Tuesday, September 10, 2024
Google search engine
HomeUncategorizedಅಪ್ಪನ ದಿನದ ವಿಶೇಷ: ಒಂದು ಭತ್ತದ ಕಾಳು ಮತ್ತು ನನ್ನಣ್ಣ

ಅಪ್ಪನ ದಿನದ ವಿಶೇಷ: ಒಂದು ಭತ್ತದ ಕಾಳು ಮತ್ತು ನನ್ನಣ್ಣ

ಆಗಿನ್ನು ನಾನು ಸಣ್ಣವನು. ಈಗ ನಮ್ಮೊಂದಿಗೆ ಇಲ್ಲದ ಅಣ್ಣ ಯಾವಾಗಲೂ ಆ ಘಟನೆಯಿಂದಲೇ ನನ್ನನ್ನು ಕಾಡುತ್ತಾರೆ. ನನ್ನಪ್ಪನನ್ನು ನಾವೆಲ್ಲ  ಅಣ್ಣ ಎಂದೇ ಕರೆಯುತ್ತಿದ್ದೆವು.

ರಾಶಿ ರಾಶಿ  ಭತ್ತ ಬಿದ್ದಿದ್ದರೂ ಭತ್ತ ಬಡಿಯುವಾಗ ರಾಶಿ ರಾಶಿಯಿಂದ ದೂರ ಚೆಲ್ಲಿ ಅಲ್ಲಲ್ಲಿ ಬಿದ್ದಿರುತ್ತಿದ್ದ ಒಂದೊಂದು ಭತ್ತದ ಕಾಳನ್ನು ಹೆಕ್ಕಿ ಅದನ್ನು ಮತ್ತೇ ಭತ್ತದ ರಾಶಿಗೆ ತಂದು ಹಾಕುತ್ತಿದ್ದ ಅಣ್ಣನ ಚಿತ್ರ, ಆಗಷ್ಟೇ ಜೈಲಿನಿಂದ ಬಂದವರು ನಮ್ಮಜ್ಜಿ ಮನೆಯಲ್ಲಿ ನೆಲದ ಮೇಲೆ ಕುಳಿತುಕೊಂಡು ಗಡ್ಡ ಶೇವ್ ಮಾಡಿಕೊಳ್ಳುತ್ತಿದ್ದ ಅಣ್ಣ, ಕೊನೆಯಲ್ಲಿ ಕೆಲವೇ ತಿಂಗಳಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಎಂದ ದಿನದಿಂದ ಅವರು ನಮ್ಮನ್ನು ಬಿಟ್ಟು ಹೋಗುವವರೆಗೂ ಅವರ ಅರ್ಧಂಬರ್ಧ ಮುಖ ನೋಡಿ ಅವರ ಮುಖ ನೋಡಲಾಗದೇ ಮುಖ ತಪ್ಪಿಸಿಕೊಂಡು ನಾನು ಓಡಿ ಹೋದ ದಿನಗಳು ನನಗೆ ಈಗಲು ಕಾಡುತ್ತಿವೆ. ಅವರಿಗೆ ಮುಖವಿಟ್ಟು ಮುದ್ದಾಡಬೇಕಾಗಿತ್ತು, ಆದರೆ ಅಷ್ಟು ಧೈರ್ಯ ಸಾಲದೇ ಹೋಯಿತಲ್ಲ !!

ಅಪ್ಪಾ ಎಂದರೆ ಆಕಾಶ ಎಂದೇ ಬಣ್ಣಿಸುತ್ತಾರೆ. ಅಪ್ಪ ಎಂದರೆ ಆಕಾಶಕ್ಕಿಂತಲೂ ಅಗಲ ಎಂದೇ ನನ್ನ ನಂಬಿಕೆ.  ನನಗೆ ಅಪ್ಪ ಎಂದರೆ ಪ್ರೀತಿ ಅಷ್ಟೇ ಅಲ್ಲ, ಅದೊಂದು ಬಿಡಿಸಲಾಗದ ಆನಂದ. ಎರಡು  ಸಲ ಕಪಾಳ ಮೋಕ್ಷ ಮಾಡಿದ್ದು ಬಿಟ್ಟರೆ ನನಗೆಂದೂ ಅವರು ಒದೆಕೊಟ್ಟಿದ್ದೇ ಇಲ್ಲ. ನಮ್ಮ ಓದಿಗೂ, ದುಡಿಮೆಗೂ ಗಮನವೇ ಕೊಡದ ಅವರೆಂದರೆ ನನಗಿಷ್ಟ!

   ಪರೀಕ್ಷೆಯ ದಿನಗಳಲ್ಲಿ ಓದಿಸುವುನ್ನು ಬಿಟ್ಟು ಎಡಗೈನಲ್ಲಿ ಬರೆದರೂ ಮಗ ಪಾಸಾಗುತ್ತಾನೆ ಎಂದು ಹೇಳುತ್ತಲೇ ಓದಿನ ಬಗ್ಗೆ ನನಗೆ ಭಯವೇ ಇಲ್ಲದಂತೆ ಮಾಡಿಬಿಟ್ಟರು! ನಮ್ಮದು ಹಳ್ಳಿ, ಕುಗ್ರಾಮ. ನನಗೆ ಯಾವ ಶಾಲೆಯಲ್ಲೂ ಇಂಗ್ಲಿಷ್, ಹಿಂದಿ ಮೇಷ್ಟ್ರಿಲ್ಲ. ಕಾಲೇಜಿನಲ್ಲಿ ಇದ್ದಿದ್ದು ಕನ್ನಡ, ಅರ್ಥಶಾಸ್ತ್ರದ ಉಪನ್ಯಾಸಕರು ಇಬ್ಬರೇ!! ಆದರೂ ನಾನು ಪಸ್ಟ್ ಕ್ಲಾಸ್!!! ಇದು ಸಾಧ್ಯವಾಗಿದ್ದು ಅಣ್ಣನ ಕಾರಣದಿಂದ.

ಶ್ರೀಮಂತಿಕೆಯಿಂದ ಕಡುಬಡತನವನ್ನು ಆಯ್ಕೆ ಮಾಡಿಕೊಂಡ ಅಣ್ಣನ ಮನೆಯಲ್ಲಿ ಕೆಲ ದಿನಗಳಲ್ಲಿ ಒಂದು ಹಿಡಿ ಅಕ್ಕಿ ಇಲ್ಲದ ದಿನಗಳು ಇದ್ದವು. ಆದರೂ ಅವರು ಅದು ನಮಗೆ ತಾಕದಂತೆ ನೋಡಿಕೊಂಡರು. ಯಾವಾಗಲೂ ನಗುತ್ತಲೇ ನಮ್ಮ ಮುಂದೆ ಇರುತ್ತಿದ್ದ ಅವru ರಾತ್ರಿ ಹನ್ನೆರಡಾದರೂ ಮನೆಯ ಮುಂದಿನ ಸಿಮೆಂಟ್ ಜಾರಬಂಡಿ ಮೇಲೆ ಕುಳಿತು ಏನನ್ನೋ ಯೋಚಿಸುತ್ತಿದ್ದರು. ಆ ಯೋಚನೆಯ ಗುಟ್ಟನ್ನು ಕೊನೆಗೂ ನನಗೆ ಹೇಳಲೇ ಇಲ್ಲ.

ರಾಶಿಗಟ್ಟಲೆ ಭತ್ತ ಇದ್ದರೂ ದೂರದಲ್ಲಿ ಬಿದ್ದಿರುತ್ತಿದ್ದ ಭತ್ತದ ಕಾಳು ಹೆಕ್ಕಿ ಅದನ್ನು ರಾಶಿಗೆ ತಂದು ಹಾಕುತ್ತಿದ್ದರು. ಸಿ.ಎಸ್.ಪುರದ ಗದ್ದೆ ಬಯಲಿನಲ್ಲಿ ಭತ್ತದ ಕಣದಲ್ಲಿ ಯಾರೂ ಹೀಗೆ ಮಾಡುತ್ತಿರಲಿಲ್ಲ. ಹತ್ತಿರ ಹತ್ತಿರ ನೂರು ಚೀಲ ಭತ್ತ ಬೆಳೆಯುತ್ತಿದ್ದರು. ಒಂದು ಭತ್ತದ ಕಾಳನ್ನು ವೇಸ್ಟ್ ಮಾಡದಂತೆ  ಹೆಕ್ಕುತ್ತಿದ್ದ ಅಣ್ಣ ಅಲ್ಲಿಗೆ ಬರುತ್ತಿದ್ದ ಮಂಡರ, ಬುಡಬುಡಿಕೆಯವರಿಗೆ ಮೊರದ ತುಂಬಾ ಭತ್ತವನ್ನು ಕೊಡುತ್ತಿದ್ದರು. ಇದನ್ನೊಮ್ಮೆ ನಾನು ಕೇಳಿಯೇ ಬಿಟ್ಟೆ! ಒಂದೊಂದು ಭತ್ತ ಸೇರಿದರೆ ಅದು ರಾಶಿ ಭತ್ತ ಆಗೋದ್. ಒಂದೊಂದು ಕಾಳಿಗೂ ಬೆಲೆ ಇದೆ. ಬಡವರಿಗೆ, ಹಸಿದವರಿಗೆ ದೇವರು ಕೊಟ್ಟಿದ್ದನ್ನು ಕೊಟ್ಟುಬಿಡಬೇಕು. ಅವರ ಮನೆ ಮಕ್ಕಳು ಹಸಿದುಕೊಂಡು ಮಲಗಬಾರದು ಎಂದರು. ಆದರೆ ನಾವು ಹಸಿದ ದಿನಗಳಲ್ಲಿ ಅವರಿಂದ ಆ ಮಾತುಗಳೇ ಬರುತ್ತಿರಲಿಲ್ಲ.

ಆಗಿನ ಕಾಲಕ್ಕೆ ಅಂಬಾಸಿಡರ್ ಕಾರು ಇಟ್ಟುಕಂಡು ಜಮೀನ್ದಾರರ ಮಗನಾಗಿದ್ದವರು. ಹಿಸ್ಸೆ ಕೇಳಿದರು ಎಂಬ ಕಾರಣಕ್ಕಾಗಿ ಎಲ್ಲವನ್ನು ತನ್ನ ಸಹೋದರನಿಗೆ ಬಿಟ್ಟು ಬರಿಗೈಲಿ, ಹುಟ್ಟ ಬಟ್ಟೆಯಲ್ಲಿ ಆ ತಾಲ್ಲೂಕಿನಿಂದಲೇ ದೂರದ ಊರಿಗೆ ಬಂದ ಅಣ್ಣ ಬದುಕು ಕಟ್ಟಿಕೊಳ್ಳಲಿಕ್ಕಾಗಿ ಏನ್ನೆಲ್ಲ ಹೆಣಗಿದರು. ದೇವರು, ಧರ್ಮ ಎನ್ನುತ್ತಲೇ ಎರಡನ್ನೂ ಪರೀಕ್ಷಿಸಿ ನೋಡಿದ್ರ ಎಂದು ಸಹ ನನಗೆ ಅನ್ನಿಸಿದಿದೆ. ‘  ‘

ಹಣ ಕತ್ತೆ ತಿನ್ನುವ ಪೇಪರ್, ಬಡ ಜನರ ಕಲ್ಯಾಣಕ್ಕಾಗಿ ಬದುಕಬೇಕು ಎನ್ನುತ್ತಿದ್ದ ಅವರು ಕಡೇವರೆಗೂ ಆ ದಾರಿಯಲ್ಲೇ ಸಾಗಿದರು. ಇದೇ ಕಾರಣಕ್ಕಾಗಿಯೇ ಅಣ್ಣನ ಮಗ ಎಂದಾಕ್ಷಣ ಕಣ್ಣಲ್ಲಿ ನೀರು ತರಿಸಿಕೊಂಡು ಅಣ್ಣನನ್ನು ನೆನಪು ಮಾಡಿಕೊಳ್ಳುವ ಅನೇಕರು ನನಗೆ ಆಗಾಗ ಈಗಲೂ ಎದುರಾಗುತ್ತಿರುತ್ತಾರೆ. ಸಾಕಷ್ಟು ಸಂದರ್ಭಗಳಲ್ಲಿ ಸಹಾಯ ಪಡೆದವರೇ ಕೆಟ್ಟದಾಗಿ ಮಾತನಾಡಿದರೂ ಅವರು ಆ ಜನರಿಗೆ ಗೊತ್ತಾಗುವುದಿಲ್ಲ ಎನ್ನುತ್ತಿದ್ದರು. ನಾನೊಬ್ಬ ಕವಿ, ಪತ್ರಕರ್ತ, ಕಥೆಗಾರ, ರೈತ ಹೋರಾಟಗಾರ, ವಿದ್ಯಾರ್ಥಿ ನಾಯಕ ಹೀಗೆ ಏನ್ನೆಲ್ಲ ಆಗಿದ್ದೇನೋ ಅದಕ್ಕೆಲ್ಲವೂ ಅವರೇ ಕಾರಣ.  

ರೈತರ ಸರ್ಕಾರ ಬರಬೇಕು. ರೈತರ ಮಕ್ಕಳಿಗೆ ಉಚಿತ ಶಿಕ್ಷಣ, ರೈತರಿಗೆ ಪೆನ್ಷನ್ ಸಿಗಬೇಕೆಂದು ಬಲವಾಗಿ ವಾದಿಸುತ್ತಿದ್ದ ಅಣ್ಣ ರೈತರ ಹೋರಾಟದಲ್ಲಿ ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದವರು. ಆ ಕಾಲದಲ್ಲಿ ಕ್ಲಾಸ್ ಒನ್ ಕಂಟ್ರಾಕ್ಟರ್ ಲೈಸೆನ್ಸ್ ಹೊಂದಿದ್ದ ಅವರು ರೈತರ ಹೋರಾಟಕ್ಕಾಗಿ ಅದನ್ನು ಎಸೆದುಬಂದರು. ಎಲ್ಲ ಹೋರಾಟಗಳಲ್ಲೂ ಪ್ರಾಮಾಣಿಕರು ಮೂಲೆ ಗುಂಪಾಗುವಂತೆ ಇವರು ಸಹ ಮೂಲೆಗುಂಪಾದರು. ‘

ರೈತರ ಹೋರಾಟದ ಕಹಿ ಅನುಭವಗಳಿದ್ದರೂ ನನ್ನನ್ನು ಸರ್ಕಾರಿ ಅಧಿಕಾರಿಯಾಗಬೇಕೆಂದು ಅವರು ಬಯಸಲಿಲ್ಲ.ಉದ್ಯಮಿಯಾಗಬೇಕೆಂದು ಹೇಳಲಿಲ್ಲ. ಗುತ್ತಿಗೆದಾರನಾಗಲು ಹೇಳಲಿಲ್ಲ. ರೈತ ಹೋರಾಟಗಾರನಾಗಬೇಕೆಂಬ ಆಸೆ ಅವರಲ್ಲಿತ್ತು. ಇದೇ ಕಾರಣಕ್ಕಾಗಿ ಅವರು ನನ್ನನ್ನು ರೈತ ಸಂಘಕ್ಕೆ ಸೇರುವಂತೆ ಪುಸಲಾಯಿಸುತ್ತಿದ್ರು. ಪ್ರೊ. ನಂಜುಂಡಸ್ವಾಮಿ ಅವರನ್ನು ಭೇಟಿಯಾಗುವಂತೆ ನನಗೆ ಹೇಳುತ್ತಿದ್ದರು. ಅಣ್ಣನ ಒತ್ತಾಸೆ ಇಲ್ಲದಿದ್ರೆ ನಾನು ಪ್ರಾಂತ ರೈತ ಸಂಘದ ಗುಬ್ಬಿ ತಾಲ್ಲೂಕು ಮುಖಂಡನಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಎಂ.ಎ. ಮುಗಿಸಿ ನನ್ನೆಲ್ಲ ಸ್ನೇಹಿತರು ಸರ್ಕಾರಿ ಕೆಲಸಕ್ಕಾಗಿ ಹಾತೊರೆದು ಓದುತ್ತಿದ್ದರೆ ನಾನು, ಎಸ್.ಎಂ,ಕೃಷ್ಣ ಸರ್ಕಾರ ಜಾರಿಗೆ ತಂದಿದ್ದ ಕರಾಳ ವಿದ್ಯುತ್ ಕಳ್ಳತನ ಕಾಯ್ದೆ ವಿರುದ್ದ ಊರೂರುಗಳಲ್ಲಿ ಹೋರಾಟ ನಡೆಸುತ್ತಾ ತಿರುಗುತ್ತಿದ್ದೆ. ಇದು ಅಣ್ಣನಿಗೆ ಖುಷಿ ತರುತ್ತಿತ್ತು. !!

ನಾನು ವಿದ್ಯಾರ್ಥಿ ದೆಸೆಯಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ, ಪ್ರಜಾವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ಓದುಗರ ಪತ್ರಗಳು, ಕತೆಗಳು, ಲೇಖನಗಳನ್ನು ಅಣ್ಣ ಕತ್ತರಿಸಿ ಜೋಪಾನವಾಗಿ ಇಡುತ್ತಿದ್ದರು. ನನ್ನನ್ನು ಪತ್ರಕರ್ತನಾಗಿ ರೂಪಿಸಲು ಇದು ಸಹ ಕಾರಣವಾಯಿತು. ಅವರು ಕಷ್ಟದಲ್ಲಿದ್ದರೂ ಸಹ ನನ್ನಿಂದ ಹಣ ಕೇಳುತ್ತಿರಲಿಲ್ಲ. ನಾನೊಮ್ಮೆ ಊರಿಗೆ ಹೋದಾಗ ಅಮ್ಮನ ಬಳಿ ಹೇಳುತ್ತಿದ್ದ್ದು ಕೇಳಿ ಚಕಿತನಾದೆ. “ಅವನಿಗೆ ಹಣ ಕೇಳಬೇಡ. ಅವನ ಸಂಬಳ ಕಡಿಮೆ. ನಾವು ಹಣ ಕೇಳಿದರೆ ಬೇರೆ ರೀತಿಯಲ್ಲಿ ಹಣ ಸಂಪಾದನೆಗೆ ಇಳಿಯುತ್ತಾನೆ. ಅವನು ಪತ್ರಕರ್ತ’…  ನನ್ನ ಎದುರು ಹೇಳದಿದ್ರೂ ನನ್ನ ಆದರ್ಶದ ದಾರಿಯನ್ನು ಈ ರೀತಿ ಹೇಳಿಕೊಟ್ಟವರು ಅವರು.

ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೆಲವೊಮ್ಮೆ ನಾನು ತುಂಬಾ ಕಷ್ಟದಲ್ಲಿದ್ದಾಗ,  ಕೆಲವು  ಸ್ನೇಹಿತರು ನನ್ನ ಆರ್ಥಿಕ ಸ್ಥಿತಿ ನೋಡಿ ಮರುಕಪಟ್ಟಾಗ, ಇನ್ನೂ, ಕೆಲವರು ನೀನು ಪ್ರಜಾವಾಣಿಯಲ್ಲಿದ್ದಾಗ ಎಷ್ಟು ಬೇಕಾದರೂ ದುಡಿಯಬಹುದಿತ್ತು. ಸಣ್ಣವರೆಲ್ಲ ಹೇಗಿದ್ದಾರೆ ನೋಡ್ರಿ ಎಂದು ನನ್ನ ಮುಖದ ಮುಂದೆಯೇ ಹೇಳುವಾಗ ‘ಅಣ್ಣ ನನಗೇಕೆ ಹಣ ಮಾಡು’ ಎಂದು ಹೇಳಲಿಲ್ಲ, ಹೇಳದಿದ್ದರೂ ಸರಿಯೇ, ‘ಹಣ ಕತ್ತೆ ತಿನ್ನೋ ಪೇಪರ್’ ಸಣ್ಣವನಿಂದಲೇ ಪದೇ ಪದೇ ಹೇಳುತ್ತಾ ನನ್ನ ಮನಸ್ಸು ಅತ್ತ ಕಡೆ ಹರಿಯದಂತೆ ತಡೆದಿದ್ದು ಏಕೆ ಎಂಬ,  ಗೊಂದಲ, ಪ್ರಶ್ನೆಗಳು ಸಹ ನನ್ನಲ್ಲಿ ಮೂಡಿಬಂದಿವೆ. ಆದರೆ ಅಣ್ಣ ಹೇಳಿಕೊಟ್ಟ ದಾರಿಯುಲ್ಲಿ ಜನಕಲ್ಯಾಣದ ಸುಖದ ಸುಪ್ಪರಿಗೆಯೇ ಇದೇ ಎಂಬುದನ್ನು ನಾನು ಜನರಿಗೆ ಹೇಳಲಾಗುವುದಿಲ್ಲ.  

ನನ್ನನ್ನು ಹೆಚ್ಚು ಪ್ರೀತಿಸುತ್ತಿದ್ದ ಅವರು ಕಷ್ಟದ ಸಮಯದಲ್ಲೂ ನಾನು ಓದಲೆಂದೇ ಒಂದು ಟೇಬಲ್ ಮಾಡಿಕೊಟ್ಟಿದ್ದರು. ಅವರು ನೆಲದ ಮೇಲೆ ಮಲಗಿ ನನಗಾಗಿಯೇ ಮಂಚವೊಂದನ್ನು ಮಾಡಿಸಿಕೊಟ್ಟರು. ನನ್ನ ಮನೆಯಲ್ಲಿ ಎಲ್ಲರೂ ನಕ್ಕರೂ ಸಹ ಅವನ ಬಗ್ಗೆ ನಿಮಗೆ ಗೊತ್ತಿಲ್ಲ ಎಂದೇ ಹೇಳುತ್ತಿದ್ದ ಅವರು ನನ್ನ ಬಗ್ಗೆ ಏನೆಂದುಕೊಂಡಿದ್ದರೂ ಅದು ಸಹ ನನಗೆ ಹೇಳಲಿಲ್ಲ.

ಆಗೆಲ್ಲ ಶಾಲೆಯಲ್ಲಿ ಪೊಲೀಸ್ ಕಲ್ಯಾಣ ನಿಧಿಗಾಗಿ 20 ಪೈಸೆಯ ಸ್ಟ್ಯಾಂಪ್ ಗಳನ್ನು ಮೇಷ್ಟ್ರುಗಳ ಮೂಲಕ ಮಾರಿಸುತ್ತಿದ್ದರು. ಮೇಷ್ಟ್ರುಗಳನ್ನು ಕಂಡರೆ ವಿಪರೀತ ಭಯಪಡುತ್ತಿದ್ದ ಕಾಲ ಅದು. ಆದರೆ ಅಣ್ಣ  ಆ ಹಣವನ್ನು ಸಹ ಕೊಡುತ್ತಿರಲಿಲ್ಲ. ನೀನು ಕೊಡಲು ಆಗಲ್ಲ ಅಂತಾ ಹೇಳು ಅನ್ನುತ್ತಿದ್ದರು. ಬಡವರಿಗೆ ಅದು ಕೊಡಲು ಕಷ್ಟ ಅನ್ನುತ್ತಿದ್ರು.  ಶಾಲೆಗೆ ಬರೋಲ್ಲ,ನೀನೇ ಹೇಳಬೇಕು ಎನ್ನುತ್ತಿದ್ದರು ಆ ಮೂಲಕ ಮೇಷ್ಟ್ರರ ಜತೆ ಮುಖಾಮುಖಿಯಾಗುವ ಸಂದರ್ಭಗಳು ಸಾಕಷ್ಟು ಬಂದವು. ಟಿ.ಸಿ ಪಡೆಯುವಾಗ, ಆದಾಯ ಪ್ರಮಾಣ ಪತ್ರ ಮಾಡಿಸುವಾಗ ಎಲ್ಲ ಕಡೆಯೂ ನಾನೊಬ್ಬನೇ ಹೋಗಬೇಕಾಗಿತ್ತು. ಎಲ್ಲೂ ಸಹ ಪೈಸೆ ಸಹ ಕೊಡದೇ ಕೆಲಸ ಮಾಡಿಸಿಕೊಂಡು ಬರುವ ಸ್ಥೈರ್ಯ, ಗಟ್ಟಿತನ ಕಲಿಸಿದರು.

ಜನರ ಕಷ್ಟಗಳು, ಸಮಸ್ಯೆಗಳು ಬಗ್ಗೆ ನಾನು ನಾಲ್ಕನೇ ಇಯತ್ತಿನಲ್ಲಿದ್ದಾಗಲೇ ಪ್ರಧಾನಿ, ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತಿದ್ದೆ. ಇದನ್ನು ಕಲಿಸಿದವರು ಸಹ ಅವರೇ.  ನಮ್ಮ ಪತ್ರಕ್ಕೆ ಅಲ್ಲಿಂದ ಪ್ರತ್ಯುತ್ತರ ಬರುತ್ತಿದ್ವವು. ಸಂಬಂಧಪಟ್ಟ ಇಲಾಖೆಗೆ ದೂರು ಬಗೆಹರಿಸುವಂತೆ ನಿರ್ದೇಶನ ಬರುತ್ತಿತ್ತು. ಕಡುಬಡವರ ಅನೇಕ ಭೂಮಿ ಸಮಸ್ಯೆಗಳು ಇಂಥ ಅಂಚೆ ಕಾರ್ಡ್ ಗಳಿಂದಲೇ ಬಗೆಹರಿದವು. ನೀನಷ್ಟೇ ಅಲ್ಲ ಯಾರೂ ಬರೆದರೂ ಪ್ರಧಾನಿ, ರಾಷ್ಟ್ರಪತಿ ಕಚೇರಿ ಉತ್ತರಿಸುತ್ತದೆ ಎಂದು ಅಣ್ಣ ನನಗೆ ಆಗಲೇ ಹೇಳಿಕೊಟ್ಟಿದ್ರು, ತೋರಿಸಿಕೊಟ್ಟಿದ್ದರು.  ನನಗೆ ಆಗಾಧ ಪ್ರೀತಿ ತೋರಿಸಿದ ಅಣ್ಣನೇ ನನಗೆ ಆದರ್ಶದ ಮೇಷ್ಟ್ರು.  

ಲೇಖ‌ನ: ಸಿ.ಕೆ.ಮಹೇಂದ್ರ

ಅಪ್ಪನ ನೆನಪುಗಳ ಕುರಿತು ನೀವೂ ಬರೆದು ಕಳುಹಿಸಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?