ತುಮಕೂರು: ಚತುರ ಸಂಘಟಕ ಎಂದೇ ಹೆಸರಾಗಿರುವ JDS ಹಿರಿಯ ಮುಖಂಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿ ಲೋಕೇಶ್ ಅವರು ಶುಕ್ರವಾರ ಬಿಜೆಪಿ ಸೇರುವ ಮೂಲಕ ಜೆಡಿಎಸ್ ಜಿಲ್ಲೆಯಲ್ಲಿ ಮತ್ತೊಬ್ಬ ಯುವ ನಾಯಕನನ್ನು ಕಳೆದುಕೊಂಡಂತಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಹತ್ತಿರದಲ್ಲಿದ್ದ ಬೆಳ್ಳಿ ಲೋಕೇಶ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದಾಗ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ಚಾಮಿ ಅವರ ಜತೆ ದೇವೇಗೌಡರ ಚುನಾವಣೆಯ ಉಸ್ತುವಾರಿ ವಹಿಸಿದ್ದ ಬೆಳ್ಳಿ ಅವರಿಗೆ ಮಹತ್ವದ ಸ್ಥಾನಮಾನವನ್ನೇ ಪಕ್ಷ ನೀಡಿತ್ತು. ರಾಜ್ಯಮಟ್ಟದ ನಾಯಕತ್ವದ ಅವಕಾಶವನ್ನು ನೀಡಿತ್ತು. ಈಗ ಈ ನಾಯಕನನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಒಕ್ಕಲಿಗರ ಮತವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ..
ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆಗೆ ನಿಂತಾಗ ಜಿಲ್ಲೆಯ ಜೆಡಿಎಸ್ ಶಾಸಕರಾದ ಗೌರಿಶಂಕರ್, ಶ್ರೀನಿವಾಸ್, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸಹಕರಿಸಲಿಲ್ಲ. ಅಲ್ಲದೇ ಕುಮಾರಸ್ವಾಮಿ ಹೇಳಿದರೂ ಈ ನಾಯಕರು ಕುಮಾರಸ್ವಾಮಿ ಅವರ ಮಾತಿಗೂ ಕೇರ್ ಮಾಡಲಿಲ್ಲ ಎಂಬ ಸಿಟ್ಟು, ಸೆಡವು, ನೋವಿನಲ್ಲೇ ಇದ್ದ ಬೆಳ್ಳಿ ಲೋಕೇಶ್ ಗೆ ಬಿಜೆಪಿ ಗಾಳ ಹಾಕುವಲ್ಲಿ ಯಶಸ್ಚಿಯಾಗಿದೆ.
ತುಮಕೂರು ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಬೆಳ್ಳಿ ಮತ್ತು ಕುಮಾರಸ್ವಾಮಿ ನಡುವೆ ಅಸಮಾಧಾನಕ್ಕೆ ಕಾರಣವಾಗಿತ್ತು. ಇದಕ್ಕೆ ಜೆಡಿಎಸ್ ನ ಜಿಲ್ಲೆಯ ಶಾಸಕರೊಬ್ಬರು ತುಪ್ಪ ಸುರಿದರು ಎಂಬ ಆರೋಪವೂ ಇದೆ.
ನಗರ ಕ್ಷೇತ್ರದ ಅಭ್ಯರ್ಥಿ ಗೋವಿಂದರಾಜು ಅವರು ಪಕ್ಷ ಕಟ್ಟಲಿಲ್ಲ. ಒಕ್ಕಲಿಗರನ್ನು ತುಚ್ಛವಾಗಿ ಕಾಣುತ್ತಾರೆ. ನನಗೂ ಗೌರವ ಕೊಡುತ್ತಿಲ್ಲ. ನೆಪಮಾತ್ರಕ್ಕೂ ಮಾತನಾಡಿಸುವುದಿಲ್ಲ. ಗೌರವ ಇಲ್ಲದ ಕಡೆ ಪಕ್ಷ ಕಟ್ಟುವುದು ಹೇಗೆ ಎಂದು ಬೆಳ್ಳಿ ಅವರು ಎಚ್. ಡಿ. ಕುಮಾರಸ್ವಾಮಿ ಅವರನ್ನು ಕೇಳಿದ್ದರು. ಆದರೆ ಅಡಿಯೊ ಬಹಿರಂಗ ವಿಚಾರದಲ್ಲಿ ಬೆಳ್ಳಿ ಅವರನ್ನು ಹಣಿಯಲು ಪಕ್ಷದ ಕೆಲವರು ಕುತಂತ್ರ ಮಾಡಿದ ನೋವು ಅವರಲ್ಲಿತ್ತು.
ಅವರೀಗ ಬಿಜೆಪಿ ಸೇರುವ ಮೂಲಕ ಅದರಲ್ಲೂ ತುಮಕೂರು ಗ್ರಾಮಾಂತರ, ತುಮಕೂರು ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತದೆ.
ಬೆಳ್ಳಿ ಬ್ಲಡ್ ಬ್ಯಾಂಕ್ ಮೂಲಕ ಮೂರು ದಶಕಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಬೆಳ್ಳಿ ಅವರಿಗೆ ತಮ್ಮದೆ ಹುಡುಗರ ತಂಡ ಇದೆ.
ಶಾಸಕ ಜ್ಯೋತಿಗಣೇಶ್ ಅವರ ಸುತ್ತಲೂ ಇದ್ದ ಯುವ ಮುಖಂಡರಲ್ಲಿ ಕೆಲವರು ಮಾಜಿ ಸಚಿವ ಸೊಗಡು ಶಿವಣ್ಣ ಅವರ ಜತೆ ಹೋಗಿರುವ ನಿರ್ವಾತವನ್ನು ಬೆಳ್ಳಿ ಲೋಕೇಶ್ ತುಂಬ ಬಲ್ಲರು ಎಂದು ವಿಶ್ಲೇಷಿಸಲಾಗುತ್ತದೆ.
ಇನ್ನೂ, ತುಮಕೂರು ಗ್ರಾಮಾಂತರ, ಕುಣಿಗಲ್, ತುರುವೇಕೆರೆ ಕ್ಷೇತ್ರಗಳ ಮೇಲೂ ಅವರಿಗೆ ಹಿಡಿತ ಇದ್ದು ಇಲ್ಲೂ ಬಿಜೆಪಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.