಸಾಮಾಜಿಕವಾಗಿ ಬೇರೆ ರೀತಿಯ ಕೆಲಸ ಮಾಡಿವೆ. ನಮ್ಮಲ್ಲಿ ಸಾರ್ವಜನಿಕ ತಾಣಗಳನ್ನು ಸೃಷ್ಟಿಸಿದ ಸಂಸ್ಥೆಗಳಾಗಿ ಭಾರತೀಯ ವಿಶ್ವವಿದ್ಯಾನಿಲಯಗಳ ಇತಿಹಾಸ ಬರೆದರೆ ನಮಗೆ ಬೇರೆಯದೇ ಆದ ಹೊಸ ಹೊಳಹುಗಳು ಸಿಗಬಹುದು.

ಹಾಗೆಂದು, ಈ ಐತಿಹಾಸಿಕ ಹಾಗೂ ಭೌಗೋಳಿಕ-ರಾಜಕೀಯದ ಇತಿಮಿತಿಗಳು ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನೆಯ ಗುಣಮಟ್ಟವನ್ನು ಸುಧಾರಿಸದೆ ಇರಲು ಕಾರಣವಾಗಬಾರದು. ಆಧುನಿಕತೆಯ ಕೊಡುಗೆಯಾಗಿ ಬಂದ ಈ ಜ್ಞಾನಮಾರ್ಗ ಮತ್ತು ಸಂಸ್ಥೆಯ ಆಗು-ಹೋಗುಗಳು ಏನೇ ಇರಬಹುದು, ಅವುಗಳನ್ನು ಅರ್ಥಮಾಡಿಕೊಂಡು, ಕಲಿತು ಉಪಯೋಗ ಮಾಡಿಕೊಳ್ಳುವುದು ನಮಗೆ ಇಂದು ಅನಿವಾರ್ಯವಾಗಿದೆ. ನಾವು ಆಧುನಿಕ ಶೈಕ್ಷಣಿಕ ಪದ್ಧತಿಯನ್ನು ಮತ್ತು ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳನ್ನು ಒಪ್ಪಿಕೊಂಡ ಮೇಲೆ, ಅವುಗಳಿಗೆ ಒಪ್ಪಿತವಾಗುವ ಜ್ಞಾನಾಚರಣೆಯನ್ನೂ ಕಲಿತು, ಬೌದ್ಧಿಕ ಚಲನೆಯನ್ನು ಸುಗಮವಾಗಿಸುವುದು ಹೇಗೆ ಎಂಬುದು ನಮ್ಮ ಮುಂದೆ ಇರುವ ಸವಾಲು. ಪ್ರಶ್ನೆ ಇರುವುದು ಈ ಜ್ಞಾನಮಾರ್ಗವನ್ನು ಕಲಿತು ಸಾಧಿಸುವುದು ಹೇಗೆ ಎಂಬುದರಲ್ಲಿ. ಈ ಸವಾಲನ್ನು ಎದುರಿಸಲು ನಮಗೆ ಸ್ಪಷ್ಟವಾಗಬೇಕಾದ ಸಂಗತಿ ಎಂದರೆ ಈ ಸಂಶೋಧನಾ ಆಚರಣೆ ಒಂದು ನಿರ್ದಿಷ್ಟ ಸಂಸ್ಕೃತಿಯ ರೂಪವೇ (ಕಲ್ಚರಲ್ ಫಾರ್ಮ್) ಹೊರತು ಸಾರ್ವತ್ರಿಕ ಆಚರಣೆ ಅಲ್ಲ ಎಂಬುದು. ಆದ್ದರಿಂದ ಈ ಆಚರಣೆಯು ಆ ಸಂಸ್ಕೃತಿಯಲ್ಲಿ ನಡೆದು ಬಂದ ದಾರಿಯನ್ನು ನಾವು ಐತಿಹಾಸಿಕವಾಗಿ ಹಾಗೂ ತಾತ್ವಿಕವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಪ್ರಸ್ತುತ ಪುಸ್ತಕವು ಆಧುನಿಕ ಕನ್ನಡದ ವಾಙ್ಮಯದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಅಂತಹ ಮಹತ್ವಾಕಾಂಕ್ಷೆಗೆ ಕೈಹಾಕಿ, ಈ ಸಮಸ್ಯೆಯನ್ನು ಬಿಡಿಸುವ ಪ್ರಯತ್ನ ಮಾಡಿದೆ. ಕನ್ನಡದ ಬೌದ್ಧಿಕ ಲೋಕಕ್ಕೆ ಇಂಥದ್ದೊಂದು ಪ್ರವೇಶದ ಅವಶ್ಯಕತೆ ಇತ್ತು.

ಜಗತ್ತನ್ನು ತೆರೆದಿಡುವ ಸಂಶೋಧನೆ
ಜರ್ಮನ್ ದೇಶದ ತತ್ವಜ್ಞಾನಿ ಮಾರ್ಟಿನ್ ಹಾಯ್‍ಡೆಗರ್ ಅವರ ವಿಚಾರಧಾರೆಯನ್ನು ಅನುಸರಿಸಿ ಒಂದು ತಾತ್ತ್ವಿಕ ಪ್ರಶ್ನೆಯೊಂದನ್ನು ಕೇಳಬಹುದು. ಸಂಶೋಧನೆ (ರಿಸರ್ಚ್) ಎಂಬ ಸಂಗತಿಯು ನಮ್ಮ ನಡುವೆ ಏಕೆ ಇದೆ? ಅದರ ಬದಲು ಇನ್ನೇನಾದರೂ ಇರಬಹುದಿತ್ತಲ್ಲ? ಇದಕ್ಕೆ ಸವಿಸ್ತಾರವಾಗಿ ಸಮರ್ಪಕ ಉತ್ತರ ಕಂಡುಕೊಳ್ಳುವುದು ಕಷ್ಟವಾದರೂ, ಒಂದು ಮಾತು ಹೇಳಬಹುದು. ಜಗತ್ತನ್ನು ಅರಿಯುವ ಸಂಶೋಧನೆ ಏಕೆ ಇದೆ ಅಂದರೆ ಜಗತ್ತು ತನ್ನಷ್ಟಕ್ಕೆ ತಾನೇ ನಮ್ಮ ಮುಂದೆ ಬಿಚ್ಚಿಕೊಳ್ಳುವುದಿಲ್ಲ. ದಿಸ್ ವಲ್ರ್ಡ್ ಡಸ್‍ಂಟ್ ರಿವೀಲ್ ಇಟ್‍ಸೆಲ್ಪ್. ಅದನ್ನು ನಾವು ಅಧ್ಯಯನ ಮಾಡಿ ನಮ್ಮ ಅರಿವಿಗೆ ತಂದುಕೊಳ್ಳುವಂತೆ ಮಾಡಬೇಕಾಗುತ್ತದೆ. ಭೌತಿಕ ಜಗತ್ತಿನ ಈ ಆಗುಹೋಗುಗಳು ಅವು ಇರುವಂತೆಯೇ ನಮಗೆ ಕಂಡಿದ್ದರೆ ಭೌತಶಾಸ್ತ್ರದಲ್ಲಾಗುವ ಸಂಶೋಧನೆಗಳ ಅವಶ್ಯಕತೆಯೇ ಇರುತ್ತಿರಲಿಲ್ಲ. ಹಾಗೆಯೇ ಸಾಮಾಜಿಕ ರಚನೆಗಳ ರಹಸ್ಯವೂ ನಮಗೆ ಸಹಜವಾಗಿಯೇ ಗೋಚರವಾದರೆ, ಸಮಾಜ ವಿಜ್ಞಾನಗಳಲ್ಲಾಗುವ ಸಂಶೋಧನೆಗಳ ಅಗತ್ಯವೇ ಇರುತ್ತಿರಲಿಲ್ಲ. ಪ್ರಾಕೃತಿಕ ಮತ್ತು ಸಾಮಾಜಿಕ ವಿದ್ಯಮಾನಗಳಂತೆಯೇ ಸಾಹಿತ್ಯದ ಪಠ್ಯಗಳೂ ಸಹಜವಾಗಿ ನಮ್ಮ ಮುಂದೆ ತೆರೆದುಕೊಳ್ಳುವುದಿಲ್ಲ. ಇವೆಲ್ಲವುಗಳನ್ನು ಸತತವಾಗಿ ಅಧ್ಯಯನ ಮಾಡುವ ಪರಿಶ್ರಮದಿಂದಲೇ ಅರ್ಥ ಮಾಡಿ ಕೊಳ್ಳಬೇಕಾಗುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಧ್ಯಯನ ಮತ್ತು ಆಲೋಚನೆಗಳಿಂದ ಈ ಜಗತ್ತು ನಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ ಎಂಬುದು. ಜಗತ್ತಿನ ವಿದ್ಯಮಾನಗಳು (ಫನಾಮಿನಾ) ನಮ್ಮ ಕಣ್ಣಿಗೆ ಕಾಣಿಸುತ್ತವೆ ಮತ್ತು ಅನುಭವಕ್ಕೆ ಬರುತ್ತವೆಯಾದರೂ, ಅವುಗಳನ್ನು ರೂಪಿಸಿದ ಅಂತಃಸ್ಸಂಬಂಧಗಳನ್ನು, ಅವುಗಳ ಹಿಂದೆ ಕೆಲಸ ಮಾಡುವ ಹಕೀಕತ್‍ಗಳನ್ನು ಶೋಧನೆಯ ಮೂಲಕವೇ ತಿಳಿದುಕೊಳ್ಳಬೇಕಾಗುತ್ತದೆ. ಈ ಕಾರಣಗಳಿಂದಾಗಿಯೇ ಸಂಶೋಧನೆ ನಮ್ಮ ಮಧ್ಯೆ ಇರುವುದು ಮತ್ತು ಸಾದ್ಯವಾಗುವುದು. ಜಗತ್ತಿನ ಜೊತೆ ಸಂಬಂಧ ಬೆಸೆಯುವ ನಮ್ಮ ಅನುಭವಗಳು ಒಮ್ಮೊಮ್ಮೆ ನಮ್ಮ ಗ್ರಹಿಕೆಯ ದಿಕ್ಕನ್ನು ತಪ್ಪಿಸಬಹುದು. ಪಠ್ಯಗಳ ಅಪಾರ್ಥವೂ ಸಂಭವಿಸಬಹುದು. ಆಗ ಅಧ್ಯಯನ ಮಾಡಿ ಸರಿಯಾದ ತಿಳಿವಳಿಕೆ ಹೊಂದುವುದರಲ್ಲಿ ಸಂಶೋಧನೆಯೆಂಬ ಬೌದ್ಧಿಕ ಕೆಲಸದ ಮೊರೆ ಹೋಗಬೇಕಾಗುತ್ತದೆ. ಹಾಗಾಗಿ ಸಂಶೋಧನೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಅಧ್ಯಯನ ಮಾಡುವ ವಸ್ತು-ಸಂಗತಿಗಳು ಈ ಜಗತ್ತಿನ ಭಾಗವಾಗಿರುವುದರಿಂದ ನಾವು ಜಗತ್ತಿನ ರಚನೆಯನ್ನೂ ತಿಳಿದುಕೊಳ್ಳಬೇಕು.
ಜಗತ್ತಿನ ರಚನೆ
ಹಾಯ್‍ಡೆಗರ್ ಮಾಡುವ ಒಂದು ಸೈದ್ಧಾಂತಿಕ ವ್ಯತ್ಯಾಸವನ್ನು ಉಪಯೋಗಿಸಿ ಕೊಂಡು ಮುಂದುವರೆಯುವುದಾದರೆ ಭೂಮಿಯೇ ಬೇರೆ, ಜಗತ್ತೇ ಬೇರೆ. ಇದನ್ನು ವಿವರಿಸೋಣ. ನಮ್ಮಲ್ಲಿ ಭೂಮಿಯಂತಹ ನೈಸರ್ಗಿಕ ಸಂಗತಿ ಇದೆ. ಆ ಭೂಮಿಯಲ್ಲಿ ಮಾನವ ನಿರ್ಮಿತ ಜಗತ್ತೂ ಒಂದಿದೆ. ಮಾನವ ನಿರ್ಮಿತ ಅದೆಷ್ಟೋ ಸಂಗತಿಗಳಿಂದಲಾಗಿ ಈ ಜಗತ್ತು ಅಸ್ತಿತ್ವಕ್ಕೆ ಬಂದಿದೆ. ನೈಸರ್ಗಿಕ ವಸ್ತು-ವಿಷಯಗಳನ್ನು ಹೇಗೆ ಅಧ್ಯಯನ ಮಾಡಬೇಕು ಮತ್ತು ಅದರ ತಾತ್ವಿಕತೆಯ ತಳಪಾಯಗಳು ಯಾವುವು ಎಂಬುದನ್ನು ವಿಜ್ಞಾನದ ತತ್ವಜ್ಞಾನ (ಫಿಲಾಸಫಿ ಆಫ್ ಸಾಯಿನ್ಸ್) ಚರ್ಚಿಸುತ್ತದೆ. ಅದರ ಗೊಡವೆಗೆ ನಾವು ಹೋಗುವುದು ಬೇಡ. ಆದರೆ ಮಾನವ ನಿರ್ಮಿತ ಜಗತ್ತನ್ನು ಈ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ನಮ್ಮ ಸಂಶೋಧನೆಯ ವಸ್ತು ಮನುಷ್ಯ ನಿರ್ಮಿತ ಸಂಗತಿಗಳಾದ ಸಮಾಜ, ರಾಷ್ಟ್ರ, ಭಾಷೆ, ಸಂಗೀತ, ಸಾಹಿತ್ಯ, ಕ್ರೀಡೆ, ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆ ಮುಂತಾದವುಗಳು. ಮಾನವ ನಿರ್ಮಿತ ಸಂಗತಿಗಳಿಗೂ ಹಾಗೂ ನೈಸರ್ಗಿಕ ವಸ್ತು-ಸಂಗತಿಗಳಿಗೂ ಅವುಗಳ ಅಸ್ತಿತ್ವಕ್ಕೆ ಸಂಬಂಧಪಟ್ಟಂತೆ ಅಜಗಜಾಂತರ ವ್ಯತ್ಯಾಸವಿದೆ. ಬ್ರೂಟ್ ಫ್ಯಾಕ್ಟ್ಸ್‍ಗಳಾದ ಸೌರವ್ಯೂಹ, ಗಾಳಿ, ನೀರು, ಗಿಡ ಮರ ಇತ್ಯಾದಿಗಳು ಈ ಭೂಮಿ ಮೇಲೆ ಇರಬೇಕಾದರೆ ಮನುಷ್ಯರೂ ಇರಲೇಬೇಕೆಂದೇನೂ ಇಲ್ಲ. ಮನುಷ್ಯರು ಇರಲಿ, ಬಿಡಲಿ, ನೈಸರ್ಗಿಕ ವಾಸ್ತವಗಳು ಈ ಭೂಮಿಯ ಮೇಲೆ ಇದ್ದೇ ಇರುತ್ತವೆ. ಆದರೆ ಕುಟುಂಬ, ಸಮಾಜ, ರಾಷ್ಟ್ರ, ಬರವಣಿಗೆ, ಓದು, ಇತಿಹಾಸ, ವಿಶ್ವವಿದ್ಯಾಲಯ, ಚುನಾವಣೆ, ಕರೆನ್ಸಿ ಇತ್ಯಾದಿಗಳು ಈ ಜಗತ್ತಿನಲ್ಲಿ ಇರಬೇಕಾದರೆ ಮನುಷ್ಯ ಈ ಜಗತ್ತಿನಲ್ಲಿ ಇರಲೇಬೇಕು.ಯಾಕೆಂದರೆ ಇವೆಲ್ಲವೂ ಮಾನವ ನಿರ್ಮಿತ. ಇವು ಅಸ್ತಿತ್ವಕ್ಕೆ ಬಂದಿರುವುದು ಮನುಷ್ಯರ ಮನಸ್ಸುಗಳು ಅವುಗಳನ್ನು ಸೃಷ್ಟಿಸಿ ಒಪ್ಪಿಕೊಂಡ ಬಳಿಕ. ಆದರೆ ನಿಸರ್ಗದ ವಸ್ತುಗಳು ನಮ್ಮ ಮನಸ್ಸಿನ ಹೊರತಾಗಿಯೂ ಅಸ್ತಿತ್ವಕ್ಕೆ ಬರುವಂಥವು .

ಇಷ್ಟು ವ್ಯತ್ಯಾಸ ಹೇಳಿದರೆ ಏನೂ ಪ್ರಯೋಜನವಾಗುವುದಿಲ್ಲ. ಈ ವ್ಯತ್ಯಾಸದಿಂದ ನಾವು ತಿಳಿದುಕೊಳ್ಳಬೇಕಾದ ಸಂಗತಿ ಏನೆಂದರೆ ನಿಸರ್ಗಕ್ಕೆ ಅಸ್ತಿತ್ವವಿದೆಯೇ ಹೊರತು ಅರ್ಥವಿಲ್ಲ . ಉದಾಹರಣೆಗೆ, ತುಂಗಭದ್ರಾ ನದಿ ನೀರು. ಅದನ್ನು ನಾವು ತುಂಗಭದ್ರಾ ಅಂತ ಕರೆಯಲಿ ಬಿಡಲಿ ಆ ನದಿಗೆ ಅದರದ್ದೇ ಆದ ಅಸ್ತಿತ್ವವಿದೆ. ಆದರೆ ತುಂಗಭದ್ರಾ ಎಂದು ಒಂದು ನದಿಯನ್ನು ಕರೆಯುವುದರ ಮೂಲಕ ನಾವು ಅರ್ಥವೊಂದನ್ನು ಸೃಷ್ಟಿಸುತ್ತಿದ್ದೇವೆ. ಮನುಷ್ಯ ಜಗತ್ತು ಎಂದರೆ ಅರ್ಥದ ಪ್ರಪಂಚ. ಸ್ವಾಭಾವಿಕ ವಿಜ್ಞಾನಗಳಲ್ಲಿ ನಡೆಯುವ ಸಂಶೋಧನೆಗಳಾಗಲಿ, ಮಾನವ ವಿಜ್ಞಾನಗಳಲ್ಲಿ ನಡೆಯುವ ಸಂಶೋಧನೆಗಳಾಗಲಿ ಈ ಮೂಲಭೂತ ವ್ಯತ್ಯಾಸಗಳನ್ನು ಅರಿತುಕೊಳ್ಳುವುದು ಸೂಕ್ತ. ಏಕೆಂದರೆ ಈ ವ್ಯತ್ಯಾಸವು ನಾವು ಅನ್ವೇಷಣೆ ಮಾಡುವ ದಾರಿಗಳು ಹೇಗಿರಬೇಕು, ನಮ್ಮ ಅಧ್ಯಯನದ ವಸ್ತುಗಳ ಬಗ್ಗೆ ನಮ್ಮ ಊಹೆ, ನಂಬಿಕೆಗಳು ಏನಿರಬೇಕು ಎಂಬುದನ್ನು ನಾವು ತಿಳಿಯುವುದರಲ್ಲಿ ಸಹಾಯ ಮಾಡುತ್ತವೆ.

ಮನುಷ್ಯ ಮತ್ತು ಈ ಜಗತ್ತಿನ ಸಂಬಂಧವನ್ನು ಅರಿಯದಿದ್ದರೆ ಮಾನವ ವಿಜ್ಞಾನಗಳಲ್ಲಿ (ಹ್ಯುಮನ್ ಸೈನ್ಸಸ್) ಸಂಶೋಧನೆಯ ಕೆಲಸ ಅಷ್ಟೊಂದು ಫಲಪ್ರದ ವಾಗಲಾರದು. ಸಾಮಾಜಿಕ ರಚನೆಗಳು ಹೇಗೆ ಅಸ್ತಿತ್ವಕ್ಕೆ ಬರುತ್ತವೆ, ಅವುಗಳ ಅರ್ಥವೇನು ಎಂಬುದು ಸಮಾಜ ವಿಜ್ಞಾನಿಗೆ ಗೊತ್ತಿರಬೇಕು. ಹಾಗೆಯೇ ಸಾಹಿತ್ಯ ಎನ್ನುವುದು ಈ ಜಗತ್ತಿನಲ್ಲಿ ಹೇಗೆ ಅಸ್ತಿತ್ವಕ್ಕೆ ಬರುತ್ತದೆ, ಅದರ ರಚನೆ ಹಾಗೂ ಸಾಂಸ್ಕೃತಿಕ ರೂಪದ ಬಗ್ಗೆ ಸಾಹಿತ್ಯ ಸಂಶೋಧಕ ತಿಳಿದುಕೊಳ್ಳುವುದು ಉಪಯುಕ್ತ. ಈ ನಿಟ್ಟಿನಲ್ಲಿ ಸಂಶೋಧನೆಯ ಮಾರ್ಗವನ್ನು ಅನ್ವೇಷಣೆ ಮಾಡಲು ಹೊರಟ ಈ ಪುಸ್ತಕದ ಪಾತ್ರಗಳಿಗೆ ತಾವು ನಿಂತ ಜಾಗ ಕನ್ನಡದ ಜಗದ್ವಲಯ ಎಂಬ ಅರಿವು ಇದೆ. ಅದರಲ್ಲಿಯೂ ಅವರ ದೃಷ್ಟಿ ಕನ್ನಡ ಸಾಹಿತ್ಯವೆಂಬ ಸಂಸ್ಥೆಯ ಮೇಲೆ ಕೇಂದ್ರೀಕೃತವಾಗಿದೆ. ಹಾಗಾದರೆ ಈ ಸಾಹಿತ್ಯವೆಂಬುದು ಎಂತಹ ಸಂಗತಿ?, ಅದು ಈ ಜಗತ್ತಿನಲ್ಲಿ ಎಲ್ಲಿದೆ?, ಹೇಗಿದೆ? ಅದನ್ನು ಸಂಶೋಧನೆ ಮಾಡುವುದೆಂದರೆ ಅದರ ಅರ್ಥವೇನು?, ಇತ್ಯಾದಿ ವಿಷಯಗಳನ್ನು ಚರ್ಚಿಸುವುದು ಸಮಂಜಸವೆನಿಸುತ್ತದೆ.

ಈ ಜಗತ್ತಿನಲ್ಲಿ ಸಾಹಿತ್ಯದ ಇರುವಿಕೆ ಈ ಕೃತಿ ವಿಮರ್ಶೆ ಹಾಗೂ ಸಂಶೋಧನೆಯ ವ್ಯತ್ಯಾಸಗಳನ್ನು ಚರ್ಚಿಸಿರುವುದು ಸಂಶೋಧನಾಸಕ್ತರಿಗೆ ಹೆಚ್ಚು ಉಪಯುಕ್ತವಾಗುವ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯ ತತ್ವ (ಲಿಟರರಿ ಥಿಯರಿ)ಗಳ ನಡುವಿನ ಭೇದವನ್ನು ಅರ್ಥ ಮಾಡಿಕೊಳ್ಳುವುದು ಉಚಿತ. ವಿಮರ್ಶೆ ಎನ್ನುವುದು ಸಾಹಿತ್ಯದ ಪಠ್ಯಗಳು ಇರುತ್ತವೆ ಎಂದು ಒಪ್ಪಿಕೊಂಡು, ಪಠ್ಯಗಳ ವಿಶ್ಲೇಷಣೆ ಹಾಗೂ ಮೌಲ್ಯಮಾಪನಕ್ಕೆ ತೊಡಗಿಕೊಳ್ಳುತ್ತದೆ. ಸಾಹಿತ್ಯ ತತ್ವ, ವಿಶೇಷವಾಗಿ ಸಂರಚನೋತ್ತರವಾದ, ಸಾಹಿತ್ಯ ಎನ್ನುವ ಒಂದು ಶುದ್ಧವಾದ ಬರವಣಿಗೆ ಇಲ್ಲ ಎಂದು ವಾದಿಸುವ ಮೂಲಕ ಸಾಹಿತ್ಯವೆಂಬ ಪಠ್ಯದ ಸ್ವಾಯತ್ತತೆಯನ್ನು ಪ್ರಶ್ನಿಸುತ್ತದೆ. ಅಂದರೆ ಸಾಹಿತ್ಯ ಎನ್ನುವ ಸಾರ (ಎಸ್ಸೆನ್ಸ್) ಪಠ್ಯಗಳಲ್ಲಿ ಹುದುಗಿಕೊಂಡಿರುವುದಿಲ್ಲ; ಎಲ್ಲ ಬರವಣಿಗೆಗಳಂತೆ, ಸಾಹಿತ್ಯವೆಂದು ಗುರುತಿಸಲ್ಪಡುವ ಪಠ್ಯಗಳು ಕೇವಲ ಬರವಣಿಗೆಗಳಷ್ಟೇ. ಕೆಲವು ಬರವಣಿಗೆಗಳನ್ನು ನಾವು ಸಾಹಿತ್ಯದ ಪಠ್ಯಗಳೆಂದು ಓದುತ್ತೇವೆ. ನಾವು ಓದುವ ಕ್ರಿಯೆಯು ಒಂದು ಬರವಣಿಗೆಯನ್ನು ಸಾಹಿತ್ಯವೆಂದು ಗುರುತಿಸುವಂತೆ ಮಾಡುತ್ತದೆ. ಸ್ವಾಭಾವಿಕವಾಗಿ ‘ಸಾಹಿತ್ಯ’ ಎಂಬ ಪಠ್ಯಗಳು ಇರುವುದಿಲ್ಲ. ನಮ್ಮ ಓದು ಸಾಹಿತ್ಯದ ಗುಣವನ್ನು ಹೊರಹೊಮ್ಮಿಸುತ್ತದೆ. ಅಂದರೆ ನಮಗೆ ಬೇಕಾದುದೆಲ್ಲವನ್ನೂ ಸಾಹಿತ್ಯವೆಂದು ಓದಿ ಬಿಡಬಹುದು ಎಂಬುದು ಇದರ ಅರ್ಥವಲ್ಲ. ಎಲ್ಲ ಬರವಣಿಗೆಗಳನ್ನು ಸಾಹಿತ್ಯವೆಂದು ಓದಲೂ ಸಾಧ್ಯವಿಲ್ಲ. ಕೆಲವು ಬರವಣಿಗೆಗಳು ಭಾಷೆಯನ್ನು ಹೇಗೆ ಬಳಸಿಕೊಂಡಿರುತ್ತವೆ ಎಂದರೆ ಅವುಗಳು ಸಾಹಿತ್ಯವೆಂದು ಓದಬಹುದಾದ ಕಸುವನ್ನು ಮೈಗೂಡಿಸಿಕೊಂಡಿರುತ್ತವೆ. ಸಾಹಿತ್ಯವೆಂದು ಓದಲು ಸಾಧ್ಯವಾಗುವ ಸತ್ವವನ್ನು ಪಡೆದುಕೊಂಡಿರುತ್ತವೆ. ಆದರೆ ತನ್ನಷ್ಟಕ್ಕೆ ತಾನೆ ಸ್ವಯಂಭೂ ಎನ್ನುವ ಕರಾರುವಾಕ್ಕಾದ ಸಾಹಿತ್ಯದ ತುಣುಕು ಇರಲು ಸಾಧ್ಯವಿಲ್ಲ. ಇದರ ಜೊತೆ ನಾವು ಮಾಡಿಕೊಂಡ ನಿಯಮಗಳು, ರೂಢಿಗಳು, ಸಾಂಸ್ಥಿಕ ಅನುಮೋದನೆಗಳು ಕೆಲವು ಬರವಣಿಗೆಗಳನ್ನು ಸಾಹಿತ್ಯ ಪಠ್ಯಗಳೆಂದು ಗುರುತಿಸುತ್ತವೆ. ಫ್ರೆಂಚ್ ಚಿಂತಕ ಜಾಕ್ ಡೆರಿಡಾ ಈ ಕುರಿತು ಬರೆದಿರುವುದುಂಟು.

ಇಂತಹ ಒಂದು ತಾತ್ವಿಕ ವಿಚಾರವನ್ನು ಸಾಹಿತ್ಯ ಸಂಶೋಧನೆ ಕುತೂಹಲಕ್ಕಾದರೂ ತಿಳಿದುಕೊಳ್ಳಬೇಕು. ಹಾಗೆಯೇ ಪಶ್ಚಿಮದ್ದಲ್ಲದ ಇತರೆ ಪರಂಪರೆಗಳಲ್ಲೂ ಸಾಹಿತ್ಯ ಎಂಬ ಪರಿಕಲ್ಪನೆಯ ಕುರಿತು ಇರುವ ಗ್ರಹಿಕೆಗಳು ಅಷ್ಟೇ ಉಪಯುಕ್ತವಾಗುವವು. ಭಾರತೀಯ ಕಾವ್ಯಮೀಮಾಂಸೆಯಲ್ಲಿಯ ಸಾಹಿತ್ಯದ ಸ್ವರೂಪ ಕುರಿತು ನನಗೆ ಪ್ರವೇಶ ಇಲ್ಲದಿರುವುದರಿಂದ ನನಗೆ ಆ ವಿಷಯವನ್ನು ಚರ್ಚಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ಪುಸ್ತಕದಲ್ಲಿ ಮಾರ್ಗದರ್ಶಕರು ಭಾರತೀಯ ಪರಂಪರೆಯಲ್ಲಿ ಸಾಹಿತ್ಯದ ಕುರಿತು ಚಿಂತನೆ ನಡೆಸುವ ಪ್ರಕಾರಗಳಾದ ಮೀಮಾಂಸೆ, ಟೀಕು, ವ್ಯಾಖ್ಯಾನ ಮುಂತಾದವುಗಳನ್ನು ಉಲ್ಲೇಖಿಸುವುದನ್ನು ಗಮನಿಸಬೇಕು.

ಸಾಹಿತ್ಯವೆಂಬ ಪರಿಕಲ್ಪನೆಯ ಇತಿಹಾಸ


ಇಂಗ್ಲಿಶ್ ಭಾಷೆಯ ‘ಲಿಟ್ರಚರ್’ ಎಂಬ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಸಾಹಿತ್ಯ ಎಂಬ ಪದ ಬಳಕೆಯಲ್ಲಿ ಬಂದಿದೆ. ‘ಲಿಟ್ರಚರ್’ ಮತ್ತು ‘ಸಾಹಿತ್ಯ’ ಎಂಬ ಈ ಎರಡು ಪರಿಕಲ್ಪನೆಗಳು ಕೆಲವು ಸಾಮ್ಯತೆಗಳನ್ನು ಒಳಗೊಂಡಿದ್ದರಿಂದಲೇ ಬಹುಶ ನಾವು ಸಾಹಿತ್ಯವನ್ನು ಲಿಟ್ರಚರ್‍ಗೆ ಸಂವಾದಿಯಾಗಿ ಉಪಯೋಗಿ ಸುತ್ತಿರಬೇಕು. ಆದರೆ ಸಾಹಿತ್ಯ ಎನ್ನುವುದಕ್ಕೆ ಭಾರತೀಯ ಪರಂಪರೆಯಲ್ಲಿಯ ಅರ್ಥ, ಮೌಲ್ಯ ಹಾಗೂ ಅದರ ಪುರುಷಾರ್ಥಗಳ ಸೂಕ್ಷ್ಮತೆ ಬೇರೆಯೆ ಇದೆ. ಆಧುನಿಕಪೂರ್ವ ಕಾಲದ ಪ್ರಜ್ಞೆಯಲ್ಲಿ ಸಾಹಿತ್ಯದ ಅರ್ಥ ಈಗಿನದ್ದಕ್ಕಿಂತಲೂ ವಿಶಾಲವೇ ಆಗಿದೆ. ಕಾವ್ಯವೆಂದರೆ ಗದ್ಯದ ಬೈನರಿಯಾಗಿರಲಿಲ್ಲ. ನಾಟಕ ಮತ್ತು ಇತರ ಸೃಜನಶೀಲ ಅಭಿವ್ಯಕ್ತಿಗಳನ್ನು ಒಳಗೊಂಡಿದ್ದ ಕಾವ್ಯವೆಂಬ ಕೆಟಗರಿ, ‘ಶಾಸ್ತ್ರ’ದ ಬೈನರಿಯಾಗಿರುವುದು ನಮಗೆ ಗೊತ್ತಿರುವ ಸಂಗತಿ.

ಈಗ ಇವೆಲ್ಲವುಗಳ ಅರ್ಥ ಆಧುನಿಕವಾಗಿ, ಪಲ್ಲಟಗೊಂಡಿವೆ. ಇಂದು ನಾವು ಯಾವುದಕ್ಕೆ ಸಾಹಿತ್ಯವೆಂದು ಕರೆಯುತ್ತೇವೆಯೋ ಅದು 19ನೆಯ ಶತಮಾನದ ಆಧುನಿಕತೆಯ ಮೂಲಕ ಸ್ವೀಕರಿಸಿದ ಲಿಟ್ರೆಚರ್ ಎಂಬುದರ ಅರ್ಥ. ಈ ಅರ್ಥ ಪಲ್ಲಟಗಳ ಮೂಲಕ ನಾವು ವಚನಗಳನ್ನೂ, ಕುಮಾರವ್ಯಾಸ ಭಾರತವನ್ನೂ ಲಿಟ್ರೆಚರ್ ಪಠ್ಯಗಳನ್ನಾಗಿ ಇಂದು ಓದುತ್ತೇವೆ. ಆದರೆ ವಚನಕಾರರು, ಕುಮಾರವ್ಯಾಸ ಹಾಗೂ ಅವರ ಓದುಗರು/ಕೇಳುಗರು ಈ ಅರ್ಥದಲ್ಲಿ ಅವುಗಳನ್ನು ನೋಡಿರಲಿಕ್ಕಿಲ್ಲ. ಭಾರತೀಯ ಜ್ಞಾನ ಪರಂಪರೆಯಲ್ಲಿ ಸಾಹಿತ್ಯದ ಪರಿಕಲ್ಪನೆಯ ಪಥದ ಬಗ್ಗೆ ನಾವು ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕಾದುದು ಸಾಕಷ್ಟಿದೆ. ಆದರೆ ಸಾಹಿತ್ಯ ಅಧ್ಯಯನ ಮಾಡುವ ನಾವು ಕೆಲವು ಅಂಶಗಳನ್ನು ಗಮನಿಸಬೇಕು. ಸಾಹಿತ್ಯ ಎಂಬ ಪರಿಕಲ್ಪನೆಯಾಗಿರಲಿ ಅಥವಾ ಲಿಟ್ರೆಚರ್ ಆಗಿರಲಿ, ಅವು ಅಚಲವಾದ (ಸ್ಟೇಬಲ್) ಅರ್ಥಗಳನ್ನು ಹೊಂದಿರುವುದಿಲ್ಲ; ಈ ಪರಿಕಲ್ಪನೆಗಳ ಬಳಕೆ ಕಾಲ ಕಾಲಕ್ಕೆ ಬದಲಾಗುತ್ತ ಹೋಗಿದೆ. ಆದರೆ ಈಗ ಹೆಚ್ಚೂ ಕಡಿಮೆ ಸಾಹಿತ್ಯದ ಅರ್ಥ ಲಿಟ್ರಚರ್ ಎಂದಾಗಿಬಿಟ್ಟಿದೆ. ಆದುದರಿಂದ ಕೊನೆಪಕ್ಷ ಲಿಟ್ರಚರ್ ಪರಿಕಲ್ಪನೆಯ ಇತಿಹಾಸವನ್ನಾದರೂ ತಿಳಿದುಕೊಳ್ಳಬೇಕು.

ರೇಮಂಡ್ ವಿಲಿಯಮ್ಸ್ ತನ್ನ ಮಾಕ್ರ್ಸಿಸಮ್ ಅಂಡ್ ಲಿಟ್ರೆಚರ್ (1977) ಎನ್ನುವ ಗ್ರಂಥದಲ್ಲಿ ಲಿಟ್ರೇಚರ್‍ನ ಪರಿಕಲ್ಪನೆಯ ಇತಿಹಾಸವನ್ನು ಕಟ್ಟಿಕೊಡುತ್ತಾನೆ. ವಿಲಿಯಮ್ಸ್‍ನ ಪ್ರಕಾರ 18 ಹಾಗೂ 19ನೆಯ ಶತಮಾನಗಳಲ್ಲಿ ಲಿಟ್ರಚರ್ ಎಂಬ ಪರಿಕಲ್ಪನೆ ಈಗಿನ ಅರ್ಥ (ಸೃಜನಶೀಲ ಬರವಣಿಗೆ) ಪಡೆಯಲು ಪ್ರಾರಂಭವಾಯಿತು. ಆದರೆ ಈ ಅರ್ಥದ ಹುಟ್ಟಿಗೆ ಕಾರಣವಾದ ಅಂಶಗಳು ಯೂರೋಪಿನ ಪುನರುಜ್ಜೀವನದ ಯುಗದಲ್ಲಿಯೇ ಕಾಣಿಸಿಕೊಂಡಿದ್ದವು. ಲ್ಯಾಟೀನ್‍ನ ‘ಲಿಟೆರಾ’ದಿಂದ ಇಂಗ್ಲಿಶ್‍ಗೆ ಸೇರ್ಪಡೆಯಾದ ಈ ಶಬ್ದದ ಅರ್ಥ (ಲೆಟರಸ್ ಆಫ್ ಆಲ್ಪಾಬೆಟ್) ವರ್ಣಮಾಲೆ ಎಂದಾಗಿತ್ತು. ಅದರ ಮೂಲಕ ಲಿಟ್ರಚರ್ ಅಕ್ಷರಗಳನ್ನು ಓದುವ ಸಾಮರ್ಥ್ಯ ಮತ್ತು ಓದಿಗೆ ಸಂಬಂಧಿಸಿದ್ದು ಅನ್ನುವ ಅರ್ಥ ಪಡೆಯಿತು, ಸಾಕ್ಷರತೆ ಅನ್ನುವ ಅರ್ಥದಲ್ಲಿ. 17ನೆಯ ಶತಮಾನದ ಹೊತ್ತಿಗೆ ವಿಶೇಷಣವಾದ ಲಿಟರರಿ ಎನ್ನುವುದು ಓದಿನ ಅನುಭವ ಎನ್ನುವ ಅರ್ಥ ಹೊಂದಿತ್ತು. ಹೀಗೆ ಓದು, ಓದುಗ ಕೇಂದ್ರಿತ ಅರ್ಥದಿಂದ, ಅಭಿರುಚಿ, ಕಲಿಕೆ ಮತ್ತು ಸಂವೇದನೆಗೆ ಸಂಬಂಧಪಟ್ಟ ವಿಷಯವನ್ನು ಸೂಚಿಸುವ ಪರಿಕಲ್ಪನೆಯಾಗಿ ಇದು ಹೊರಹೊಮ್ಮಿತು. ನಂತರ ಈ ಅರ್ಥಗಳು ಪಲ್ಲಟಗೊಂಡು ಪ್ರಕಟಣೆಗೊಂಡ ಎಲ್ಲ ತರಹದ ಬರವಣಿಗೆಗಳನ್ನು ಲಿಟ್ರಚರ್ ಎಂದು ಗುರುತಿಸುವ ವಾಡಿಕೆ ಬಂದಿತು.

19ನೆಯ ಶತಮಾನದ ಹೊತ್ತಿಗೆ ಸೃಜನಾತ್ಮಕ ಮತ್ತು ಕಾಲ್ಪನಿಕ ಬರವಣಿಗೆಗಳನ್ನಷ್ಟೇ ಲಿಟರರಿ ಎಂದು ಗುರುತಿಸುವ ರೂಢಿಯೂ ಬಂದಿತು. ಬಂಡವಾಳಶಾಹಿಯಂತಹ ಆರ್ಥಿಕ ಸಾಮಾಜೀಕರಣ, ರಾಷ್ಟ್ರ-ಪ್ರಭುತ್ವದಂತಹ ರಾಜಕೀಯ ಪರಿಕಲ್ಪನೆಗಳು ಲಿಟ್ರಚರ್, ಲಿಟರರಿ ಎನ್ನುವ ವಿಚಾರಕ್ಕೆ ಹೊಸ ಆಯಾಮಗಳನ್ನು ಸೇರಿಸಿದವು. ಯೂರೋಪಿನ ಇತಿಹಾಸದುದ್ದಕ್ಕೂ ಇನ್ನುಳಿದ ಕಲೆಗಳಂತೆ ಲಿಟ್ರಚರ್ ಎನ್ನುವುದು ಸಂಕೀರ್ಣವಾದ ವಿಶೇಷ ಅರ್ಥವನ್ನು ಪಡೆಯುತ್ತ, ಪ್ರತ್ಯೇಕವಾದ ಕ್ಷೇತ್ರವಾಗಿ ರೂಪುಗೊಂಡಿತು. ನಂತರ ವಿಶ್ವವಿದ್ಯಾಲಯಗಳ ಆವರಣದಲ್ಲಿ ಸಾಹಿತ್ಯ ಅಧ್ಯಯನಕ್ಕೊಳಪಟ್ಟು, ವಿಮರ್ಶೆ ಎಂಬ ಆಚರಣೆ ಮೂಲಕ ಲಿಟ್ರಚರ್ ಹೊಸ ಮೌಲ್ಯ ಮತ್ತು ಸ್ಥಾನವನ್ನು ಗಿಟ್ಟಿಸಿಕೊಂಡಿತು. ಈ ದಾರಿಯನ್ನು ಕ್ರಮಿಸಿದ ಲಿಟ್ರಚರ್‍ನ ಪರಿಕಲ್ಪನೆ 19ನೆಯ ಶತಮಾನದಲ್ಲಿ ನಮ್ಮ ಸಂಸ್ಕೃತಿಯನ್ನು ಸೇರಿತೆಂಬ ವಿಷಯವನ್ನು ನಾವು ತಿಳಿದುಕೊಳ್ಳಬೇಕು.

ಹೀಗೆ ಆಧುನಿಕತೆಯ ಮೂಸೆಯಿಂದ ನಮಗೆ ದಕ್ಕಿದ ಸಾಹಿತ್ಯ ಪ್ರಕಾರಗಳಾದ ಆಧುನಿಕ ಕಾವ್ಯ, ಕಾದಂಬರಿ, ಸಣ್ಣಕತೆ, ಸಾಮಾಜಿಕ ನಾಟಕ-ರಂಗಭೂಮಿ, ವಿಮರ್ಶೆ, ಗದ್ಯ ಸಾಹಿತ್ಯ, ಜೀವನ ಚರಿತ್ರೆ ಇತ್ಯಾದಿಗಳನ್ನು ನಾವು ಲಿಟ್ರಚರ್ ಎಂದು ಗುರುತಿಸುವುದಲ್ಲದೆ, ನಮ್ಮ ಆಧುನಿಕಪೂರ್ವ ಕಾವ್ಯ, ನಾಟಕಗಳನ್ನು ಈ ಪರಿಕಲ್ಪನೆಯ ಮೂಲಕವೇ ಗ್ರಹಿಸುತ್ತಿದ್ದೇವೆ. ಆದ್ದರಿಂದ ನಮ್ಮೆಲ್ಲಾ ಸಂಶೋಧನೆಗಳಿಗೆ ಇರುವ ಸಂದರ್ಭವೆಂದರೆ ಆಧುನಿಕತೆಯೇ. ಹಾಗಾಗಿ ಹೊಸ ಸಾಹಿತ್ಯದ ಪ್ರಕಾರಗಳು, ನಮ್ಮ ಓದು-ಬರಹ, ವಿಚಾರಗಳು ಯೂರೋಪಿನಲ್ಲಿ ರೂಪುಗೊಂಡ ತಿಳಿವಳಿಕೆಯ ತಳಪಾಯಗಳನ್ನು ಶೋಧಿಸಿ, ನಮ್ಮ ನೆಲದಲ್ಲಿ ರೂಪಾಂತರಗೊಂಡ ಅವುಗಳ ಸಾಮಾಜಿಕ ಹಾಗೂ ರಾಜಕೀಯ ಬದುಕನ್ನು ಅರ್ಥ ಮಾಡಿಕೊಳ್ಳುವುದು ಉಚಿತ. ಅದೇ ರೀತಿ ಆಧುನಿಕಪೂರ್ವ ಪಠ್ಯಗಳನ್ನು ಆಧುನಿಕತೆಯ ಪ್ರಭಾವಳಿಯಿಂದ ಬಿಡುಗಡೆ ಪಡೆದುಕೊಂಡು ಓದುವುದು ಒಂದು ಮಾರ್ಗ. ಈ ತಯಾರಿ ನಮ್ಮ ಸಂಶೋಧನೆಗೆ ಸ್ಪಷ್ಟತೆಯನ್ನು ಒದಗಿಸುತ್ತದೆಯಲ್ಲದೆ ನಾವು ನವೀನವಾಗಿ ಆಲೋಚನೆ ಮಾಡಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ ಪುಸ್ತಕದಲ್ಲಿ ಮಾರ್ಗದರ್ಶಕನ ಮಾತುಗಳಲ್ಲಿ ಆಧುನಿಕತೆಯ ವಿವಿಧ ಆಯಾಮಗಳು ಗೋಚರವಾಗುವುದು ಈ ತರ್ಕದಿಂದಲೇ. ಈ ನಿಟ್ಟಿನಲ್ಲಿ ಮಾರ್ಗದರ್ಶಕನು ವಸಾಹತುಶಾಹಿ ಆಳ್ವಿಕೆಗೂ ವಿದ್ವತ್ ಕೆಲಸಗಳಿಗೆ ಇರುವ ಅಂತಃಸ್ಸಂಬಂಧವನ್ನು ವಿವರಿಸಿರುವುದು ಪರಿಣಾಮಕಾರಿಯಾಗಿದೆ.

ಸಾಹಿತ್ಯ ಸಂಶೋಧನೆ ಮತ್ತು ಪಠ್ಯಶಾಸ್ತ್ರ (ಫಿಲಾಲಜಿ)


ಸಾಹಿತ್ಯ ಸಂಶೋಧನೆಯಲ್ಲಿ ಹೆಚ್ಚು ಉಪಯೋಗವಾಗುವ ಮಾರ್ಗವೆಂದರೆ ಫಿಲಾಲಜಿ . ಇದನ್ನು ಕನ್ನಡದಲ್ಲಿ ಪಠ್ಯಶಾಸ್ತ್ರ ಎಂದು ಕರೆಯಬಹುದೇನೋ. ನಾವು ಓದುವ ಪಠ್ಯಗಳ ಅರ್ಥ ನಿರ್ಮಾಣ ಮಾಡುವುದು, ಪಠ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಡಿಸುವುದು, ಪಠ್ಯಗಳನ್ನು ಪರಿಷ್ಕರಿಸಿ ಸಂಪಾದಿಸುವುದು, ಇವಕ್ಕೆಲ್ಲಾ ಬೇಕಾದ ಬೌದ್ಧಿಕ ತರಬೇತಿ ನೀಡುವ ಜ್ಞಾನಶಾಖೆಯೇ ಫಿಲಾಲಜಿ. ಪಠ್ಯಗಳನ್ನು ನಿಧಾನವಾಗಿ, ನಿಕಟವಾಗಿ ಓದುವ ವ್ಯವಧಾನ ಅಷ್ಟೇ ಅಲ್ಲ, ನಾವು ಸೃಷ್ಟಿಸುವ ಜ್ಞಾನವನ್ನು ಬರವಣಿಗೆಯ ಮೂಲಕ ನಿರೂಪಿಸುವ ಪಠ್ಯಗಾರಿಕೆಯನ್ನು ಕಲಿಸುವುದು ಈ ಕ್ಷೇತ್ರದ ಕಾಳಜಿ. ಹಾಗಾಗಿ ಪ್ರಸ್ತುತ ಕೃತಿಯ ಕೊನೆಯಲ್ಲಿ ಮಾರ್ಗದರ್ಶಕರು ಸಾಹಿತ್ಯ ಸಂಶೋಧನೆಯಲ್ಲಿ ಓದು, ಬರಹಗಳ ಪ್ರಾಮುಖ್ಯತೆಯನ್ನು ತೋರಿಸುವುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದನ್ನು ಕನ್ನಡ ಅಧ್ಯಯನದ ಬಿಕ್ಕಟ್ಟೆಂದೇ ಗುರುತಿಸುವ ಮಾರ್ಗದರ್ಶಕ ಈ ವಿಷಯವನ್ನು ಇನ್ನೂ ಆಳವಾಗಿ ವಿವರಿಸಬಹುದಿತ್ತು. ಏಕೆಂದರೆ ಮಾನವಿಕ ಸಂಶೋಧನೆಗಳಲ್ಲಿ ಮುಖ್ಯ ಸಂಪನ್ಮೂಲಗಳೆಂದರೆ ಓದು ಮತ್ತು ಬರೆಯುವ ಸಾಮರ್ಥ್ಯಗಳು. ಚಿಂತನೆ ನಡೆಯುವುದು ಹೆಚ್ಚು ಪಾಲು ಈ ಬೌದ್ಧಿಕ ಕ್ರಿಯೆಗಳ ಮೂಲಕವೇ. ಇವೆರಡು ನಮ್ಮ ಕ್ಷೇತ್ರದ ಪ್ರಯೋಗಾಲಯಗಳು; ನಮ್ಮ ಸಂಶೋಧನೆ ಉದ್ಭವವಾಗುವುದು ಬರವಣಿಗೆಯ ಜೊತೆಗಿನ ಸೆಣಸಾಟದಲ್ಲಿ.

ಆದ್ದರಿಂದ ಫಿಲಾಲಜಿಯ ಸಾಂಸ್ಕೃತಿಕ ರಾಜಕಾರಣ ಏನೇ ಇರಬಹುದು, ಆ ಪರಂಪರೆಯ ರೂವಾರಿಗಳಾದ ಫ್ರೆಡ್ರಿಕ್ ನೀತ್ಶೆ, ಆರಬ್ಯಾಕ್, ಎಡ್‍ವರ್ಡ್ ಸೈದ್, ಶೆಲ್ಡನ್ ಪೋಲಾಕ್ ಮುಂತಾದವರು ಸಾಹಿತ್ಯದ ಪಠ್ಯಗಳನ್ನು ಓದುವ ಮತ್ತು ಬರೆಯುವ ಕ್ರಮಗಳು ನಮ್ಮ ಸಾಹಿತ್ಯ ಸಂಶೋಧನೆಗೆ ಉಪಯೋಗವಾಗುವಂತಹವು. ನಮ್ಮ ಪೂರ್ವಸೂರಿಗಳಾದ ಆರ್ ನರಸಿಂಹಾಚಾರ್, ಡಿ ಎಲ್ ನರಸಿಂಹಾಚಾರ್, ಬಿ ಎಂ ಶ್ರೀಕಂಠಯ್ಯ, ಎಂ ವಿ ಸೀತಾರಾಮಯ್ಯ, ಮುಳಿಯ ತಿಮ್ಮಪ್ಪಯ್ಯ, ಮಂಜೇಶ್ವರ ಗೋವಿಂದ ಪೈ ಮುಂತಾದ ಫಿಲಾಲಜಿಸ್ಟರ ಕೆಲಸದಿಂದ ಕನ್ನಡ ಸಂಶೋಧನೆ ಕಲಿಯಬೇಕು ಕೂಡ. ಇವರು ಭಾಷಾ ವಿಜ್ಞಾನಿಗಳಲ್ಲ. ಆದರೆ ಭಾಷಾ ಪರಿಣಿತರು, ಪಠ್ಯಗಳ ಭಾಷೆಯನ್ನು ಅರ್ಥವಂತಿಕೆಯಿಂದ ಓದುವವರು. ಆಧುನಿಕಪೂರ್ವ ಕನ್ನಡದ ಜೊತೆ ಕೊಂಡಿ ಕಳಚದಂತೆ ನೋಡಲು ಹಳಗನ್ನಡದ ಪಠ್ಯ-ಪ್ರವೀಣರ ತರಬೇತಿ ಕನ್ನಡದ ಸಂಶೋಧನೆಗೆ ಅಗತ್ಯವಿದೆ. ಅದೇ ರೀತಿ ಅನುಭಾವಿಗಳ, ತತ್ವಪದಕಾರರ, ನಾಥಪಂಥದ, ಜಾನಪದ ಇತ್ಯಾದಿ ಪರಂಪರೆಗಳ ಪಠ್ಯಗಳನ್ನು ಆತ್ಮವಿಶ್ವಾಸದಿಂದ ಓದುವ ಪಠ್ಯ-ಪ್ರಾವೀಣ್ಯತೆ ಕನ್ನಡ ಸಂಶೋಧನೆಯ ಕಸುವನ್ನು ಹೆಚ್ಚಿಸುತ್ತದೆ.

ಪಶ್ಚಿಮದ ಪಠ್ಯಶಾಸ್ತ್ರದಿಂದ ಕಲಿಯುತ್ತಿರುವ ನಾವು, ಭಾರತೀಯ ಜ್ಞಾನ ಪರಂಪರೆಯಲ್ಲಿಯ ಪಠ್ಯಗಾರಿಕೆಯಿಂದಲೂ ಕಲಿಯುವುದು ಅಪಾರವಾಗಿದೆ. ಸಂಸ್ಕೃತ ವಿದ್ವಾಂಸರ ಟೀಕು, ಟಿಪ್ಪಣಿ, ವ್ಯಾಖ್ಯೆ ಬರೆಯುವ ಇತ್ಯಾದಿ ಬೌದ್ಧಿಕ ಆಚರಣೆಗಳನ್ನು ನಮ್ಮ ಅಧ್ಯಯನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಕೆಲಸಕ್ಕೆ ಹೊಸ ಆಯಾಮವನ್ನು ಸೇರಿಸಬಹುದು. ಬೌದ್ಧ ಪರಂಪರೆಯಲ್ಲಿ ()ನಾಗಾರ್ಜುನನ ಮೂಲ ಮಾಧ್ಯಮಕಾರಿಕೆಗೆ ಬರೆದ ವ್ಯಾಖ್ಯಾನದ ವಿನ್ಯಾಸದಿಂದ ನಮ್ಮ ಸಂಶೋಧನೆಯ ಬರವಣಿಗೆಗಳು ಕಲಿಯುವುದೂ ಸಾಕಷ್ಟಿದೆ.

ವಿಜ್ಞಾನವೇ ಎಲ್ಲ ಶೈಕ್ಷಣಿಕ ಸಂಶೋಧನೆಯ ಪ್ರಮಾಣವಾಗಿರುವ ಈ ಕಾಲದಲ್ಲಿ, ಸಾಹಿತ್ಯದ ಪಠ್ಯಗಳನ್ನು ಓದುವ ನಾವುಗಳು ತಿಳಿದುಕೊಳ್ಳಬೇಕಾದ ಸಂಗತಿಯೊಂದಿದೆ. ನಮ್ಮ ಜೀವನದ ಎಲ್ಲ ಸತ್ಯಗಳನ್ನು ವಿಜ್ಞಾನದ ಸಂಶೋಧನೆಯಿಂದ ತಿಳಿಯುವುದು ಅಸಾಧ್ಯ. ಕೆಲವು ಸತ್ಯಗಳನ್ನು ಕಲೆಗಳು ಕೊಡುವ ಅನುಭವ, ಅವು ಮಾಡಿಸುವ ಲೋಕದರ್ಶನದ ಮೂಲಕ ತಿಳಿದುಕೊಳ್ಳಬೇಕಾಗುತ್ತದೆ. ಸಾಹಿತ್ಯ ಸಂಶೋಧನೆಯು ಸಾರಾಸಗಟಾಗಿ ವೈಜ್ಞಾನಿಕ ಅಧ್ಯಯನದ ಮಾದರಿಯನ್ನು ಅನುಸರಿಸುವುದು ಉಚಿತವಲ್ಲ. ಸಣ್ಣ ಉದಾಹರಣೆ ಕೊಟ್ಟು ವಿವರಿಸುವುದಾದರೆ, ಸು ರಂ ಎಕ್ಕುಂಡಿ ಅವರ “ಋಣದ ಹುಂಜ” ಎಂಬ ಪದ್ಯ ಸಾಕ್ರಟೀಸ್ ನ ಮರಣದಂಡನೆಯ ಕ್ರಮವನ್ನು ಚಿತ್ರಿಸುತ್ತ, ಹೀಗೆ ಮುಕ್ತಾಯಗೊಳ್ಳುತ್ತದೆ;

ಮರುದಿನ ಸೂತಕದ ಮೌನದಲಿ ಎಚ್ಚೆ
ತ್ತ ಅಥೆನ್ಸ್‍ದಲಿ, ಸೂರ್ಯನೆ ಮೂಡಲಿಲ್ಲ
ಸಾಕ್ರೇಟೀಸ್ ತೀರಿಸಿದ ಋಣದ ಆ ಹುಂ
ಜವು, ಏನೇನು ಮಾಡಿದರು, ಕೂಗಲಿಲ್ಲ

-ಈ ಪದ್ಯ ಹೇಳುವ ಸತ್ಯವಾದ ‘ಸೂರ್ಯನೇ ಮೂಡಲಿಲ್ಲ, ಹುಂಜ ಕೂಗಲಿಲ್ಲ’ ಎನ್ನುವುದನ್ನು ವೈಜ್ಞಾನಿಕ ವಿಧಾನಗಳಿಂದ ಅದರ ಸತ್ಯಾಸತ್ಯತೆಯನ್ನು (ಸೈಂಟಿಫಿಕ್ ವೆರಿಫಾಯಿಬಿಲಿಟಿ) ಪರಿಶೀಲಿಸುವುದು ಸಮಂಜಸವಲ್ಲ. ಪ್ರಶ್ನಿಸುವ ಮನೋಧರ್ಮ, ಸತ್ಯ ಹುಡುಕುವ ದನಿ ಈ ಜಗತ್ತಿನಲ್ಲಿ ಸತ್ತು ಹೋಯಿತು ಎಂದು ಈ ಪದ್ಯವನ್ನು ಅರ್ಥೈಸುವುದು ಸೂಕ್ತ. ಆದ್ದರಿಂದ ಸಾಹಿತ್ಯದಂತಹ ಕಲಾಕೃತಿಗಳನ್ನು ಅಧ್ಯಯನ ಮಾಡುವಾಗ ಅರ್ಥದ ಪ್ರಶ್ನೆಗಳು ಮುಖ್ಯವಾಗುತ್ತವೆ. ಸಾಹಿತ್ಯ ಸಂಶೋಧನೆಯ ಗುರಿ ಪಠ್ಯಗಳನ್ನು ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ಅರ್ಥ ಮಾಡಿಕೊಳ್ಳುವುದೇ ಆಗಿದೆ. ಹೀಗಾಗಿ ವಚನಗಳನ್ನು ಅಂಕಿ-ಸಂಖ್ಯೆಗಳ ವೈಜ್ಞಾನಿಕ ವಿಧಾನಗಳಿಂದ ಓದಿದಾಗ ಎಡವಟ್ಟಾಗಬಹುದೇನೋ?

ಬದುಕಿನ ಹಲವು ಬಿಕ್ಕಟ್ಟುಗಳು ನಮ್ಮ ಗಮನಕ್ಕೆ ಬರುವುದು ಕಲಾಕೃತಿಗಳು ಕೊಡುವ ಅನುಭವಗಳಲ್ಲಿ. ಕಾವ್ಯ ಪ್ರಕಟಿಸುವ ಸತ್ಯ ನಮ್ಮ ಸಾಹಿತ್ಯ ಸಂಶೋಧನೆಯ ಕೇಂದ್ರ ಕಾಳಜಿಯಾಗಿರಬೇಕು. ಅದಕ್ಕನುಗುಣವಾಗಿ ಅರ್ಥಗಳ ಮರುನಿರ್ಮಾಣ, ಅರ್ಥ ಕಟ್ಟುವುದರ ಮೂಲಕ ತಿಳಿವಳಿಕೆ, ಗ್ರಹಿಕೆಗಳನ್ನು ಸರಿಪಡಿಸುವುದು ಮತ್ತು ಸಮಸ್ಯೆಗಳನ್ನು ಬಿಡಿಸುವುದು ಸಾಹಿತ್ಯ ಸಂಶೋಧನೆಯ ಉಪಯೋಗಗಳೆಂದು ಹೇಳಬಹುದು. ಪಠ್ಯಗಳು ಬದಲಾಗದೆ ಇರಬಹುದು, ಆದರೆ ನಮ್ಮ ಓದುಗಳು ಬದಲಾಗುತ್ತಿರುತ್ತವೆ. ಆದ್ದರಿಂದ ಅರ್ಥೈಸುವಿಕೆ ನಿರಂತರವಾಗಿ ನಡೆಯಬೇಕಾದ ಬೌದ್ಧಿಕ ಆಚರಣೆ. ಈ ದೃಷ್ಟಿಯಿಂದ ಸಾಹಿತ್ಯ ಸಂಶೋಧನೆಯಲ್ಲಿ ರಿಸರ್ಚ್ ಅಂದರೆ ರಿ-ರೀಡಿಂಗ್ ಎಂದೇ ಭಾವಿಸಬೇಕೇನೋ. ಈಗಾಗಲೇ ಓದಿದ ಪಠ್ಯಗಳನ್ನು ಮರು ಓದಿಗೆ ಒಳಪಡಿಸುವುದು ಮಾನವಿಕ ಶಾಸ್ತ್ರಗಳಲ್ಲಿ ಒಂದು ಸಂಶೋಧನೆಯೇ. ಈ ಸಂದರ್ಭದಲ್ಲಿ ವಿಜ್ಞಾನದ ಹುಟ್ಟು ಮತ್ತು ಬೆಳವಣಿಗೆಯ ಸವಿಸ್ತಾರವಾದ ಚರ್ಚೆ ಮಾಡುತ್ತ, ಪ್ರಸ್ತುತ ಗ್ರಂಥದಲ್ಲಿ ಸಂಶೋಧನಾಸಕ್ತ ಮತ್ತು ಮಾರ್ಗದರ್ಶಕರು ಶಾಸ್ತ್ರಾರ್ಥವನ್ನು (ಹರ್ಮಿನ್ಯೂಟಿಕ್ಸ್) ಚರ್ಚಿಸಿರುವುದು ಸೂಕ್ತವಾಗಿದೆ. ಅರ್ಥದ ಜೊತೆ ಸೆಣಸಾಡುವ ನಮ್ಮ ಸಂಶೋಧನೆಗಳು ಶಾಸ್ತ್ರಾರ್ಥವನ್ನು ತಿಳಿದು ಕೊಳ್ಳುವುದರಿಂದ ಖಂಡಿತವಾಗಿಯೂ ಅನುಕೂಲವಾಗಬಹುದು.

ಜ್ಞಾನಶಿಸ್ತಿನ ನಿಷ್ಠೆ ಹಾಗೂ ಬೌದ್ಧಿಕ ಶ್ರಮ

ಕನ್ನಡ ಸಾಹಿತ್ಯ ಸಂಶೋಧನೆಯು ಕನ್ನಡ ಅಧ್ಯಯನದ ಭಾಗ. ಕನ್ನಡ ಅಧ್ಯಯನದ ಉದ್ದೇಶ, ಜಗತ್ತಿನ ಆಗುಹೋಗುಗಳನ್ನು ಕನ್ನಡ ವಲಯಕ್ಕೆ ತಂದುಕೊಳ್ಳುವುದು, ಕನ್ನಡ ಜಗದ್ವಲಯವನ್ನು ಹೊರಜಗತ್ತಿನೊಂದಿಗೆ ಬೆಸೆಯುವುದು. ಕನ್ನಡ ಬದುಕಿನ ನಿಷ್ಠೆ, ಪ್ರೀತಿ ಇಲ್ಲದೆ ಈ ಕೆಲಸ ಮಾಡಲು ಅಸಾಧ್ಯ. ಇಲ್ಲಿ ಕನ್ನಡದ ನಿಷ್ಠೆ ಅಂದರೆ ಕನ್ನಡ ಅಧ್ಯಯನವೆಂಬ ಜ್ಞಾನಶಿಸ್ತಿಗೆ ಇರಬೇಕಾದ ನಿಷ್ಠೆ. ವೃತ್ತಿಪರ ಶಿಕ್ಷಣದ ಪ್ರಶ್ನೆಗಳನ್ನು ಜ್ಞಾನಶಿಸ್ತಿನ ಶಿಕ್ಷಣಕ್ಕೆ ಕೇಳಬಾರದು. ಸಾಹಿತ್ಯ ಸಂಶೋಧನೆಯ ಉಪಯೋಗವೇ ಬೇರೆ, ವ್ಯವಹಾರ ನಿರ್ವಹಣೆ ಶಿಕ್ಷಣದ ಮಾರುಕಟ್ಟೆಯ ಸಂಶೋಧನೆಯ ಉಪಯೋಗವೇ ಬೇರೆ. ದುರದೃಷ್ಟವಶಾತ್ ಈ ವ್ಯತ್ಯಾಸವನ್ನು ಮರೆತು ನಮ್ಮ ವ್ಯವಸ್ಥೆ ಮಾನವಿಕ ಜ್ಞಾನಶಿಸ್ತುಗಳಿಂದ ಅನಪೇಕ್ಷಿತ ನಿರೀಕ್ಷೆಗಳನ್ನು ಮಾಡುತ್ತಿದೆ.

ಈ ನಿಟ್ಟಿನಲ್ಲಿ ಸಂಶೋಧನೆಯ ಔಪಯೋಗಿಕತೆಯ ಕುರಿತು ಈ ಪುಸ್ತಕದಲ್ಲಿ ಚರ್ಚೆ ಇರುವುದು ಸಮಂಜಸವಾಗಿದೆ. ಜ್ಞಾನಶಿಸ್ತುಗಳು ಸಂಪ್ರದಾಯ, ಪರಂಪರೆಗಳಿದ್ದಂತೆ. ಅವುಗಳನ್ನು ಅನುಸರಿಸಿ ನಾವು ತೋರಿಸಬೇಕಾದ ನಿಷ್ಠೆ ಮುಖ್ಯ. ಆದ್ದರಿಂದ ಜ್ಞಾನಶಿಸ್ತಿಗೆ ನಿಷ್ಠೆ ತೋರಿಸುವ ಸಂಶೋಧನೆಗಳಿಗೆ ಬೇಕಾಗಿರುವುದು ತಾಳ್ಮೆ, ಕಠಿಣ ಶ್ರಮ, ಸಮಯ, ಪಾಂಡಿತ್ಯ ಮುಂತಾದ ಬೌದ್ಧಿಕ ಸದ್ಗುಣಗಳು. ಇದು ಅರೆಕಾಲಿಕ ಕೆಲಸವಂತೂ ಅಲ್ಲ. ದಿನಂಪ್ರತಿ 8 ರಿಂದ 10 ತಾಸು ಅಧ್ಯಯನವನ್ನು ಈ ಕ್ಷೇತ್ರ ನಿರೀಕ್ಷಿಸುತ್ತದೆ. ಈ ಕಾರಣಕ್ಕಾಗಿ ಮಾನವಿಕಗಳ ಸಂಶೋಧಕ ತನ್ನ ಜೀವನವನ್ನು ಅದಕ್ಕಾಗಿ ಮುಡಿಪಿಡಬೇಕಾಗುತ್ತದೆ.

ಸಂಶೋಧಕ ಚಿಂತಕನಾಗಿ ಹುಟ್ಟುವುದಿಲ್ಲ. ಆತ ಅದನ್ನು ಕಷ್ಟ ಪಟ್ಟು ದಕ್ಕಿಸಿ ಕೊಳ್ಳಬೇಕಾಗುತ್ತದೆ. ಆ ಕಾರಣಕ್ಕಾಗಿ ಅವನು ಚಿಂತನೆಯ ಪರಂಪರೆಗೆ ತನ್ನನ್ನು ತಾನು ಒಪ್ಪಿಸಿಕೊಳ್ಳಲೇಬೇಕು. ಅಲಾಸ್ಡೇರ್ ಮ್ಯಾಕಿಂಟೈರ್ ಎಂಬ ತತ್ವಜ್ಞಾನಿ ಹೇಳುವ ಹಾಗೆ ನಮ್ಮೆಲ್ಲ ಅನ್ವೇಷಣೆಗಳು ಒಂದಲ್ಲ ಒಂದು ಬೌದ್ಧಿಕ ಪರಂಪರೆಗಳ ದಾರಿಯಲ್ಲಿಯೇ ನಡೆಯುತ್ತವೆ. ಒಂದೇ ವಿಷಯದ ಕುರಿತು ಬೇರೆಬೇರೆ ಪರಂಪರೆಗಳು ತದ್ವಿರುದ್ಧವಾದ ವಾದಗಳನ್ನು ಮಂಡನೆ ಮಾಡಬಹುದು. ಆದರೆ ನಿರ್ದಿಷ್ಟ ಪರಂಪರೆಗಳ ಹೊರಗೆ ಯಾವ ಶೋಧವೂ ನಡೆಯುವುದಿಲ್ಲ . ಆಧುನಿಕೋತ್ತರ ಜ್ಞಾನಮೀಮಾಂಸೆ ಇದನ್ನು ಒಪ್ಪಿಕೊಳ್ಳದಿರಬಹುದು. ಆದರೆ ಸಂಶೋಧಕ ಚಿಂತನೆ ಮಾಡುವುದು, ಅನ್ವೇಷಣೆ ಕೈಗೊಳ್ಳುವುದು ಇತರರು ಮಾಡಿದ ಚಿಂತನೆ, ಅನ್ವೇಷಣೆಗಳನ್ನು ನೋಡಿ ಕಲಿಯುವುದರ ಮೂಲಕ. ಆದ್ದರಿಂದ ಅದು ಪಶ್ಚಿಮದ ಚಿಂತನ ಕ್ರಮವೇ ಆಗಿರಲಿ, ಪೂರ್ವದ ಚಿಂತನ ಕ್ರಮವಾಗಿರಲಿ ಕನ್ನಡದ ಸಂಶೋಧನೆಗೆ ಯಾವುದಾದರೂ ಒಂದು ಸಂಪನ್ಮೂಲ ಬೇಕೇಬೇಕು. ಯಾವುದೂ ವಜ್ರ್ಯವೂ ಅಲ್ಲ, ಹಾಗೆಯೇ ಅನಿವಾರ್ಯವೂ ಅಲ್ಲ. ಚಿಂತನೆ ಡಲೂಜ್, ಝಿಜೆಕ್, ಅಗಂಬೆನ್‍ರಿಂದ ಬರಲಿ ಅಥವಾ ನಾಗಾರ್ಜುನ, ಅಲ್ಲಮ, ಶರೀಫ್‍ರಿಂದ ಬರಲಿ, ನಾವು ಕಲಿಯುವುದು ಮುಖ್ಯ.
ಕನ್ನಡ ಸಾಹಿತ್ಯ ಸಂಶೋಧನೆಯ ದಾರಿಗಳು:
ಗುರು-ಶಿಷ್ಯರ ಮಾತುಕತೆಯಾಗಿರುವ ಈ ಪುಸ್ತಕದಲ್ಲಿ ಕನ್ನಡದ ಸಂಶೋಧನೆಯ ಇತಿಹಾಸವನ್ನು ಕಟ್ಟಿಕೊಟ್ಟಿರುವುದು, ನಮ್ಮ ಮುಂದಿನ ಸಂಶೋಧನೆ ಯಾವ ಹಾದಿ ತುಳಿಯಬೇಕೆಂಬ ಚಿಂತನೆ ಮಾಡಲು ಸಹಾಯಕಾರಿಯಾಗಲಿದೆ. ಆಧುನಿಕಪೂರ್ವ ಸಾಹಿತ್ಯವನ್ನೊಳಗೊಂಡಂತೆ ಇಡೀ ಕನ್ನಡ ಸಾಹಿತ್ಯವನ್ನು ಹೊಸ ದೃಷ್ಟಿಕೋನದಿಂದ ನೋಡುವ ಸಂಶೋಧನೆಗಳ ಜರೂರು ಈಗ ಇದೆ. ಈಗಾಗಲೇ ಕೈಗೊಂಡಿರುವ ಸಂಶೋಧನೆಗಳ ಮಿತಿಗಳನ್ನು ಗುರುತಿಸಿ, ನಮ್ಮ ಸಾಹಿತ್ಯ ಪಠ್ಯ ಮತ್ತು ಆಚರಣೆಗಳನ್ನು ಮರುಚಿಂತನೆಗೊಳಪಡಿಸಬೇಕೆಂಬ ದೊಡ್ಡ ಹಂಬಲ ಕನ್ನಡದ ಮನಸ್ಸಿಗೆ ಬೇಕು.

ಆಧುನಿಕತೆಯ ಸಂದರ್ಭದಲ್ಲಿ ನಾವು ಏನನ್ನು ಕಳೆದು ಕೊಂಡಿದ್ದೇವೆಯೋ ಅದನ್ನು ಹುಡುಕುವುದು ಕೂಡ ನಮ್ಮ ಸಂಶೋಧನೆಯ ಜವಾಬ್ದಾರಿಯಾಗಿದೆ. ನಾವು ಕಳೆದುಕೊಂಡ ಓದಿನ ಮಾರ್ಗ, ಪರಿಕಲ್ಪನೆ, ಜೀವನ ದೃಷ್ಟಿ ಇತ್ಯಾದಿಗಳನ್ನು ಶೋಧಿಸುವುದರಿಂದ ಸಾಂಸ್ಕೃತಿಕ ಪ್ರಯೋಜನವೂ ಉಂಟು. ಸಾಹಿತ್ಯದ ಸೌಂದರ್ಯಶಾಸ್ತ್ರವನ್ನು ಹಿಗ್ಗಿಸುವ ಸಂಶೋಧನೆಗಳಾದ ಅಲಂಕಾರ, ಸಾಹಿತ್ಯದ ಭಾಷೆ, ಸಾಹಿತ್ಯ ಪಠ್ಯಗಳ ರೂಪ ಮತ್ತು ಸಂರಚನೆಗಳ ಅಧ್ಯಯನಗಳನ್ನೂ ನಾವು ಮಾಡಬೇಕು.

ಪಠ್ಯ ಕೇಂದ್ರಿತ ಸಂಶೋಧನೆಗಳ ಜೊತೆ, ಸಾಹಿತ್ಯ ಸಂಸ್ಕೃತಿ, ಆಚರಣೆಗಳ ಅಧ್ಯಯನವೂ ಸಾಹಿತ್ಯ ಸಂಶೋಧನೆಯ ಅವಿಭಾಜ್ಯ ಅಂಗ. ಉದಾಹರಣೆಗೆ ಆಧುನಿಕ ಕನ್ನಡ ಸಾಹಿತ್ಯವನ್ನು ರೂಪಿಸಿದ ಸಾಹಿತ್ಯ ಸಂಸ್ಕೃತಿಗಳ (ಲಿಟರರಿ ಕಲ್ಚರಸ್) ಅಧ್ಯಯನ ಸಾಹಿತ್ಯ ಅಧ್ಯಯನದ ಕಸುವನ್ನು ಹೆಚ್ಚಿಸುವುದು. ಈ ಸಾಹಿತ್ಯ ಸಂಸ್ಕೃತಿಗಳನ್ನು ವಿವಿಧ ಭೌಗೋಳಿಕ ಹಿನ್ನೆಲೆಗಳಲ್ಲಿ ನೋಡುವ ಪ್ರಯತ್ನ ಮಾಡುವುದು ಒಂದು ದಾರಿ. ಮೈಸೂರು ಪ್ರಾಂತ್ಯದಲ್ಲಿ ಸಾಹಿತ್ಯ ಸಂಸ್ಕೃತಿಯ ಮಾದರಿ ಒಂದಾದರೆ, ಧಾರವಾಡ ಕೇಂದ್ರಿತ ಉತ್ತರ ಕರ್ನಾಟಕದಲ್ಲಿಯ ಮಾದರಿ ಇನ್ನೊಂದು ರೀತಿಯಾಗಿದೆ. ಹಾಗೆಯೆ ಹೈದರಾಬಾದ್ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ವಿಜಯಪುರ ಇತ್ಯಾದಿ ಪ್ರದೇಶಗಳಲ್ಲಿ ರೂಪುಗೊಂಡ ಸಾಹಿತ್ಯ ಸಂಸ್ಕೃತಿಗಳ ಭೌಗೋಳಿಕ-ರಾಜಕೀಯ (ಜಿಯೋ-ಪೊಲಿಟಿಕಲ್) ಹಿನ್ನೆಲೆಗಳನ್ನು ಶೋಧಿಸುವುದು ಒಂದು ಸಂಶೋಧನಾ ಯೋಜನೆಯೇ ಸರಿ. ಹೀಗೆ ಸ್ಥಳ ಪುರಾಣಗಳ ಜೊತೆ ನಮ್ಮ ಸಾಹಿತ್ಯ ಬೆಳೆದುಬಂದ ಕತೆ ಹೇಳುವುದರ ಮೂಲಕ ಸಾಹಿತ್ಯ ಎನ್ನುವುದು ಹೇಗೆ ಸಾಧ್ಯವಾಗುತ್ತದೆಂಬ ತಾತ್ವಿಕ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು.

ಸಾಹಿತ್ಯದ ವ್ಯವಸ್ಥೆ (ಲಿಟರರಿ ಸಿಸ್ಟಮ್) ಗಳನ್ನು ಅನ್ವೇಷಣೆ ಮಾಡುವುದರ ಮೂಲಕ ನಾವು ಯಾರು, ಹೇಗೆ ಇಲ್ಲಿವರೆಗೆ ಬಂದಿದ್ದೇವೆ, ನಮ್ಮ ಅಸ್ಮಿತೆ, ಸಬ್ಜೆಕ್ಟಿವಿಟಿ ಹೇಗೆ ರೂಪುಗೊಂಡಿದೆ ಎಂಬಿತ್ಯಾದಿ ಅಂಶಗಳನ್ನು ಅರಿತುಕೊಳ್ಳಬಹುದು. ಹಾಗೆಯೇ ಸಾಹಿತ್ಯವನ್ನು ಅವಲೋಕಿಸುತ್ತ ನಾವು ಆಧುನಿಕ ಕನ್ನಡದ ಬಯಾಗ್ರಫಿ ಬರೆದರೆ ಸಾಮಾನ್ಯ ಓದುಗರಿಗೂ ಉಪಯೋಗವಾಗುವುದು. ಅದೇ ರೀತಿ ನಮ್ಮ ಸಾಹಿತಿಗಳು ರಚಿಸಿದ ಪಠ್ಯಗಳನ್ನು ವಿಶ್ಲೇಷಣೆ ಮಾಡುವುದರ ಜೊತೆ, ಆ ಪಠ್ಯಗಳನ್ನು ದೇಶ-ಕಾಲದ ಸಂದರ್ಭದಲ್ಲಿಟ್ಟು, ಅವರ ಬೌದ್ಧಿಕ ಜೀವನ ರೂಪುಗೊಂಡ ಬಗೆಗಳನ್ನು (ಇಂಟೆಲೆಕ್ಚುವಲ್ ಬಯಾಗ್ರಫಿ) ನಿರೂಪಿಸುವುದು ಅಷ್ಟೇ ಉಪಯುಕ್ತವೆನಿಸುತ್ತದೆ. ನಮ್ಮ ಯಾವ ಸಂಶೋಧನೆಗಳೂ ಕನ್ನಡದ (ಕೊನೆಯ ಪಕ್ಷ) ಪ್ರಮುಖ ಲೇಖಕರ ಜೀವನ ಚರಿತ್ರೆಗಳನ್ನು ಬರೆಯುವ ಪ್ರಯತ್ನವನ್ನು ಮಾಡಿಲ್ಲ.

ಸಾಹಿತ್ಯದ ಪಠ್ಯಗಳು ಹುಟ್ಟಬೇಕಾದರೆ ಸಾಹಿತ್ಯ ಹಾಗೂ ಸಾಹಿತ್ಯೇತರ ಸಂಸ್ಥೆಗಳು ಕಾರಣವಾಗಿರುವುದರಿಂದ ಅಂತಹ ಸಂಸ್ಥೆ ಹಾಗೂ ಆಚರಣೆಗಳ ಅಧ್ಯಯನ ಮಾಡುವ ಕೆಲಸವೂ ನಮ್ಮಲ್ಲಿ ನಡೆದಿಲ್ಲ. ಈ ನಿಟ್ಟಿನಲ್ಲಿ ಉದಾಹರಣೆ ಕೊಡಬಹುದಾದರೆ ದಲಿತ ಸಾಹಿತ್ಯ ಮತ್ತು ಅದನ್ನು ಪೋಷಿಸಿದ ಸಂಸ್ಥೆಗಳ ಇತಿಹಾಸವನ್ನು ನಾವು ಇನ್ನೂ ಶೋಧಿಸಿಲ್ಲ. ಸಾಹಿತ್ಯದ ಪಠ್ಯಗಳನ್ನು ಪ್ರಕಟಿಸುವ ಪ್ರಕಾಶನ ಸಂಸ್ಥೆಗಳ ಅಧ್ಯಯನ ಸಾಹಿತ್ಯ ಸಂಶೋಧನೆಯ ಭಾಗವೇ ಆಗಿದೆ. ಈ ದೃಷ್ಟಿಕೋನದಿಂದ ಹೊರಟಾಗಲೇ ನಮ್ಮ ಸಾಹಿತ್ಯ ಅಧ್ಯಯನಗಳು ಸಂಸ್ಕೃತಿ ಅಧ್ಯಯನಗಳಾಗುತ್ತವೆ. ಅದರಂತೆ ಕನ್ನಡ ಸಾಹಿತ್ಯವನ್ನು ಕಲಿಸುವುದರಲ್ಲಿರುವ ತೊಡಕುಗಳ ಕುರಿತು ಕಲಿಕಾಶಾಸ್ತ್ರದ ಸಂಶೋಧನೆ ಮಾಡುವುದು ಕೂಡಾ ಹೆಚ್ಚು ಉಪಯುಕ್ತವಾದುದು. ಈ ರೀತಿ ಕನ್ನಡ ಸಾಹಿತ್ಯ ಸಂಶೋಧನೆಯನ್ನು ಇತಿಹಾಸ, ರಾಜಕೀಯ, ಜೀವನ ಚರಿತ್ರೆ, ಸಂಸ್ಕೃತಿ, ಸಂಸ್ಥೆ, ಪ್ರಕಟಣೆ, ಪ್ರಸರಣ, ಓದುಗ ಸಮುದಾಯ, ಸಾಹಿತ್ಯಾಸಕ್ತರ ಗುಂಪುಗಳ ಚರಿತ್ರೆ ಬರೆಯುವ ಇತ್ಯಾದಿ ಬಹುಶಿಸ್ತೀಯ ಜ್ಞಾನಶಾಖೆಗಳ ಮೂಲಕ ಕಟ್ಟುವುದು ಕನ್ನಡದ ಪ್ರಜ್ಞೆಯನ್ನು ಹಿಗ್ಗಿಸಿದಂತೆಯೆ. ಕನ್ನಡ ಅಧ್ಯಯನಕ್ಕೆ ಇಂತಹ ಬಹುಶಿಸ್ತೀಯ ಜ್ಞಾನಶಾಖೆಗಳು ಕಸುವು ಕೊಡುತ್ತವೆ. ಇದನ್ನು ಮಾಡುವುದಕ್ಕೆ ಬಹುಭಾಷಾ ಪಾಂಡಿತ್ಯದ ಆವಶ್ಯಕತೆಯೂ ಇದೆ ಎಂಬುದನ್ನು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕ್ಷೇತ್ರಜ್ಞಾನ ಮತ್ತು ಸಂಶೋಧನಾ ಪ್ರಶ್ನೆ
ನಾವೆಲ್ಲರೂ ಗಮನಿಸಬೇಕಾದ ಸಂಗತಿ ಒಂದಿದೆ. ಸಂಶೋಧನೆಯು ಸೃಜನಶೀಲ ವ್ಯಾಪಾರವಾಗಬೇಕೆಂದರೆ ಮಹತ್ತರವಾದ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಉತ್ತರ ಸಿಗದಿದ್ದರೂ ಪರವಾಗಿಲ್ಲ, ಸೂಕ್ತವಾದ ಪ್ರಶ್ನೆ ಕೇಳಿದರೆ ನಮ್ಮ ಕೆಲಸ ಸಾರ್ಥಕವಾದಂತೆ. ಆದರೆ ಪ್ರಶ್ನಾರ್ಥಕ ವಾಕ್ಯಗಳನ್ನು ರಚಿಸುವುದರಿಂದ ಈ ಕೆಲಸ ಸಾಧ್ಯವಾಗುವುದಿಲ್ಲ. ಗಹನವಾದ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಆಯಾ ಕ್ಷೇತ್ರದ ಪರಿಚಯವಿದ್ದು (ಡೊಮೇನ್ ನಾಲೆಜ್), ಚಿಂತನ-ಮಂಥನ ನಡೆಸುವುದರಿಂದ. ಹಾಗಾಗಿ ಸಂಶೋಧನೆಯು ಅಪಾರವಾದ ಪಾಂಡಿತ್ಯ (ಸ್ಕಾಲರ್‍ಶಿಪ್)ವನ್ನು ಬೇಡುತ್ತದೆ. ಈ ಕಾರಣದಿಂದಲೇ ಸಂಶೋಧನಾ ವಿದ್ಯಾರ್ಥಿಗಳನ್ನು (ರಿಸರ್ಚ್) ಸ್ಕಾಲರ್ಸ್ ಎಂದು ಕರೆಯುವ ವಾಡಿಕೆ ಇದೆ. ಹಾಗಾಗಿ ಕನ್ನಡದ ರಿಸರ್ಚ್ ಸ್ಕಾಲರ್ಸ್‍ಗಳಿಗೆ, ಜಾಗತಿಕ ಬೌದ್ಧಿಕ ಆಗು ಹೋಗುಗಳು ಮತ್ತು ತಾತ್ವಿಕ ಚಿಂತನೆಗಳ ಜೊತೆ, ಕನ್ನಡತ್ವದ ಇತಿಹಾಸ, ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಭಾಷಿಕ ಹಾಗೂ ಸಾಂಸ್ಕೃತಿಕ ವಿದ್ಯಮಾನಗಳ ಸ್ಫುಟವಾದ ಪರಿಚಯವಿರಬೇಕು. ಈ ಕ್ಷೇತ್ರಜ್ಞಾನ (ಡೊಮೇನ್ ನಾಲೆಜ್)ದಿಂದಲೇ ಸಂಶೋಧನೆಯ ಸಮಸ್ಯೆಗಳು ಕಾಣುವುದು, ಪ್ರಶ್ನೆಗಳು ಹುಟ್ಟುವುದು. ಅನ್ವೇಷಣೆ ಮಾಡುವ ಮೊದಲು ನಾವು ಏನನ್ನು ಹುಡುಕುತ್ತಿದ್ದೇವೆ ಎನ್ನುವುದು ಅಸ್ಪಷ್ಟವಾಗಿಯಾದರೂ ಗೊತ್ತಿರಬೇಕು. ಅದು ಗೊತ್ತಾಗಬೇಕಾದರೆ ಡೊಮೇನ್ ನಾಲೇಜಿನ ಪರಿಚಯ ಅಗತ್ಯ. ಕುರ್ತಕೋಟಿ ಅವರು ಹೇಳುವ ಹಾಗೆ ಕಂಡದ್ದರ ಬಲದ ಮೇಲೆ ಕಣ್ಣಿಗೆ ಕಾಣದ್ದನ್ನು ಹುಡುಕಬಹುದು.

ಸಾಹಿತ್ಯ ಸಂಶೋಧನೆ ಸಾಹಿತ್ಯಕ ಪ್ರಶ್ನೆಗಳನ್ನು ಕೇಳಬಹುದು, ಸಾಹಿತ್ಯೇತರ ಪ್ರಶ್ನೆಗಳಾದ ಸಾಮಾಜಿಕ, ರಾಜಕೀಯ ಅಥವಾ ಸಾಂಸ್ಕೃತಿಕ ಪ್ರಶ್ನೆಗಳನ್ನೂ ಕೇಳಬಹುದು. ಅಂದರೆ ಸಾಹಿತ್ಯದ ಪರಿಕಲ್ಪನೆ, ರಸಗ್ರಹಣ, ಸಹೃದಯತೆ, ಪ್ರಕಾರ, ಸಾಹಿತ್ಯಕ ಭಾಷೆ ಇತ್ಯಾದಿಗಳ ಕುರಿತು ಸಂಶೋಧನೆ ಮಾಡುವಂತೆಯೇ ಸಾಹಿತ್ಯ ಪಠ್ಯಗಳನ್ನು ಅಧ್ಯಯನ ಮಾಡುತ್ತ, ಸಮಾಜ, ಸಂಸ್ಕೃತಿ, ಗತವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಉದಾಹರಣೆಗೆ ಕೆ. ವಿ ನಾರಾಯಣ ಅವರ ಧ್ವನ್ಯಾಲೋಕದ ಓದು(1988) ಸಾಹಿತ್ಯಕ ಪ್ರಶ್ನೆ ಕೇಳುವ ಸಂಶೋಧನೆಯಾದರೆ, ಶಿವರಾಮ ಪಡಿಕ್ಕಲ್ ಅವರ ನಾಡು-ನುಡಿ ರೂಪಕ (2001) ಸಾಹಿತ್ಯ ಪ್ರಕಾರವಾದ ಕಾದಂಬರಿಯನ್ನಿಟ್ಟುಕೊಂಡು ನಮ್ಮ ಸಾಮಾಜಿಕ, ರಾಜಕೀಯ ಘಟ್ಟವನ್ನು ಅರ್ಥ ಮಾಡಿಕೊಳ್ಳುವ ಅಧ್ಯಯನವಾಗಿದೆ. (ಇವೆರಡು ಕೆಲಸಗಳೂ ಪಿಎಚ್.ಡಿ. ಪದವಿಗಾಗಿ ಮಂಡಿಸಿದ ಮಹಾಪ್ರಬಂಧಗಳು. ನಮ್ಮ ಮಹಾಪ್ರಬಂಧಗಳನ್ನು ಓದುವಂತಹ ಪುಸ್ತಕಗಳಾಗುವಂತೆ ನಾವು ಬರೆಯಬೇಕು ಎಂಬುದುನ್ನು ನಾವಿಲ್ಲಿ ಗಮನಿಸಬೇಕು). ಆದರೆ ಸಾಹಿತ್ಯ-ಸಾಹಿತ್ಯೇತರದ ವ್ಯತ್ಯಾಸ ಇಲ್ಲಿ ಹೇಳಿದಷ್ಟು ಸರಳವಾಗಿಲ್ಲ, ಅದು ಸಂಕೀರ್ಣವಾಗಿದೆ. ಅದೇನೇ ಇರಲಿ ಇಲ್ಲಿ ನೆನಪಿನಲ್ಲಿಟ್ಟು ಕೊಳ್ಳಬೇಕಾದ ಸಂಗತಿ ಎಂದರೆ ನಮ್ಮ ಸಂಶೋಧನೆಗಳಲ್ಲಿ ನಾವು ಯಾವ ಪ್ರಶ್ನೆಯನ್ನು ಕೇಳುತ್ತಿದ್ದೇವೆ ಎಂಬುದು ಸ್ಪಷ್ಟವಾಗಿರಬೇಕು. ಸಾಹಿತ್ಯೇತರ ಪ್ರಶ್ನೆಗಳನ್ನು ಕೇಳುವುದಾದರೆ, ನಮಗಿರಬೇಕಾದ ಪರಿಣಿತಿಯೇ ಬೇರೆ, ಸಾಹಿತ್ಯಕ ಪ್ರಶ್ನೆಗಳನ್ನು ಕೇಳುವುದಾದರೆ ಇರಬೇಕಾದ ಪರಿಣಿತಿಯೇ ಬೇರೆ. ಅದಕ್ಕನುಗುಣವಾಗಿ ನಮ್ಮ ಓದು, ಚಿಂತನೆ ನಡೆಯಬೇಕಾಗುತ್ತದೆ. ಈ ಅರಿವು ನಾವು ಆಯ್ದುಕೊಳ್ಳುವ ಆಕರಗಳನ್ನು, ಅನುಸರಿಸುವ ವಿಧಾನಗಳನ್ನು, ನಮ್ಮ ಸಂಶೋಧನೆಯಲ್ಲಿ ತಲುಪಬೇಕಾದ ಗುರಿಗಳನ್ನು ಸುಗಮವಾಗಿಸುತ್ತದೆ.

ಸಂಶೋಧನೆಯ ಶಿಕ್ಷಣ


ಈ ಎಲ್ಲ ಅಂಶಗಳು ನಾವು ಸಂಶೋಧನೆಯನ್ನು ಕಲಿಸುವುದು ಹೇಗೆ, ವಿಶ್ವವಿದ್ಯಾಲಯಗಳಲ್ಲಿ ಅನ್ವೇಷಣೆಯ ಸಂಸ್ಕೃತಿಯನ್ನು ಪೋಷಿಸುವುದು ಹೇಗೆ ಇತ್ಯಾದಿ ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸುತ್ತವೆ. ಆದ್ದರಿಂದ ಸಂಶೋಧನೆಯ ಶಿಕ್ಷಣದ ಬಗ್ಗೆ ಇಲ್ಲಿ ಕೊಂಚ ಪ್ರತಿಫಲನ ಮಾಡುವುದು ಸೂಕ್ತ. ಸಂಶೋಧನೆಗಾಗಿ ವಿದ್ಯಾರ್ಥಿಗಳನ್ನು ಆರಿಸುವ ಪ್ರಕ್ರಿಯೆ ಮತ್ತು ಪಿಎಚ್.ಡಿ. ಕೋರ್ಸ್ ವರ್ಕ್‍ಗಳ ಅಸಂಬದ್ಧತೆಯನ್ನು ಸಮಕಾಲೀನ ಸಂಶೋಧನಾಸಕ್ತರಿಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲವೆನಿಸುತ್ತದೆ. ಇಲ್ಲಿಯ ಎಡವಟ್ಟಿಗೆ ಕಾರಣವೇನೆಂದರೆ ಒಟ್ಟಾರೆ ಉನ್ನತ ಶಿಕ್ಷಣದ ವ್ಯವಸ್ಥೆ ಮತ್ತು ವಿಶ್ವವಿದ್ಯಾನಿಲಯದ ಶಿಕ್ಷಣದ ತರ್ಕವನ್ನು ನಾವು ಅರ್ಥ ಮಾಡಿಕೊಳ್ಳದೇ ಇರುವುದು. ಇಡೀ ಉನ್ನತ ಶಿಕ್ಷಣವೆಂದರೆ ಸಂಶೋಧನೆಯ ಶಿಕ್ಷಣವೆಂದೇ ಗ್ರಹಿಸಬೇಕು. ಒಂದರ್ಥದಲ್ಲಿ ನಾವು ಸ್ನಾತಕ ಹಂತದಲ್ಲಿ ಕಲಿಸುವ ಚಿಕ್ಕ ಪದ್ಯವೂ ಸಂಶೋಧನೆಯನ್ನೇ ಕಲಿಸುವಂತಿರಬೇಕು. ನಾವು ಓದುವ ಪಠ್ಯಗಳಿಗೆ ಪ್ರಶ್ನೆಗಳನ್ನಿಟ್ಟುಕೊಂಡು ಹೋಗುವುದನ್ನು ಕಲಿಸಿದರೆ ಸಾಕು. ಇನ್ನೊಂದು ಅರ್ಥದಲ್ಲಿ ಸ್ನಾತಕ ಹಂತವು ವಿದ್ಯಾರ್ಥಿಗಳನ್ನು ಸ್ನಾತಕೋತ್ತರ ಶಿಕ್ಷಣಕ್ಕೆ ತಯಾರಿ ಮಾಡಿದರೆ, ಸ್ನಾತಕೋತ್ತರ ಶಿಕ್ಷಣವು ವಿದ್ಯಾರ್ಥಿಗಳನ್ನ ಡಾಕ್ಟರಲ್ ಹಂತಕ್ಕೆ ತಯಾರಿ ಮಾಡಬೇಕೆಂಬ ತರ್ಕ ಈ ವ್ಯವಸ್ಥೆಯಲ್ಲಿದೆ. ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಸಂಶೋಧನೆಗೆ ಬಾರದಿದ್ದರೂ, ಈ ವ್ಯವಸ್ಥೆಯ ಮೂಲ ಗುರಿ ವಿದ್ಯಾರ್ಥಿಗಳನ್ನು ಕೊನೆಯ ಹಂತವಾದ ಸಂಶೋಧನೆಗೆ (ಡಾಕ್ಟರಲ್ ಎಜುಕೇಶನ್) ಸಿದ್ಧಗೊಳಿಸುವುದೇ ಆಗಿದೆ. ಈ ತರ್ಕವು ನಮ್ಮ ಎಲ್ಲ ಹಂತಗಳ ಪಠ್ಯಕ್ರಮ, ಕಲಿಕಾಶಾಸ್ತ್ರ, ಮೌಲ್ಯಮಾಪನ ಹೇಗಿರಬೇಕೆಂಬುದರ ತಳಹದಿಯಾಗಬೇಕು.

ಈಗ ಪಿಎಚ್.ಡಿ.ಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಸಂಶೋಧನೆಯ ಗುಣಮಟ್ಟ ಕಡಿಮೆಯಾಗುತ್ತಿದೆ. ಈ ಮಧ್ಯೆ ಸಂಶೋಧನೆಯನ್ನು ಪ್ರೀತಿಸಿ ಕಲಿಯಬೇಕೆಂಬುವವರೂ ನಮ್ಮ ನಡುವೆ ಇದ್ದಾರೆ. ಆದರೆ ಕಲಿಸುವ ಸಂಪನ್ಮೂಲಗಳು ದುರ್ಲಭವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಮಾರ್ಗಾನ್ವೇಷಣೆ ಸಂಶೋಧನೆಯನ್ನು ಕಲಿಯಬೇಕೆಂಬುವರಿಗೆ ಕಲ್ಪವೃಕ್ಷವಾಗಲಿದೆ. ಮಾನವಿಕ ಹಾಗೂ ಸಮಾಜ ವಿಜ್ಞಾನದ ಎಲ್ಲ ಶಾಖೆಗಳ ಕೋರ್ಸ್ ವರ್ಕಿನ ಪಠ್ಯಕ್ರಮಕ್ಕೆ ಜೀವ ತುಂಬುವ ಶಕ್ತಿ ಈ ಪುಸ್ತಕಕ್ಕಿದೆ. ಆದ್ದರಿಂದ ನಮ್ಮ ಪಿಎಚ್.ಡಿ. ಕೋರ್ಸ್ ವರ್ಕ್‍ಗಳ ಪಠ್ಯಕ್ರಮದಲ್ಲಿ ಏನೇನು ಇರಬೇಕು, ಏನೇನು ಇರಬಾರದೆಂಬ ಒಂದು ಅಂದಾಜು ಈ ಪುಸ್ತಕ ಓದಿದವರಿಗೆ ಸಿಗುವುದು ಖಂಡಿತ.

ಮಾರ್ಗಾನ್ವೇಷಣೆ ಯ ಸಂರಚನೆ


ಈ ಪುಸ್ತಕಕ್ಕೆ ಇರುವ ದೊಡ್ಡ ಸವಾಲು ಎಂದರೆ ಸಂಶೋಧನೆ ಎಂಬ ವಿಷಯದ ಹರಹು. ಇದರ ವ್ಯಾಪ್ತಿ ಎಷ್ಟು ದೊಡ್ಡದೆಂದರೆ ಇಲ್ಲಿ ಎಲ್ಲವನ್ನೂ ಚರ್ಚಿಸಲು ಸಾಧ್ಯವಿಲ್ಲ. ಇದು ಕೇವಲ ಪುಟಗಳ ಸಮಸ್ಯೆ ಅಲ್ಲ. ಪರಿಣತಿ ಮತ್ತು ಕಾಲದ ಸಮಸ್ಯೆ ಕೂಡ. ಒಬ್ಬರೇ ಮಾಡಿ ಮುಗಿಸುವ ಕೆಲಸವಂತೂ ಇದಲ್ಲ. ಸಾಂಸ್ಥಿಕವಾಗಿ, ತಲೆಮಾರುಗಳು ಮಾಡುವ ಕೆಲಸವಿದು. ಆದ್ದರಿಂದ ಈ ಪುಸ್ತಕ ಹೊಸ ರೀತಿಯ ಚಿಂತನೆಯ ಕಾಳಜಿಯೊಂದನ್ನು ಪ್ರಾರಂಭ ಮಾಡಿದೆ. ಇನ್ನೂ ಹಲವು ಪುಸ್ತಕಗಳನ್ನು ಈ ನಿಟ್ಟಿನಲ್ಲಿ ಬರೆಯಬೇಕಾಗಬಹುದೇನೋ. ಅಂತಹ ಸಾಧ್ಯತೆ ನಮಗೆ ಕಾಣುವುದು ಈ ಪುಸ್ತಕ ಓದಿದ ಮೇಲೆಯೇ. ಈ ಪುಸ್ತಕ ಏನೆಲ್ಲವನ್ನು ಹೇಳುತ್ತದೆಯೋ ಅದರ ಜೊತೆಗೆ ಇದು ಏನೆಲ್ಲವನ್ನು ತೋರಿಸುತ್ತದೆ, ಕಾಣಲು ಸಾಧ್ಯವಾಗಿಸುತ್ತದೆಂಬ ಸಂಗತಿ ಈ ಪುಸ್ತಕವನ್ನು ಕನ್ನಡದ ಬೀಜಪಠ್ಯವನ್ನಾಗಿಸಿದೆ. ಬೀಜಗುಣವುಳ್ಳ ಇಂತಹ ಪಠ್ಯಗಳನ್ನು ಮತ್ತೆಮತ್ತೆ ಓದಬೇಕಾಗುತ್ತದೆ. ಓದಿದಷ್ಟು, ನಿಧಾನವಾಗಿ, ಅವು ತೆರೆದುಕೊಳ್ಳುತ್ತವೆ.

ಇಲ್ಲಿ ಬೀಜದ ಗುಣ ಬಂದಿರುವುದು ಲೇಖಕರ ಮನೋಭಾವ ಮತ್ತು ಅವರು ಆಯ್ದುಕೊಂಡ ಸಂಭಾಷಣೆಯ ರಚನೆ (ಡೈಲಾಜಿಕ್ ಸ್ಟ್ರಕ್ಚರ್)ಯಿಂದ. ಇದು ಪ್ರಕಟಣೆ ಮಾಡುವುದಕ್ಕೋಸ್ಕರ ಬರೆದ ಪುಸ್ತಕವಲ್ಲ. ಲೇಖಕರಿಗೆ ಕಾಡಿದ ಕೆಲವು ಪ್ರಶ್ನೆ, ಹೊಳೆದ ಒಳನೋಟಗಳನ್ನು ಹಂಚಿಕೊಳ್ಳಬೇಕು; ಏನನ್ನೋ ಮುಖ್ಯವಾಗಿ ಹೇಳಬೇಕೆಂಬ ಉತ್ಕಟ ಬಯಕೆಯಿಂದ ಮೂಡಿಬಂದ ಪುಸ್ತಕವಿದು. ಇಂತಹ ಮನೋಭಾವದಿಂದಲೇ ಸಂಶೋಧನಾಸಕ್ತ ಹಾಗೂ ಮಾರ್ಗದರ್ಶಕರ ನಡುವೆ ನಡೆಯುವ ಸಂಭಾಷಣೆಯು ನಮಗೆ ಸಂಶೋಧನೆಯ ಕ್ರಮವನ್ನು ಕಲಿಸುತ್ತದೆ. ಈ ಸಂಭಾಷಣೆಯ ರಚನೆ ಹಲವು ಕಾರಣಗಳಿಂದ ವಿಶೇಷವಾದುದು. ಮೊಟ್ಟಮೊದಲ ಬಾರಿಗೆ ಆಧುನಿಕ ಕನ್ನಡ ಅಧ್ಯಯನದಲ್ಲಿ ಶೈಕ್ಷಣಿಕ ಚರ್ಚೆಯೊಂದು ಈ ರೂಪದಲ್ಲಿ ಮೂಡಿಬಂದಿದೆ. ಪಿಎಚ್.ಡಿ. ಸಂಶೋಧನೆಗಳು ದಂಧೆಗಳಾಗಿರುವ ಈ ದಿನಗಳಲ್ಲಿ ಶೈಕ್ಷಣಿಕ ಬರವಣಿಗೆಯ ರೂಢಿ ಸಂಪ್ರದಾಯಗಳನ್ನು ದಾಟಿ ಈ ರಚನೆಯನ್ನು ಆಯ್ಕೆ ಮಾಡಿಕೊಂಡಿದ್ದು ಲೇಖಕರ ನೈತಿಕ ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಸಾಕ್ಷಿ. ಇದು ಕೇವಲ ಇಬ್ಬರು ವ್ಯಕ್ತಿಗಳು ನಡೆಸುವ ಸಂಭಾಷಣೆಯ ತಂತ್ರವಲ್ಲ. ಬಹುಶಃ ಸಾಕ್ರಟೀಸ್ ನಿಂದ ಹುಟ್ಟಿಕೊಂಡು, ಪ್ಲೇಟೋ ಮತ್ತು ಗಾಂಧಿ ಮೂಲಕ ಜೀವಂತವಾಗಿರುವ ಪರಂಪರೆಯನ್ನು ಗಿಟ್ಟಿಸಿಕೊಳ್ಳುವ, ಪ್ರಶ್ನೋತ್ತರದ ಸಂಕಥನವನ್ನು ಹದ ಮಾಡುವ ಪ್ರಯತ್ನ ಇದಾಗಿದೆ. ಘಟ್ಟದ ಕೆಳಗಿನವರಾದ ನಿತ್ಯಾನಂದ ಬಿ ಶೆಟ್ಟಿಯವರು ಯಕ್ಷಗಾನ-ತಾಳಮದ್ದಲೆಯ ಮೆರುಗನ್ನು ಸೂಕ್ಷ್ಮವಾಗಿ ಈ ಸಂಪ್ರದಾಯಕ್ಕೆ ಸೇರಿಸಿದ್ದಾರೆ. ಮಾರ್ಟಿನ್ ಹಾಯ್‍ಡೆಗರ್ ಭಾಷೆಯ ಕುರಿತು ಬರೆದಿರುವ ಆನ್ ದಿ ವೇ ಟು ಲ್ಯಾಂಗ್ವಿಜ್ (1959) ಎಂಬ ಪುಸ್ತಕದ ಲೇಖನವೊಂದರಲ್ಲಿ ಜಪಾನೀಯನ್ ಮತ್ತು ಅನ್ವೇಷಕನ () ಪಾತ್ರಗಳನ್ನು ಸೃಷ್ಟಿಸಿ, ಅಂತರ್ ಸಾಂಸ್ಕೃತಿಕ ಸಂವಾದವನ್ನು ಹೊಸೆದಿರುವುದನ್ನು ಇದು ನೆನಪಿಗೆ ತರುತ್ತದೆ.

ಸಂಶೋಧನಾಸಕ್ತ ಮತ್ತು ಮಾರ್ಗದರ್ಶಕನ ಮಾತುಕತೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಮಾರ್ಗದರ್ಶಕ ಕಾಳಜಿಯಿಂದ ತಿಳಿಹೇಳುವ ಸಭ್ಯ. ಸಂಶೋಧನಾಸಕ್ತ ಮುಗ್ಧ. ಆತ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾನೆ. ಮಾರ್ಗದರ್ಶಕ ಸಾಕ್ರಟೀಸ್ ನ ಹಾಗೆ ತನ್ನ ಶಿಷ್ಯನನ್ನು ಕೆಣಕುವುದಿಲ್ಲ, ಚಿವುಟಿ ಅವನಲ್ಲಿರುವ ತಿಳಿವಳಿಕೆಯನ್ನು ಹೊರಗೆಡುವುದಿಲ್ಲ. ಯಾವುದೇ ಘರ್ಷಣೆ ಇಲ್ಲದೆ ಮಾತುಕತೆ ಸಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಪುಸ್ತಕದ ಪ್ರಾರಂಭದಲ್ಲಿ ಮುಗ್ಧವಾದ ಪ್ರಶ್ನೆ ಕೇಳುವ ಸಂಶೋಧನಾಸಕ್ತ ಪುಸ್ತಕದ ಕೊನೆಗೆ ಸಂಶೋಧನೆ ಕೈಗೊಳ್ಳಲು ಅರ್ಹನಾಗಿರುವ ವ್ಯಕ್ತಿಯಾಗಿ ರೂಪಾಂತರಗೊಳ್ಳುತ್ತಾನೆ. ಸಂಶೋಧನೆಯ ಶಿಕ್ಷಣ ಇಲ್ಲಿ ನಡೆದೇ ಬಿಟ್ಟಿದೆ. ಸಂಶೋಧನಾಸಕ್ತ ಮತ್ತು ಮಾರ್ಗದರ್ಶಕ ಪಾತ್ರಗಳು, ನೆಪಕ್ಕಾಗಿ. ಅವರ ಶೈಕ್ಷಣಿಕ ಸಂಭಾಷಣೆಯಲ್ಲಿ ಉದ್ಭವಿಸುವುದು ಸಂಶೋಧನೆಯೇ. ಸಂಶೋಧನೆಯ ಸಂಶೋಧನೆ ಎಂದೇ ಈ ಪುಸ್ತಕವನ್ನು ಕರೆಯಬೇಕು. ಈ ರೀತಿಯ ಮೆಟಾ ಲೆವಲ್ ಕೆಲಸವು, ನಾವು ಕೈಗೊಳ್ಳುವ ಆಚರಣೆಯನ್ನು ಸ್ಪಷ್ಟವಾಗಿ ಅರಿತುಕೊಂಡು ಅನುಷ್ಠಾನಗೊಳಿಸುವುದರಲ್ಲಿ ಸಹಾಯ ಮಾಡುತ್ತದೆ. ಉದಾಹರಣೆಗೆ ಹೇಡನ್ ವೈಟನ್‍ನ ಮೆಟಾಹಿಸ್ಟರಿ(1973) ಎಂಬ ಗ್ರಂಥ ಇತಿಹಾಸದ ಬರವಣಿಗೆಯ (ಹಿಸ್ಟರಿಯೋಗ್ರಫಿ) ಇತಿಹಾಸವನ್ನು ಕಟ್ಟಿಕೊಡುತ್ತದೆ. ಇತಿಹಾಸಕಾರರಿಗೆ ಈ ಮೆಟಾ ಲೆವೆಲ್ ಚಿಂತನೆ ಇತಿಹಾಸದ ಪಠ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಅವುಗಳನ್ನು ಹೇಗೆ ರಚಿಸಬೇಕೆಂಬ ತಿಳಿವನ್ನು ಕಲಿಸುತ್ತದೆ. ಪ್ರಸ್ತುತ ಪುಸ್ತಕ ಸಂಶೋಧನೆಯ ಬಗ್ಗೆ ಮಾಹಿತಿಕೊಟ್ಟು, ಪ್ರಿ-ಪಿಎಚ್.ಡಿ. ಪರೀಕ್ಷೆ ಪಾಸು ಮಾಡುವುದಕ್ಕೋಸ್ಕರ ಮಾಹಿತಿ ಒದಗಿಸುವ ಉದ್ದೇಶ ಹೊಂದಿಲ್ಲ. ಇದರ ಮೆಟಾ ಲೆವಲ್‍ನ ಆಯಾಮ ಸಂಶೋಧನಾ ಸಂಸ್ಕೃತಿಯನ್ನು ಹುಟ್ಟುಹಾಕುವ ಕಳಕಳಿಯನ್ನು ಹೊಂದಿದೆ.

ನನ್ನ ಮಾತುಗಳನ್ನು ಮುಗಿಸುವ ಮುನ್ನ ಒಂದು ಸತ್ಯ, ಕಾವ್ಯ ಸತ್ಯವನ್ನು ಹೇಳಲೇಬೇಕು. ನಾವು ಕೈಗೊಳ್ಳುವ ಸಂಶೋಧನೆಯಲ್ಲಿ ನಮ್ಮದೇ ಆದ ಹೂಡಿಕೆಯೊಂದಿರಬೇಕು (ಪರ್ಸನಲ್ ಇನ್‍ವೆಸ್ಟ್‍ಮೆಂಟ್); ನಮ್ಮತನ. ಅಂದರೆ ಸಂಶೋಧನೆಯೆಂಬ ಆಚರಣೆಯಲ್ಲಿ ಇರಬೇಕಾದ ಆಸಕ್ತಿಯ ಜೊತೆ, ಸಂಶೋಧನಾ ವಿಷಯ, ಸಮಸ್ಯೆ ನಮ್ಮನ್ನು ಕಾಡಿರಬೇಕು, ಕೆಣಕಿರಬೇಕು. ಇಲ್ಲದಿದ್ದರೆ ಜ್ಞಾನ ಸೃಷ್ಟಿಯಾಗುವುದು ಕಷ್ಟ. ಜ್ಞಾನ ಸೃಷ್ಟಿಸದೆ ಲೋಕದ ದರ್ಶನವಾಗಲಾರದು. ಹಾಗಿದ್ದ ಮೇಲೆ ಪ್ರೀತಿ, ಕಾಳಜಿಯಿಂದ ಸಂಶೋಧನೆಯನ್ನು ಓಲೈಸದಿದ್ದರೆ ತಿಳಿವಳಿಕೆ ಹೇಗೆ ಪ್ರಾಪ್ತವಾದೀತು? ಬದುಕು ಹೇಗೆ ಹಸನಾದೀತು?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?