Publicstory/prajayoga
– ವೆಂಕಟೇಶ್ ನಾಗಲಾಪುರ
ಮೊಹರಂ ಎಂದರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ. ಇಸ್ಲಾಂ ಸಂಸ್ಥಾಪಕರಾದ ಮಹಮ್ಮದ್ ಪೈಗಂಬರ್ ಕೊನೆಯ ಪುತ್ರಿ ಫಾತಿಮಾ ಬೇಬಿ ಪತಿ ಹಜರತ್ ಆಲಿ ನಾಲ್ಕನೇ ಖಲೀಫರಾಗಿದ್ದರು.
ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಪ್ರಮುಖವಾದದ್ದು ಮೊಹರಂ. ಯಾವುದೇ ತಾರತಮ್ಯ ಇಲ್ಲದಂತೆ ಈ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬವನ್ನು ಬಾಬಯ್ಯ ಹಬ್ಬ ಎಂದು ಕರೆಯುತ್ತಾರೆ.
ಮಹಮದಿಯರ ಮೊದಲ ತಿಂಗಳಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ. ದಮಾಸ್ಕಸ್‌ನಲ್ಲಿ ಮುಅವಿಯ ಎಂಬ ಸರ್ದಾರನು ತಾನೇ ಖಲೀಫನೆಂದು ಸಾರಿಕೊಂಡು ಜನರ ಮೇಲೆ ಧರ್ಮ ಪ್ರಭುತ್ವ ಹೇರುತ್ತಾನೆ. ಆಗ ಹಜರತ್ ಅಲಿ ಬಳಿಕ ಅವರ ಮಗ ಪೈಗಂಬರರ ಎರಡನೇ ಮೊಮ್ಮಗ ಇಮಾಮ್ ಹುಸೇನ್ ಖಲೀಫ್ ಪಟ್ಟ ಅಲಂಕರಿಸಬೇಕಾಗಿತ್ತು. ಆದರೆ ಮುಅವಿಯಾನ್ ಮಗ ಯಜೀದನು ತಾನೇ ಖಲೀಫನೆಂದು ಘೋಷಿಸಿಕೊಂಡನು. ಈ ಅನ್ಯಾಯವನ್ನು ಇಮಾನ್ ಹುಸೇನರು ಪ್ರತಿಭಟಿಸಿದರು.
ಸತ್ಯ ನ್ಯಾಯವನ್ನು ಕಾಪಾಡಲು ಇಮಾಮ್ ಹುಸೇನರು 72 ಅನುಯಾಯಿಗಳೊಡನೆ ಯುದ್ಧ ಸಾರಿದರು. ಮೊಹರಂ ತಿಂಗಳ ಹತ್ತನೇ ದಿನ ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಇಮಾಮ್ ಹುಸೇನ್ ಹುತಾತ್ಮರಾದರು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೆ ಸಮರ್ಪಿಸಿಕೊಂಡು ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಈ ಹಬ್ಬ ನಡೆಯುತ್ತದೆ.
ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯಲ್ಲಿ ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಈ ಹಬ್ಬದಲ್ಲಿ ಬರುವ ಹೆಜ್ಜೆ ಕುಣಿತ, ಮುಳ್ತಾ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರದಲ್ಲಿ ಕುಣಿಯುತ್ತಾರೆ. ಇದನ್ನು ಜಾನಪದ ಕಲೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ.
ಅಲಾವಿ ಹೆಜ್ಜೆ ಕುಣಿತ
ಆವಾಲಾ ಎಂಬ ಅರಬ್ಬಿ ಶಬ್ದದಿಂದ ಅಲಾವಿ ಪದ ಹುಟ್ಟಿದೆ. ಆವಾಲಾ ಎಂದರೆ ತಗ್ಗು ಅಥವಾ ಗುಂಡಿ ಎಂದರ್ಥ. ಆವಾಲಾ ಅಲಾವಿಯಾಗಿದೆ. ಅಲಾವಿಗೂ ಮೂಲ ಮೊಹರಂ ಆಚರಣೆಗೂ ಸಂಬಂಧವಿದೆ. ಕ್ರಿ.ಶ. 680ರಲ್ಲಿ ಕರ್ಬಲಾ ಮರುಭೂಮಿಯಲ್ಲಿ ಹುಸೇನ ಮತ್ತು ಯಜೀದನ ಅನುಯಾಯಿಗಳ ಮಧ್ಯೆ ನಡೆದ ಯುದ್ಧದಲ್ಲಿ ಹುಸೇನರು ತಮ್ಮ ವೈರಿಗಳ ಆಕ್ರಮಣಕ್ಕೆ ಒಂದು ಬಗೆಯ ತಡೆಯುಂಟು ಮಾಡಲು ತಾವಿದ್ದ ಗುಡಿಸಲುಗಳ ಸುತ್ತ ತಗ್ಗು ತೋಡಿದ್ದರು. ಅದರ ಸಂಕೇತವಾಗಿ ಮೊಹರಂ ಆಚರಣೆಯ ಸಂದರ್ಭದಲ್ಲಿ ಅಶೋರ ಖಾನೆ ಎದುರು ಆಳವಾದ ತಗ್ಗು ತೋಡುತ್ತಾರೆ. ಇದೇ ಆಲಾವಿ. ಮೊಹರಂ ತಿಂಗಳ ಒಂಬತ್ತನೆಯ ರಾತ್ರಿಯೇ ಅಲಾವಿಯಲ್ಲಿ ಕಟ್ಟಿಗೆ ಹಾಕಿ ಅಗ್ನಿ ಹೊತ್ತಿಸುತ್ತಾರೆ. ಮೊಹರಂ ಘಟನೆಗೆ ಸಂಬಂಧಿಸಿದ ಪದಗಳನ್ನು ಹೇಳುತ್ತ ಅದರ ಸುತ್ತ ತಿರುಗುತ್ತಾರೆ. ಈ ಪದಗಳನ್ನು ಅಲಾವಿ ಪದಗಳೆಂದು ಕರೆಯುತ್ತಾರೆ. ಕೆಲ ಊರುಗಳಲ್ಲಿ ಹೆಜ್ಜೆ ಹಾಕುತ್ತ ಸುತ್ತುತ್ತಾರೆ. ಇದಕ್ಕೆ ಅಲಾವಿ ಹೆಜ್ಜೆ ಮತ್ತು ಕುಣಿತವೆನ್ನುತ್ತಾರೆ.
ಮೊಹರಂನ್ನ ಶಿಯಾಗಳು ಹುತಾತ್ಮರಾದ ಹಜರತ್ ಅಲಿ ಯ ಬಲಿದಾನ ದಿನವಾಗಿ ಆಚರಿಸುತ್ತಾರೆ. ಇದನ್ನು ಸುನ್ನೀಗಳು ಪ್ರಬಲವಾಗಿ ವಿರೋಧಿಸುತ್ತಾರೆ. ಕಾರಣಿಕವನ್ನು ಪಾಜಿಯಾದ ಮೆರವಣಿಗೆಯ ದಿನದಂದು ನಡೆಸಲಾಗುವುದು. ಪಾಜಿಯಾಕ್ಕೆ ಹೆಚ್ಚಾಗಿ ಈ ಭಾಗದಲ್ಲಿನ ಹಿಂದುಗಳು ದೇವರ ಪೆಟ್ಟಿಗೆಯೆಂದು ಕರೆಯುತ್ತಾರೆ. ಈ ಮೆರವಣಿಗೆ ಎಲ್ಲಾ ಕಡೆಗೂ ಕಡ್ಡಾಯವಾಗಿ ನಡೆಯಬೇಕೆಂದಿಲ್ಲ. ಖತಲ್ ರಾತ್ರಿಯ ಮರುದಿನ ಅಲಾಯಿ ಕುಣಿ ಮುಚ್ಚುವುದರೊಂದಿಗೆ ಕೆಲವೆಡೆ ಹಬ್ಬ ಮುಕ್ತಾಯಗೊಳ್ಳುತ್ತದೆ. ಖತಲ್ ರಾತ್ರಿಯ ಮರುದಿನ ದೇವರು ಹೊಳೆಗೆ ಹೋಗಿ ಬಂದ ಮೇಲೆ ಪಂಜಾಗಳ ಮೇಲಿನ ವಸ್ತ್ರ, ಆಭರಣಗಳನ್ನು ಕಳಚಿ ಪೆಟ್ಟಿಗೆಯಲ್ಲಿಟ್ಟು ಮರುದಿನ ಮೆರವಣಿಗೆ ಮಾಡುವಂತಿದ್ದರೆ ಅದನ್ನು ಮುಗಿಸಿ ಮಸೀದಿಯಲ್ಲಿ ತೂಗು ಹಾಕುತ್ತಾರೆ. ಮುಂದಿನ ಹಬ್ಬದಲ್ಲಿ ಇದೇ ಪಾಜಿಯಾವನ್ನು ಬಳಸುತ್ತಾರೆ. ಕೆಲವೆಡೆ ಪಾಜಿಯಾದ ಬೆಲೆ ಬಾಳುವ ಭಾಗಗಳನ್ನು ಬೇರ್ಪಡಿಸಿ ನೆಲದಲ್ಲಿ ಹೂಳೂತ್ತಾರೆ.
ಸಾಕಷ್ಟು ಗ್ರಾಮಗಳಲ್ಲಿ ಮುಸಲ್ಮಾನರಿಲ್ಲದಿದ್ದರೂ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ‘ಬಾಬಯ್ಯನ ಪಾಳ್ಯ’ ಎಂದೇ ಪ್ರಸಿದ್ಧಿಯಾಗಿರುವ ಈಗಿನ ನಾಗಲಾಪುರ ಗ್ರಾಮವೂ ಒಂದು. ಗ್ರಾಮದಲ್ಲಿ ಹಬ್ಬದ ಸಲುವಾಗಿ ಮೊದಲ ದಿನ ಗುದ್ದಲಿ ಪೂಜೆ ಇರುತ್ತದೆ. ಇದಾದ ಮೂರನೆಯ ದಿನ ಶನಿವಾರ ರಾತ್ರಿ ಡೊಳ್ಳು ಕುಣಿತ, ಕರಡಿ ಕುಣಿತ ಇನ್ನೂ ಅನೇಕ ಕುಣಿತಗಳು ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಈ ಹಬ್ಬದ ಆಚರಣೆಯಲ್ಲಿ ಹೆಚ್ಚಾಗಿ ಹಿಂದೂಗಳೇ ಭಾಗವಹಿಸುತ್ತಾರೆ. ಹರಕೆ ಹೊತ್ತು ಹಿಂದೂ- ಮುಸ್ಲಿಮರು ಹುಲಿ ವೇಷ, ಕುದುರೆ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ ಅಲಂ ಒಂದಕ್ಕೊಂದು ಭೇಟಿಯಾದಾಗ ನೆರೆದ ಜನ ಸಾಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರ ಮಾಡಿ, ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದೂ ಮುಸಲ್ಮಾನ್ ಸಂಭ್ರಮವನ್ನು ನೆನಪಿಸುವ ಬಾಬಯ್ಯನ ಪಾಳ್ಯ/ನಾಗಲಾಪುರ ಗ್ರಾಮ ಭಾವೈಕ್ಯತೆಗೆ ನಿದರ್ಶನವಾಗಿ ಉಳಿದುಕೊಂಡಿದೆ. ಸಂಪ್ರದಾಯಗಳು ಏನೇ ಇರಲಿ ಧರ್ಮಗಳ ಶ್ರೇಷ್ಠ ಕನಿಷ್ಠಗಳ ಗದ್ದಲದಲ್ಲಿ ಮೊಹರಂ ಹಬ್ಬದ ನೆಪವು ಅನ್ಯ ಕೋಮಿನವರನ್ನು ಪರಸ್ಪರ ಒಟ್ಟುಗೂಡಿಸುತ್ತದೆ ಎಂದರೆ ಅದಕ್ಕಿಂತಲೂ ಸೌಂದರ್ಯ ಮತ್ತೊಂದಿಲ್ಲ.
ಸರ್ 1ಸಣ್ಣ ತಪ್ಪು ಇದೆ ಅದೇನೆಂದರೆ ಮಹಮ್ಮದೀಯರಲ್ಲ ಮೊಹಮ್ಮದೀಯರ