ಕೆಲವು ಮುಖಗಳು ನಮ್ಮ ಬದುಕಿನಲ್ಲಿ ಕೇವಲ ಎದುರಾಗುವುದಿಲ್ಲ. ಅವು ನಮ್ಮ ಮನಸ್ಸಿನೊಳಗೆ ಶಾಶ್ವತವಾಗಿ ನೆಲೆಸಿಬಿಡುತ್ತವೆ. ಕೆಲವು ಸಂಬಂಧಗಳಿಗೆ ರಕ್ತದ ನಂಟಿರಬೇಕಿಲ್ಲ; ಒಂದು ನಗು, ಒಂದು ನಮಸ್ಕಾರ, ಒಂದು ಕಾಳಜಿ ಸಾಕು. ಅಂತಹ ಸಂಬಂಧವೊಂದು ನನಗೆ ಸಿಕ್ಕಿದ್ದು ನಾನು ಎಲ್.ಎಲ್.ಬಿ. ಓದುತ್ತಿದ್ದ ಕಾಲೇಜಿನ ಗೇಟಿನ ಬಳಿ ನಿಂತಿದ್ದ ಒಬ್ಬ ಸೆಕ್ಯುರಿಟಿ ತಾತನ ಮೂಲಕ.
ಸುಮಾರು ಎಪ್ಪತ್ತರ ಹರೆಯ. ಮುಖದ ತುಂಬಾ ಸುಕ್ಕುಗಳು. ಬಿಸಿಲಿಗೆ ಬೆಂದ ಕಪ್ಪನೆಯ ಮೈಬಣ್ಣ. ಕೈಯಲ್ಲಿ ಒಂದು ಕೋಲು. ಕುತ್ತಿಗೆಯಲ್ಲಿ ಸೀಟಿ. ಕಣ್ಣಲ್ಲಿ ವಯಸ್ಸಿನ ಆಯಾಸವಿದ್ದರೂ ಕರ್ತವ್ಯದ ಬಗ್ಗೆ ಅಪಾರ ಎಚ್ಚರ. ಆ ತಾತನನ್ನು ಮೊದಲ ಬಾರಿ ನೋಡಿದ ದಿನವೇ ಅವರಲ್ಲಿದ್ದ ಶಿಸ್ತಿನ ಜೀವನ ನನ್ನ ಗಮನ ಸೆಳೆದಿತ್ತು.
ಪರೀಕ್ಷೆಯ ದಿನಗಳಲ್ಲಿ ನಾನು ಕಾರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದೆ. ಕಾಲೇಜಿನ ಪ್ರವೇಶ ದ್ವಾರದಲ್ಲೇ ತಾತ ನಿಂತಿರುತ್ತಿದ್ದರು. ದೂರದಿಂದಲೇ ನನ್ನ ಕಾರು ಕಂಡರೆ ಸೀಟಿಯನ್ನು ಊದುತ್ತಾ, ಮತ್ತೊಂದು ಕೈಯಲ್ಲಿದ್ದ ಕೋಲಿನಿಂದ ಪಾರ್ಕಿಂಗ್ ಜಾಗವನ್ನು ತೋರಿಸುತ್ತಿದ್ದರು. ನಾನು ಕಾರು ನಿಲ್ಲಿಸುವವರೆಗೂ ಅಲ್ಲೇ ನಿಂತು ಗಮನಿಸುತ್ತಿದ್ದರು. ಅವರ ಪಾಲಿಗೆ ಅದು ಒಂದು ಸಾಮಾನ್ಯ ಕರ್ತವ್ಯವಾಗಿರಬಹುದು. ಆದರೆ ನನ್ನ ಪಾಲಿಗೆ ಅದು ಒಂದು ಅಪರಿಚಿತನ ಕಾಳಜಿಯಂತೆ ಅನಿಸುತ್ತಿತ್ತು.
ಕಾಲೇಜಿನ ಪಕ್ಕದಲ್ಲಿದ್ದ ಡಿಪ್ಲೊಮಾ ಕಾಲೇಜಿನ ಹುಡುಗರು ಅಡ್ಡಾದಿಡ್ಡಿಯಾಗಿ ಬೈಕ್ ನಿಲ್ಲಿಸಿ ಹೋಗುವುದು ದಿನನಿತ್ಯದ ದೃಶ್ಯ. ಆದರೆ ತಾತನ ಮುಂದೆ ಅದು ನಡೆಯುತ್ತಿರಲಿಲ್ಲ. “ಓಯ್… ಬೈಕ್ ಸರಿಯಾಗಿ ನಿಲ್ಲಿಸಪ್ಪ…” ಎಂದು ಗದರಿಸುವ ಧ್ವನಿಯಲ್ಲಿ ಅವರ ವಯಸ್ಸಿಗಿಂತಲೂ ಹೆಚ್ಚು ಗಟ್ಟಿತನವಿತ್ತು. ಸೀಟಿಯನ್ನು ಜೋರಾಗಿ ಊದುತ್ತಾ, ಬೈಕ್ ಸರಿಯಾಗಿ ನಿಲ್ಲಿಸುವವರೆಗೂ ಯಾರನ್ನೂ ಬಿಡುತ್ತಿರಲಿಲ್ಲ. ಬಡತನ ಅವರನ್ನು ಬಗ್ಗಿಸಿರಬಹುದು; ಆದರೆ ಕರ್ತವ್ಯವನ್ನು ಎಂದಿಗೂ ಬಗ್ಗಿಸಿರಲಿಲ್ಲ.
ಒಂದು ದಿನ ಕುತೂಹಲದಿಂದ ಅವರೊಂದಿಗೆ ಮಾತನಾಡಿದೆ. “ಏನ್ ತಾತ… ಈ ವಯಸ್ಸಿನಲ್ಲೂ ಇಷ್ಟು ಕಷ್ಟಪಟ್ಟು ಕೆಲಸ ಮಾಡ್ತೀರಲ್ಲ?” ಅವರು ನಗುವ ಪ್ರಯತ್ನ ಮಾಡಿದರು. ಆದರೆ ಆ ನಗುವಿನ ಹಿಂದೆ ನೋವಿನ ಪರ್ವತವೇ ಅಡಗಿತ್ತು. “ಏನ್ ಮಾಡೋದು ಸಾರ್… ನೋಡೋರಿಲ್ಲ. ನಾವೇ ದುಡಿದು ತಿನ್ನಬೇಕು. ಸಂಬಳ ಕಡಿಮೆ. ಬರೋ ಸಂಬಳದಲ್ಲಿ ಮೂರು ಜನರ ಹೊಟ್ಟೆ ತುಂಬಿಸಿಕೊಳ್ಳಬೇಕು…”ಅಷ್ಟೇ ಹೇಳಿ ಮೌನವಾದರು.
ಮಾತು ಮುಂದುವರಿದಂತೆ ಅವರ ಬದುಕಿನ ಪುಟಗಳು ಒಂದೊಂದಾಗಿ ತೆರೆದುಕೊಂಡವು.
ಮೂರು ಮಕ್ಕಳ ತಂದೆ. ಅದರಲ್ಲಿ ಒಬ್ಬ ಮಗ ಅಪಘಾತದಲ್ಲಿ ಮೃತಪಟ್ಟಿದ್ದ. ಮಗಳು ಮದುವೆಯಾಗಿ ತನ್ನ ಮನೆ ಸೇರಿದ್ದಳು. ಉಳಿದಿದ್ದ ಒಬ್ಬ ಮಗ ಕೂಡ ಇದೇ ಏಜೆನ್ಸಿಯಲ್ಲಿ ಮತ್ತೊಂದು ಕಡೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ತಾತ, ಅಜ್ಜಿ ಮತ್ತು ಮಗ. ಜೀವನ ಸಾಗಿಸಲು ಮೂವರೂ ಬೆವರನ್ನೇ ಬಂಡವಾಳ ಮಾಡಿಕೊಂಡಿದ್ದರು.
ಆ ದಿನ ಮನೆಗೆ ಹಿಂತಿರುಗಿದರೂ ಅವರ ಮಾತುಗಳು ನನ್ನ ಕಿವಿಯಲ್ಲಿ ಮೊಳಗುತ್ತಲೇ ಇದ್ದವು.
“ನಾವೇ ದುಡಿದು ತಿನ್ನಬೇಕು…” ಈ ಒಂದೇ ವಾಕ್ಯ ನನ್ನ ಮನಸ್ಸನ್ನು ಎಷ್ಟೋ ದಿನ ಕಾಡಿತು.
ಆ ದಿನದ ನಂತರ ತಾತ ನನಗೆ ಕೇವಲ ಸೆಕ್ಯುರಿಟಿ ಗಾರ್ಡ್ ಆಗಿ ಕಾಣಲೇ ಇಲ್ಲ. ಅವರು ನನ್ನ ಮನೆಯ ಹಿರಿಯರಂತೆ, ನನ್ನ ಅಪ್ಪನ ಸ್ನೇಹಿತನದಂತೆ, ನನ್ನದೇ ಒಬ್ಬ ತಾತನಂತೆ ಕಾಣತೊಡಗಿದರು. ನಾನು ಕಾಲೇಜಿಗೆ ಹೋದಾಗಲೆಲ್ಲಾ ಅವರು ಎದ್ದು ನಿಂತು, “ನಮಸ್ಕಾರ ಸಾರ್…” ಎಂದು ಸಲ್ಯೂಟ್ ಹೊಡೆಯುತ್ತಿದ್ದರು. “ತಾತ… ಎದ್ದು ನಿಲ್ಲಬೇಡಿ. ನಾನು ಯಾವ ಅಧಿಕಾರಿ ಅಲ್ಲ. ನಿಮ್ಮ ಮೊಮ್ಮಗನ ವಯಸ್ಸಿನ ವಿದ್ಯಾರ್ಥಿ ಅಷ್ಟೇ.” ಎಂದು ಎಷ್ಟೇ ಹೇಳಿದರೂ ಅವರು ಒಂದೇ ಉತ್ತರ ಕೊಡುತ್ತಿದ್ದರು.
“ಇದು ನನ್ನ ಕರ್ತವ್ಯ ಸಾರ್…” ಆ ಒಂದು ಮಾತಿನೊಳಗೆ ಅವರ ವ್ಯಕ್ತಿತ್ವವೇ ಅಡಗಿತ್ತು. ಕರ್ತವ್ಯವನ್ನು ಕೆಲಸವೆಂದು ಮಾಡುತ್ತಿರಲಿಲ್ಲ. ಪೂಜೆಯಂತೆ ಮಾಡುತ್ತಿದ್ದರು. ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಅವರಿಗೆ ತಿಂಡಿ ತೆಗೆದುಕೊಂಡು ಹೋಗುವುದು ನನ್ನ ಅಭ್ಯಾಸವಾಯಿತು.
ಆದರೆ ಸ್ವಾಭಿಮಾನವೆಂಬುದು ಅವರ ದೊಡ್ಡ ಆಸ್ತಿ. “ಬೇಡ ಸಾರ್… ನಮ್ಮ ಅಜ್ಜಿ ಬುತ್ತಿ ತುಂಬಿ ಕಳಿಸಿದ್ದಾಳೆ. ಆಮೇಲೆ ಊಟ ಮಾಡುತ್ತೇನೆ…” ಎಂದು ನಗುತ್ತಾ ನಿರಾಕರಿಸುತ್ತಿದ್ದರು. ನಾನು ಬಲವಂತವಾಗಿ, “ತಾತ… ನಿಮ್ಮ ಮಗ ಕೊಟ್ಟಿದ್ದಾನೆ ಅಂದುಕೊಂಡು ತಿನ್ನಿ…”ಎಂದು ಕೈಗೆ ಕೊಟ್ಟರೆ ಮಾತ್ರ ಸ್ವೀಕರಿಸುತ್ತಿದ್ದರು.
ಆ ಕ್ಷಣದಲ್ಲಿ ಅವರ ಕಣ್ಣಲ್ಲಿ ಕಾಣುತ್ತಿದ್ದ ಸಂಕೋಚ, ಕೃತಜ್ಞತೆ ಮತ್ತು ಸ್ವಾಭಿಮಾನ ಮೂರು ಭಾವನೆಗಳು ಒಂದೇ ಸಲ ನನ್ನ ಮನಸ್ಸನ್ನು ತಟ್ಟುತ್ತಿದ್ದವು. ಕೆಲವೊಮ್ಮೆ ನಾನು ದೂರದಿಂದಲೇ ಅವರನ್ನು ಗಮನಿಸುತ್ತಿದ್ದೆ. ಬಿಸಿಲು ಸುಡುತ್ತಿರಲಿ, ಮಳೆ ಸುರಿಯುತ್ತಿರಲಿ, ಚಳಿ ಕಚ್ಚುತ್ತಿರಲಿ, ತಾತ ಮಾತ್ರ ಕಾಲೇಜಿನ ಗೇಟಿನ ಬಳಿ ಇದ್ದ ಸಣ್ಣದೊಂದು ಗೂಡಿನಂತ ಕಟ್ಟಡದ ಬಳಿ ನಿಂತೇ ಇರುತ್ತಿದ್ದರು.
ವಿದ್ಯಾರ್ಥಿಗಳು ಬರುತ್ತಿದ್ದರು. ಹೋಗುತ್ತಿದ್ದರು. ಯಾರೂ ಅವರನ್ನು ಗಮನಿಸುತ್ತಿರಲಿಲ್ಲ. ಆದರೆ ಅವರು ಮಾತ್ರ ಪ್ರತಿಯೊಬ್ಬರ ಸುರಕ್ಷತೆಯನ್ನು ಗಮನಿಸುತ್ತಿದ್ದರು.
ಜೀವನ ಎಷ್ಟು ವಿಚಿತ್ರ! ಒಮ್ಮೆ ಇಡೀ ಕುಟುಂಬಕ್ಕೆ ನೆರಳಾಗಿದ್ದ ಕೈಗಳು, ವಯಸ್ಸಿನ ಇಳಿಜಾರಿನಲ್ಲಿ ಒಂದು ಸೀಟಿ ಮತ್ತು ಒಂದು ಕೋಲನ್ನು ಹಿಡಿದು ಜೀವನದ ಹೊರೆ ಹೊರುತ್ತಿವೆ. ಆ ತಾತನನ್ನು ನೋಡಿದಾಗ ನನಗೆ ನನ್ನ ತಂದೆ ನೆನಪಾಗುತ್ತಿದ್ದರು. ನನ್ನ ಭವಿಷ್ಯವೂ ಒಂದು ದಿನ ಇದೇ ವಯಸ್ಸಿನ ಮೆಟ್ಟಿಲನ್ನು ಏರಬೇಕಲ್ಲವೇ ಎಂಬ ಪ್ರಶ್ನೆ ನನ್ನೊಳಗೆ ಮೂಡುತ್ತಿತ್ತು.
ವೃದ್ಧಾಪ್ಯ ಎಂದರೆ ಕೇವಲ ಕೂದಲು ಬೆಳ್ಳಗಾಗುವುದಲ್ಲ. ತನ್ನ ನೋವನ್ನು ನಗುವಿನೊಳಗೆ ಮುಚ್ಚಿಟ್ಟು ಬದುಕುವುದೇ ವೃದ್ಧಾಪ್ಯ. ಅಗತ್ಯಗಳು ಮನುಷ್ಯನನ್ನು ಎಷ್ಟೇ ವಯಸ್ಸಾದರೂ ದುಡಿಯುವಂತೆ ಮಾಡುತ್ತವೆ ಎಂಬ ಸತ್ಯವನ್ನು ಆ ತಾತ ನನಗೆ ಮಾತಿಲ್ಲದೆ ಕಲಿಸಿದರು.
ಇಂದು ಪರೀಕ್ಷೆಗಳು ಮುಗಿದಿವೆ. ಕಾಲೇಜಿಗೂ ಅಷ್ಟಾಗಿ ಹೋಗುವುದಿಲ್ಲ. ಆದರೆ ಕೆಲವೊಮ್ಮೆ ಆ ಕಾಲೇಜಿನ ಗೇಟು ನೆನಪಾಗುತ್ತದೆ. ಅದರ ಜೊತೆಗೆ ಆ ಸೀಟಿಯ ಸದ್ದು, ಆ ಸಲ್ಯೂಟ್, ಆ ಮೃದುವಾದ ಧ್ವನಿ. “ತಿಂಡಿ ಮಾಡುದ್ರಾ ಸಾರ್…?” ಎಂಬ ಕಾಳಜಿಯ ಪ್ರಶ್ನೆ. ಇವೆಲ್ಲವೂ ನನ್ನ ನೆನಪುಗಳಲ್ಲಿ ಇನ್ನೂ ಜೀವಂತವಾಗಿವೆ.
ಬದುಕಿನಲ್ಲಿ ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಕೆಲವರು ಹೆಸರು ಬಿಟ್ಟು ಹೋಗುತ್ತಾರೆ. ಇನ್ನೂ ಕೆಲವರು ಹುದ್ದೆ ಬಿಟ್ಟು ಹೋಗುತ್ತಾರೆ. ಆದರೆ ಅಪರೂಪಕ್ಕೆ ಸಿಗುವ ಕೆಲವರು ಮಾತ್ರ ತಮ್ಮ ಸರಳತೆ, ಪ್ರಾಮಾಣಿಕತೆ ಮತ್ತು ಮನುಷ್ಯತ್ವದಿಂದ ನಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ.
ನನ್ನ ಪಾಲಿಗೆ ಆ ಸೆಕ್ಯುರಿಟಿ ತಾತ ಅಂತಹ ಒಬ್ಬ ಮನುಷ್ಯ. ಅವರ ಹುದ್ದೆ ಚಿಕ್ಕದಿರಬಹುದು. ಆದರೆ ಅವರ ವ್ಯಕ್ತಿತ್ವ ದೊಡ್ಡದು. ಅವರ ಸಂಬಳ ಕಡಿಮೆಯಿರಬಹುದು. ಆದರೆ ಅವರ ಸ್ವಾಭಿಮಾನ ಶ್ರೀಮಂತ. ಅವರ ಜೀವನ ಕಷ್ಟಗಳಿಂದ ತುಂಬಿರಬಹುದು. ಆದರೆ ಅವರ ಕರ್ತವ್ಯನಿಷ್ಠೆ ಸಾವಿರ ಮಂದಿಗೆ ಮಾದರಿ.
ಇಂದಿಗೂ ಆ ಕಾಲೇಜಿನ ಗೇಟಿನ ಮುಂದೆ ಹಾದುಹೋದಾಗ ನನ್ನ ಕಣ್ಣುಗಳು ಮೊದಲು ಹುಡುಕುವುದು ಕಟ್ಟಡವನ್ನಲ್ಲ. ಆ ಕೋಲನ್ನು ಹಿಡಿದು, ಸೀಟಿಯನ್ನು ಊದುತ್ತಾ, “ನಮಸ್ಕಾರ ಸಾರ್…” ಎಂದು ನಗುತ್ತಿದ್ದ ಆ ಸೆಕ್ಯುರಿಟಿ ತಾತನನ್ನೇ.--ತುಳಸಿತನಯ ಚಿದು..✍️

